Connect with us

Dvgsuddi Kannada | online news portal | Kannada news online

ಕೆನಡಾಕ್ಕೆ ವಲಸೆ ಹೋದ ಕನ್ನಡದ ಸಾಹಿತ್ಯ ದಿಗ್ಗಜ

ಅಂಕಣ

ಕೆನಡಾಕ್ಕೆ ವಲಸೆ ಹೋದ ಕನ್ನಡದ ಸಾಹಿತ್ಯ ದಿಗ್ಗಜ

-ಶ್ರೀ ತರಳಬಾಳು ಜಗದ್ಗುರು ಡಾ||ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು, ಸಿರಿಗೆರೆ

ದೂರದ ದೇಶ ಕೆನಡಾದಿಂದ ಆತ್ಮೀಯ ಶಿಷ್ಠರೊಬ್ಬರ ಮಗ ಬಹಳ ಅನಿರೀಕ್ಷಿತವಾಗಿ ವಾರದ ಹಿಂದೆ ನಮಗೆ ಬರೆದ ಒಂದು ಮಿಂಚೋಲೆ. ಅದು ಆಂಗ್ಲಭಾಷೆಯಲ್ಲಿದ್ದು ಅದರ ಆಯ್ದ ಭಾಗದ ಕನ್ನಡಾನುವಾದ:  “ಈ ಮಿಂಚೋಲೆ ಬರೆಯಲು ನನಗೆ ತುಂಬಾ ಸಂತೋಷವಾಗುತ್ತಿದೆ. ತಾವು ಆರೋಗ್ಯವಾಗಿರುವಿರಿ ಎಂದು ಭಾವಿಸಿದ್ದೇನೆ. ನಾನು ತಮನ್ನು ಭೇಟಿಯಾಗಿ ಬಹಳ ಕಾಲ ಕಳೆದು ಹೋಗಿದೆ. ಇಲ್ಲಿ ಅಂದರೆ ಟೊರಾಂಟೋದಲ್ಲಿ ತಮನ್ನು ಭೇಟಿಯಾದ ಸಂದರ್ಭವನ್ನು ಪ್ರೀತಿಯಿಂದ ಸ್ಮರಿಸುತ್ತಿರುತ್ತೇನೆ. ಅಲ್ಲದೆ ಹಲವು ವರ್ಷಗಳ ಹಿಂದೆ ಇಂಡಿಯಾದಲ್ಲೂ ತಮನ್ನು ಭೇಟಯಾದ ನೆನಪು ಸಹ ಹಸಿರಾಗಿದೆ. ತಾವು ನಮಗಾಗಿ ಏರ್ಪಡಿಸಿದ್ದ ಪ್ರವಾಸವೂ ಸಹ ನನಗೆ ಚೆನ್ನಾಗಿ ನೆನಪಿದೆ. ನನ್ನ ಅಮ್ಮ ಭಾರತಕ್ಕೆ ಬಂದಾಗ ತಮ್ಮ ಅನೇಕ ಶೈಕ್ಷ ಣಿಕ ಪ್ರಾಜೆಕ್ಟ್‌ ಗಳ ಕೆಲವು ಭಾವಚಿತ್ರಗಳನ್ನು ಕಳಿಸಿದ್ದರು. ಗಣಕಯಂತ್ರ ಮತ್ತು ಇಂಟರ್‌ನೆಟ್‌ ಬಳಕೆಯಲ್ಲಿ ತಾವು ನಿಷ್ಣಾತರಾಗಿದ್ದುದನ್ನು ನನ್ನ ಬಾಲ್ಯದಲ್ಲೇ ಕಂಡಿದ್ದೆ ಈಗಲೂ ಅದನ್ನು ಸ್ಮರಿಸುತ್ತೇನೆ. ನನ್ನ ಸಹೋದರ ಹೇಮಂತ್‌ ಮತ್ತು ಬಂಧುವಾದ ಉದಯ್‌ ಬಸವರಾಜ್‌ ತಮಗೆ ನೆನಪಿರಬೇಕು. ನಾವೆಲ್ಲ  ತಮನ್ನು ‘Cyber Swamiji’ ಎಂದೇ ಕರೆಯುತ್ತಿದ್ದೆವು!”

ಕೆನಡಾ ಮತ್ತು ಕನ್ನಡ ಉಚ್ಚಾರದಲ್ಲಿ ಅತಿ ಸಾಮ್ಯವಿರುವ ಶಬ್ಧಗಳು. ಕೆನಡಾ ಎಂಬುದು ದೇಶ; ಕನ್ನಡ ಎಂಬುದು ಭಾಷೆ. ಕೆನಡಾ ದೇಶಕ್ಕೂ ಕನ್ನಡ ಭಾಷೆಗೂ ಏನಾದರೂ ನಂಟದೆಯಾ ಎಂದು ಭಾಷಾಶಾಸ್ತ್ರಜ್ಞರು ತಲೆಕೆಡಿಸಿಕೊಂಡದ್ದುಂಟು! ಭಾಷೆಯ ದೃಷ್ಟಿಯಿಂದ ಕೆನಡಾ ಮತ್ತು ಕನ್ನಡಗಳ ಮಧ್ಯೆ ಯಾವ ನಂಟಿಲ್ಲದಿದ್ದರೂ ಸಾಹಿತ್ಯದ ನಂಟಂತೂ ಇದೆ ಎಂದು ಹೇಳಿದರೆ ನಿಮಗೆ ಖಂಡಿತಾ ಆಶ್ಚರ್ಯವಾದೀತು.ಮೇಲೆ ಉದ್ದರಿಸಿದ ಮಿಂಚೋಲೆ ಬರೆದ ಯುವಕನ ಹೆಸರು ಶಿವಕುಮಾರ. ವಾಡಿಕೆಯಲ್ಲಿ ‘ಶಿವು’. ಕನ್ನಡ ಸಾಹಿತ್ಯ ದಿಗ್ಗಜ ಡಾ. ಹಿರೇಮಲ್ಲೂರು ಈಶ್ವರನ್‌ರವರ ಕೊನೆಯ ಮಗ.

ಈಶ್ವರನ್‌ ಅವರು ಕರ್ನಾಟಕದಿಂದ ವಲಸೆ ಹೋಗಿ ಹೆಸರು  ಮಾಡಿದ್ದು ಕೆನಡಾದಲ್ಲೇ. ಟೊರಂಟೋ ನಗರದ ಯಾರ್ಕ್‌ ವಿಶ್ವವಿದ್ಯಾನಿಲಯದ  ಪ್ರಾಧ್ಯಾಪಕರಾಗಿದ್ದ ಅವರು ಅಂತಾರಾಷ್ಟ್ರೀಯ ಸಮಾಜಶಾಸ್ತ್ರಜ್ಞರಾಗಿ ಖ್ಯಾತಿ ಪಡೆದರು.  ‘ವಲಸೆ ಹೋದ ಕನ್ನಡಿಗನ ಕಥೆ’ ಎಂಬುದು ಅವರ ಆತ್ಮಕಥೆ. ಮೂವರು ಮಕ್ಕಳು: ಮೊದಲನೆಯವಳು ಅರುಂಧತಿ, ಎರಡನೆಯ ಮಗ ಹೇಮಂತ್‌ ಮತ್ತು ಕೊನೆಯ ಮಗನೇ ಶಿವಕುಮಾರ. ನಮ್ಮ ಗುರುಗಳ ಹೆಸರನ್ನೇ ಅವನಿಗೆ ಇಟ್ಟದ್ದಾರೆ. ಮಗಳು ಅರುಂಧತಿಯ ದುರಂತದ ಬದುಕನ್ನು ಚಿತ್ರಿಸಿದ ಅವರ ಕೃತಿ ‘ಅರುಂಧತಿ ನನ್ನ ಮಗಳು’. ಕನ್ನಡದಲ್ಲಿ ಬರೆದ ಇವರ ಕೃತಿಗಳ ಸಂಖ್ಯೆ 25 ಕ್ಕೂ ಹೆಚ್ಚು. ವಿದ್ಯಾರ್ಥಿ ದೆಸೆಯಲ್ಲೇ ‘ವಿಷ ನಿಮಿಷಗಳು’, ‘ಹಾಲಾಹಲ’  ಎಂಬ ಎರಡು ಗ್ರಂಥಗಳನ್ನು  ಪ್ರಕಟಸಿದ್ದರು. ‘ಶಿವನ ಬುಟ್ಟಿ’, ‘ರಾಜಾ ರಾಣಿ ದೇಖೋ’, ‘ಕನ್ನಡ ತಾಯ್ನೋಟ’, ‘ಕವಿ ಕಂಡ ನಾಡು’ ಪ್ರಮುಖ ಕೃತಿಗಳು. ‘ಹರಿಹರನ ಕೃತಿಗಳು: ‘ಒಂದು ಸಂಖ್ಯಾ ನಿರ್ಣಯ’ ಅವರ ಡಾಕ್ಟರೇಟ್ ಮಹಾಪ್ರಬಂಧ. ಆಂಗ್ಲಭಾಷೆಯಲ್ಲಿ 70 ಕ್ಕೂ ಹೆಚ್ಚು ಕೃತಿಗಳನ್ನು ಸಂಪಾದಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರು ಹೆಚ್ಚು ಪ್ರಸಿದ್ಧಿಯನ್ನು ಪಡೆದದ್ದು ಸಮಾಜವಿಜ್ಞಾನಿಯಾಗಿ. ಅವರ ಸಂಪಾದಕತ್ವದಲ್ಲಿ ಪ್ರಕಟವಾದ ಅನೇಕ ಜರ್ನಲ್‌ಗಳಲ್ಲಿ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಪ್ರಮುಖವಾದ ಮೂರು ಜರ್ನಲ್‌ಗಳೆಂದರೆ:  The Joumal of Comparative Sociology, The Journal of Asian and African Studies, The journal of Development Studies.

 

ಈಶ್ವರನ್‌ ರವರು ಹುಟ್ಟಿದ್ದು ಧಾರವಾಡ ಜಿಲ್ಲೆ ಹಿರೇಮಲ್ಲೂರು ಗ್ರಾಮದ ಸಾಮಾನ್ಯ ರೈತ ಕುಟುಂಬದಲ್ಲಿ. ಅವರ ಜನ್ಮ ದಿನಾಂಕ  1922 ರ ನವಂಬರ್‌ 1. ಕನ್ನಡಿಗರಾರೂ ಮರೆಯಲಾಗದ ದಿನ. ಆಗಿನ್ನೂ ಕನ್ನಡ ರಾಜ್ಯೋತ್ಸವವನ್ನು ಆಚರಿಸುವ ಸಂಭ್ರಮ, ಸಡಗರಗಳು ಇರಲಿಲ್ಲ. ಆದರೆ ಪೈಮರಿ ಶಾಲೆಯ ಮಾಸ್ತರಾಗಿದ್ದ ಅವರ ತಂದೆ ಚನ್ನಪ್ಪ ಮಾಸ್ತರಿಗೆ ಮಾತ್ರ ಅಂದು ಆದ ಸಂತೋಷ ಅಷ್ಟಿಷ್ಟಲ್ಲ! ಕುಂದಗೋಳ ತಾಲ್ಲೂಕಿನ ಓಲೆಕಾರನೊಬ್ಬ ಶಾಲೆಗೆ ಬಂದು ಅವರ ಪತ್ನಿ ಬಸಮ್ಮ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ ಎಂಬ ವಿಶೇಷ ವಾರ್ತೆಯನ್ನು ತಂದಾಗ ತಂದೆಯ ಮನಸ್ಸಿನಲ್ಲಿ ಆಗಿರಬಹುದಾದ ಸಂತೃಪ್ತಿಯನ್ನು ಈಶ್ವರನ್‌ ರವರು ಸಮಾಜ ಶಾಸ್ತ್ರಜ್ಞರಾಗಿ ತಮ್ಮ ಆತ್ಮಕಥನ ‘ವಲಸೆ ಹೋದ ಕನ್ನಡಿಗನ ಕತೆ’ ಯಲ್ಲಿ ಹೀಗೆ ವರ್ಣಿಸಿದ್ದಾರೆ: “ತನ್ನ ಶಕ್ತಿಗೆ ಮೀರಿ ನಿಂತ ಗೆಲುವನ್ನು ಸಾಧಿಸಿದ ದೊರೆಗೆ ಆಗಬಹುದಾದ ಸಂತೃಪ್ತಿಗಿಂತಲೂ ಹೆಚ್ಚಿನ ಸಮಾಧಾನ ಮಾಸ್ತರರಿಗೆ ಆಯಿತು. ಜೇಷ್ಠಪುತ್ರನ ಆಗಮನದಿಂದ ತಾವು ಸ್ಟರ್ಗಕ್ಕೆ ಹೋಗುವುದು ಖಂಡಿತವೆಂದು ತಿಳಿದು ಆನಂದಪಟ್ಟರೋ? ಅಥವಾ ಜೀವನದಲ್ಲಿ ತಾವು ಸಾಧಿಸದ ಸಿದ್ಧಿಯನ್ನು ಮಗನ ಬದುಕಿನ ಮೂಲಕ ಸಾಧಿಸಬೇಕೆಂದು ಹರ್ಷಪಟ್ಟರೋ? ಅಥವಾ  ಮಗುವಿನ ಉದಯದಲ್ಲಿ ವೃದ್ಧಾಪ್ಯದ ಆಶ್ರಯವನ್ನು ಆಶಿಸಿ ಆನಂದ ಪಟ್ಟರೋ?  ಏನಿದ್ದರೂ ಪುತ್ರೋತ್ಸವದ ಸುದ್ದಿಯನ್ನು ಕೇಳಿ ಸುಖಿಸಿದ ಮಾಸ್ತರರು,ಕ್ಪಣಾರ್ಧದಲ್ಲಿ ತಮ್ಮ ಬದುಕಿನ  ಆಶೋತ್ತರಗಳನ್ನು ಆ ಉದ್ದ – ಈ ಉದ್ದ ಚಾಚಿ ನೂರೊಂದು ಗುಣಾಕಾರ ಹಾಕಿದರು.”  ಚನ್ನಪ್ಪಮಾಸ್ತರರು ಮುಂಜಾವಿನ ಶಾಲೆಯನ್ನು ಮುಗಿಸಿಕೊಂಡು ಅವರು ನೇರವಾಗಿ ಹೋಗಿದ್ದು ಮಠಕ್ಕೆ. ಮಗುವಿಗೆ ಏನೆಂದು ಹೆಸರಿಡಬೇಕು?ಮಗುವಿನ ಜಾತಕದಲ್ಲಿ ಏನೆಂದು ಬರೆದಿದೆ? ಮಗುವು ದೀರ್ಘಾಯುಷಿಯಾಗುವನೇ? ಇದಕ್ಕೆ ಸಮಾಜವಿಜ್ಞಾನಿಯಾದ ಈಶ್ವರನ್‌ ರವರು ಊಹಿಸುವ ಕಾರಣಗಳು: 1908 ರ ಅವಧಿಯಲ್ಲಿ ತಂದೆ ಕಂಡಿದ್ದ ಮಲೇರಿಯಾ ಪಿಡುಗು, 1918 ರಲ್ಲಿ ಗುದ್ದವ್ಹನ ಬೇನೆಯು ಕಾಳ್ಗಿಚ್ಚಿನಂತೆ ಭಾರತದ ತುಂಬ ಹಬ್ಬಿ, ಏನಿಲ್ಲೇಂದರೂ ಸುಮಾರು ಒಂದೂ ಮುಕ್ಕಾಲು ಕೋಟಿ ಜನತೆಯನ್ನು ಸಾವಿನ ದವಡೆಯಲ್ಲಿ ದೂಡಿದ್ದು. 1922 ರ ಕಾಲದಲ್ಲಿ ಹುಟ್ಟದ ಒಂದು ತಿಂಗಳ ಅವಧಿಯಲ್ಲಿ ಸಾಯುವ ಮಕ್ಕಳ ಸಂಖ್ಯೆ ಶೇಕಡ 48.8 ರಷ್ಟು ಇದ್ದಿತೆಂಬುದು ತಂದೆಗೆ ತಿಳಿದಿರಲಿಲ್ಲವಾದರೂ, ಹುಟ್ಟಿದ ಮಗುವನ್ನು ಶ್ರದ್ಧೆಯಿಂದ ಪೋಷಿಸಿ ದಂಡೆಗೆ ಹಚ್ಚುವ ಕಾರ್ಯ ಕಠಿಣವೆಂಬುದನ್ನು ತಂದೆ ಅರಿತಿದ್ದರು.ಮಗುವು ದೀರ್ಫಾಯುಷಿಯೇ? ಎಂಬ ಪ್ರಶ್ನೆಗೆ ಬಂದ ಉತರ: “ಮಗು ದೀರ್ಫಾಯುಷಿ ಅಷ್ಟೇ ಅಲ್ಲ ರಾಜಮಾನ್ಯನೂ ಆಗುತ್ತಾನೆ.” ಮಗುವು ಬೆಳೆದು ದೊಡ್ಡನಾಗುವ ಹೊತ್ತಿಗೆ ಆಗ ಭಾರತವನ್ನು ಆಳುತ್ತಿದ್ದ ಬ್ರಿಟನ್ನಿನ ದೊರೆ ಐದನೆಯ ಜಾರ್ಜ್‌ ಬದುಕಿರಲಾರ, ಭಾರತ ಗುಲಾಮಗಿರಿಯಿಂದ ಪಾರಾಗಿ ಸ್ವಾತಂತ್ರ್ಯ ಪಡೆದ ರಾಷ್ಟ್ರವಾಗುತ್ತದೆ ಎಂದು ತಂದೆಗೆ ಊಹಿಸಲು ಸಾಧ್ಯವಾಗದಿದ್ದರೂ ಕಲ್ಪನೆಯ ಕಕ್ಷೆಯಲ್ಲಿ ನಿಂತು ಆದರ್ಶದ ಊರುಗೋಲು ಹಿಡಿದು ಆಚೆಗಿನ ದಂಡೆಯನ್ನು ಮುಟ್ಟುವ ಹಂಬಲ ಅವರದು ಎಂದು ಬಣ್ಣಿಸುತ್ತಾರೆ.

ಬಡ ಕುಟುಂಬವೊಂದರಲ್ಲಿ ಹುಟ್ಟಿ, ಬೀಸುತ್ತಿರುವ ಗಾಳಿ ಮತ್ತು ಪ್ರವಾಹದ ವಿರುದ್ಧ ತನ್ನ ಬದುಕಿನ ತೆಪ್ಪವನ್ನು ನಡೆಸುತ್ತ, ಕೊನೆಗೆ ವಲಸಿಗನಾಗಿ ಹೋಗಿ ತಂದೆಯ ಆಶೋತ್ತರಗಳನ್ನು ಪೂರೈಸಲಾಗದ,ತಂದೆತಾಯಿಯರ ಸಾವನ್ನು ಕಣ್ಣಾರೆ ಕಾಣದ ಭಾಗ್ಯಹೀನ ತಾನೆಂದು ವಿಷಾದಿಸಿದ್ದಾರೆ. “ನನಗೆ ಪುನರ್ಜನ್ಮದಲ್ಲಿ ನಂಬುಗೆ ಇಲ್ಲ. ದೇವರಮೇಲೆ ಭಾರ ಹಾಕಿ ಸಾವು-ನೋವುಗಳಿಗೆ ಬೆನ್ನು ತಿರುವಿ ನಿಲ್ಲುವ ಸ್ವಭಾವವಂತೂ ನನ್ನದಲ್ಲ, ಆದರೂ ನಾನು ಇನ್ನೊಮ್ಮೆ ಹುಟ್ಟಿ ಬರುವುದಕ್ಕೆ ಅವಕಾಶವಿದ್ದರೆ ಹಿರೇಮಲ್ಲೂರಿನ ಅದೇ ಬಡಕುಟುಂಬವೊಂದರಲ್ಲಿ  ಅದೇ ತಂದೆತಾಯಂದಿರ  ಹೆಮ್ಮಗನಾಗಿ ಹುಟ್ಟಬರುವ ಆಸೆ ನನಗಿದೆ.ಆದರೆ ದೇವರಲ್ಲೊಂದು ಕರಾರು: ಎಳವೆಯಲ್ಲಿ ಮಕ್ಕಳನ್ನು ಒಯ್ಯ ಬೇಡಪ್ಪ!’ ಎಂದು ಭಾವುಕರಾಗಿ ಬರೆಯುತ್ತಾರೆ.

ಪ್ರೊಫೆಸರ್‌ ಈಶ್ವರನ್‌ ರವರು ಮುಂಬೈ ವಿಶ್ವವಿದ್ಯಾನಿಲಯದಿಂದ ಎಂ.ಎ ಮತ್ತು ಡಾಕ್ಟರೇಟ್‌  ಪದವಿಗಳನ್ನು ಪಡೆದವರು. 1954 ರಲ್ಲಿ ಸೊಲ್ಲಾಪುರದ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಸಂದರ್ಭದಲ್ಲಿ ಆಕ್ಸ್‌ ಫರ್ಡ್‌ನಲ್ಲಿ ಮಾನವಶಾಸ್ತ್ರವನ್ನು (Anthropology) ಓದಬೇಕೆಂಬ ಹಂಬಲ ಚಿಗುರೊಡೆಯಿತು. ಲಂಡನ್‌ಗೆ ಹೋಗುವಷ್ಟು ಕಿಸೆಯಲ್ಲಿ ಕಾಸಿಲ್ಲ. ತಲೆಯಲ್ಲಿ ಸಮಾಜಶಾಸ್ತ್ರದ ಜ್ಞಾನವೂ ಇಲ್ಲ ಆದರೂ ಹಿಡಿದ ಛಲ ಬಿಡದ ಗಟ್ಟಿತನ ಅವರದು. “ಸಾಹಿತ್ಯಕ್ಕೂ ಮಾನವಶಾಸ್ತ್ರಕ್ಕೂ  ಸಂಬಂಧವಿದೆ. ಸಮಾಜಶಾಸ್ತ್ರವನ್ನೂ, ಮಾನವಶಾಸ್ತ್ರವನ್ನೂ ಓದಬಲ್ಲ ಕಲಿಯಬಲ್ಲ ವಿದ್ಯಾರ್ಥಿಗೆ ಮುಖ್ಯವಾಗಿ ಜನಜೀವನವನ್ನು ತಾದಾತ್ಮ್ಯದಿಂದ ಅಭ್ಯಸಿಸುವ ತಾಳ್ಮೆ ಬೇಕು. ಜನತೆಯ ಬದುಕನ್ನು ಒಳಹೊಕ್ಕು  ಬದುಕನ್ನು ಒಳಹೊಕ್ಕು ನೋಡುವ ಕವಿಯ ಕಣ್ಣೂ ಅವನಿಗೆ ಇರಬೇಕು’ ಎನ್ನುತ್ತಾರೆ.

ಈಶ್ವರನ್‌. ಉನ್ನತ ವ್ಯಾಸಂಗಕ್ಕೆಂದು ಆಕ್ಸ್‌ ಫರ್ಡ್‌ಗೆ ಹೋಗಲು ನಿರ್ಧರಿಸುತ್ತಾರೆ. ಹಣದ ಸಂಗ್ರಹಕ್ಕಾಗಿ ಊರೂರು ತಿರುಗಾಡಿ ಬೇಡಿದಾಗ ‘ಅಲ್ಲಿಗೆ ಹೋಗಿ ಏನು ಮಾಡುತ್ತೀಯಾ? ಅಲ್ಲಿ ಕನ್ನಡ  ಕಲಿಯುವುದೇನಿದೆ?’ ಎಂಬ ಕಟಕಿಯ ಮಾತುಗಳು ಕೇಳಿ ಕೆರಳುತ್ತಾರೆ. ತಮನ್ನು ಉಪನ್ಯಾಸಕ್ಕಾಗಿ ಕರೆಯುತ್ತಿದ್ದ ಅನೇಕ ಮಠಗಳಿಗೆ ಹೋಗಿ ಕೇಳಿದಾಗ ತಮಗೆ ಸಿಕ್ಕಿದ್ದು  ‘ಹನ್ನೊಂದು ರೂಪಾಯಿ,  ಐದು ಕೊಳೆತ ಬಾಳೆಹಣ್ಣುಗಳು’  ಎಂದು ವೃಂಗ್ಯವಾಡುತ್ತಾರೆ.ತಮನ್ನು ಕುರಿತು ಗ್ರಂಥ ಬರೆಯಬೇಕೆಂದು ಪ್ರೇರೇಪಿಸಿದ ಸ್ವಾಮಿಗಳ ಹತ್ತಿರ ಹೋದರೆ ಅವರಿಂದ ‘ಹನ್ನೊಂದು ರೂಪಾಯಿಯೂ ಇಲ್ಲ ಕೊಳೆತ  ಬಾಳೆಯ ಹಣ್ಣುಗಳೂ ಇಲ್ಲ! ಸ್ವಾಮಿಗಳ ಸೇವೆ ಮಾಡಿದ ಪುಣ್ಮವೇ ಪುಣ್ಯ!’ ಬರಿಗೈಯಲ್ಲಿ ಬರುತ್ತಾರೆ. ಕನ್ಯಾರ್ಥಿಯಾಗಿ ದಾವಣಗೆರೆಗೆ ಬಂದಾಗ ನಮ್ಮ ಗುರುವರ್ಯರ ದರ್ಶನವಾಗಿತ್ತು ‘ಮಾತಾಡಿದ್ದು ಸ್ವಲ್ವ ವಾದರೂ ಆಡಿದ ನಾಲ್ಕೇ ಮಾತುಗಳಲ್ಲಿ ಮನೆಗೆ ಬಹಳ ದಿನಗಳಿಂದ ಮರಳಿ ಬಂದ ಗುರುಪುತ್ರನನ್ನು ಕಂಡಂತಹ ಪ್ರೀತಿ ಮತ್ತು ಅಭಿಮಾನ’  ಮೂಡಿತ್ತು.  ಅದನ್ನು ನೆನೆಸಿಕೊಂಡು ನಮ್ಮ ಗುರುವರ್ಯರಿಗೆ ತಮ್ಮ ಉದ್ದೇಶವನ್ನು ವಿವರಿಸಿ ಪತ್ರ ಬರೆದರು. ಗುರುಗಳು ಒಂದು ನಿರ್ದಿಷ್ಟ ದಿನಾಂಕದಂದು ಬರ ಹೇಳಿ ಮಾರುತ್ತರ ನೀಡಿದರು. ಆ ದಿನಾಂಕದಂದು ಸಿರಿಗೆರೆಗೆ|,. ಮಧ್ಯಾಹ್ನ ಬಂದಾಗ ರಾಜಾತಿಥ್ಯ. ಆಕ್ಸ್‌ ಫರ್ಡಿನ ಅಧ್ಯಯನಕ್ಕೆ ಬೇಕಾಗುವಷ್ಟು ಹಣವನ್ನು ಕೊಟ್ಟು ಪ್ರೋತ್ಸಾಹಿಸಿದರು ಎಂದು ತಮ್ಮ ಆತ್ಮಕಥನದಲ್ಲಿ ಕೃತಜ್ಞತೆಯಿಂದ ಸರಿಸಿದ್ದಾರೆ.

ಓದು ಮುಗಿದ ಮೇಲೆ ಈಶ್ವರನ್‌ ರವರು ತಾವು ಪ್ರೀತಿಸಿದ ಹಾಲೆಂಡ್‌ದೇಶದ ಕೈಸ್ತಧರ್ಮೀಯಳಾದ ‘ಓಬಿನ್‌ ಸಿಟ್ಟರ್‌’ (Obine Sitter) ಎಂಬ ಕನ್ಯೆಯನ್ನು ಸಿರಿಗೆರೆಗೆ ಕರೆದುಕೊಂಡು ಬಂದು ಮದುವೆಯಾಗಿದ್ದು ನಮ್ಮ ಮಠದಲ್ಲಿಯೇ (28-4-1960). ಧಾರೆ ಎರೆದುಕೊಟ್ಟವರು ಪ್ರಪಂಚದ “ಪಾಪು”ಪಾಟೀಲ ಪುಟ್ಟಪ್ಪನವರು.  ‘ಶೈಲಜಾ’ ಎಂಬ ಹೆಸರಿಟ್ಟು  ಹರಸಿದವರು ನಮ್ಮ ಲಿಂಗೈಕ್ಯ ಗುರುವರ್ಯರು.ಈಗಲೂ ಶ್ರೀಮತಿ ‘ಶೈಲಜಾ’ ಅವರಿಗೆ ಸಿರಿಗೆರೆಯ ತರಳಬಾಳು ಮಠವೇ ತವರು ಮನೆ ಭಾರತಕ್ಕೆ ಬಂದಾಗಲೆಲ್ಲಾ ತಪ್ಪದೆ ಸಿರಿಗೆರೆಗೆ ಬಂದು ನಮ್ಮ  ದರ್ಶನಾಶೀರ್ವಾದ ಪಡೆಯದೆ ಹೋದವರಲ್ಲ. ಅವರೂ ಸಹ ಆಂಗ್ಲಭಾಷೆಯಲ್ಲಿ ಇತ್ತೀಚೆಗೆ ಬರೆದ “Reminiscing My Story” ಎಂಬ ತಮ್ಮ ಆತ್ಮ ಕಥನದಲ್ಲಿ ಸಿರಿಗೆರೆಯಲ್ಲಿ ನಡೆದ ತಮ್ಮ ಮದುವೆಯ ಪೂರ್ಣ ವಿವರಗಳನ್ನು ನೀಡಿ ಸ್ಮರಿಸಿರುತ್ತಾರೆ. ಈಶ್ವರನ್‌ರವರನ್ನು ಗಾಢವಾಗಿ ಪ್ರೀತಿಸಿದ್ದ ಅವರು ಜೀವನದುದ್ದಕ್ಕೂ ಬಾಳಸಂಗಾತಿಗಳಾಗಿ ಆದರ್ಶ ದಾಂಪತ್ಯ ನಡೆಸಿದವರು. ಅವರ ಪತಿ  ವಿಶ್ವವಿದ್ಯಾನಿಲಯದಿಂದ Sabbatical Leave  ದೊರೆತಾಗಲೆಲ್ಲಾ ಧಾರವಾಡಕ್ಕೆ ಬಂದು ತಮ್ಮ ಸ್ವಂತ ಮನೆಯಲ್ಲಿ ನೆಲೆಸಿ ಸಾಹಿತ್ಯ ಕೃಷಿಯಲ್ಲಿ ತೊಡಗಿರುತ್ತಿದ್ದರು. ಕೆನಡಾಕ್ಕೆ ವಲಸೆ ಹೋಗಿದ್ದರೂ ಕೊನೆಗೆ ಅವರು ರಜೆಯ ಮೇಲೆ ಭಾರತಕ್ಕೆ ಬಂದಾಗ ಕನ್ನಡದ ಮಣ್ಣಿನಲ್ಲಿಯೇ ಮಣ್ಣಾದರು (23-6-1998). ಕಾಶೀ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ನಮ್ಮ ಅಧ್ಯಯನ ಮುಗಿದ ಮೇಲೆ ನಮ್ಮ ಗುರುವರ್ಯರ ಆಣತಿಯಂತೆ ಉನ್ನತ ಅಧ್ಯಯನಕ್ಕೆಂದು ವಿಯೆನ್ನಾ ವಿಶ್ವವಿದ್ಯಾನಿಲಯಕ್ಕೆ ಹೋದೆವು. ಪ್ರೊ. ಈಶ್ವರನ್‌ರವರು ನಮ್ಮನ್ನು ಒಮ್ಮೆ ಹಾಲೆಂಡಿಗೆ ಕರೆಸಿಕೊಂಡಿದ್ದರು. ಅಲ್ಲಿರುವ ತಮ್ಮ ವಿದೇಶೀ ಕುಟುಂಬದವರ ಪರಿಚಯವನ್ನು ಮಾಡಿಸಿಕೊಟ್ಟು ನಮ್ಮ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಿದ್ದರು. ವಿದ್ಯಾರ್ಥಿಗಳಾಗಿದ್ದ ಕಾಲದಿಂದಲೂ ನಮ್ಮ ಅವರ ಮಧ್ಯೆ ನಿರಂತರವಾಗಿ ಪತ್ರವ್ಯವಹಾರ ನಡೆಯುತ್ತಿತ್ತು. ಮೊನ್ನೆ ಅವರು ಬರೆದ ಹಳೆಯ ಪತ್ರಗಳ ಮೇಲೆ ಕಣ್ಣು ಹಾಯಿಸಿದಾಗ ದಿನಾಂಕ 11-6-1990 ರಂದು ಬರೆದ ಪತ್ರದಲ್ಲಿ ನಮ್ಮ ಹುಟ್ಟಿದೂರಿಗೆ ಹೋಗಿ ಪೂರ್ವಾಶ್ರಮದ ತಂದೆತಾಯಿಗಳನ್ನು ಮತ್ತು ಬಾಲ್ಯದ ನಮ್ಮ ಒಡನಾಡಿಗಳನ್ನು ಕಂಡು ‘I am seriously planning for a short novel’  ಎಂದು ತಮ್ಮ ಅಭಿಲಾಶೆ ವ್ಯಕ್ತಪಡಿಸಿದ್ದು ಕಣ್ಣಿಗೆ ಕಾಣಿಸಿತು. ಅವರ ಅವಸಾನ ಕಾಲದಲ್ಲಿ ನಾವು ಭಾರತದಲ್ಲಿ ಇರಲಿಲ್ಲ. ಕೊನೆಯ ಕಾಲದಲ್ಲಿ ಅವರನ್ನು ನೋಡಲಾಗಲಿಲ್ಲವಲ್ಲಾ ಎಂದು ನಮನ್ನು ಬಾಧಿಸುತ್ತಿದೆ. ಅವರ ಪತ್ನಿ ಶೈಲಜಾರವರ ಕೋರಿಕೆಯ ಮೇರೆಗೆ ಹಿರೇಮಲ್ಲೂರ್ ಈಶ್ವರನ್‌ರವರ ‘ವಲಸೆ ಹೋದ ಕನ್ನಡಿಗನ ಕತೆ’ ಎಂಬ ಗ್ರಂಥವನ್ನು ಮಠದಿಂದ ಆಂಗ್ಲಭಾಷೆಗೆ ಅನುವಾದ ಮಾಡಿಸಿದ್ದು ಈ ಭಾಷಾಂತರ ಕೃತಿಯನ್ನು ಅವರ ಮಗ ಶಿವು ಕೆನಡಾದಲ್ಲಿ ಪ್ರಕಟಸುವುದಾಗಿ ಮೇಲ್ಕಂಡ ಮಿಂಚೋಲೆಯಲ್ಲಿ ಬರೆದಿದ್ದಾನೆ. ನಮ್ಮ ಉಪನಿಷತ್ತುಗಳು ಬೋಧಿಸುವ ಉದಾತ್ತ ಧ್ಯೇಯವಾದ  ‘ವಸುಧೈವ ಕುಟುಂಬಕಮ್‌’ ಇದೇ ಅಲ್ಲವೇ?

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಅಂಕಣ

Advertisement

ದಾವಣಗೆರೆ

Advertisement
To Top