Connect with us

Dvgsuddi Kannada | online news portal | Kannada news online

ಪಂಚಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಕೂಡಲ ಸಂಗಮದಿಂದ ಬೆಂಗಳೂರುವರೆಗೆ ಪಾದಯಾತ್ರೆ ಆರಂಭ

ಪ್ರಮುಖ ಸುದ್ದಿ

ಪಂಚಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹಿಸಿ ಕೂಡಲ ಸಂಗಮದಿಂದ ಬೆಂಗಳೂರುವರೆಗೆ ಪಾದಯಾತ್ರೆ ಆರಂಭ

ಕೂಡಲ ಸಂಗಮ:  ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಕೂಡಲ ಸಂಗಮದಿಂದ ಬೆಂಗಳೂರಿನವರೆಗೆ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ  ಬೃಹತ್ ಪಾದಯಾತ್ರೆ ಆರಂಭವಾಗಿದೆ.

ಪಂಚಮಸಾಲಿ ಸಮಾಜದ ಪಂಚ ಲಕ್ಷ ಹೆಜ್ಜೆಗಳು ಎಂಬ ಶೀರ್ಷಿಕೆಯಡಿ ಪಾದಯಾತ್ರೆ ಕೈಗೊಂಡಿದ್ದು,  ಬಸವಣ್ಣನವರ ಐಕ್ಯ ಮಂಟಪ ಕೂಡಲಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಯಲಿದೆ.  ಪಂಚಮಸಾಲಿ ರಾಷ್ಟ್ರೀಯ ಘಟಕ, ರಾಜ್ಯ ಯುವ ಘಟಕ, ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಪಂಚಮಸಾಲಿ ಜಗದ್ಗುರು ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ,  ಲಿಂಗಾಯತ ಸಮಾಜ ಸಾಮಾಜಿಕ ನ್ಯಾಯಕ್ಕಾಗಿ ನಿರಂತರ ಹೋರಾಟ ಮಾಡುತ್ತ ಬಂದಿದೆ. ಪಂಚಮಸಾಲಿ ಸಮಾಜಕ್ಕೆ 2ಎ ಅಡಿಯಲ್ಲಿ ಮೀಸಲಾತಿ ನೀಡುವಂತೆ ಆಗ್ರಹಿಸಿ 2012ರಿಂದಲೂ ಹೋರಾಟ ನಡೆಯುತ್ತಿದೆ.  ಸರ್ಕಾರಕ್ಕೆ ಹಲವು ಗಡುವುಗಳನ್ನು ನೀಡಿದೆ. ನಮ್ಮವರೇ ಮುಖ್ಯಮಂತ್ರಿಯಾಗಿರುವ ಹಿನ್ನೆಲೆಯಲ್ಲಿ ನಮ್ಮ ಸಮಾಜಕ್ಕೆ ಮೀಸಲಾತಿ ನೀಡಬೇಕೆಂದು ನಾವು ಆಗ್ರಹಿಸಿದ್ದೆವು. ಆದರೆ, ನಮ್ಮ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ನಾವು ಕೂಡಲ ಸಂಗಮದಿಂದ ಬೆಂಗಳೂರಿನ ವಿಧಾನಸೌಧದವರೆಗೆ 700ಕಿ.ಮೀ. ಐತಿಹಾಸಿಕ ಪಾದಯಾತ್ರೆ ಕೈಗೊಂಡಿದ್ದೇವೆ ಎಂದು ಹೇಳಿದರು.

ಈ ಪಾದಯಾತ್ರೆಯನ್ನು ಹಿಂಪಡೆಯುವುದಾಗಿ ನಾವು ಹೇಳಿಲ್ಲ. ಸಚಿವರಾದ ಮುರುಗೇಶ್ ನಿರಾಣಿ ಅವರು ಭಾವೋದ್ವೇಗದಲ್ಲಿ ಮಾತನಾಡಿದ್ದಾರೆ. ಅವರು ಈಗ ಸಚಿವರಾಗಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ 2ಎ ಅಡಿ ಮೀಸಲಾತಿಯನ್ನು ದೊರಕಿಸಿಕೊಡಬೇಕು. ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟು ಸಂಪುಟದಲ್ಲಿ ಚರ್ಚಿಸಿ ಶಿಫಾರಸು ಮಾಡಬೇಕೆಂದು ನಾವು ಅವರಲ್ಲೂ ಕೂಡ ಮನವಿ ಮಾಡುತ್ತೇವೆ ಎಂದು ಹೇಳಿದರು.

ಸಿ.ಸಿ.ಪಾಟೀಲ್, ಕರಡಿ ಸಂಗಣ್ಣ ಅವರು ಪಾದಯಾತ್ರೆಯನ್ನು ಮುಂದೂಡುವಂತೆ ಮನವಿ ಮಾಡಿದರು. ಸದ್ಯದಲ್ಲೇ ಗೃಹ ಸಚಿವ ಅಮಿತ್ ಷಾ ಅವರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಬೇಡಿಕೆ ಈಡೇರಿಸುವ ಬಗ್ಗೆ ಅವರೊಂದಿಗೆ ಸಮಾಲೋಚನೆ ನಡೆಸೋಣ ಎಂದು ಹೇಳಿದರು. ಆದರೆ, ನಾವು ನವೆಂಬರ್ 28, ಡಿಸೆಂಬರ್ 12ರ ವರೆಗೆ ಸರ್ಕಾರಕ್ಕೆ ಗಡುವು ನೀಡಿದ್ದೆವು. ಈಗಲೂ ಕೂಡ ಕಾಲ ಮಿಂಚಿಲ್ಲ. ನಾಡದೊರೆಗಳು ಅಮಿತ್ ಷಾ ಅವರೊಂದಿಗೆ ಚರ್ಚಿಸಿ ನಮ್ಮ ಸಮಾಜಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಹೇಳಿದರು. ಪ್ರತಿದಿನ 20ಕಿ.ಮೀ. ಕ್ರಮಿಸಿ ಬಜೆಟ್ ಅಧಿವೇಶನ ಪ್ರಾರಂಭವಾಗುವುದರೊಳಗೆ ಬೆಂಗಳೂರು ತಲುಪುತ್ತೇವೆ ಎಂದು ಹೇಳಿದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top