ಡಿವಿಜಿ ಸುದ್ದಿ, ದಾವಣಗೆರೆ: ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ಆವರಗೆರೆಯ ಮಲ್ಲಿಕಾರ್ಜುನ ಎಸ್. ಗುಡಿಹಿಂದಲ ಎನ್ನುವ ರೈತ ಸಾವಯವ ಮತ್ತು ರಸಾಯನಿಕ ಪದ್ಧತಿಯಲ್ಲಿ 22 ಕೆ.ಜಿಯ ಅಂಗಾಂಶ ಏಲಕ್ಕಿ ಬಾಳೆ ಬೆಳೆದು ಪ್ರಗತಿಪರ ರೈತರಾಗಿದ್ದಾರೆ.
ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಕೃಷಿ ತಂತ್ರಜ್ಞರ ಸಂಸ್ಥೆ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ದಾವಣಗೆರೆ ತಾಲ್ಲೂಕು ಆವರಗೆರೆ ಗ್ರಾಮದಲ್ಲಿ ಬಾಳೆ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ 22 ಕೆ.ಜಿ ತೂಕದ ಏಲಕ್ಕಿ ಬಾಳೆ ಪ್ರದರ್ಶಿಸಿದರು.
ಕೃಷಿ ಇಲಾಖೆಯ ಉಪಕೃಷಿ ನಿರ್ದೇಶಕ ತಿಪ್ಪೇಸ್ವಾಮಿ ಆರ್. ಮಾತನಾಡಿ, ಬದಲಾದ ಹವಮಾನ ವೈಪರೀತ್ಯದಲ್ಲಿ ನಾವು ಮಾಡುವ ಕೃಷಿ ತಂತ್ರಜ್ಞಾನಗಳ ಅಳವಡಿಕೆಯೂ ಸಹ ಬದಲಾಗಬೇಕೆಂಬುದಕ್ಕೆ ಈ ಕ್ಷೇತ್ರೋತ್ಸವವೇ ಸಾಕ್ಷಿ ಎಂದರು.
ಪ್ರಸ್ತುತ ದಿನಮಾನದಲ್ಲಿ ಬಾಳೆ ಬೆಳೆಯಲ್ಲಿ ಬರೀ ಕಂದುಗಳ ಬಳಕೆ, ಅವೈಜ್ಞಾನಿಕ ಪೋಷಕಾಂಶಗಳ ನಿರ್ವಹಣೆಯನ್ನು ಆಗೊಮ್ಮೆ ಇಗೊಮ್ಮೆ ಸಿಂಪರಣೆ ಮಾಡುವುದನ್ನು ನೋಡಿದ್ದೇವೆ. ಆದರೆ ಮಲ್ಲಿಕಾರ್ಜುನ ಎಸ್. ಗುಡಿಹಿಂದಲ ಅವರು, ಅಂಗಾಂಶ ಏಲಕ್ಕಿ ಬಾಳೆ ನಾಟಿ ಮಾಡಿ, ಸಮಯಕ್ಕೆ ಸರಿಯಾಗಿ ಸಾವಯವ ಮತ್ತು ರಸಾಯನಿಕ ಪೋಷಕಾಂಶ ನೀಡಿದ್ದಾರೆ ಇದಲ್ಲದೆ, ರಸಾವರಿ, ಗೊನೆಗಳಿಗೆ ಪೋಷಕಾಂಶ ಸಿಂಪರಣೆ ಮಾಡಿ ಕೃಷಿ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ 22 ಕೆ.ಜಿ. ಏಲಕ್ಕಿ ಬಾಳೆ ಬೆಳೆದು ಪ್ರಗತಿಪರ ರೈತರೆನಿಸಿದ್ದಾರೆ ಎಂದು ತಿಳಿಸಿದರು.
ಕ್ಷೇತ್ರೋತ್ಸವದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡ ಮಲ್ಲಿಕಾರ್ಜುನ ಎಸ್. ಜಿ, ಹಿಂದೆ ಗದ್ದೆ ಮಾಡುತ್ತಿದ್ದ ಜಮೀನಿನಲ್ಲಿ ಬಾಳೆ ಮತ್ತು ಅಡಿಕೆ ಬೆಳೆಯುವುದು ಸವಾಲಿನ ಕೆಲಸವಾಗಿತ್ತು. ಆದರೆ ವೈಜ್ಞಾನಿಕ ಸಲಹೆಯಿಂದ ಕೃಷಿ ಮಾಡಿದರೆ ಬರಡು ಭೂಮಿಯಲ್ಲೂ ಬಂಗಾರದ ಬೆಳೆಯನ್ನು ಬೆಳೆಯಬಹುದೆಂಬುದಕ್ಕೆ ಈ ಕ್ಷೇತ್ರವೇ ಸಾಕ್ಷಿ. ಕೆವಿಕೆ ಕೃಷಿ ತಜ್ಞರಾದ ಬಸವನಗೌಡ ಎಂ.ಜಿ., ಹೆಚ್. ಎಂ. ಸಣ್ಣಗೌಡ್ರು ರವರ ಮಾರ್ಗದರ್ಶನ ಅನುಕೂಲವಾಯಿತು. ಈಗ ಬಾಳೆ ಬೆಲೆ ಇಳಿಮುಖವಾಗಿದ್ದು, ಕನಿಷ್ಟ ದರ 20 ರೂಪಾಯಿ ರೂ ಸಿಕ್ಕರೂ ನನಗೆ 2.5 ಲಕ್ಷ ನಿವ್ವಳ ಲಾಭ ದೊರೆಯಲಿದೆ ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಶಶಿಕಲಾ ಮಾತನಾಡಿ, ಇಲಾಖೆಯಲ್ಲಿ ಹನಿ ನೀರಾವರಿ, ಸಮಗ್ರ ತೋಟಗಾರಿಕೆ ಯೋಜನೆ, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ, ತೆಂಗು ಅಭಿವೃದ್ಧಿ ಮಂಡಳಿ ಯೋಜನೆ, ಉದ್ಯೋಗ ಖಾತ್ರಿ ಯೋಜನೆಗಳ ಬಗ್ಗೆ ಸವಿವರವಾಗಿ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ದೇವರಾಜ ಟಿ.ಎನ್. ಮಾತನಾಡಿ, ಕೃಷಿ ತಂತ್ರಜ್ಞಾನಗಳ ಅಳವಡಿಕೆಯಲ್ಲಿ ರೈತರಿಗೆ ನಂಬಿಕೆಯಿರಬೇಕು. ಈಗ ಒಂದು ಎಕರೆಯಲ್ಲಿ ಹತ್ತು ಎಕರೆಯಲ್ಲಿ ಬೆಳೆಯುವ ಇಳುವರಿ ಪಡೆಯಲು ಸಾಧ್ಯ. ಆದರೆ ವಿಜ್ಞಾನಿಗಳ ಸಲಹೆ, ಸೂಚನೆ ಅಗತ್ಯ ಎಂದರು.
ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ.ಜಿ. ಅವರು, ನೆರದ್ದಿದ ರೈತರಿಗೆ ಪ್ರಾಯೋಗಿಕವಾಗಿ ಬಾಳೆ ಬೆಳೆಯಲ್ಲಿ ಅನುಸರಿಸಬೇಕಾದ ಕ್ರಮಗಳಾದ ಕಂದುಗಳ ಆಯ್ಕೆ, ರಸಾವರಿ ಗೊಬ್ಬರಗಳ ನಿರ್ವಹಣೆ, ರೋಗ ಮತ್ತು ಕೀಟಗಳ ನಿರ್ವಹಣೆ ಮುಂತಾದ ವಿಷಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಕಾಡಜ್ಜಿ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರ ಮಾಲತೇಶ್, ನಿವೃತ್ತ ಕೃಷಿ ಅಧಿಕಾರಿ ಅಜಗಣ್ಣನವರ್, ರುದ್ರಪ್ಪ ಬಿ.ಜಿ., ೪೦ ದೇಸಿ ವಿದ್ಯಾರ್ಥಿಗಳು ಹಾಗೂ ಸುತ್ತ ಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.