ದಾವಣಗೆರೆ: ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ (ಆಜಾದಿ ಕಾ ಅಮೃತ್ ಮಹೋತ್ಸವ್) ಅಂಗವಾಗಿ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸೆ. 29 ರಿಂದ ಅಕ್ಟೋಬರ್ 01 ರವರೆಗೆ ಮೂರು ದಿನಗಳ ಕಾಲ ದಾವಣಗೆರೆ ನಗರದಲ್ಲಿ ಸ್ವಾತಂತ್ರ್ಯದ ಮಹತ್ವವನ್ನು ಬಿಂಬಿಸುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ವಿವಿಧ ಇಲಾಖೆಯವರು ತಮಗೆ ವಹಿಸಿದ ಕಾರ್ಯಕ್ರಮಗಳನ್ನು ಜವಾಬ್ದಾರಿಯುತವಾಗಿ ಹಮ್ಮಿಕೊಂಡು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸೂಚನೆ ನೀಡಿದರು.
ಆಜಾದಿ ಕಾ ಅಮೃತ್ ಮಹೋತ್ಸವ್ ಸಿದ್ಧತೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸೆ. 29 ರಿಂದ ಅ. 01 ರವರೆಗೆ ಮೂರು ದಿನ ನಗರದಲ್ಲಿ ವಿವಿಧ ಇಲಾಖೆಗಳಿಂದ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿವೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಈಗಿನಿಂದಲೇ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಸಾರ್ವಜನಿಕ ಶಿಕ್ಷಣ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಭಾರತದ ಸ್ವಾತಂತ್ರ್ಯ, ಸ್ವಾತಂತ್ರ್ಯಾನಂತರದಲ್ಲಿ ಭಾರತದ ಪ್ರಗತಿ, ಗಾಂಧೀಜಿಯವರ ಮೌಲ್ಯಗಳು ಹಾಗೂ ಪ್ರಸ್ತುತತೆ ಮುಂತಾದ ವಿಷಯಗಳ ಕುರಿತು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಬೇಕು. ಪದವಿಪೂರ್ವ ಕಾಲೇಜು, ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆ ಮಟ್ಟದಲ್ಲಿ ಹೀಗೆ ಮೂರು ವಿಭಾಗಗಳಲ್ಲಿ ಪ್ರತ್ಯೇಕವಾಗಿ ಪ್ರಬಂಧ ಸ್ಪರ್ಧೆ ನಡೆಸಿ, ಮೌಲ್ಯಮಾಪನ ಪೂರ್ಣಗೊಳಿಸಿ, ವಿಜೇತರ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ಡಿಡಿಪಿಐ ಹಾಗೂ ಡಿಡಿಪಿಯು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಸೆ. 29 ರಂದು ಮ್ಯಾರಥಾನ್, 30 ರಂದು ವಾಕಥಾನ್ ಹಾಗೂ ಅ. 01 ರಂದು ಸೈಕ್ಲೋಥಾನ್ (ಸೈಕ್ಲಿಂಗ್) ಕಾರ್ಯಕ್ರಮ ಆಯೋಜಿಸಬೇಕು. ಪ್ರತಿ ಕಾರ್ಯಕ್ರಮಕ್ಕೆ ಕನಿಷ್ಟ 150 ಜನ ಯುವಕ ಯುವತಿಯರು ಪಾಲ್ಗೊಳ್ಳುವಂತಾಗಬೇಕು ಎಂದು ಸೂಚನೆ ನೀಡಿದರು.ಸ್ಮಾರ್ಟ್ ಸಿಟಿ ಯೋಜನೆ ವತಿಯಿಂದ ನಗರದ ಗುರುಭವನ ರಸ್ತೆಯಲ್ಲಿ ನಿರ್ಮಿಸಲಾಗುತ್ತಿರುವ ಪಾದಚಾರಿ ರಸ್ತೆ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿದ್ದು, ಈ ಸ್ಥಳದಲ್ಲಿ ವಸ್ತುಪ್ರದರ್ಶನ ತಾತ್ಕಾಲಿಕ ಮಳಿಗೆಗಳನ್ನು ನಿರ್ಮಿಸಲಾಗುವುದು, ವಿವಿಧ ಇಲಾಖೆಗಳು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಜನಜಾಗೃತಿ ವಸ್ತುಪ್ರದರ್ಶನವನ್ನು ಮೂರು ದಿನಗಳೂ ಏರ್ಪಡಿಸಬೇಕು. ಆರೋಗ್ಯ ಇಲಾಖೆಯವರು ವಸ್ತುಪ್ರದರ್ಶನ ಮಳಿಗೆಯಲ್ಲಿ ಕೋವಿಡ್-19, ಡೆಂಗ್ಯೂ ಮುಂತಾದ ಮಾರಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಬೇಕು, ಸಾಧ್ಯವಾದಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮವನ್ನೂ ಏರ್ಪಡಿಸಬೇಕು.
ದೃಶ್ಯ ಕಲಾ ವಿದ್ಯಾಲಯದ ವತಿಯಿಂದ ಗುರುಭವನ ರಸ್ತೆಯಲ್ಲಿ ಗೋಡೆ ಬರಹ ಹಾಗೂ ಶಿಬಿರ ಆಯೋಜಿಸಬೇಕು. ಅಗ್ನಿಶಾಮಕದಳ ಇಲಾಖೆಯವರು ಜಿಲ್ಲಾಡಳಿತ ಭವನ ಕಟ್ಟಡ ಆವರಣದಲ್ಲಿ ಅಗ್ನಿ, ಜಲ, ಹಾಗೂ ಇನ್ನಿತರ ತುರ್ತು ಸಂದರ್ಭಗಳಲ್ಲಿ ನಿರ್ವಹಣೆ ಮಾಡುವ ಕುರಿತು ಪ್ರಾತ್ಯಕ್ಷಿಕೆ ಅಣಕು ಪ್ರದರ್ಶನವನ್ನು ಆಯೋಜಿಸಬೇಕು. ಬೆಸ್ಕಾಂ ವತಿಯಿಂದ ವಿದ್ಯುತ್ ಅವಘಡಗಳನ್ನು ತಪ್ಪಿಸಲು ಜಾಗೃತಿ ಮೂಡಿಸುವ ಕಾರ್ಯಕ್ರಮ, ಮಹಾನಗರಪಾಲಿಕೆ ವತಿಯಿಂದ ಕಸ ವಿಂಗಡಿಸುವ ಬಗ್ಗೆ ಮತ್ತು ಸ್ವಚ್ಛತೆ ಜಾಗೃತಿ ಮೂಡಿಸುವುದು, ಪರಿಸರ ಇಲಾಖೆಯಿಂದ ಮಾಲಿನ್ಯ ನಿಯಂತ್ರಣ ಹಾಗೂ ದೀಪಾವಳಿ ಹಬ್ಬದಲ್ಲಿ ಹಸಿರು ಪಟಾಕಿ ಬಳಕೆ ಬಗ್ಗೆ ಮತ್ತು ಪರಿಸರ ಮಾಲಿನ್ಯ ತಡೆಗಟ್ಟುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು. ಸೆ. 29 ರಿಂದ ಮೂರು ದಿನಗಳ ಕಾಲ ನಗರದಲ್ಲಿ ಏರ್ಪಡಿಸಲಾಗುವ ವಸ್ತುಪ್ರದರ್ಶನ ಕಾರ್ಯಕ್ರಮದಲ್ಲಿ ವಸ್ತುಪ್ರದರ್ಶನ ಮಳಿಗೆಗಳನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳು ವೀಕ್ಷಿಸುವಂತಾಗಲು ಡಿಡಿಪಿಐ ಹಾಗೂ ಡಿಡಿಪಿಯು ಅಧಿಕಾರಿಗಳು ವ್ಯವಸ್ಥೆ ಮಾಡಬೇಕು.
ಇನ್ನು ತೋಟಗಾರಿಕೆ ಇಲಾಖೆಯಿಂದ ಮೂರು ದಿನಗಳ ಅವಧಿಯಲ್ಲಿ ಪ್ರಮುಖ ಆಕರ್ಷಣೆಯ ಕೇಂದ್ರವಾಗಿರುವ ಗಾಜಿನ ಮನೆಗೆ ವಿಶೇಷ ವಿದ್ಯುತ್ ದೀಪಾಲಂಕಾರ ಕೈಗೊಳ್ಳಬೇಕು, ಅಲ್ಲದೆ ನಗರದ ವಿವಿಧೆಡೆ ಅಲಂಕಾರಿಕ ಗಿಡಗಳನ್ನು ನೆಡಲು ಸೂಕ್ತ ವ್ಯವಸ್ಥೆ ಒದಗಿಸಬೇಕು. ಪೊಲೀಸ್ ಇಲಾಖೆಯಿಂದ ಅಪರಾಧ ತಡೆ, ರಸ್ತೆ ಸುರಕ್ಷತೆ ಮತ್ತು ಸೈಬರ್ ಕ್ರೈಂ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು, ಜೊತೆಗೆ ಕಾರ್ಯಕ್ರಮದ ಅಂಗವಾಗಿ ಪೊಲೀಸ್ ಇಲಾಖೆಯ ಶ್ವಾನದಳದ ಪಥಸಂಚಲನ ಏರ್ಪಡಿಸಿ ಜನಾಕರ್ಷಕ ಕಾರ್ಯಕ್ರಮವನ್ನಾಗಿಸಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ದೇಶಭಕ್ತಿ ಸಾರುವ ನೃತ್ಯರೂಪಕ, ಬೀದಿನಾಟಕ ಸೇರಿದಂತೆ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಮೂರು ದಿನಗಳ ಕಾಲ ನಗರದ ಜಯದೇವ ವೃತ್ತ, ಗುಂಡಿ ವೃತ್ತ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಆಯೋಜಿಸಬೇಕು. ಕೋವಿಡ್ ಕಾರಣದಿಂದಾಗಿ ಕಲಾವಿದರು ವರ್ಷಾನುಗಟ್ಟಲೆ ಕಾರ್ಯಕ್ರಮಗಳಿಲ್ಲದೆ ಆರ್ಥಿಕ ಸಂಕಷ್ಟದಲ್ಲಿದ್ದು, ಇದೀಗ ಮೂರು ದಿನಗಳ ಕಾಲ ಆಯೋಜಿಸುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕಲಾವಿದರಿಗೆ ಉತ್ತಮ ಸಂಭಾವನೆಯನ್ನು ನೀಡುವ ಮೂಲಕ ಕಲಾವಿದರಿಗೆ ನೆರವಾಗಬೇಕು ಎಂದು ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಡಿಡಿಪಿಐ ಪರಮೇಶ್ವರಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಡಿಹೆಚ್‍ಒ ಡಾ. ನಾಗರಾಜ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.