ನವದೆಹಲಿ: ಮಹಾಮಾರಿ ಕೊರೊನಾ ವೈರಸ್ಗೆ ಇಡೀ ವಿಶ್ವವೇ ತತ್ತರಿಸಿ ಹೋಗಿದೆ. ಭಾರತದಲ್ಲೂ ಕೊರೊನಾ ವೈರಸ್ ದಿನೇ ದಿನೇ ಹೆಚ್ಚಾಗುತ್ತಿದ್ದು, ಈವರೆಗೆ ಸೋಂಕಿಗೆ 2,301 ಮಂದಿ ತುತ್ತಾಗಿದ್ದು, 56 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.
ವಿಶ್ವಾದ್ಯಂತ ಸೋಂಕಿಗೆ ಈವರೆಗೆ ಸುಮಾರು 10,16,330 ಮಂದಿ ತುತ್ತಾಗಿದ್ದು, 53,238 ಮಂದಿ ಸಾವನ್ನಪ್ಪಿದ್ದಾರೆ. 2,13,132 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ವರದಿಯಾಗಿದೆ.

ಇಡೀ ದೇಶದಲ್ಲಿ ಮಹಾರಾಷ್ಟ್ರದಲ್ಲಿ 335 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 13 ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರ 30 ಸರ್ಕಾರಿ ಆಸ್ಪತ್ರೆಗಳನ್ನು ಕೋವಿಡ್-19 ಚಿಕಿತ್ಸೆಗಾಗಿಯೇ ಮೀಸಲಿಟ್ಟಿದ್ದು, ಈ ಎಲ್ಲಾ ಆಸ್ಪತ್ರೆಗಳು ಸೇರಿ ಸುಮಾರು 2,305 ಬೆಡ್ಗಳ ಸೌಲಭ್ಯ ಕಲ್ಪಿಸಲಾಗಿದೆ.

ಕೇರಳ ಎರಡನೇ ಸ್ಥಾನದಲ್ಲಿದೆ. ಕೇರಳದಲ್ಲಿ 265 ಮಂದಿಗೆ ಸೋಂಕು ತಗುಲಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಆ ಬಳಿಕ ತಮಿಳುನಾಡಿನಲ್ಲಿ 234 ಸೋಂಕಿತ ಪ್ರಕರಣ ವರದಿಯಾಗಿದ್ದು, ಒಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ದೆಹಲಿಯಲ್ಲಿ 219 ಮಂದಿ ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ 125 ಮಂದಿಗೆ ಸೋಂಕು ತಗುಲಿದ್ದು, ಮೂವರು ಮೃತಪಟ್ಟಿದ್ದಾರೆ.
ಕೆಲ ಸ್ಥಳಗಳನ್ನು ಕೊರೊನಾ ವೈರಸ್ ಸೋಂಕಿನ ಹಾಟ್ಸ್ಪಾಟ್ ಎಂದು ಗುರುತಿಸಲಾಗಿದೆ. ದೆಹಲಿಯ ದಿಲ್ಶಾದ್ ಗಾರ್ಡನ್ ಹಾಗೂ ನಿಜಾಮುದ್ದೀನ್, ಉತ್ತರ ಪ್ರದೇಶದ ಮೀರತ್ , ನೋಯ್ಡಾ, ರಾಜಸ್ಥಾನದ ಭಿಲ್ವಾರ, ಅಹಮದಾಬಾದ್, ಕೇರಳದ ಕಾಸರಗೋಡು ಹಾಗೂ ಪಥನಂತಿಟ್ಟ, ಮುಂಬೈ ಹಾಗೂ ಪುಣೆ ನಗರಗಳದಲ್ಲಿ ಹೆಚ್ಚು ಪ್ರಕರಣ ಪತ್ತೆಯಾಗಿದೆ.
ಜಮಾತ್ನಲ್ಲಿ ನಡೆದ ತಬ್ಲಿಘಿ ಸಮಾವೇಶದಲ್ಲಿ ಭಾಗಿಯಾಗಿದ್ದ 9 ಸಾವಿರ ಕಾರ್ಯಕರ್ತರನ್ನು ನಾವು ಗುರುತಿಸಿ, ಅವರ ವಿವರಗಳನ್ನು ಪಡೆದಿದ್ದೇವೆ. ಅವರಲ್ಲಿ 1,306 ಮಂದಿ ವಿದೇಶಿಗರಿದ್ದಾರೆ. ಎಲ್ಲರನ್ನೂ ಹೋಂ ಕ್ವಾರಂಟೈನ್ ನಲ್ಲಿ ಹಿಡಲಾಗಿದೆ ಎಂದು ಗೃಹ ಸಚಿವಾಲಯ ಮಾಹಿತಿ ನೀಡಿದೆ.



