ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಾದ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಮತ್ತು ಆಯುಷ್ಮಾನ್‍ಭಾರತ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು 2018ರ ಸೆಪ್ಟಂಬರ್ ತಿಂಗಳಿನಲ್ಲಿ ಚಾಲನೆ ನೀಡಿದ್ದರು. ಅದೇ ರೀತಿ ಕರ್ನಾಟಕ ರಾಜ್ಯದಲ್ಲಿ ಆರೋಗ್ಯ ಕರ್ನಾಟಕ ಎಂಬ ಯೋಜನೆಯನ್ನು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರದ ಯೋಜನೆಯೊಂದಿಗೆ ಸೇರ್ಪಡೆಗೊಳಿಸಿ ಆಯುಷ್ಮಾನ್‍ಭಾರತ – ಆರೋಗ್ಯ ಕರ್ನಾಟಕ ಎಂದು ಜಾರಿ ಮಾಡಲಾಯಿತು. ಇದೀಗ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರ ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಆರೋಗ್ಯ ಕಾರ್ಡ್ ವಿತರಣೆ ಆರಂಭವಾಗಿದೆ. ಕೂಡಲೇ ನೋಂದಣಿ ಮಾಡಿಕೊಂಡು ಆರೋಗ್ಯ ಕಾರ್ಡ್ ಪಡೆದುಕೊಳ್ಳಿ..
ಏನಿದು ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ: ಆಯುಷ್ಮಾನ್ ಭಾರತ್ ಅಥವಾ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಪಿಎಂಜೆಎವೈ) ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಆರೋಗ್ಯ ಯೋಜನೆಯಾಗಿದೆ. ಸಾಮಾನ್ಯ ಕಾಯಿಲೆಗಳಿಂದ ಹೃದಯಾಘಾತ, ಕ್ಯಾನ್ಸರ್ ಸೇರಿದಂತೆ ಸಾವಿರಾರು ಆರೋಗ್ಯ ಸಮಸ್ಯೆಗೆ ಯೋಜನೆಯಡಿ ಚಿಕಿತ್ಸೆ ಪಡೆಯಬಹುದು. ವಿಶ್ವದಲ್ಲೇ ಅತಿ ದೊಡ್ಡ ಸರಕಾರಿ ಪ್ರಾಯೋಜಿತ ಆರೋಗ್ಯ ಯೋಜನೆ ಎಂಬ ಕೀರ್ತಿಗೆ ಆಯುಷ್ಮಾನ್ ಭಾರತ್ ಪಾತ್ರವಾಗಿದೆ.
ಚಿಕಿತ್ಸೆ ಪಡೆಯುವುದು ಹೇಗೆ ?: ರೋಗಿಗಳಿಗೆ ಮೊದಲ ಸಲ ನೋಂದಣಿಯ ಅಗತ್ಯ ಇದೆ. ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‍ನ ವೆಬ್ ಪೋರ್ಟಲ್‍ನಲ್ಲಿ ಡಿಜಿಟಲ್ ವ್ಯವಸ್ಥೆಯಲ್ಲಿ ನೋಂದಣಿ ದಾಖಲಾಗುತ್ತದೆ. ಆಯುಷ್ಮಾನ್-ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ಸೇರ್ಪಡೆಯಾಗಿದ್ದಕ್ಕೆ ಎಬಿ-ಎಆರ್‍ಕೆ ಕಾರ್ಡ್ ಎಂಬ ಹೆಲ್ತ್ ಕಾರ್ಡ್, ವಿಶಿಷ್ಟ ಐಡಿ ಕೂಡ ನೀಡಲಾಗುತ್ತದೆ. ಕೋವಿಡ್-19 ಹಾಗೂ ತುರ್ತು ಚಿಕಿತ್ಸೆ ಸೇರಿ 1650 ವಿಧಾನಗಳಿಗೆ ಲಭ್ಯವಿದೆ.
ಯಾರಿಗೆ ಎಷ್ಟೆಷ್ಟು ಸೌಲಭ್ಯ ದೊರೆಯಲಿದೆ ?: ಆಯುಷ್ಮಾನ್ ಭಾರತ್ ಯೋಜನೆಯಡಿ ರಾಜ್ಯದ 62 ಲಕ್ಷ ಬಿಪಿಎಲ್ ಕಾರ್ಡ್‍ದಾರರಿಗೆ ಚಿಕಿತ್ಸೆ ದೊರೆಯಲಿದೆ. ಇದರಲ್ಲಿ ಶೇ. 60ರಷ್ಟು ಹಣವನ್ನು ಕೇಂದ್ರ ಸರಕಾರ ನೀಡಲಿದ್ದರೆ, ಉಳಿದ ಶೇ. 40ರಷ್ಟನ್ನು ರಾಜ್ಯ ಸರಕಾರ ಭರಿಸಲಿದೆ. ರಾಜ್ಯದಲ್ಲಿ ಒಟ್ಟು 115 ಲಕ್ಷ ಬಿಪಿಎಲ್ ಕಾರ್ಡ್‍ದಾರರಿಗೆ ಆರೋಗ್ಯ ಯೋಜನೆ ಅನ್ವಯವಾಗಲಿದ್ದು, ಉಳಿದ 53 ಲಕ್ಷ ಬಿಪಿಎಲ್ ಕಾರ್ಡ್‍ದಾರರ ಪೂರ್ಣ ವೆಚ್ಚವನ್ನು ಸರಕಾರ ಭರಿಸಲಿದೆ. ಇದರಡಿ ಬಿಪಿಎಲ್ ಕುಟುಂಬಗಳಿಗೆ ವಾರ್ಷಿಕ 5 ಲಕ್ಷ ರೂ. ಹಾಗೂ ಎಪಿಎಲ್ ಕುಟುಂಬಗಳಿಗೆ ವಾರ್ಷಿಕ 1.50 ಲಕ್ಷ ರೂ. ವರೆಗಿನ ಚಿಕಿತ್ಸಾ ವೆಚ್ಚವನ್ನು ಭರಿಸಲಾಗುತ್ತದೆ. ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ನೀಡಿ, ಚಿಕಿತ್ಸೆ ಪಡೆದುಕೊಳ್ಳಬಹುದು .
ಕರ್ನಾಟಕದಲ್ಲಿ ಕೇಂದ್ರ ಸರಕಾರದ ಆಯುಷ್ಮಾನ್ ಭಾರತ್ ಮತ್ತು ರಾಜ್ಯ ಸರಕಾರದ ಆರೋಗ್ಯ ಕರ್ನಾಟಕ ಯೋಜನೆಗಳೆರಡನ್ನೂ ವಿಲೀನಗೊಳಿಸಲಾಗಿದೆ. ಹೀಗಾಗಿ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’ ಎಂಬ ಹೆಸರಿನಲ್ಲಿ ಜಾರಿಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ, ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಯೋಜನೆ ಜಾರಿಯ ಉಸ್ತುವಾರಿ ವಹಿಸಿದೆ. ಕೇಂದ್ರ ಹಾಗೂ ರಾಜ್ಯ ಸರಕಾರ 2018ರ ಅ.30ರಂದು ಈ ಸಂಬಂಧ ಒಪ್ಪಂದ ಮಾಡಿಕೊಂಡಿವೆ.
ಆಯುಷ್ಮಾನ್ ಭಾರತ – ಆರೋಗ್ಯ ಕರ್ನಾಟಕ ಯೋಜನೆ ಅಡಿಯಲ್ಲಿ ಜಿಲ್ಲೆಯ ಪ್ರತಿಯೊಂದು ತಾಲ್ಲೂಕುಗಳಲ್ಲಿ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಕಾರ್ಡ್ ಪಡೆದವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ದೊರೆಯುವುದಿಲ್ಲ ಎಂದಾದಾಗ ಮಾತ್ರ ಅವರಿಗೆ ಯೋಜನೆಯ ವ್ಯಾಪ್ತಿಯಲ್ಲಿನ ಖಾಸಗಿ ಆಸ್ಪತ್ರೆ ಅಥವಾ ಮೇಲ್ಮಟ್ಟದ ಸರ್ಕಾರಿ ಆಸ್ಪತ್ರೆಗೆ ರೆಫರಲ್ ಪತ್ರವನ್ನು ನೀಡಿ ಕಳುಹಿಸಲಾಗುತ್ತದೆ. ಅದರಲ್ಲಿ ಯಾವ ಕಾರಣಕ್ಕೆ ಚಿಕಿತ್ಸೆ ಲಭ್ಯವಿಲ್ಲ ಎಂಬುದನ್ನು ನಮೂದು ಮಾಡಿ ಕಳಿಸಬೇಕು.
ಆರೋಗ್ಯ ಕಾರ್ಡ್ ಪಡೆಯುವುದು ಹೇಗೆ..?: ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ರೂ. 10/ ಶುಲ್ಕದೊಂದಿಗೆ ಆರೋಗ್ಯ ಕಾರ್ಡ್ ನೀಡಲಾಗುತ್ತದೆ. ದಾವಣಗೆರೆ ಒನ್, ಗ್ರಾಮ ಪಂಚಾಯತಿಯ ಬಾಪೂಜಿ ಸೇವಾ ಕೇಂದ್ರ, ಸಾಮಾನ್ಯ ಸೇವಾ ಕೇಂದ್ರ, ಗ್ರಾಮ ಒನ್ ಕೇಂದ್ರದಲ್ಲಿ 35 ಶುಲ್ಕದೊಂದಿಗೆ ನೀಡಲಾಗುತ್ತಿದೆ. ಪಡಿತರ ಕಾರ್ಡ್ ಮತ್ತು ಆಧಾರ್ ಕಾರ್ಡ್ ಹಾಜರುಪಡಿಸಿ ಆರೋಗ್ಯ ಕಾರ್ಡ್ ಪಡೆಯಬಹುದು.
ದಾವಣಗೆರೆ ಜಿಲ್ಲೆಯಲ್ಲಿ ವಿವಿಧ ಜಿಲ್ಲಾ, ತಾಲ್ಲೂಕು, ಸಮುದಾಯ ಆಸ್ಪತ್ರೆಯಲ್ಲಿ 47,000 ಫಲಾನುಭವಿಗಳು ಯೋಜನೆಯ ಪ್ರಯೋಜನೆ ಪಡೆಯುತ್ತಿದ್ದಾರೆ. ಜಿಲ್ಲೆಯ 19 ಖಾಸಗಿ ಆಸ್ಪತ್ರೆಗಳಲ್ಲಿ8 18,500 ಫಲಾನುಭವಿಗಳಿಗೆ ಉಚಿತ ಚಿಕಿತ್ಸೆ ನೀಡಲಾಗಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :ಆರೋಗ್ಯ ಕಾರ್ಡ್ ನೋಂದಣಿಗೆ ಟೋಲ್ ಫ್ರೀ ಸಂಖ್ಯೆ 18004258330 ಸಂಪರ್ಕಿಸಿ. ಸಹಾಯವಾಣಿ 104ಗೆ ಕರೆ ಮಾಡಿ. ವೆಬ್ ಸೈಟ್: www.arogya.karnataka.gov.in ಭೇಟಿ ನೀಡಬಹುದು.