ಕರುಣಾಕರ ರೆಡ್ಡಿಗೆ ಸಚಿವ ಸ್ಥಾನ ನೀಡುವಂತೆ  ಸಿಎಂ ಬಳಿ ನಿಯೋಗ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
4 Min Read

ಡಿವಿಜಿ ಸುದ್ದಿ, ಹರಪನಹಳ್ಳಿ: ಬಳ್ಳಾರಿ ಗಣಿಧಣಿ, ರೆಡ್ಡಿ ಸಹೋದರರ ಹಿರಿಯಣ್ಣ ಹರಪನಹಳ್ಳಿ ಕ್ಷೇತ್ರದ ಶಾಸಕ ಜಿ.ಕರುಣಾಕರರೆಡ್ಡಿಗೆ ಅವರಿಗೆ ‘ಮಂತ್ರಿಗಿರಿ’ ನೀಡುವಂತೆ ತಾಲೂಕು ಬಿಜೆಪಿ ಮುಖಂಡರ ನಿಯೋಗ ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ. ಮತ್ತೊಂದೆಡೆ ಶಾಸಕ ಜಿ.ಕರುಣಾಕರರೆಡ್ಡಿ ತೆಗ್ಗಿನಮಠ  ಶ್ರೀಗಳೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದಾರೆ.

ದಾವಣಗೆರೆ ಜಿಲ್ಲೆಯಿಂದ ಈಚೇಗೆ ಬೇರ್ಪಟ್ಟು ಪುನಃ ಬಳ್ಳಾರಿ ಜಿಲ್ಲೆ ಮಡಿಲು ಸೇರಿಕೊಂಡಿರುವ ಹರಪನಹಳ್ಳಿ ಕ್ಷೇತ್ರಕ್ಕೆ ಸಚಿವ ಸ್ಥಾನದ ಗರಿ ಕಟ್ಟಿಟ್ಟಬುತ್ತಿ ಎಂದೇ ಭಾವಿಸಲಾಗಿತ್ತು. ಬಳ್ಳಾರಿ ಜಿಲ್ಲೆಗೆ ಪ್ರಾತಿನಿಧ್ಯ ನೀಡುವ ಸಲುವಾಗಿ ರೆಡ್ಡಿ ಸಹೋದರರ ಹಿರಿಯ ಸಹೋದರ ಜಿ.ಕರುಣಾಕರರೆಡ್ಡಿ ಸಚಿವ ಸ್ಥಾನ ದೊರೆಯುತ್ತದೆ ಎಂಬ ನಿರೀಕ್ಷೆ ಹುಸಿಯಾಗಿತ್ತು. ಉಪಚುನಾವಣೆಯಲ್ಲಿ ಅನರ್ಹ ಶಾಸಕರು ಗೆಲುವಿನ ನಗೆ ಬೀರಿರುವ ಹಿನ್ನಲೆಯಲ್ಲಿ ಇದೀಗ ಪುನಃ ಸಚಿವ ಸಂಪುಟ ವಿಸ್ತರಣೆ ಆಗುತ್ತಿರುವ ಸಂದರ್ಭದಲ್ಲಿ ಕರುಣಾಕರರೆಡ್ಡಿ ಅವರನ್ನು ಪರಿಗಣಿಸುವಂತೆ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಸತ್ತೂರು ಹಾಲೇಶ್ ನೇತೃತ್ವದ ನಿಯೋಗ ಮುಖ್ಯಮಂತ್ರಿಗಳಿಗೆ ಒತ್ತಡ ಹಾಕಿದೆ.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ.ಪಿ.ನಾಯ್ಕ, ತಾ.ಪಂ ಉಪಾಧ್ಯಕ್ಷ ಎಲ್.ಮಂಜ್ಯನಾಯ್ಕ, ಆರ್.ಲೋಕೇಶ್, ಸಣ್ಣಹಾಲಪ್ಪ, ಬಾಗಳಿ ಕೊಟ್ರೇಶಪ್ಪ, ಎಂ.ಮಲ್ಲೇಶ್ ಸೇರಿದಂತೆ ಅನೇಕ ನಾಯಕರ ತಂಡ ಬುಧವಾರ ಬೆಂಗಳೂರಿನ ಡಾಲರ್ಸ್ ಕಾಲೋನಿಯ ಮುಖ್ಯಮಂತ್ರಿಗಳ ನಿವಾಸದಲ್ಲಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದಾಗ ಈ ಕುರಿತು ಹೈಕಮಾಂಡ್ ಜೊತೆಗೆ ಚರ್ಚೆ ಮಾಡುವುದಾಗಿ ಬಿ.ಎಸ್.ಯಡಿಯೂರಪ್ಪ ಭರವಸೆ ನೀಡಿದ್ದಾರೆ ಎಂದು ಬಿಜೆಪಿ ಮುಖಂಡರು ತಿಳಿಸಿದ್ದಾರೆ.

karunakara reddy 2

2004 ರಲ್ಲಿ ಬಳ್ಳಾರಿ ಕ್ಷೇತ್ರದಿಂದ ಬಿಜೆಪಿ ಪಕ್ಷದ ಪ್ರಥಮ ಸಂಸದನಾಗಿ ಜಿ.ಕರುಣಾಕರರೆಡ್ಡಿ ಆಯ್ಕೆಯಾಗಿದ್ದರು. ೨೦೦೮ರಲ್ಲಿ ಹರಪನಹಳ್ಳಿ ಕ್ಷೇತ್ರದಲ್ಲಿ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ವಿರುದ್ದ ೨೫ ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸುವ ಮೂಲಕ ವಿಧಾನಸೌಧ ಪ್ರವೇಶಿಸಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟದಲ್ಲಿ ಕಂದಾಯ ಮಂತ್ರಿಯಾಗಿ ಕರ್ತವ್ಯ ನಿರ್ವಹಿಸಿದರು. ನಂತರ ಬದಲಾದ ರಾಜಕಾರಣದಲ್ಲಿ 2012 ರಲ್ಲಿ ರೆಡ್ಡಿ ಕುಟುಂಬದ ಆಪ್ತ ಮಿತ್ರ ಶ್ರೀರಾಮುಲು ಬಿಎಸ್ಸಾರ್ ಪಕ್ಷ ಕಟ್ಟಿದ್ದರೂ ಕರುಣಾಕರರೆಡ್ಡಿ ಬಿಜೆಪಿ ತೊರೆಯಲಿಲ್ಲ. ಅಕ್ರಮ ಗಣಿಗಾರಿಕೆ ಆರೋಪದಡಿಯಲ್ಲಿ ಸಹೋದರ ಜನಾರ್ಧನರೆಡ್ಡಿ ಜೈಲು ಸೇರಿದಾಗ ಕುಟುಂದವರೊಂದಿಗೆ ಅಂತರ ಕಾಯ್ದಕೊಂಡು ಯಾವುದೇ ಪಕ್ಷಕ್ಕೆ ಸೇರ್ಪಡೆಗೊಳ್ಳದೇ ಬಿಜೆಪಿ ಪಕ್ಷದಲ್ಲಿಯೇ ಉಳಿದು ‘ಪಕ್ಷ ನಿಷ್ಠೆ’ ಪ್ರದರ್ಶಿಸಿದ್ದರು. ಹೀಗಾಗಿ ಪಕ್ಷದ ವರಿಷ್ಠರು ಪಕ್ಷ ನಿಷ್ಠೆ ಗುರುತಿಸಿ ಮಂತ್ರಿಗಿರಿ ನೀಡುವ ನಿರೀಕ್ಷೆಯಲ್ಲಿ ಬಿಜೆಪಿ ಮುಖಂಡರಿದ್ದಾರೆ.

ಶ್ರೀಗಳ ಜೊತೆ ಸಿಎಂ ಭೇಟಿ

ಪಂಚಪೀಠದ ರಂಭಾಪುರೀ ಪೀಠದ ಶಾಖಾ ಮಠವಾಗಿರುವ ಹರಪನಹಳ್ಳಿ ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷರಾದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಗಳ ಜೊತೆಗೂಡಿ ಶಾಸಕ ಜಿ.ಕರುಣಾಕರರೆಡ್ಡಿ ಅವರು ಬುಧವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿರುವುದು ಇನ್ನಷ್ಟು ಪುಷ್ಠಿ ನೀಡಿದೆ. ಶ್ರೀಗಳ ಮೂಲಕ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿಗಳ ಮೇಲೆ ಶಾಸಕ ಜಿ.ಕರುಣಾಕರರೆಡ್ಡಿ ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. ಶ್ರೀಗಳ ಜೊತೆ ಮುಖ್ಯಮಂತ್ರಿಗಳ ಭೇಟಿ ಮಾಡುವುದು ಮತ್ತು ಬಿಜೆಪಿ ಮುಖಂಡರ ನಿಯೋಗ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿರುವುದು ಎರಡು ಒಂದೇ ದಿನ ಬೆಳವಣಿಗೆ ನಡೆದಿದೆ.

ಬಳ್ಳಾರಿ ಜಿಲ್ಲೆ ವಿಭಜಿಸಿ ವಿಜಯನಗರ ಜಿಲ್ಲೆ ಮಾಡಬಾರದು ಎಂದು ರೆಡ್ಡಿ ಸಹೋದರ ಶಾಸಕ ಜಿ.ಕರುಣಾಕರರೆಡ್ಡಿ, ಬಳ್ಳಾರಿ ಶಾಸಕ ಜಿ.ಸೋಮಶೇಖರರೆಡ್ಡಿ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದರು. ಆದರೆ ಹೊಸಪೇಟೆ ಆನಂದಸಿಂಗ್ ವಿಜಯನಗರ ಜಿಲ್ಲೆಗಾಗಿ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಇದೀಗ ಹೊಸಪೇಟೆ ಉಪ ಚುನಾವಣೆಯಲ್ಲಿ ಆನಂದಸಿಂಗ್ ಗೆಲುವು ಪಡೆದಿರುವುದರಿಂದ ಮುಖ್ಯಮಂತ್ರಿಗಳು  ‘ವಿಜಯ ನಗರ’ ಜಿಲ್ಲೆ ಘೋಷಣೆ ಮಾಡಲಿದ್ದಾರೆ. ಜಿಲ್ಲೆ ವಿಭಜನೆಗೆ ವಿರೋಧ ವ್ಯಕ್ತಪಡಿಸುತ್ತಿರುವ ರೆಡ್ಡಿ ಸಹೋದರರ ಪೈಕಿ ಒಬ್ಬರಿಗೆ ಮಂತ್ರಿ ಸ್ಥಾನ ನೀಡುವ ಮೂಲಕ ಮುಖ್ಯಮಂತ್ರಿಗಳು ವಿವಾದ ಬಗೆಹರಿಸಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಪಟ್ಟಣದ ತೆಗ್ಗಿನಮಠ ಟಿಎಂಎಇ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಡಿ.೨೪,೨೫ರಂದು ನಡೆಯಲಿದ್ದು, ಕಾರ್ಯಕ್ರಮ ಉದ್ಘಾಟಿಸಲು ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲು ಶ್ರೀಗಳ ಜೊತೆಗೆ ತೆರಳಿದ್ದೇವೆಯೇ ವಿನಃ ಭೇಟಿ ಸಂದರ್ಭದಲ್ಲಿ ರಾಜಕೀಯ ವಿಷಯ ಕುರಿತು ಯಾವುದೇ ಚರ್ಚೆ ನಡೆದಿಲ್ಲ.

 -ಜಿ.ಕರುಣಾಕರರೆಡ್ಡಿ, ಶಾಸಕ

ಹೈಕಮಾಂಡ್ ಜೊತೆಗೆ ಚರ್ಚೆ ಭರವಸೆ

ಕಳೆದ ಮೂರು ದಶಕಗಳಿಂದ ಶಾಸಕ ಜಿ.ಕರುಣಾಕರರೆಡ್ಡಿ ಅವರು ನಿಷ್ಠೆಯಿಂದ ಪಕ್ಷ ಸಂಘಟನೆ ಮಾಡಿದ್ದಾರೆ. ಬಿಜೆಪಿ ಪಕ್ಷವನ್ನು ಬಿಟ್ಟು ಯಾವುದೇ ಪಕ್ಷಕ್ಕೆ ವಲಸೆ ಹೋಗಿ ಮರಳಿ ಬಂದಿಲ್ಲ. ಕಳೆದ ಅವಧಿಯಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಕಂದಾಯ ಸಚಿವರಾಗಿ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಿದ್ದಾರೆ. ಅಲ್ಲದೇ ಬಳ್ಳಾರಿ ಜಿಲ್ಲೆಗೆ ಪ್ರಾತಿನಿಧ್ಯ ಕೊಡುವ ಉದ್ದೇಶದಿಂದ ಶಾಸಕ ಜಿ.ಕರುಣಾಕರರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಹೈಕಮಾಂಡ್ ಜೊತೆಗೆ ಚರ್ಚಿಸಿ ನಿರ್ಧಾರ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು  ಬಿಜೆಪಿ ತಾಲೂಕು ಘಟಕ ಅಧ್ಯಕ್ಷ ಸತ್ತೂರು ಹಾಲೇಶ್ ತಿಳಿಸಿದ್ದಾರೆ.

ನಮ್ಮ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಳಿ ಸ್ಥಳೀಯ ಶಾಸಕ ಜಿ.ಕರುಣಾಕರರೆಡ್ಡಿ ಅವರೊಂದಿಗೆ ಭೇಟಿ ಮಾಡಿದ್ದೇವೆ. ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಆಗಮಿಸುವ ಕುರಿತು ಒಂದೆರಡು ದಿನಗಳಲ್ಲಿ ತಿಳಿಸುವುದಾಗಿ ಭರವಸೆ ನೀಡಿದ್ದಾರೆ.

-ವರಸದ್ಯೋಜಾತ ಸ್ವಾಮೀಜಿ, ತೆಗ್ಗಿನಮಠ ಸಂಸ್ಥಾನ

 

ವರದಿ: ಎಸ್.ಎನ್.ಕುಮಾರ್ ಪುಣಬಗಟ್ಟಿ

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *