Connect with us

Dvgsuddi Kannada | online news portal | Kannada news online

ದಾವಣಗೆರೆ: ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ; ಸ್ವಚ್ಚ ಭಾರತ ಅನುಷ್ಠಾನ ಮಾಡುವುದು ನಮ್ಮೆಲ್ಲ ಜವಾಬ್ದಾರಿ

ದಾವಣಗೆರೆ

ದಾವಣಗೆರೆ: ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ; ಸ್ವಚ್ಚ ಭಾರತ ಅನುಷ್ಠಾನ ಮಾಡುವುದು ನಮ್ಮೆಲ್ಲ ಜವಾಬ್ದಾರಿ

ದಾವಣಗೆರೆ: ಗಾಂಧೀಜಿ ಕನಸು ಸ್ವಚ್ಚ ಭಾರತವಾಗಿದ್ದು ಪ್ರಾಮಾಣಿಕವಾಗಿ ಇದನ್ನು ಅನುಷ್ಠಾನ ಮಾಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಮಾಯಕೊಂಡ ಶಾಸಕರಾದ ಕೆ.ಎಸ್.ಬಸವಂತಪ್ಪ ತಿಳಿಸಿದರು.

ಅವರು ಸೋಮವಾರ ಗಾಂಧಿ ಭವನದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾದ ಮಹಾತ್ಮ ಗಾಂಧಿ 154 ನೇ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ನಗರ, ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಯಾವ ರೀತಿ ದಿನನಿತ್ಯ ನಗರದ ಸ್ವಚ್ಚತೆಯನ್ನು ಕೈಗೊಳ್ಳಲಾಗುತ್ತದೆ, ಅದೇ ಮಾದರಿಯಲ್ಲಿ ಗ್ರಾಮಾಂತರ ಪ್ರದೇಶ ಪಂಚಾಯಿತಿ ಮಟ್ಟದಲ್ಲಿ ನಡೆಯುವಂತಾಗಬೇಕು. ಗಾಂಧಿಜಿಯವರು ದೇಶದ ರಾಷ್ಟ್ರಪಿತ ಇವರನ್ನು ಮಹಾತ್ಮ ಎಂದೇ ಕರೆಯಲಾಗುತ್ತದೆ. ಎಲ್ಲರೂ ಮಹಾತ್ಮರಾಗಲು ಸಾಧ್ಯವಿಲ್ಲ, ಗಾಂಧಿಯನ್ನುü ಮಾತ್ರ ಈ ಸ್ಥಾನದಲ್ಲಿ ನೋಡಲು ಸಾಧ್ಯ ಎಂದ ಅವರು ಲಾಲ್ ಬಹದ್ದೂರ್ ಶಾಸ್ತ್ರಿಯವರು ಗೃಹ, ರೈಲ್ವೆ ಸಚಿವರಾಗಿ ನಂತರ ದೇಶದ ಎರಡನೇ ಪ್ರಧಾನಿಯಾಗಿ ದಕ್ಷ, ಪ್ರಾಮಾಣಿಕತೆಯಿಂದ ಆಡಳಿತ ನಡೆಸಿದರು, ಅವರ ಸೇವೆಯು ಸ್ಮರಣೀಯವಾದುದು ಎಂದರು.

ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ. ಅವರು ಗಾಂಧಿ ಮತ್ತು ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಚರಕದಲ್ಲಿ ನೂಲುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶಕ್ಕೆ ತಮ್ಮ ಬದುಕನ್ನೆ ಮುಡುಪಾಗಿಟ್ಟವರು ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರಾಗಿದ್ದು ಸರ್ವಧರ್ಮ ಸಮಾನತೆ ಸಂದೇಶವನ್ನು ದೇಶಕ್ಕೆ ನೀಡಿದ್ದಾರೆ. ಗಾಂಧಿ ಕೇವಲ ಭಾರತಕ್ಕಲ್ಲಾ ವಿಶ್ವ ಕಂಡ ಶಾಂತಿ ಧೂತರಾಗಿದ್ದರು. ಅವರ ಸತ್ಯ, ಶಾಂತಿ, ಅಹಿಂಸಾ ಮಾರ್ಗ ಜಗತ್ತಿಗೆ ಮಾದರಿಯಾದದು. ಇವರನ್ನು ಮಹಾಪುರುಷ ಮತ್ತು ಯುಗ ಪುರುಷನೆಂದೇ ಕರೆಯಲಾಗುತ್ತದೆ ಎಂದರು.

ಗಾಂಧಿ ಮಾರ್ಗದಲ್ಲಿ ನಡೆದ ಭಾರತ ದಕ್ಷಿಣ ಏಷ್ಯದಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿರುವಂತಹ ದೇಶದ ಹೆಸರಿಗೆ ಸೇರಲ್ಪಟ್ಟಿದೆ. ಗಾಂಧಿಯವರ ಬದುಕಿನ ಆದರ್ಶಗಳನ್ನು ಪ್ರಸ್ತುತ ಮತ್ತು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕಾಗಿದೆ. ಶಾಂತಿ, ಅಹಿಂಸಾ ಮಾರ್ಗ ಮತ್ತು ಸತ್ಯವನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಗಾಂಧಿ ಕನಸು ನನಸಾಗುತ್ತದೆ ಎಂದರು.

ಹಿರಿಯ ಪತ್ರಕರ್ತರಾದ ಜಿ.ಎಸ್.ಉಜ್ಜಿನಪ್ಪ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಕುರಿತಂತೆ ಉಪನ್ಯಾಸ ನೀಡಿ ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟ, ತ್ಯಾಗ ಬಲಿದಾನದಿಂದಲೇ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಲು ಸತ್ಯ, ಅಹಿಂಸೆ, ಉಪವಾಸ ಚಳುವಳಿಗಳೇ ಗಾಂಧೀಜಿಯವರಿಗೆ ಪ್ರಬಲ ಅಸ್ತ್ರವಾಗಿದ್ದವು. ಸ್ವದೇಶಿ ವಸ್ತುಗಳ ಬಳಕೆಯಿಂದಲೇ ದೇಶ ಸ್ವಾವಲಂಭಿಯಾಗಲು ಸಾಧ್ಯ ಎಂದು ಪ್ರತಿಪಾದಿಸಿದ್ದ ಗಾಂಧೀಜಿಯವರು, ಗ್ರಾಮೀಣ ಪ್ರದೇಶಗಳಲ್ಲಿಯೇ ದೇಶದ ಉನ್ನತಿ ಹಾಗೂ ಅಭಿವೃದ್ಧಿ ಅಡಗಿದೆ ಎಂದು ಸಾರಿದ್ದರು.

ಗಾಂಧೀಜಿಯವರ ಚಿಂತನೆಗೆ ಪೂರಕವಾಗಿ ಬದುಕಿದರೆ, ಇಡೀ ನಾಡೇ ಗೌರವಿಸಲಿದೆ. ಎಲ್ಲ ಸಂಪತ್ತು ಇದ್ದರೂ, ಬಡತನವನ್ನೇ ತಮ್ಮ ಮೇಲೆ ಹೇರಿಕೊಂಡು, ಏನೂ ಇಲ್ಲದಂತೆ ಬದುಕಿದ ಸಂತರು ಗಾಂಧೀಜಿಯವರು. ಅವರ ಸರ್ವೋದಯ, ಸಮನ್ವಯತೆಯ ತತ್ವ ಎಂದೆಂದಿಗೂ ಪ್ರಸ್ತುತವೆನಿಸಲಿದೆ. ಶಾಸ್ತ್ರಿಯವರು ಜೈ ಜವಾನ್ ಜೈ ಕಿಸಾನ್ ಸಂದೇಶವನ್ನು ನೀಡಿದವರಾಗಿದ್ದು ದೇಶ ಕಂಡ ದಕ್ಷ, ಪ್ರಾಮಾಣಿಕ ಪ್ರಧಾನಿಯಾಗಿದ್ದಾರೆ ಎಂದರು.

ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಕುರಿತಂತೆ ತಮ್ಮ ಸಂದೇಶವನ್ನು ಕಳುಹಿಸಿದ್ದು ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಸಂದೇಶ ತಿಳಿಸಿ ದೇಶದ ಪ್ರತಿಯೊಬ್ಬರ ಮನಸ್ಸಿನಲ್ಲಿ ಹಾಸುಹೊಕ್ಕಾಗಿರುವ ಗಾಂಧೀಜಿಯವರು ಇಡೀ ವಿಶ್ವಕ್ಕೆ ಆದರ್ಶ ಪ್ರಾಯರು. ಚಾರಿತ್ರ್ಯವಿಲ್ಲದ ಶಿಕ್ಷಣ, ದುಡಿಮೆಯಿಲ್ಲದ ಸಂಪತ್ತು, ಆತ್ಮಸಾಕ್ಷಿ ಇಲ್ಲದ ಸಂತೋಷ, ತತ್ವ ರಹಿತವಾದ ರಾಜಕಾರಣ, ನೀತಿ ಇಲ್ಲದ ವ್ಯಾಪಾರ, ಮಾನವೀಯತೆ ಇಲ್ಲದ ಜ್ಞಾನ, ತ್ಯಾಗವಿಲ್ಲದ ಪೂಜೆ ಎಲ್ಲವೂ ವ್ಯರ್ಥ. ಇವುಗಳನ್ನು ಹೊಂದಿ, ನಮ್ಮ ವ್ಯಕ್ತಿತ್ವವನ್ನು ಪರಿಪೂರ್ಣವಾಗಿಸಿಕೊಳ್ಳಬೇಕು ಎಂದು ಮಹಾತ್ಮ ಗಾಂಧೀಜಿ ಪ್ರತಿಪಾದಿಸಿ ಅದರಂತೆ ಬದುಕಿದ್ದರು. ಅವರು ಹಾಕಿಕೊಟ್ಟ ಹಾದಿಯಲ್ಲಿಯೇ ನಾವೆಲ್ಲರೂ ಸಾಗಿ ಉತ್ತಮ ಪ್ರಜೆಗಳಾಗೋಣ ಎಂದು ಅವರ ಸಂದೇಶ ವಾಚಿಸಿದರು.

ಅಜಯ್ ನಾರಾಯಣ ಮತ್ತು ಸಂಗಡಿಗರು ರಘುಪತಿ ರಾಜಾರಾಂ ಸೇರಿದಂತೆ ಗಾಂಧಿ ಪ್ರಿಯ ಗೀತೆಗಳನ್ನು ಹಾಡಿದರು. ಸಿದ್ದಗಂಗಾ ಶಾಲೆಯ ನಯನ.ಎನ್.ಎಸ್ ಮತ್ತು ಸಿಂಚನ ಕೆ.ಎಂ ಗೀತಾ ಪಠಣ, ರಿದಾ.ಡಿ ಮತ್ತು ಮಷ್ಕುರಾ ಖಾನಂ ಇವರು ಕುರಾನ್‍ನ ಪಠಣ ಹಾಗೂ ಸ್ತುತಿ ಬೈಬಲ್ ಪಠಣ ಮಾಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪ್ರೌಢಶಾಲಾ, ಪದವಿ ಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಆಯೋಜಿಸಿದ್ದ ಬಾಪೂಜಿ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ಮೂರು ಸಾವಿರ, ದ್ವಿತೀಯ ಎರಡು ಸಾವಿರ, ತೃತೀಯ ಒಂದು ಸಾವಿರ ಪ್ರತಿ ವಿಭಾಗದಲ್ಲಿ ನಗದು ಮತ್ತು ಪ್ರಮಾಣ ಪತ್ರಗಳನ್ನು ವಿತರಣೆ ಮಾಡಲಾಯಿತು.

ವಿಜೇತರ ವಿವರ; ಪ್ರೌಢಶಾಲಾ ವಿಭಾಗದಲ್ಲಿ ಹರಿಹರ ತಾ; ಬನ್ನಿಕೋಡು ಕರ್ನಾಟಕ ಪಬ್ಲಿಕ್ ಶಾಲೆ 10 ನೇ ತರಗತಿಯ ಗಗನ ಪ್ರಥಮ, ದಾವಣಗೆರೆ ಉತ್ತರ ವಲಯದ ದೇವಮ್ಮ ಎ.ಆರ್.ಬಿ.ಪ್ರೌಢಶಾಲೆ 10 ನೇ ತರಗತಿ ರೋಹಿಣಿ.ಆರ್ ದ್ವಿತೀಯ, ನ್ಯಾಮತಿ ಕರ್ನಾಟಕ ಪಬ್ಲಿಕ್ ಶಾಲೆ 10 ನೇ ತರಗತಿ ನಂದಿತಾ ಎಸ್.ಸಿ.ವಿ ತೃತೀಯ.ಪದವಿ ಪೂರ್ವ ವಿಭಾಗ; ದಾವಣಗೆರೆ ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ದ್ವಿತೀಯ ಪಿ.ಯು.ಸಿ. ರಾಕೇಶ್.ಜಿ ಪ್ರಥಮ, ಸ್ನೇಹ ಕೆ. ದ್ವಿತೀಯ, ಅನಿತಾ.ಎನ್ ತೃತೀಯ ಸ್ಥಾನ ಪಡೆದಿದ್ದಾರೆ.
ಪದವಿ ವಿಭಾಗ; ಧ.ರಾ.ಮ.ವಿಜ್ಞಾನ ಕಾಲೇಜಿನ ತೃತೀಯ ಬಿ.ಎಸ್ಸಿ ರಾಕೇಶ್ ಎ.ಎಂ ಪ್ರಥಮ, ಹರಿಹರದ ಶ್ರೀಮತಿ ಗಿರಿಯಮ್ಮ.ಆರ್.ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಕಾಲೇಜು ಬಿ.ಕಾಂ ವಿದ್ಯಾರ್ಥಿನಿ ಕೀರ್ತಿ.ಇ ದ್ವಿತೀಯ ಮತ್ತು ದಾವಣಗೆರೆ ಮಂಜುನಾಥಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಅನುಷಾ ಎಂ ತೃತೀಯ ಸ್ಥಾನ ಪಡೆದಿರುವರು.

ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಮೇಯರ್ ವಿನಾಯಕ್ ಪೈಲ್ವನ್, ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಇಟ್ನಾಳ್, ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್, ಪಾಲಿಕೆಯ ಆರೋಗ್ಯ ಮತ್ತು ಸ್ಥಾಯಿ ಸಮಿತಿ ಅಧ್ಯಕ್ಷರಾದ ಮೀನಾಕ್ಷಿ ಜಗದೀಶ್, ಪಾಲಿಕೆ ಸದ್ಯಸರಾದ ಹೆಚ್.ನಾಗರಾಜ್, ಪಾಮೇನಹಳ್ಳಿ ನಾಗರಾಜ್, ಉಪಸ್ಥಿತರಿದ್ದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ ಸ್ವಾಗತಿಸಿದರು. ಪೊಲೀಸ್ ಇಲಾಖೆ ದೇವರಾಜ್ ಮತ್ತು ಶೈಲಜ ನಿರೂಪಿಸಿದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ ವಂದಿಸಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top