Connect with us

Dvgsuddi Kannada | online news portal | Kannada news online

ಶ್ರೀ ತರಳಬಾಳು ಜಗದ್ಗುರುಗಳಿಂದ ಮಕ್ಕಳಿಗೆ ಪಾಠ; ಕೊರೊನಾ ನಿಯಮ ಪಾಲಿಸುವಂತೆ ಸೂಚನೆ

ಅಂಕಣ

ಶ್ರೀ ತರಳಬಾಳು ಜಗದ್ಗುರುಗಳಿಂದ ಮಕ್ಕಳಿಗೆ ಪಾಠ; ಕೊರೊನಾ ನಿಯಮ ಪಾಲಿಸುವಂತೆ ಸೂಚನೆ

ವರದಿ: ಬಸವರಾಜ ಸಿರಿಗೆರೆ

ಕೊರೋನಾ ಹಿನ್ನೆಲೆಯಲ್ಲಿ ಕಳೆದ ಒಂಭತ್ತು ತಿಂಗಳಿನಿಂದ ಸ್ಥಗಿತಗೊಂಡಿದ್ದ ಶಾಲಾ-ಕಾಲೇಜು ಗಳು ಹೊಸವರ್ಷದ ದಿನವೇ ಆರಂಭವಾಗಿದ್ದು, ಮಕ್ಕಳು ಲವಲವಿಕೆಯಿಂದಲೇ ಶಾಲಾ-ಕಾಲೇಜುಗಳಿಗೆ ಆಗಮಿಸುತ್ತಿದ್ದಾರೆ. ಕೋವಿಡ್-19 ಮಾರ್ಗಸೂಚಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಶಾಲೆಗಳನ್ನು ನಿರ್ವಹಿಸಲಾಗುತ್ತಿದೆ. ಗ್ರಾಮೀಣ ಶಿಕ್ಷಣಕ್ಕೆ ದೇಶದಲ್ಲಿಯೇ ಅವಿಚ್ಛಿನ್ನವಾದ ಕೊಡುಗೆ ನೀಡಿರುವ ಕೀರ್ತಿಯನ್ನು ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಹೊಂದಿದೆ. ಸರ್ವತ್ರ ಪೂಜ್ಯರಾದ ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಾಧೀಶ ಶ್ರೀ ತರಳಬಾಳು ಜಗದ್ಗುರು 1108 ಡಾ॥ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಇಂದು ಸಿರಿಗೆರೆ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶಾಲೆಗಳಿಗೆ ಭೇಟಿ ನೀಡಿ ಶಾಲಾ ನಿರ್ವಹಣೆಯ ಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದರು. ಮಕ್ಕಳಿಗೆ ಶಿಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಕೊರೊನಾ ಕಾರಣದಿಂದ ಕೈಗೊಂಡಿರುವ ಮಾರ್ಗಸೂಚಿಯ ನಿಯಮಗಳನ್ನು ಮನವರಿಕೆ ಮಾಡಿಕೊಡುವಂತೆ ಅಗತ್ಯ ಮಾರ್ಗದರ್ಶನ ದಯಪಾಲಿಸಿದರು.

ಶಾಲೆಯ ಎಲ್.ಕೆ.ಜಿ. ಮಕ್ಕಳಿಗೆ ಪೂಜ್ಯ ಶ್ರೀ ಜಗದ್ಗುರುಗಳವರು ಪಾಠ ಬೋಧನೆಯ ಕಾರ್ಯವನ್ನು ನಡೆಸಿದ್ದು ಪುಟ್ಟ ಮಕ್ಕಳಿಗೆ ಪುಳಕ ಮತ್ತು ಸಂತೋಷವನ್ನು ಉಂಟು ಮಾಡಿತು.

ಗ್ರಾಮೀಣ ಶಿಕ್ಷಣದ ರೂವಾರಿ ಶ್ರೀ ತರಳಬಾಳು ಜಗದ್ಗುರು

ನಮ್ಮ ದೇಶದ ಅಭಿವೃದ್ಧಿಯು ಅಸಂಖ್ಯಾತ ಹಳ್ಳಿಗಳ ಅಭಿವೃದ್ಧಿಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ ಎಂಬುದು ಬಹುಮಟ್ಟಿಗೆ ನಿಜ. ಶಿಕ್ಷಣವಿಲ್ಲದೆ ಪ್ರಗತಿ ಸಾಧಿಸಬೇಕೆಂದು ಯಾರೂ ಆಶಿಸಲಾರರು, ಹಳ್ಳಿಗಳ ಪ್ರಗತಿಗೆ ಗುಣಮಟ್ಟದ ಶಿಕ್ಷಣವು ಸಾಕಷ್ಟು ಅವಶ್ಯಕವಾಗಿದೆ. ಗ್ರಾಮೀಣ ಭಾಗಗಳಲ್ಲಿ ಶಿಕ್ಷಣಕ್ಕೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸುವ ಬಗೆಗೆ ಸರಿಯಾದ ಮಾಹಿತಿ ನೀಡಲಾಗಿಲ್ಲ. ಇದರ ಪರಿಣಾಮವಾಗಿ, ದೇಶದ ಶಿಕ್ಷಣ ಪ್ರಗತಿಯ ದರವು ಸಾಕಷ್ಟು ಕುಸಿದಿದೆ.ಗ್ರಾಮೀಣ ಶಿಕ್ಷಣದ ರೂವಾರಿಯಾಗಿರುವ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆ ಕರ್ನಾಟಕ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠವು ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಸಂಸ್ಥೆಗಳಲ್ಲಿ ಒಂದಾಗಿದೆ. ಮಾನವ ಕುಲದ ಉನ್ನತಿಗಾಗಿ ಮಹತ್ತರ ಸೇವೆ ಸಲ್ಲಿಸುತ್ತಿರುವ ಸರ್ವಜನಾಧರಣೆಯ ಶ್ರದ್ದಾಕೇಂದ್ರವಾಗಿದೆ.

ಸಿರಿಗೆರೆ ಸ್ವಾತಂತ್ರ‍್ಯ ಪೂರ್ವದ ದಿನಗಳಲ್ಲಿ ಎಲ್ಲಾ ಸೌಲಭ್ಯಗಳಿಂದ ವಂಚಿತವಾಗಿ ಹಿಂದುಳಿದ ಸಣ್ಣ ಹಳ್ಳಿಯಾಗಿತ್ತು. ಪೀಠದ ೧೯ನೆಯ ಜಗದ್ಗುರುಗಳಾದ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರು ಶಿಕ್ಷಣದ ಬಗ್ಗೆ ಅಪಾರ ಆಸಕ್ತಿ ಹೊಂದಿ, ಶಿಕ್ಷಣದಿಂದ ಮಾತ್ರ ನಾಡಿನ ಪ್ರಗತಿ ಸಾಧ್ಯವೆಂಬ ಮಹಾ ಕನಸು ಹೊತ್ತವರಾಗಿದ್ದರು. ಪೂರ್ವಾಶ್ರಮದಲ್ಲಿ ಸ್ವತಃ ಶಿಕ್ಷಕರಾಗಿದ್ದ ಶ್ರೀಜಗದ್ಗುರುಗಳವರು ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ನೀಡುವ ಮಹಾ ಸಂಕಲ್ಪದಿಂದ 1917 ರಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಮಠದ ಆವರಣದಲ್ಲಿಯೇ ಪ್ರಾಥಮಿಕ ಶಾಲೆಯನ್ನು ತೆರೆದು ವಿದ್ಯಾದಾನಕ್ಕೆ ನಾಂದಿ ಹಾಡಿದರು. ಉನ್ನತ ವಿದ್ಯಾಭ್ಯಾಸಕ್ಕಾಗಿ ನಗರ ಪ್ರದೇಶಗಳಿಗೆ ಹೋಗುವ ಹಳ್ಳಿಯ ಮಕ್ಕಳಿಗೆ ಅನುಕೂಲವಾಗಲೆಂದು ದಾವಣಗೆರೆಯಲ್ಲಿ 1924 ರಲ್ಲಿ ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿದರು. ಆ ಕಾಲದಲ್ಲಿ ಸಿರಿಗೆರೆಯಲ್ಲಿ ಶಾಲೆಯನ್ನು ಪ್ರಾರಂಭಿಸಿ ಶಿಕ್ಷಣ ದಾಸೋಹದ ಮಹಾಕಾರ‍್ಯಕ್ಕೆ ಚಾಲನೆ ನೀಡಿದರು. ಸಿರಿಗೆರೆಯ ಶಾಲೆಯಲ್ಲಿರುವ ಕಲ್ಲಿನ ಫಲಕದ ಉಲ್ಲೇಖಿಸಿರುವ ಈ ವಾಕ್ಯ ವು ‘ಈ ಶಾಲಾ ಕಟ್ಟಡವು 1937 ರಲ್ಲಿ ಶ್ರೀ ಗುರುಶಾಂತರಾಜ ದೇಶಿಕೇಂದ್ರ ಮಹಾಸ್ವಾಮಿಗಳವರು ಉಡುಗೊರೆಯಾಗಿತ್ತು’ ಎಂದು ಸಾರುತ್ತಿದೆ.

ಪೂಜ್ಯ ಶ್ರೀ ಜಗದ್ಗುರುಗಳ ಕರಕಮಲ ಸಂಜಾತರಾದ ನಾಡಿನ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳ ತ್ರಿವಿಧ ದಾಸೋಹಿಗಳಾದ ಶ್ರೀ ತರಳಬಾಳು ಜಗದ್ಗುರು ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು 1945 ರಲ್ಲಿ ಪಟ್ಟಾಭಿಷಿಕ್ತರಾದರು. ಅವರು ವಿದ್ಯಾರ್ಥಿದೆಸೆಯಲ್ಲಿ ಕಾಶಿಯಲ್ಲಿ ಉನ್ನತ ವಿದ್ಯೆಯನ್ನು ಪಡೆಯಲು ತೆರಳಿದ್ದಾಗ ಹಲವು ತೊಂದರೆಗಳನ್ನು ಅನುಭವಿಸಬೇಕಾಯಿತು. ಈ ತೊಂದರೆಗಳನ್ನು ಮುಂದಿನ ತಲೆಮಾರು ಅನುಭವಿಸಬಾರದು ಎಂಬ ಆಶಯದಿಂದ ಗ್ರಾಮೀಣ ಭಾಗದಲ್ಲಿ ವ್ಯಾಪಕವಾಗಿ ವಿದ್ಯಾದಾನಕ್ಕೆ ಮುಂದಾದರು. ದೇಶಕ್ಕೆ ಸ್ವಾತಂತ್ಯ ದೊರೆಯುವ ಪೂರ್ವದಲ್ಲಿಯೇ 1947 ರಲ್ಲಿ ಸಿರಿಗೆರೆಯಲ್ಲಿ ಪ್ರೌಢಶಾಲೆ ಮತ್ತು ವಿದ್ಯಾರ್ಥಿ ನಿಲಯವನ್ನು ಸ್ಥಾಪಿಸಿದರು. ಸಹಪಂಕ್ತಿ ಭೋಜನದ ಮೂಲಕ ಜಾತಿಭೇದವನ್ನು ತೊಡೆದು ಹಾಕಿ ಸಮಾಜಕ್ಕೆ ಉಪಕಾರಿಯಾದ ಕ್ರಾಂತಿಕಾರಕ ನಿಲುವುಗಳನ್ನ ಪ್ರತಿಪಾದಿಸಿ ದೇಶದ ಸಂವಿಧಾನ ರಚನೆಯ ಪೂರ್ವದಲ್ಲಿಯೇ ಅದರ ಆಶಯಗಳನ್ನು ಜಾರಿಗೊಳಿಸುವ ಮೂಲಕ ವಿದ್ಯೆಯನ್ನು ಧಾರೆ ಎರೆದರು. ಅಜ್ಞಾನ ಮತ್ತು ಜಾತಿವಾದವನ್ನು ನಿರ್ಮೂಲನೆ ಮಾಡುವುದು, ಸರ್ವರ ಘನತೆ, ಸಮಾನತೆ, ಸಹಕಾರ ಮತ್ತು ಸಾರ್ವತ್ರಿಕ ಭ್ರಾತೃತ್ವದ ತಿಳುವಳಿಕೆಯಂತಹ ಶಿಕ್ಷಣದ ಆದರ್ಶಗಳನ್ನು ಪ್ರಸಾರ ಮಾಡುವ ಸಂಕಲ್ಪದಂತೆ ನೂರಾರು ಶಾಲಾ ಕಾಲೇಜುಗಳನ್ನು ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ತೆರೆದರು. ಪೂಜ್ಯರ ಆಶೀರ್ವಾದದಂತೆ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಆಶ್ರಯದಲ್ಲಿಂದು ರಾಜ್ಯದ 13 ಜಿಲ್ಲೆಗಳಲ್ಲಿ 274 ಶಾಲಾ-ಕಾಲೇಜುಗಳಲ್ಲಿ ಸಹಸ್ರಾರು ಮಕ್ಕಳಿಗೆ ನಿತ್ಯವೂ ಜ್ಞಾನ ದಾಸೋಹದ ಜೊತೆಗೆ ಸಂಸ್ಕಾರದ ಜೀವನಕ್ಕೆ ಆದರ್ಶ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಬೋಧಿಸುವ ಗುರುಕುಲವಾಗಿವೆ.

ಮಹಿಳಾ ಶಿಕ್ಷಣದ ಬಗ್ಗೆ ಅತೀವವಾದ ನಂಬಿಕೆಯನ್ನು ಇಟ್ಟುಕೊಂಡು, ಮಹಿಳೆಯರಿಗಾಗಿ ಕಾಲೇಜುಗಳು ಮತ್ತು ಬಾಲಕಿಯರ ಫ್ರೌಡಶಾಲೆಗಳನ್ನು ಪ್ರಾರಂಭಿಸಲಾಗಿದೆ. ಪ್ರೌಡಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ತರಬೇತಿ ನೀಡಲು ಶಿಕ್ಷಣ ಸೊಸೈಟಿ ತನ್ನದೇ ಆದ ಒಂದು ಶಿಕ್ಷಣ ಕಾಲೇಜನ್ನು ಪ್ರಾರಂಭಿಸಿದೆ. ಇದಲ್ಲದೆ, ಸಂಸ್ಕೃತ ಭಾಷೆಯನ್ನು ಬೆಳೆಸುವುದು ಈ ಸಮಾಜದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ. ಆದ್ದರಿಂದ ಇದು ರಾಜ್ಯದ ವಿವಿಧ ಸ್ಥಳಗಳಲ್ಲಿ ಸಂಸ್ಕೃತ ಮತ್ತು ವೇದ ಪಾಠಶಾಲೆಗಳನ್ನು ನಡೆಸುತ್ತಿದೆ. ಇದಲ್ಲದೆ, ತನ್ನ ವ್ಯಾಪ್ತಿಯಿಂದ ಹೊರಗಿನ ಅಗತ್ಯವಿರುವ ಪ್ರೌಡಶಾಲೆಗಳಿಗೆ ಮಾರ್ಗದರ್ಶನ ನೀಡುತ್ತದೆ ಮತ್ತು ರೈತರಿಗೆ ಮತ್ತು ಸ್ವಸಹಾಯ ಗುಂಪುಗಳಿಗೆ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ನೀಡುತ್ತದೆ.

ಶಿಕ್ಷಣ ಸೊಸೈಟಿಯ ಚಟುವಟಿಕೆಗಳು ಸಾಮಾನ್ಯ ಅಧ್ಯಯನದ ಸಂದರ್ಭದಲ್ಲಿ ಶಿಕ್ಷಣವನ್ನು ನೀಡಲು ಸೌಲಭ್ಯಗಳನ್ನು ಒದಗಿಸುವುದಕ್ಕೆ ಸೀಮಿತವಾಗಿಲ್ಲ. ರಾಣಬೆನ್ನೂರಿನಲ್ಲಿ ಎಂಜಿನಿಯರಿಂಗ್ ಕಾಲೇಜು ಮತ್ತು ಹರಪನಹಳ್ಳಿಯಲ್ಲಿ ಪಾಲಿಟೆಕ್ನಿಕ್ ಇನ್ಸ್ಟಿಟ್ಯೂಟ್‌ಗಲ್ಲಿ ತಾಂತ್ರಿಕ ಕೋರ್ಸ್ಗಳನ್ನು ತೆರೆದು ಅತ್ಯಂತ ನ್ಯಾಯಯುತವಾದ ವೃತ್ತಿಪರ ಅವಕಾಶಗಳನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಈ ಶೈಕ್ಷಣಿಕ ಸಂಸ್ಥೆಯಲ್ಲಿ ಹೆಚ್ಚಿನ ಸಂಸ್ಥೆಗಳು ಹಾಸ್ಟೆಲ್‌ಗಳನ್ನು ಹೊಂದಿದ್ದು, ಗ್ರಾಮೀಣ ವಿದ್ಯಾರ್ಥಿಗಳ ಅಗತ್ಯತೆಗಳನ್ನು ಪೂರೈಸುವ ಮೂಲಕ ಜಾತಿ ಮತ್ತು ಧರ್ಮದ ಯಾವುದೇ ತಾರತಮ್ಯವಿಲ್ಲದೆ ಯಶಸ್ವಿಯಾಗಿ ಮುನ್ನಡೆಯುತ್ತಿವೆ. ಹಾಸ್ಟೆಲ್‌ಗಳಲ್ಲಿ ಉಚಿತ ಬೋರ್ಡಿಂಗ್ ಮತ್ತು ವಸತಿ ಸೌಲಭ್ಯವನ್ನು ಒದಗಿಸಲಾಗಿದೆ.

ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯು ಕರ್ನಾಟಕದ ಗ್ರಾಮೀಣ ಶಿಕ್ಷಣಕ್ಕೆ ಬದ್ದವಾಗಿರುವ ಏಕೈಕ ಸಂಸ್ಥೆ ಎಂದು ಸಾಬೀತಾಗಿದೆ, ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣಕ್ಕಾಗಿ ಸಂಸ್ಥೆಯ ಹೆಚ್ಚಿನ ಸಂಖ್ಯೆಯ ಶಾಲಾ ಕಾಲೇಜುಗಳು ಸೇವೆ ಸಲ್ಲಿಸುತ್ತಿವೆ. ವಿದ್ಯಾ ಸಂಸ್ಥೆಯಲ್ಲಿ ಸುಮಾರು 4.000 ಕ್ಕೂ ಹೆಚ್ಚು ಸಿಬ್ಬಂದಿಯು ಸುಮಾರು 50.000 ವಿದ್ಯಾರ್ಥಿಗಳ ಭವಿಷ್ಯದ ಉನ್ನತಿಗಾಗಿ ಶ್ರಮಿಸುತ್ತಿದ್ದಾರೆ. ಸಂಸ್ಥೆಯ ಚಟುವಟಿಕೆಗಳು ಶಿಕ್ಷಣದ ಪ್ರಸರಣಕ್ಕೆ ಮಾತ್ರ ಸೀಮಿತವಾಗಿರದೆ ಸಾಹಿತ್ಯ ಕ್ಷೇತ್ರಕ್ಕೆ, ಅದರಲ್ಲೂ ಶರಣ ಸಾಹಿತ್ಯಕ್ಕೆ ಮತ್ತಷ್ಟು ವಿಸ್ತರಿಸಿದೆ. ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ದೂರದೃಷ್ಟಿ, ಕರ್ತವ್ಯ, ಪರಿಶ್ರಮ, ತಾಳ್ಮೆ ಮತ್ತು ಸಾಹಸ ಮನೋಭಾವದ ಮೂಲಕ ಈ ಆದರ್ಶ ಶಿಕ್ಷಣ ಸಂಸ್ಥೆಯನ್ನು ನಿರ್ಮಿಸಿದ್ದಾರೆ.

ಲಿಂಗೈಕ್ಯ ಪೂಜ್ಯ ಶ್ರೀ ಜಗದ್ಗುರುಗಳವರ ಆಶಯದಂತೆ ಗ್ರಾಮೀಣ ಶಿಕ್ಷಣವನ್ನು ಅತ್ಯಗತ್ಯ ಸೌಲಭ್ಯಗಳ ಮೂಲಕ ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಶ್ರಮಿಸುತ್ತಿರುವ ವೈಜ್ಞಾನಿಕ ವಿಧಾನದೊಂದಿಗೆ ಆಧುನಿಕ ದೃಷ್ಟಿಕೋನಕ್ಕೆ ಹೆಸರಾಗಿರುವ ವಿದ್ಯಾಸಂಸ್ಥೆಯ ಪೂಜ್ಯ ಅಧ್ಯಕ್ಷರಾದ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ಸಂಕಲ್ಪವು ಸಾಕಾರವಾಗಿದೆ.

ಶ್ರೀ ಜಗದ್ಗುರುಗಳವರು ಗಮನ ಹರಿಸಿದ್ದರೆ ನಗರ ಪ್ರದೇಶಗಳಲ್ಲಿ ಹಲವಾರು ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸುವುದು ದೊಡ್ಡ ಕೆಲಸವೇನೂ ಆಗಿರಲಿಲ್ಲ. ಹಳ್ಳಿಗಾಡಿನಲ್ಲಿ ಶಿಕ್ಷಣದ ನೆಲೆ ಕಳೆದುಕೊಂಡ ಮಕ್ಕಳು ಪ್ರತಿಭಾವಂತರಾಗಿ, ಪಟ್ಟಣದ ಸುಶಿಕ್ಷಿತ ಮಕ್ಕಳೊಡನೆ ಹೆಜ್ಜೆ ಹಾಕಬೇಕು ಎಂಬ ಅಭೀಪ್ಸೆ ಹೊಂದಿರುವ ಪೂಜ್ಯ ಶ್ರೀ ಜಗದ್ಗುರುಗಳವರು ವಿದ್ಯಾಸಂಸ್ಥೆಯ ಆಶ್ರಿತ ಎಲ್ಲಾ ಗ್ರಾಮೀಣ ಶಾಲೆ ಕಾಲೇಜುಗಳ ಬಲವರ್ಧನೆಗೆ ನಿತ್ಯ ಶ್ರಮದ ಸಂತರಾಗಿ ಕಾರ್ಯ ಮಗ್ನರಾಗಿದ್ದಾರೆ. ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೂ ಕಳೆದ 20 ವರ್ಷಗಳ ಹಿಂದೆಯೇ ಕಂಪ್ಯೂಟರ್ ವಿಜ್ಞಾನದ ಜ್ಞಾನವನ್ನು ದಯಪಾಲಿಸಿದ್ದಾರೆ. ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಸ್ವತಃ ಕಂಪ್ಯೂಟರ್ ವಿದ್ವಾಂಸರಾಗಿದ್ದು, ಅವರು ಗಣಾಕಾಷ್ಟಾಧ್ಯಾಯಿ ಎಂಬ ಪಾಣಿನಿಯ ವ್ಯಾಕರಣದ ಮೇಲೆ ಸಾಫ್ಟ್ವೇರ್ ಅಭಿವೃದ್ಧಿಪಡಿಸಿದ್ದಾರೆ.

12 ನೇ ಶತಮಾನದ ವಚನಗಳ ಮೇಲೆ ಗಣಕ ವಚನ ಸಂಪುಟ, ಕರ್ನಾಟಕ ಸರ್ಕಾರಕ್ಕೆ ಕೊಡಮಾಡಿದ ಭೂಮಿ ಆನ್ಲೈನ್ ತಂತ್ರಾಶ ಸೇರಿದಂತೆ ಹಲವಾರು ಸಾಫ್ಟ್ ವೇರ್ ಗಳನ್ನು ರಚಿಸಿದ್ದಾರೆ. ಎಂಜಿನಿಯರಿಂಗ್ ಕಾಲೇಜು ಮತ್ತು ಪಾಲಿಟೆಕ್ನಿಕ್ ಮಾತ್ರವಲ್ಲದೆ ಬೆಂಗಳೂರಿನ ತರಳಬಾಳು ಕೇಂದ್ರವು ಅಂತರರಾಷ್ಟ್ರೀಯ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದೆ, ಸಿರಿಗರೆಯ ತರಳಬಾಳು ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ಮತ್ತು ರಾಜ್ಯದಲ್ಲಿಯೇ ಹೆಸರಾದ ದಾವಣಗರೆಯ ಅನುಭವ ಮಂಟಪ ವಸತಿ ಶಾಲೆಯು ಪೂಜ್ಯರ ಅತೀವ ಆಸಕ್ತಿಯ ಫಲವಾಗಿವೆ.

ರೈತರ ಹಿತಕ್ಕಾಗಿ ಸ್ಥಾಪಿಸಿದ ತರಳಬಾಳು ಕೃಷಿ ವಿಜ್ಞಾನ ಕೇಂದ್ರವು ಮದ್ಯ ಕರ್ನಾಟಕದ ಅನ್ನದಾತರ ಸ್ನೇಹಸಿಂಧುವಾಗಿ ಕಾರ್ಯ ನಿರ್ವಹಿಸುತ್ತಿದೆ. ಸಮಾಜವು ಅಭಿವೃದ್ಧಿ ಹೊಂದಲು ಪ್ರತಿ ನಿಮಿಷವೂ ಶ್ರಮಿಸುತ್ತಿರುವ ಶ್ರೀ ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಚಾರ್ಯ ಮಹಾಸ್ವಾಮಿಗಳವರು ಇಷ್ಟಪಡುವ ಮತ್ತು ಪೋಷಿಸುತ್ತಿರುವ ಈ ಶಿಕ್ಷಣ ಸಂಸ್ಥೆಯ ಬೆಳವಣಿಗೆಯನ್ನು ಮತ್ತಷ್ಟು ಹೆಚ್ಚಿಸುವುದು ಈ ರಾಜ್ಯದ ಕಲ್ಯಾಣವನ್ನು ನಂಬುವ ಪ್ರತಿಯೊಬ್ಬರ ಪ್ರಾಥಮಿಕ ಕರ್ತವ್ಯವಾಗಿದೆ.

ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸಿರಿಗೆರೆಯ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಶೈಕ್ಷಣಿಕ ದಾಸೋಹ ಅಪೂರ್ವವಾದುದು. ನೈತಿಕ, ಸಾಂಸ್ಕೃತಿಕ, ವೈಜ್ಞಾನಿಕ ಮೌಲ್ಯಗಳಿಗೆ ಒತ್ತು ನೀಡಿ ಮೌಲ್ಯಧಾರಿತವಾದ ಗುಣಮಟ್ಟದ ಶಿಕ್ಷಣದ ಜ್ಯೋತಿಯನ್ನು ನಾಡಿನ ತರಳರ ಬಾಳಲ್ಲಿ ಬೆಳಗುತ್ತಾ ಲಕ್ಷಾಂತರ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಕರ್ಣಾಧಾರತ್ವ ವಹಿಸಿದ ಹೆಮ್ಮೆಯ ಸಂಸ್ಥೆಯಾಗಿದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷಣದ ನಿಜ ಉದ್ದೇಶವನ್ನು ಅರ್ಥೈಸಿದ ಕೀರ್ತಿ ಸಂಸ್ಥೆಗೆ ಸಲ್ಲುತ್ತದೆ. ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆದ ಅಸಂಖ್ಯಾತ ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ಆಡಳಿತಗಾರರಾಗಿ, ವಿಜ್ಞಾನಿಗಳಾಗಿ, ವೈದ್ಯರುಗಳಾಗಿ, ಅಭಿಯಂತರರಾಗಿ,ಶಿಕ್ಷಕರಾಗಿ, ನ್ಯಾಯಧೀಶರಾಗಿ, ಭಾರತೀಯ ಆಡಳಿತ ಸೇವೆ,ಭಾರತೀಯ ವಿದೇಶಾಂಗ ಸೇವೆ,ಭಾರತೀಯ ಫೋಲೀಸ್ ಸೇವಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ವೇತಭವನದ ಮಾದರಿಯ ಭವ್ಯವಾದ ವಿದ್ಯಾರ್ಥಿ ಸೌಧ

ಸತ್ಯ ಸಂಕಲ್ಪದ ಹಾದಿಯಲ್ಲಿ ಸಾಗಿ ಬಂದಿರುವ ಶ್ರೀ ಬೃಹನ್ಮಠದ ಗುರು ಪರಂಪರೆಯು ಗ್ರಾಮೀಣ ಜನರಿಗೆ ಶಿಕ್ಷಣ ನೀಡಲು ಮೊದಲಿನಿಂದಲೂ ಅವಿರತವಾಗಿ ಶ್ರಮಿಸುತ್ತಾ ಬಂದಿವೆ. ಶ್ರೀ ಜಗದ್ಗುರುಗಳವರ ಅತೀವ ಕಾಳಜಿಯಲ್ಲಿ ಸಂಸ್ಥೆಯ ನರ್ಸರಿ ಮತ್ತು ಪ್ರಾಥಮಿಕ ಶಾಲೆಗಳು ಅತ್ಯಾಧುನಿಕ ಸೌಲಭ್ಯಗಳನ್ನು ಪಡೆದುಕೊಂಡು ಉತ್ಕೃಷ್ಟ ಶಿಕ್ಷಣವನ್ನು ನೀಡುತ್ತಿವೆ. ವಿದ್ಯಾಸಂಸ್ಥೆಗೆ ಸಂಸ್ಥೆಗೆ ಕಳಸವಿಟ್ಟಂತೆ ಪೂಜ್ಯ ಶ್ರೀ ಜಗದ್ಗುರುಗಳವರ ಆಶಯ ಮತ್ತು ಪ್ರತಿ ಕ್ಷಣದ ಮಾರ್ಗದರ್ಶನದಂತೆ ಸಿರಿಗೆರೆಯಲ್ಲಿ ಅಂತರಾಷ್ಟ್ರೀಯ ಶೈಕ್ಷಣಿಕ ಗುಣಮಟ್ಟ ಹೊಂದಿದ ವಿದ್ಯಾರ್ಥಿಗಳ ನಿರೀಕ್ಷೆಯ ಅತ್ಯಾಧುನಿಕ ಸಕಲ ಸೌಲಭ್ಯಗಳುಳ್ಳ ಅಮೇರಿಕಾದ ಶ್ವೇತಭವನವನ್ನು ಹೋಲುವ ನಯನ ಮನೋಹರವಾದ ಅದ್ಭುತವೆನಿಸುವ ಸುಂದರ ವಿನ್ಯಾಸದ ಅರಮನೆಯನ್ನು ನೆನಪಿಸುವ ಭವ್ಯವಾದ ಬೃಹತ್ ಬಹುಮಹಡಿಗಳುಳ್ಳ ವಿದ್ಯಾರ್ಥಿಸೌಧವು ಸಿರಿಗೆರೆಯಲ್ಲಿ ನಿರ್ಮಾಣದ ಅಂತಿಮ ಹಂತದಲ್ಲಿದೆ. ಅತ್ಯಂತ ಸುಂದರ ಸ್ವಾಗತ ದ್ವಾರದಿ ಆರಂಭಗೊಳ್ಳುವ ಕಟ್ಟಡವು ವಿನ್ಯಾಸ ಮತ್ತು ನಿರ್ಮಾಣದಲ್ಲಿ ಸುಸ್ಥಿರತೆಯು ಪರಿಣಿತರ ಪ್ರಾವೀಣ್ಯತೆಯನ್ನು ಹೇಳುವಂತಿದೆ. ಭಾರತದಲ್ಲಿರುವ ಕಟ್ಟಡಗಳು ಪರಿಸರಸ್ನೇಹಿಯಾಗಿ ಹೇಗೆ ರೂಪಗೊಳ್ಳಬೇಕು ಮತ್ತು ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನ ಅಳವಡಿಕೆ ಸೇರಿದಂತೆ ಹಲವು ವಿಷಯಗಳ ನ್ನು ಅರ್ಥೈಸುತ್ತದೆ. ಹೊಸತನ್ನು ಸೃಷ್ಟಿಸುವ ಮನೋಭಾವ ಮತ್ತು ಸೃಜನಶೀಲತೆಯ ಸಂಪನ್ನರಾದ ಶ್ರೀ ಜಗದ್ಗುರುಗಳವರ ಅತೀವ ಕಾಳಜಿ ಹಾಗೂ ಕಲ್ಪನೆಯ ಮೂರ್ತರೂಪವು ಸಾಂಪ್ರಾದಾಯಿಕ ಗರಿಮೆಯೊಂದಿಗೆ, ಆಧುನಿಕತೆಯ ಹಿರಿಮೆಯ ಒಳ ಮತ್ತು ಹೊರಾಂಗಣ ಶೈಲಿ, ನಿರ್ಮಾಣದ ಪ್ರತಿ ಹಂತದಲ್ಲಿಯೂ ವಿನ್ಯಾಸದ ನಿಖರ ಸಮೀಕ್ಷೆ ಯೊಂದಿಗೆ ರಚನೆಯ ಸೂಚನೆ, ಖರ್ಚು ವೆಚ್ಚ, ಕಾರ್ಯಯೋಜನೆ, ವಿನ್ಯಾಸಕ್ಕೆ ಬೇಕಾದ ಗುಣಮಟ್ಟದ ವಸ್ತುಗಳನ್ನು ಬಳಕೆ ಕ್ರಿಯಾಶೀಲತೆ ಮತ್ತು ಕಲ್ಪನಾ ಶಕ್ತಿ, ಬಣ್ಣದ ಹೊಂದಾಣಿಕೆ, ವಿನ್ಯಾಸದ ಶ್ರೀಮಂತ ಪರಿಕಲ್ಪನೆಯು ಬೆರಗುಗೊಳಿಸುತ್ತಲ್ಲದೆ, ವಾಸ್ತುಕಲೆಯು ಕಟ್ಟಡಗಳನ್ನು ನಿರ್ಮಿಸುವ, ಕುಸುರಿಗೊಳಿಸುವ ಪೂಜ್ಯ ಶ್ರೀ ಜಗದ್ಗುರುಗಳವರ ಕಲಾದರ್ಶನವಾಗುತ್ತದೆ.

ವಿದ್ಯಾಸಂಸ್ಥೆಯ ಲಾಂಛನದಲ್ಲಿರುವ “ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ” ಎನ್ನುವ ಬಸವಣ್ಣನವರ ವಚನವಾಣಿಯ ಧ್ಯೆಯವಾಕ್ಯದಂತೆ ಬೆಳಕು ಜ್ಞಾನದ ಸಂಕೇತ, ಕತ್ತಲೆ ಅಜ್ಞಾನದ ಕುರುಹು. ಈ ಜ್ಞಾನವೆಂಬ ಬೆಳಕಿನ ಬಲದಿಂದ ಅಜ್ಞಾನವೆಂಬ ಕತ್ತಲು ಹರಿಯುತ್ತದೆ.ಜ್ಞಾನದ ಬೆಳಕಿನಲ್ಲಿ ವಿವೇಕ ಅರಳುತ್ತದೆ. ಸತ್ಯದ ಬಲದಿಂದ ಅಸತ್ಯ ಅಳಿಯುತ್ತದೆ. ಅಮೂಲ್ಯವಾದ ಸ್ಪರ್ಶ ಮಣಿಯ ಸೋಂಕಿನ ಬಲದಿಂದ ಕಬ್ಬಿಣ ಮುಂತಾದ ಅವಲೋಹಗಳು ರೂಪಾಂತರ ಪಡೆಯುತ್ತವೆ. ಸತ್ಸಂಗದಿಂದ ಅಜ್ಞಾನ ಅಡಗಿ ಭವದ ಭಾವಗಳು ಇಲ್ಲದಂತಾಗುವವು.

ಸಂಸ್ಥೆಯ ಆಶ್ರಿತ ವಿದ್ಯಾಕೇಂದ್ರಗಳಲ್ಲಿ ಮಕ್ಕಳಿಗೆ ಪ್ರವೇಶಾತಿ ದೊರಕಿಸುವ ಮಹೋನ್ನತ ಜವಾಬ್ದಾರಿ ಪೋಷಕರು ನಿರ್ವಹಿಸುವ ಮೂಲಕ ಅಂಧಕಾರದ ತನು ಮನ ಗಳಿಗೆ ಮೌಲ್ಯಯುತ ಶಿಕ್ಷಣದ ಜೊತೆ ವಿದ್ಯಾರ್ಥಿಗೆ ಸಾಂಸ್ಕೃತಿಕ ಸಾಹಿತ್ಯಕ ಸಂತೃಪ್ತಿಯ ಶಿಕ್ಷಣ ದಾಸೋಹ ನೀಡಿ ಮುಗ್ದ ಮಕ್ಕಳ ಸ್ತುಪ್ತಪ್ರತಿಭೆಗೆ ಸಂಸ್ಕಾರವನ್ನು ಸಾಕ್ಷಾತ್ಕಾರಿಸಿ ಸಮಾಜಕ್ಕೆ ಹಸಿರಾಗುವ ಸತ್ಸಂಗದ ಸಸಿಗಳನ್ನು ರೂಪಿಸುತ್ತಿರುವ ಶ್ರೀ ತರಳಬಾಳು ಜಗದ್ಗುರು ವಿದ್ಯಾಸಂಸ್ಥೆಯ ಕಾರ್ಯಶೈಲಿಗೆ ಧನ್ಯತಾ ಭಾವದಿಂದ ನಮಿಸೋಣ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಅಂಕಣ

To Top
(adsbygoogle = window.adsbygoogle || []).push({});