ಕೋಲಾರ: ತಲೆಕೆಟ್ಟು ಹುಚ್ಚು ಹಿಡಿದು ಕೆಲವರು ಏನೇನೋ ಮಾತನಾಡುತ್ತಿದ್ದಾರೆ. ಅಂಥವರನ್ನು ಸರ್ಕಾರ ಸ್ವಲ್ಪ ದೂರ ಇಡಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ಕಿಡಿಕಾರಿದ್ದಾರೆ. ಸರ್ಕಾರದಲ್ಲಿ ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಅನ್ಯಾಯ ಆಗುತ್ತಿದೆ ಎಂದು ಧ್ವನಿ ಎತ್ತಿದ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ವಿರುದ್ಧ ಈ ರೀತಿಯಾಗಿ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಯಾರ್ಯಾರಿಗೋ ಏನು ತಲೆ ಕೆಟ್ಟು ಹುಚ್ಚು ಹಿಡಿದು ಮಾತನಾಡುತ್ತಿದ್ದಾರೆ. 136 ಶಾಸಕರು ಕಾಂಗ್ರೆಸ್ ಪಕ್ಷದಿಂದ ಗೆದಿದ್ದಾರೆ. ಸರ್ಕಾರ ಸುಭಿಕ್ಷೆಯಾಗಿ ನಡೆದುಕೊಂಡು ಹೋಗುತ್ತಿದೆ. ಶಾಸಕರಿಗೆ ಮಾತನಾಡುವ ಆಸಕ್ತಿ ಇದ್ದರೆ, ನಿಮ್ಮ ತಾಲೂಕಿನ ಅಭಿವೃದ್ದಿ ಬಗ್ಗೆ ಮಾತನಾಡಿ. ತಾಲ್ಲೂಕಿನ ಜನರ ಕಷ್ಟಗಳು, ಶಿಕ್ಷಣ, ಆಸ್ಪತ್ರೆ, ಉದ್ಯೋಗ, ರೈತರ ಬಗ್ಗೆ ಮಾತನಾಡಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹತ್ತಿರ ಹೋಗಿ ಸರ್ಕಾರದ ಮಟ್ಟದಲ್ಲಿ ಹೋಗಿ ಕೆಲಸ ಮಾಡಿಸಿಕೊಳ್ಳಿ ಎಂದು ವಾಗ್ದಾಳಿ ಮಾಡಿದರು.
ತೀಟೆಗಳು ಮಾಡುವುದು, ಪಿನ್ಗಳಲ್ಲಿ ಚುಚ್ಚುವರನ್ನು ಪಕ್ಷದಿಂದ ಸ್ವಲ್ಪ ದೂರವಿಡಿ. ಮಂತ್ರಿ ಬೇಕು, ಸಿಎಂ ಬೇಕು ಎಂದು ಕೇಳಿದರೇ, ನನಗೂ ಪಿಎಂ ಆಗಬೇಕು ಅಂತ ಆಸೆ ಇದೆ. ಕೈ ಎಲ್ಲಿಯವರೆಗೂ ಹೋಗತ್ತೆ ಅಲ್ಲಿಯವರೆಗು ಚಾಚಬೇಕು. ಕೆಲಸ ಮಾಡಬೇಕೆಂಬ ಆಸಕ್ತಿ ಇದ್ದರೇ ತಾಲೂಕಿನಲ್ಲಿ ಮಾಡಿ. ನಮ್ಮ ಜಾತಿ ಸಿಎಂ ಆಗಬೇಕು, ಈ ಜಾತಿ ಸಿಎಂ ಆಗಬೇಕು ಎಂಬುವುದನ್ನು ಬಿಡಿ. ತಲೆ ಕೆಟ್ಟವರ ರೀತಿ ಮತನಾಡಬೇಡಿ.
ನಾನು ನಿನ್ನೆ ಮುಖ್ಯಮಂತ್ರಿ ಬಳಿ ಹೋಗಿದ್ದೆ. ಬೆಂಗಳೂರಿನಲ್ಲಿ ಅಡ್ಡಾಡಬೇಡಿ, ಕ್ಷೇತ್ರಕ್ಕೆ ಹೋಗಿ ಕೆಲಸ ಮಾಡಲು’ ಸೂಚಿಸಿದರು. ಅವರು ಸರಿಯಾಗಿಯೇ ಹೇಳಿದ್ದಾರೆ. ಅದನ್ನು ಬಿಟ್ಟು ಮಂತ್ರಿ ಬೇಕು, ಮುಖ್ಯಮಂತ್ರಿ ಬೇಕು ಎಂದು ಕೇಳುತ್ತಿದ್ದರೆ ಪ್ರಯೋಜನವಿಲ್ಲ. ನನಗೂ ಹಲವಾರು ಆಸೆಗಳಿವೆ. ಗೊತ್ತಿದ್ದರೆ ತೆಂಗಿನ ಮರ ಹತ್ತಬೇಕು. ಗೊತ್ತಿಲ್ಲದೇ ಹತ್ತಲು ಹೋದರೆ ಬಿದ್ದು ಕೈಕಾಲು ಮುರಿದುಕೊಳ್ಳುತ್ತೇವೆ ಎಂದರು.
ಈಗಿನ ಸರ್ಕಾರದಲ್ಲಿ ವೀರಶೈವ ಲಿಂಗಾಯತ ಸಮಾಜದ ಅಧಿಕಾರಿಗಳು ಮೂಲೆ ಗುಂಪು; ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಬೇಸರ
ಲಿಂಗಾಯತ ಸಮುದಾಯ ವಿರುದ್ಧ ಎಚ್. ವಿಶ್ವನಾಥ್ ವಾಗ್ದಾಳಿ; ಸಿದ್ದರಾಮಯ್ಯ ಅವರಿಂದಲೇ ನೀವೆಲ್ಲ ಗೆದ್ದಿರೋದು; ನಿಮಗೆ 7 ಮಂತ್ರಿ ಸ್ಥಾನ ಕೊಟ್ಟಿದೆ, ಇನ್ನೆಷ್ಟು ಕೊಡಬೇಕು..?