Connect with us

Dvgsuddi Kannada | online news portal | Kannada news online

ದಾವಣಗೆರೆ: ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ; ಡಿಸಿ ಸೂಚನೆ

ದಾವಣಗೆರೆ

ದಾವಣಗೆರೆ: ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ; ಡಿಸಿ ಸೂಚನೆ

ದಾವಣಗೆರೆ: ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ದೀಪಾವಳಿ ಹಬ್ಬವನ್ನು ರಾಜ್ಯ ಸರ್ಕಾರದ  ಮಾರ್ಗಸೂಚಿ ಹಾಗೂ ಹಸಿರು ಪಟಾಕಿ ಸಿಡಿಸಲು ಸುಪ್ರಿಂಕೋರ್ಟ್ ಆದೇಶ ಅನ್ವಯ ಸರಳ, ಶ್ರದ್ಧಾಭಕ್ತಿ ಹಾಗೂ ಸುರಕ್ಷಿತವಾಗಿ ಆಚರಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ದೀಪಾವಳಿ ಹಬ್ಬದ ಆಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಆದೇಶದಂತೆ ಈ ಬಾರಿಯೂ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಉಳಿದ ಯಾವುದೇ ಪಟಾಕಿಗಳನ್ನು ಮಾರಾಟ ಮಾಡುವಂತಿಲ್ಲ. ಹಾಗೂ ಬಳಸುವಂತಿಲ್ಲ. ಪಟಾಕಿಗಳ ಮಾರಾಟ ಹಾಗೂ ಬಳಕೆ ಕುರಿತಂತೆ ಕೇಂದ್ರ ಸರ್ಕಾರದ ಸ್ಫೋಟಕ ವಸ್ತುಗಳ ಉಪ ಮುಖ್ಯ ನಿಯಂತ್ರಕರು ಈ ಬಗ್ಗೆ ಕಳೆದ ಅ. 12 ರಂದು ಮಾರ್ಗಸೂಚಿಯನ್ನು ಹೊರಡಿಸಿದ್ದು, ಅದರನ್ವಯ ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಹಸಿರು ಪಟಾಕಿಯನ್ನು ಹೊರತುಪಡಿಸಿ ಬೇರ್ಯಾವುದೇ ಪಟಾಕಿಯನ್ನು ಮಾರಾಟ ಮಾಡುವಂತಿಲ್ಲ ಎಂದರು.

ದೀಪಾವಳಿ ಸಂದರ್ಭದಲ್ಲಿ ಸಂಬಂಧಪಟ್ಟ ಇಲಾಖೆ, ಪ್ರಾಧಿಕಾರಗಳಿಂದ ಅಧಿಕೃತ ಪರಾವನಿಗೆಯನ್ನು ಪಡೆದ ಮಾರಾಟಗಾರರು ಮಾತ್ರ ಪಟಾಕಿಯನ್ನು ಮಾರಾಟ ಮಾಡಬೇಕು. ಪಟಾಕಿ ಮಾರಾಟದ ಮಳಿಗೆಗಳನ್ನು ನಿಗದಿತ ಸ್ಥಳದಲ್ಲಿ ಮಾತ್ರರ ನವೆಂಬರ್ 2 ರಿಂದ 6 ರವರೆಗೆ ಮಾತ್ರ ತೆರೆದಿರಬೇಕು. ಪರವಾನಿಗೆದಾರರು ಸಂಬಂಧಪಟ್ಟ ಇಲಾಖೆಯ ಅಥವಾ ಪ್ರಾಧಿಕಾರದಿಂದ ನೀಡುವ ಪರವಾನಿಗೆಯಲ್ಲಿ ನಿಗದಿಪಡಿಸಿರುವ ದಿನಾಂಕ ಸ್ಥಳದಲ್ಲಿ ಮಾತ್ರ ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ಇಡಬೇಕು. ಬೇರೆ ಸ್ಥಳದಲ್ಲಿ ಮತ್ತು ದಿನಾಂಕಗಳಲ್ಲಿ ಅಂಗಡಿಯನ್ನು ತೆರೆಯಬಾರದು. ಹಸಿರು ಪಟಾಕಿ ಹೊರತುಪಡಿಸಿ ಇನ್ಯಾವುದೇ ಬಗೆಯ ಪಟಾಕಿ ಮತ್ತು ಅನಧಿಕೃತವಾಗಿ ಪಟಾಕಿ ಮಾರಾಟ ಕಂಡುಬಂದಲ್ಲಿ ಅಂತಹವರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಬಹುದು. ಅಂತಹ ಮಾಹಿತಿದಾರರ ವಿವರವನ್ನು ಗೌಪ್ಯವಾಗಿಡಲಾಗುವುದು. ಅಲ್ಲದೆ ಅನಧಿಕೃತವಾಗಿ ಮಾರಾಟ ಕಂಡುಬಂದಲ್ಲಿ, ಅಂತಹ ಪಟಾಕಿಗಳನ್ನು ಜಪ್ತಿ ಮಾಡಿ, ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು. ಜಿಲ್ಲೆಯಲ್ಲಿ ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಪರವಾನಿಗಾಗಿ ದಾವಣಗೆರೆ-70, ಹರಿಹರ-15, ಮಲೆಬೆನ್ನೂರು-07, ನ್ಯಾಮತಿ-04, ಚನ್ನಗಿರಿ-07, ಜಗಳೂರು-02 ಸೇರಿದಂತೆ ಒಟ್ಟು 105 ಅರ್ಜಿಗಳು ಸ್ವೀಕೃತಗೊಂಡಿವೆ ಎಂದರು.

ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಮಳಿಗೆಗಳನ್ನು ಇಡಲು ಅವಕಾಶ ಕಲ್ಪಿಸಲಾಗಿದ್ದು, ಮಳಿಗೆಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು. ಒಂದು ಮಾರಾಟ ಮಳಿಗೆಯಿಂದ ಮತ್ತೊಂದು ಮಾರಾಟ ಮಳಿಗೆಗೆ ಕನಿಷ್ಟ 6 ಮೀಟರ್ ಅಂತರವಿರಬೇಕು. ಪ್ರತಿಯೊಂದು ಮಳಿಗೆಗಳಲ್ಲಿ ಸಂಬಂಧಪಟ್ಟ ಇಲಾಖೆಯ ಅಥವಾ ಪ್ರಾಧಿಕಾರದಿಂದ ನೀಡುವ ಪರವಾನಿಗೆ ಪ್ರತಿಯನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು. ಪರವಾಮಿಗೆ ಪತ್ರವನ್ನು ಪಡೆದಂತವರು ಕಡ್ಡಾಯವಾಗಿ ಮಳಿಗೆಗಳಲ್ಲಿ ಹಾಜರಿರಬೇಕು.

ಪಟಾಕಿ ಸಿಡಿಮದ್ದುಗಳನ್ನು ಮಾರಾಟ ಮಾಡುವ ಮಳಿಗೆಗಳ ಸುತ್ತಮುತ್ತ ದಿನನಿತ್ಯ ಸ್ಯಾನಿಟೈಸ್ ಮಾಡಬೇಕು. ಪಟಾಕಿಗಳ ಖರೀದಿಗೆ ಬರುವ ಸಾರ್ವಜನಿಕರಿಗೆ ಸ್ಯಾನಿಟೈಸ್ ವ್ಯವಸ್ಥೆ ಮಾಡಬೇಕು. ಒಬ್ಬರಿಂದ ಮತ್ತೊಬ್ಬರಿಗೆ 6 ಅಡಿ ಸಾಮಾಜಿಕ ಅಂತರ ಗುರುತಿಸಬೇಕು. ಪಟಾಕಿ ಮಾರುವ ವ್ಯಾಪಾರಸ್ಥರು ಹಾಗೂ ಖರೀದಿಗೆ ಇರುವ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪಟಾಕಿ ಖರೀದಿಯ ಸಂದರ್ಭದಲ್ಲಿ ಯಾವುದೇ ರೀತಿಯ ಜನದಟ್ಟಣೆಯಾಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು.

ಕೊರೊನ ಸೋಂಕು ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳನ್ನು ತಪ್ಪದೇ ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು. ಅಲ್ಲದೇ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಮಹಾನಗರ ಪಾಲಿಕೆ, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ, ಜಿಲ್ಲಾಡಳಿತ ಹಾಗೂ ಇತರೆ ಇಲಾಖೆ, ಕಾರ್ಪೊರೇಷನ್, ಪ್ರಾಧಿಕಾರಗಳಿಂದ ಹೊರಡಿಸಲಾದ ಸೂಚನೆ ಹಾಗೂ ಮಾರ್ಗಸೂಚಿಗಳನ್ನು ಸಹ ಕಡ್ಡಾಯವಾಗಿ ಪಾಲಿಸಬೇಕು ಎಂದರು.

ಪಾಲಕರು, ಪೋಷಕರು ಮಕ್ಕಳಿಂದ ಪಟಾಕಿಗಳನ್ನು ಆದಷ್ಟು ದೂರವಿಡಿಸಿ. ಈ ಹಿಂದೆ ಆದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು, ತಮ್ಮ ಮಕ್ಕಳ ಬಗೆಗೆ ವಿಷೇಶ ಕಾಳಜಿವಹಿಸಬೇಕು. ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು. ಪಟಾಕಿ ಅಂಗಡಿಗಳ ಮುಂಭಾಗದಲ್ಲಿ ಸುರಕ್ಷತೆಯ ದೃಷ್ಟಿಯಿಂದ ನೀರಿನ ಟ್ಯಾಂಕರ್ ವ್ಯವಸ್ಥೆ ಮಾಡಬೇಕು. ಹೆಚ್ಚಾಗಿ ಸುರಕ್ಷತಾ ನಾಮಫಲಕ ಹಾಕಬೇಕು. ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಆದೇಶ, ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಮಾತನಾಡಿ, ಹಬ್ಬ ಆಚರಣೆ ಭರದಲ್ಲಿ ನಮ್ಮ ಸುರಕ್ಷತೆಯನ್ನು ಮರೆಯಬಾರದು. ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಮಳಿಗೆಗಳನ್ನು ಹಾಕಲು ಅವಕಾಶ ಕಲ್ಪಿಸಿಕೊಡಲಾಗಿದ್ದು, ಮಾರಾಟಗಾರರು ಹೆಚ್ಚು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಪಟಾಕಿ ಖರೀದಿಸಿದಕ್ಕೆ ಸಂಬಂಧಿಸಿದಂತೆ ಜಿ.ಎಸ್.ಟಿ. ಸಹಿತದ ಸೂಕ್ತ ಬಿಲ್ ಹೊಂದಿರಬೇಕು ಅಲ್ಲದೆ ಖರೀದಿ, ಮಾರಾಟ ಹಾಗೂ ಉಳಿಕೆ ದಾಸ್ತಾನು ವಿವರ ಸರಿಯಾಗಿರಬೇಕು. ಮೈದಾನದಲ್ಲಿ ಎಲ್ಲೂ ಪ್ರದರ್ಶನಕ್ಕೆ ಸಂಬಂಧಿಸಿದ ಸಣ್ಣ ಪಟಾಕಿ ಹಚ್ಚದಂತೆ ಗಮನಹರಿಸಬೇಕು. ಮಳಿಗೆಗಳಲ್ಲಿ ವಿದ್ಯುತ್ ವೈರಿಂಗ್ ಲೋಪದೋಷಗಳಿಲ್ಲದಂತೆ ಸಮರ್ಪಕವಾಗಿರಬೇಕು. ಅಲಂಕಾರಿಕ ವಿದ್ಯುತ್ ಸೀರಿಯಲ್ ಸೆಟ್‍ಗಳನ್ನು ಹಾಕಬಾರದು. ಮಳಿಗೆಗಳಲ್ಲಿ ಗ್ಯಾಸ್, ಕ್ಯಾಂಡಲ್, ಅಗರಬತ್ತಿಗಳನ್ನು ಉರಿಸಬಾರದು. ಸಾರ್ವಜನಿಕರು ಪಟಾಕಿ ಕೊಳ್ಳುವಾಗ ಹಸಿರು ಪಟಾಕಿ ಎಂಬುದರ ಬಗ್ಗೆ ಪರಿಶೀಲಿಸಿ ಖರೀದಿಸಬೇಕು ಎಂದು ತಿಳಿಸಿದರು.

ಪಟಾಕಿ ಮಾರಾಟಗಾರರ ಸಂಘದ ಪ್ರತಿನಿಧಿಗಳು ಮಾತನಾಡಿ, ಕಾನೂನಿಗೆ ಅನುಗುಣವಾಗಿ ಹಾಗೂ ಮಾರ್ಗಸೂಚಿ ಪಾಲಿಸುವ ಮೂಲಕ ನಾವು ಪಟಾಕಿ ಮಾರಾಟಕ್ಕೆ ಬದ್ಧರಿದ್ದೇವೆ. ಆದರೆ ಪಟಾಕಿ ಮಾರಾಟ ಮಳಿಗೆಗಳಿರುವ ಆವರಣದಲ್ಲಿ ಹೂವು, ಹಣ್ಣು, ಜ್ಯೂಸ್ ಮುಂತಾದ ಮಾರಾಟಗಾರರು ವ್ಯಾಪಾರ ಮಾಡಲು ಅಂಗಡಿ ಹಾಕುತ್ತಾರೆ, ಇದರಿಂದ ಸುರಕ್ಷತೆ ಹಾಗೂ ಜನಸಂದಣಿ ನಿಯಂತ್ರಣ ಕಾಯ್ದುಕೊಳ್ಳಲು ತೊಂದರೆಯಾಗುತ್ತದೆ. ಕಸ ಸಂಗ್ರಹಣೆಗಾಗಿ ಪ್ರತಿ ಅಂಗಡಿಗೆ 04 ರಿಂದ 05 ಸಾವಿರ ರೂ. ಹಣಕ್ಕೆ ಕಸ ಸಂಗ್ರಹಕಾರರು ಬೇಡಿಕೆ ಇಡುತ್ತಾರೆ. ಪರವಾನಿಗೆ ಇಲ್ಲದವರೂ ಕೂಡ ತಳ್ಳು ಗಾಡಿಗಳಲ್ಲಿ, ಬೀದಿ ಬದಿಯಲ್ಲಿ ಪಟಾಕಿ ಮಾರಾಟ ಮಾಡುವುದು ನಡೆಯುತ್ತದೆ. ದಯವಿಟ್ಟು ಇದನ್ನು ತಡೆಗಟ್ಟಬೇಕು ಎಂದು ಮನವಿ ಮಾಡಿದರು. ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಅವರು ಕಸ ಸಂಗ್ರಹಕಾರರಿಗೆ ಯಾವುದೇ ಹಣ ನೀಡುವ ಅಗತ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ಡಿವೈಎಸ್‍ಪಿ ಗಳಾದ ಕನ್ನಿಕಾ ಸಕ್ರಿವಾಲ್, ಬಸವರಾಜ್, ಪರಿಸರ ಅಧಿಕಾರಿ ಸಂತೋಷ್, ಡಿಹೆಚ್‍ಒ ಡಾ. ನಾಗರಾಜ್, ಸೇರಿದಂತೆ ಎಲ್ಲ ತಹಸಿಲ್ದಾರರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

  • ಕೋವಿಡ್ ನಿಯಂತ್ರಣ ದೃಷ್ಟಿಯಿಂದ ಪಟಾಕಿ ಮಾರಾಟಗಾರರು, ಮಳಿಗೆಗಳ ಮಾಲೀಕರು ಹಾಗೂ ಕೆಲಸ ಮಾಡುವವರು ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಿ ಕನಿಷ್ಟ 72 ಗಂಟೆಯೊಳಗಿನ ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಇಟ್ಟುಕೊಂಡಿರಬೇಕು. ಹಾಗೂ ಕಡ್ಡಾಯವಾಗಿ ಕೋವಿಡ್ ನಿರೋಧಕ ಲಸಿಕೆ ಹಾಕಿಸಿಕೊಂಡಿರಬೇಕು. ಪಟಾಕಿ ಅಂಗಡಿಗಳಲ್ಲಿ ಮಾರಾಟ ಮಾಡುವ ಪಟಾಕಿಗಳಲ್ಲಿ ನಮೂದಿತವಾಗಿರುವ ಎಂ.ಆರ್.ಪಿ ದರದ ಅರ್ಧದಷ್ಟು ದರಕ್ಕೆ ಮಾತ್ರ (ಶೇ. 50 ರಷ್ಟು) ಪಟಾಕಿಗಳನ್ನು ಮಾರಾಟ ಮಾಡಬೇಕು. ಹೆಚ್ಚಿನ ದರದಲ್ಲಿ ಮಾರಾಟ ಮಾಡುವುದು ಕಂಡುಬಂದಲ್ಲಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು. ಸಾರ್ವಜನಿಕರು ಕೂಡ ಈ ಕುರಿತು ಗಮನಹರಿಸಬೇಕು. ಹೆಚ್ಚಿನ ದರದಲ್ಲಿ ಮಾರಾಟ ಕಂಡುಬಂದಲ್ಲಿ ಪೊಲೀಸ್ ಇಲಾಖೆಗೆ ಅಥವಾ ಜಿಲ್ಲಾಧಿಕಾರಿಗಳ ಕಚೇರಿಗೆ ದೂರು ಸಲ್ಲಿಸಬಹುದು.
  • – ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top