Connect with us

Dvgsuddi Kannada | online news portal | Kannada news online

ದಾವಣಗೆರೆ: ಜಿಲ್ಲಾಸ್ಪತ್ರೆಯ 3 ಆಕ್ಸಿಜನ್ ಪ್ಲಾಂಟ್ ಕಾಮಗಾರಿ ವೀಕ್ಷಿಸಿದ ಡಿಸಿ; ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸುವಂತೆ ಸೂಚನೆ

ದಾವಣಗೆರೆ

ದಾವಣಗೆರೆ: ಜಿಲ್ಲಾಸ್ಪತ್ರೆಯ 3 ಆಕ್ಸಿಜನ್ ಪ್ಲಾಂಟ್ ಕಾಮಗಾರಿ ವೀಕ್ಷಿಸಿದ ಡಿಸಿ; ಮಕ್ಕಳ ಆರೋಗ್ಯದ ಮೇಲೆ ನಿಗಾ ವಹಿಸುವಂತೆ ಸೂಚನೆ

ದಾವಣಗೆರೆ: ಸೆಪ್ಟೆಂಬರ್ ಹಾಗೂ ಅಕ್ಟೋಬರ್ ತಿಂಗಳಲ್ಲಿ ವಾತವರಣ ಬದಲಾಗುವುದರಿಂದ ಸಾಮಾನ್ಯವಾಗಿ ವೈರಲ್ ಜ್ವರ ಹಾಗೂ ಡೆಂಗ್ಯೂ ಜ್ವರ ಹೆಚ್ಚಾಗಿ ಹರಡುತ್ತಿದ್ದು, ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗಳಲ್ಲಿ ಮಕ್ಕಳು ಹೆಚ್ಚಾಗಿ ದಾಖಲಾಗುತ್ತಿದ್ದಾರೆ. ವೈದ್ಯರು ಹಾಗೂ ಪೋಷಕರು ಮಕ್ಕಳ ಬಗೆಗೆ ಹೆಚ್ಚಿನ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಕೋವಿಡ್-19 ಹಿನ್ನೆಲೆಯಲ್ಲಿ ನಗರದ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿರುವ ಆಕ್ಸಿಜನ್ ಘಟಕ, ಜನರೇಟರ್, ಎಂ.ಆರ್.ಐ, ಪಿ.ಐ.ಸಿ.ಯು., ಮಕ್ಕಳ ವಾರ್ಡ್, ಮಕ್ಕಳ ತೀವ್ರ ನಿಗಾ ಚಿಕಿತ್ಸಾ ಘಟಕ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಭೇಟಿ ನೀಡಿ ಬಳಿಕ ಮಾತನಾಡಿದರು. ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ವಾತಾವರಣ ಬದಲಾಗುವುದರಿಂದ ಮಕ್ಕಳಲ್ಲಿ ವೈರಲ್ ಜ್ವರ ಬರುವುದು ಸಹಜ. ಪ್ರಸ್ತುತ ಮಕ್ಕಳ ಆಸ್ಪತ್ರೆಯಲ್ಲಿ 65 ಬೆಡ್ ಇದ್ದು, 12 ಪಿಐಸಿಯು ಬೆಡ್ ಇದೆ. ಇದರಲ್ಲಿ 40 ಬೆಡ್ ಭರ್ತಿ ಆಗಿದ್ದು, ಉಳಿದ 25 ಬೆಡ್ ಖಾಲಿ ಇವೆ. ವೈರಲ್ ಜ್ವರ 5 ದಿನದೊಳಗೆ ಹಾಗೂ ಡೆಂಗ್ಯೂ ಲೈಕ್ ಇಲ್‍ನೆಸ್ 10 ದಿನದೊಳಗೆ ಕಡಿಮೆ ಆಗುತ್ತದೆ. ಜಿಲ್ಲಾಸ್ಪತ್ರೆಯಲ್ಲಿ 40 ಮಕ್ಕಳು ವೈರಲ್ ಜ್ವರದ ಕಾರಣದಿಂದ ದಾಖಲಾಗಿದ್ದು, ಅದರಲ್ಲಿ 07 ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ. ಇವರನ್ನು ರ್ಯಾಪಿಡ್ ಟೆಸ್ಟ್ ಮಾಡಿಸಿದ್ದು, ಡೆಂಗ್ಯು ಸಂಬಂಧಿತ ಎಲಿಸಾ ಟೆಸ್ಟ್ ಮಾಡಬೇಕಿದೆ. ಬಾಪೂಜಿ ಆಸ್ಪತ್ರೆಯಲ್ಲಿ 21 ಮಕ್ಕಳು ವೈರಲ್ ಜ್ವರದಿಂದ ಬಳಲುತ್ತಿದ್ದು, ಅದರಲ್ಲಿ 10 ಮಕ್ಕಳು ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ ಎಂದರು.

ಎಸ್.ಎಸ್.ಹೈಟೆಕ್ ಆಸ್ಪತ್ರೆಯಲ್ಲಿ 110 ಮಕ್ಕಳು ವೈರಲ್ ಜ್ವರದಿಂದ ಬಳಲುತ್ತಿದ್ದು, ಅದರಲ್ಲಿ 28 ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು ಚಿಕಿತ್ಸೆಗೆ ಯಾವುದೇ ತೊಂದರೆಯಿಲ್ಲ ಎಂದು ಮಾಹಿತಿ ನೀಡಿದರು.
ಕೋವಿಡ್ 3ನೇ ಅಲೆ ಸಂಭವ ಹೆಚ್ಚಿದ್ದು ಮಕ್ಕಳ ಮೇಲೆ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಿದೆ ಎಂದು ಮಕ್ಕಳ ತಜ್ಞರು ತಿಳಿಸಿದ್ದಾರೆ. ಇದಕ್ಕೆ ಬೇಕಾದ ಹಾಸಿಗೆ, ವೆಂಟಿಲೆಟರ್ಸ್, ಪಾಟ್ಸ್, ಮಾನಿಟರ್ಸ್ ಸೇರಿದಂತೆ ಮಾನವ ಸಂಪನ್ಮೂಲಗಳನ್ನು ಸಿದ್ಧತೆ ಮಾಡಿಕೊಂಡಿದ್ದು, ಅವರಿಗೆ ಬೇಕಾದ ಎಲ್ಲಾ ತರಬೇತಿಗಳನ್ನು ನೀಡಲಾಗಿದೆ. ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದು, ಬಾಪೂಜಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಭಯ ಬೀಳುವ ವಾತವರಣ ನಿರ್ಮಾಣವಾಗಿಲ್ಲ. ಆದ್ದರಿಂದ ಭಯ ಬೀಳುವ ಅಗತ್ಯವಿಲ್ಲ ಎಂದರು.

ಮಕ್ಕಳಿಗಾಗಿಯೇ ಮೀಸಲಾಗಿರುವ ವಾರ್ಡ್ ನಂ 65 ಹಾಗೂ 66 ಕ್ಕೆ ಭೇಟಿ ನೀಡಿ ಪರಿಶೀಲಿಸಿದ ಅವರು, ಮಕ್ಕಳ ಆಸ್ಪತ್ರೆಗೆ ಬೇಕಾದ ಮಾನಿಟರ್ ಸ್ಟ್ಯಾಂಡ್, ಮಲ್ಟಿಪ್ಯಾರ ಮಾನಿಟರ್, ಐಸಿಯು ಕಾಟ್ಸ್, ವೆಂಟಿಲೆಟರ್ಸ್ ಗಳನ್ನು ಸೆ.29 ರೊಳಗಾಗಿ ಸಿದ್ಧತೆ ಮಾಡಿಟ್ಟುಕೊಂಡಿರಬೇಕು. ಹಾಗೂ ಆಸ್ಪತ್ರೆಗೆ ಬೇಕಾದ ಆಕ್ಸಿಜನ್ ಬೆಡ್, ಐಸಿಯು ಕಾಟ್ಸ್‍ಗಳನ್ನು ಶನಿವಾರದೊಳಗಾಗಿ ತರಿಸಬೇಕು. ಇಲ್ಲದಿದ್ದರೆ ಗುತ್ತಿಗೆ ರದ್ದುಪಡಿಸಲಾಗುವುದು ಎಂದ ಅವರು, ಜಿಲ್ಲಾಸ್ಪತ್ರೆಯಲ್ಲಿ 30-40 ಅಡಿ ಸ್ಥಳಾವಕಾಶದಲ್ಲಿ ಹೊಸದಾಗಿ ಎಂ.ಆರ್.ಐ ಸ್ಕ್ಯಾನಿಂಗ್ ಕೇಂದ್ರ ನಿರ್ಮಾಣ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ವೈದ್ಯಕೀಯ ಅಧ್ಯಯನ ಮಾಡುತ್ತಿರುವ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಕ್ಕಳ ಚಿಕಿತ್ಸೆ ಕುರಿತಂತೆ ತರಬೇತಿ ನೀಡಲು ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್ : ಜಿಲ್ಲಾಸ್ಪತ್ರೆಯಲ್ಲಿ 1000 ಲೀ ಸಾಮಥ್ರ್ಯದ ಪ್ರತ್ಯೇಕ 03 ಆಕ್ಸಿಜನ್ ಪ್ಲಾಂಟ್‍ಗಳ ಕಾಮಗಾರಿ ಸಂಪೂರ್ಣವಾಗಿ ಮುಗಿದಿದ್ದು, ಕೋವಿಡ್‍ನ ಸಂಭಾವ್ಯ 3 ನೇ ಅಲೆಯನ್ನು ತಡೆಗಟ್ಟಲು ಎಲ್ಲಾ ರೀತಿಯ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಕೊರೊನಾ 02ನೇ ಅಲೆ ಸಂದರ್ಭದಲ್ಲಿ ಸಾರ್ವಜನಿಕರಿಗೆ ಆಕ್ಸಿಜನ್ ಸಮಸ್ಯೆಯಾಗಿತ್ತು. ಹೀಗಾಗಿ ಸಂಭಾವ್ಯ 3 ನೇ ಅಲೆಯಲ್ಲಿ ಆಕ್ಸಿಜನ್, ಮಾನವ ಸಂಪನ್ಮೂಲಗಳ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ.

ಈಗಾಗಲೇ ಜಿಲ್ಲಾಸ್ಪತ್ರೆಯಲ್ಲಿ 03 ಆಕ್ಸಿಜನ್ ಘಟಕವನ್ನು ನಿರ್ಮಾಣ ಮಾಡಲಾಗಿದ್ದು, ಇದಕ್ಕೆ 500 ಕೆವಿ ಜನರೇಟರ್ ವಿದ್ಯುತ್ ಸಂಪರ್ಕ ವ್ಯವಸ್ಥೆ, ಪವರ್ ಬ್ಯಾಕಪ್ ಜನರೇಟರ್ ಹಾಗೂ ಡಿಸೇಲ್ ವ್ಯವಸ್ಥೆಯನ್ನು ಅಳವಡಿಸಿ ಕೆಲವೇ ದಿನಗಳಲ್ಲಿ ಇದರ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಇದಕ್ಕೂ ಪೂರ್ವದಲ್ಲಿ ಜಿಲ್ಲಾಸ್ಪತ್ರೆಯಲ್ಲಿನ 65-66 ನೇ ಮಕ್ಕಳ ತೀವ್ರ ನಿಗಾ ಚಿಕಿತ್ಸಾ ಘಟಕಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಪ್ರತಿಯೊಂದು ಬೆಡ್ ಬಳಿ ತೆರಳಿ, ಅಲ್ಲಿನ ಮಕ್ಕಳ ಖಾಯಿಲೆ ಹಾಗೂ ಅದರ ಚಿಕಿತ್ಸೆಗಳ ಬಗ್ಗೆ ವೈದ್ಯರು ಹಾಗೂ ಪೋಷಕರನ್ನು ಮಾತನಾಡಿಸಿ ಮಕ್ಕಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಅವರ ಶುಶ್ರೂಷೆ ಮತ್ತು ಆರೈಕೆ ಉತ್ತಮ ರೀತಿಯಲ್ಲಿ ಆಗಬೇಕು ಎಂದು ವೈದ್ಯರಿಗೆ ಸೂಚನೆ ನೀಡಿದರು.
ಆಸ್ಪತ್ರೆಯಲ್ಲಿ ಬೆಡ್‍ಗಳ ಯಾವುದೇ ಕೊರತೆಯಿಲ್ಲ ಸಾರ್ವನಿಕರು ಬಂದು ಉಚಿತವಾಗಿ ದಾಖಲಾಗಿ ಚಿಕಿತ್ಸೆಯನ್ನು ಪಡೆಯಬಹುದು ಹಾಗೂ ವೈದ್ಯರು ಯಾವುದೇ ಕಾರಣಕ್ಕೂ ಅನಾವಶ್ಯಕವಾಗಿ ಬೇರೆ ಬೇರೆ ಆಸ್ಪತ್ರೆಗಳಿಗೆ ಪರೀಕ್ಷೆಗಳಿಗೆ ಸೂಚಿಸುವಂತಿಲ್ಲ. ಅನಾವಶ್ಯಕವಾಗಿ ಸೂಚಿಸಿದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು. ಎಂಆರ್‍ಐ ಸ್ಕ್ಯಾನಿಂಗ್‍ಗಾಗಿ ಆಸ್ಪತ್ರೆ ಆವರಣದಲ್ಲಿ 30-40 ಜಾಗವನ್ನು ನಿಗದಿಪಡಿಸಿ ಆದಷ್ಟು ಬೇಗ ಕಾಮಗಾರಿ ಪ್ರಾರಂಭ ಮಾಡಲು ಸೂಚನೆ ನೀಡಿದರು.

ಈ ವೇಳೆ ಜಿಲ್ಲಾ ಸರ್ಜನ್ ಡಾ. ಜಯಪ್ರಕಾಶ, ಹಿರಿಯ ಶುಶ್ರೂಷಕಿ ಡಾ. ಆಶಾ ಕಾಂಬ್ಳೆ, ಮಕ್ಕಳ ತಜ್ಞ ಡಾ. ಸುರೇಶ್, ಡಾ. ಮೋಹನ್ ಇನ್ನುಳಿದ ವೈದ್ಯಾಧಿಕಾರಿಗಳು ಇದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top