Connect with us

Dvgsuddi Kannada | online news portal | Kannada news online

ಮಾನವೀಯತೆಯ ಅನನ್ಯತೆಯನ್ನು ಸಾರುವ ಮಹಾ ಉತ್ಸವ ; ‘ತರಳಬಾಳು ಹುಣ್ಣಿಮೆ ಮಹೋತ್ಸವ’

ಅಂಕಣ

ಮಾನವೀಯತೆಯ ಅನನ್ಯತೆಯನ್ನು ಸಾರುವ ಮಹಾ ಉತ್ಸವ ; ‘ತರಳಬಾಳು ಹುಣ್ಣಿಮೆ ಮಹೋತ್ಸವ’

ಧರ್ಮ, ಜಾತಿ, ಮತ, ಪಂಥಗಳನ್ನು ಮೀರಿ, ಸರ್ವ ಉನ್ನತಿಯ ಆಶಯವನ್ನು ಹೊತ್ತು, ಶರಣರ ತತ್ವ ವಿಚಾರಗಳ ಮಂಥನದ ಮಹಾ ವೇದಿಕೆ- ‘ತರಳಬಾಳು ಹುಣ್ಣಿಮೆ ಮಹೋತ್ಸವ’. ಇದೊಂದು ಕೇವಲ ‘ಉತ್ಸವವಾಗದೇ’ ನೆಲ, ಜಲ, ಧರ್ಮ, ಸಾಹಿತ್ಯ, ಕಲೆ, ಸಾಂಸ್ಕೃತಿಕ, ಸಂಸ್ಕಾರಗಳ ಸಂಗಮವಾಗಿದೆ. ಜನರಲ್ಲಿ ಶಾಂತಿ, ನೆಮ್ಮದಿ, ಭಾವೈಕ್ಯತೆಯನ್ನು ಭಿತ್ತಿ ಬೆಳೆಯುವ ಮಹಾ ವೇದಿಕೆಯಾಗಿದೆ. ನೊಂದವರ, ಬೆಂದವರ ಆಶಾಕಿರಣವಾಗಿದೆ.

ನಮ್ಮ ವಾಹನದಲ್ಲಿ ಪೊಟ್ರೋಲ್ ಖಾಲಿಯಾದರೆ ನಿಂತು ಬಿಡುತ್ತದೆ. ಹಾಗೆಯೇ ನಮ್ಮಲ್ಲಿ ನೈತಿಕತೆ, ಮಾನವೀಯ ಮೌಲ್ಯಗಳು ಕಡಿಮೆಯಾದರೆ, ನಮ್ಮ ಸಾಧನೆಯ ಪಯಣ, ಸಂಸ್ಕಾರಯುತ ಬದುಕು ನಿಂತು ಬಿಡುತ್ತದೆ. ಹೇಗೆ ಪೆಟ್ರೋಲ್ ಖಾಲಿಯಾದಾಗ ಪೆಟ್ರೋಲ್ ಬಂಕ್ ಗಳಿಗೆ ತೆರಳುತ್ತೇವೆಯೋ ಹಾಗೆನೇ ನಮ್ಮ ಸಂಸ್ಕಾರದ ಬದುಕಿಗೆ ಬೇಕಾದ ಶರಣರ ತತ್ವ ಬೇಕಾದಾಗ ತರಳಬಾಳು ಹುಣ್ಣಿಮೆಯಂತಹ ಮಹೋತ್ಸವಗಳಿಗೆ ನಾವುಗಳು ತೆರಳಬೇಕಾಗುತ್ತದೆ. ಇದರಲ್ಲಿ ಉತ್ಪ್ರೇಕ್ಷಯ ಮಾತಿಲ್ಲ. ಈ ಮಹೋತ್ಸವದಲ್ಲಿ ಯಾರಿಗೂ ಊಟ, ತಿಂಡಿ, ನೀರು ಯಾವುದನ್ನೂ ಕೊಡದಿದ್ದರೂ ಬರೀ ಜ್ಞಾನದ ಅರ್ಜನೆಗಾಗಿ ಪ್ರತಿ ವರ್ಷ ಲಕ್ಷಾಂತರ ಬಂಧುಗಳು ನಾಡಿನ  ವಿವಿಧ ಮೂಲೆಗಳಿಂದ ಆಗಮಿಸುತ್ತಿರುವುದೇ ಇದಕ್ಕೆ ಸಾಕ್ಷಿ.

ಶ್ರೀ ತರಳಬಾಳು ಜಗದ್ಗುರು ಬೃಹನ್ಮಠವು ಕಳೆದ 69 ವರ್ಷಗಳಿಂದ ನಾಡಿನಾದ್ಯಂತ ನಡೆಸಿಕೊಂಡು ಬಂದಿರುವ ವಾರ್ಷಿಕ ಸಮಾರಂಭ ಇದಾಗಿದೆ. ಎಲ್ಲ ಜನರ ಆದರ, ಅಭಿಮಾನ, ಪ್ರೀತಿಗಳಿಸಿರುವ ಮಹೋತ್ಸವ ನಾಡ ಹಬ್ಬವಾಗಿದೆ. ಸಂಕುಚಿತ ಬುದ್ಧಿಯ ಮೂಲಭೂತವಾದಿಗಳು ಕೋಲಾಹಲದಿಂದಾಗಿ ಬೇರೆ ಬೇರೆ ಧರ್ಮ, ಮತ, ಜಾತಿಗಳ ಮಧ್ಯೆ ಸಂಶಯ, ಅಸೂಯೆ, ದ್ವೇಷಗಳ ಅಡ್ಡಗೋಡೆಗಳು ನಿರ್ಮಾಣವಾಗುತ್ತಿರುವ ಪ್ರಸ್ತುತ ಸನ್ನಿವೇಶದಲ್ಲಿ ಯಾವುದೇ ತಾರತಮ್ಯವಿಲ್ಲದೇ ಎಲ್ಲರನ್ನು ಸದ್ಧರ್ಮದ ಸಂಕೋಲೆಯಲ್ಲಿ ಒಂದು ಮಾಡಿರುವ ಇದೊಂದು ಭಾವೈಕ್ಯತಾ ಸಂಗಮ ನಮ್ಮ ತರಳಬಾಳು ಹುಣ್ಣಿಮೆ. ಎಲ್ಲರಿಗೂ ಈ ಮಹಾ ವೇದಿಕೆ ಒಂದು ಆಶಾ ಭಾವನೆ ಮೂಡಿಸುವ ಸೂರ್ಯಕಿರಣವಾಗಿದೆ.

12 ನೆಯ ಶತಮಾನದ ಬಸವಾದಿ ಶಿವಶರಣರ ಹಿರಿಯ ಸಮಕಾಲೀನರಾದ ವಿಶ್ವಬಂಧು ಮರುಳಸಿದ್ಧರು. ಅಂದಿನ ಸಮಾಜವನ್ನು ಪಟ್ಟಭದ್ರ ಹಿತಾಸಕ್ತಿಗಳ ಶೋಷಣೆಗಳ ಕದಂಬಬಾಹುಗಳಿಂದ ರಕ್ಷಿಸಲು  ಜೀವನ ಪರ್ಯಂತ ಹೋರಾಡಿದರು. ಧರ್ಮದ ತಳಹದಿಯ ಮೇಲೆ ಮನುಷ್ಯ ಮನುಷ್ಯರ ನಡುವೆ ತಾರತಮ್ಯ ಬೇಡವೆಂದು ಹೊಸ ಸಮಾಜವನ್ನು ನಿರ್ಮಿಸಿ ಸದ್ಧರ್ಮ ಪೀಠ ಸ್ಥಾಪಿಸಿದ ಕೀರ್ತಿ ವಿಶ್ವಬಂಧು ಮರುಳಸಿದ್ಧರರದ್ದು.

ಮಾಘ ಶುದ್ಧಪೂರ್ಣಿಮೆಯಂದು ತಮ್ಮ ಶಿಷ್ಯ ತೆಲಗು ಬಾಳು ಸಿದ್ಧನನ್ನು ಸದ್ಧರ್ಮ ಪೀಠದಲ್ಲಿ  ಕುಳ್ಳಿರಿಸಿ `ತರಳಾಬಾಳು’ ಎಂದು  ಹರಸಿ ಆಶೀರ್ವದಿಸಿದರು. ತರಳಬಾಳು ಎಂಬ ಪಂಚಾಕ್ಷರಿ ಮಂತ್ರದಲ್ಲಿ ಇಡೀ  ಮಾನವ ಕುಲದ ಅಭ್ಯುದಯವೇ ಅಡಕವಾಗಿದೆ. ಈ ಆಶೀರ್ವಾದದ ಪರಂಪರೆಯಲ್ಲಿ ಸಾಗಿಬಂದ ಸದ್ಧರ್ಮ ಪೀಠಾಧಿಪತಿಗಳೇ `ತರಳಬಾಳು ಜಗದ್ಗುರುಗಳು’ ಎಂದು ಹೆಸರಾಗಿದ್ದಾರೆ. ಈ ಐತಿಹಾಸಿಕ ಘಟನೆಯು ಜರುಗಿದ ಹುಣ್ಣಿಮೆಯು ನಾಡಿನಲ್ಲ `ತರಳಬಾಳು ಹುಣ್ಣಿಮೆ’ ಎಂದು ಪ್ರಸಿದ್ಧವಾಗಿದೆ.

ಒಂದು ಮಠದ ಚಾರಿತ್ರಿಕ ಹಿನ್ನೆಲೆಯಲ್ಲಿ ನಡೆದುಕೊಂಡು ಬಂದಿರುವ ಈ ಹುಣ್ಣಿಮೆ ಮಹೋತ್ಸವವನ್ನು ಜಾತಿ-ಮತ-ಪಂಥಗಳ ಚೌಕಟ್ಟನ್ನು ಮೀರಿ ನಾಡ ಜನರ ಭಾವೈಕ್ಯತೆಯ ಸಾಧನವನ್ನಾಗಿಸಿದ ಕೀರ್ತಿ 20 ನೆಯ ಶ್ರೀ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಗಳವರಿಗೆ ಸಲ್ಲುತ್ತದೆ.

ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಪ್ರತಿ ವರ್ಷ ನಾಡಿನ ಪ್ರಮುಖ ಧಾರ್ಮಿಕ ಸಮಾರಂಭಗಳಿಗೆ ಮಾತೃ ಸ್ವರೂಪದಂತಿರುವ ಶ್ರೀ ತರಳಬಾಳು ಹುಣ್ಣಿಮೆ ಮಹೋತ್ಸವವು ಲಿಂಗೈಕ್ಯ ಗುರುಗಳವರ ಕರಕಮಲ ಸಂಜಾತರಾದ ಶ್ರೀ ತರಳಬಾಳು ಜಗದ್ಗುರು ಶ್ರೀ 1108 ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶದಲ್ಲಿ ಹೊಸ ಆಯಾಮ ಪಡೆದು, ವಿಶ್ವಬಂಧು ಮರುಳ ಸಿದ್ಧರ `ತರಳಾ-ಬಾಳು’ ಮೂಲ ಮಂತ್ರದ  ಆಶೀರ್ವಾದದ ಆಶಯದಂತೆ ಈ ವರ್ಷ ಹಳೇಬೀಡು ಪಟ್ಟಣದಲ್ಲಿ ಎರಡನೇ ಬಾರಿ (ಮೊದಲ ಬಾರಿ 1951 ರಲ್ಲಿ)  ಅರ್ಥಪೂರ್ಣವಾಗಿ ನಡೆಯಲಿದ್ದು, `ಶರಣರ ಬರವೆಮಗೆ ಪ್ರಾಣ ಜೀವಾಳವಯ್ಯ’ ಎಂಬ ತತ್ವದೊಂದಿಗೆ, `ಇವನಾರವ, ಇವನಾರವ, ಇವನಾರವನೆಂದೆಣಿಸದಿರಯ್ಯಾ ಇವನಮ್ಮವ, ಇವನಮ್ಮವನೆಂದೆಣಿಸಯ್ಯಾ, ಕೂಡಲ ಸಂಗಮ ದೇವಾ ನಮ್ಮ ಮನೆಯ ಮಗನೆಂದೆನಿಸಯ್ಯಾ’..ಎಂಬ ವಚನದ ಸಾರದಂತೆ ಲಿಂಗಭೇದ, ವರ್ಣಭೇದ, ವರ್ಗಭೇದಗಳನ್ನು ಮೆಟ್ಟಿನಿಂತು ಎಲ್ಲರನ್ನೂ ಒಂದೇ ಎಂದು ಪರಿಗಣಿಸಿ ನಡೆಯಲಿರುವ ಈ ತರಳಬಾಳು ಹುಣ್ಣಿಮೆ-ಮಹೋತ್ಸವ ಮಾನವ ಜನಾಂಗ  ಇರುವವರೆಗೆ ನಿರಂತರವಾಗಿ ಜರುಗಲೆಂದು ಪ್ರಾರ್ಥಿಸುತ್ತೇನೆ.

-ಡಾ. ಅನಿತಾ, ಎಚ್. ದೊಡ್ಡಗೌಡರ್

ಸಹಾಯಕ ಪ್ರಾಧ್ಯಾಪಕರು

ಶ್ರೀ ಸರ್ವಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ  ಮಹಾ ವಿದ್ಯಾಲಯ,

ದಾವಣಗೆರೆ- 9902198655

Continue Reading
Advertisement
You may also like...

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಅಂಕಣ

To Top