Connect with us

Dvgsuddi Kannada | online news portal | Kannada news online

ದಾವಣಗೆರೆ:  ಹಂದಿ ಹಾವಳಿಗೆ ಕಡಿವಾಣ ಹಾಕುವಂತೆ ಅಧಿಕಾರಿಗಳಿಗೆ ಸಂಸದರ ಖಡಕ್ ವಾರ್ನಿಂಗ್

ದಾವಣಗೆರೆ

ದಾವಣಗೆರೆ:  ಹಂದಿ ಹಾವಳಿಗೆ ಕಡಿವಾಣ ಹಾಕುವಂತೆ ಅಧಿಕಾರಿಗಳಿಗೆ ಸಂಸದರ ಖಡಕ್ ವಾರ್ನಿಂಗ್

ದಾವಣಗೆರೆ :  ನರೇಗಾ, ಸ್ವಚ್ಚ ಭಾರತ್, ವಸತಿ ಸೇರಿದಂತೆ ಜಿ.ಪಂ ನ ವಿವಿಧ ಯೋಜನೆಗಳಡಿ ಅಧಿಕಾರಿಗಳು ನಿಗದಿತ ಸಮಯದೊಳಗೆ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಂಡು ಪ್ರಗತಿ ಸಾಧಿಸಬೇಕೆಂದು ಸಂಸದರಾದ ಜಿ.ಎಂ.ಸಿದ್ದೇಶ್ವರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಜಿಲ್ಲಾ ಅಭಿವೃದ್ದಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ)ಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಂದಿ ಹಾವಳಿ ಕಡಿವಾಣಕ್ಕೆ ಗಡುವು : ನಗರದಲ್ಲಿ ಹಂದಿ ಹಾವಳಿ ನಿಯಂತ್ರಿಸಲು ಮಾಲೀಕರ ಸಭೆ ಕರೆದು ಕಡಿವಾಣ ಹಾಕಲು ಸೂಚಿಸಲಾಗಿದ್ದರೂ, ಹಂದಿಗಳ ಸ್ಥಳಾಂತರಕ್ಕೆ ಇನ್ನೂ ಜಾಗ ನೀಡುವ ಬಗ್ಗೆ ತಹಶೀಲ್ದಾರರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸುತ್ತಿದ್ದೀರಿ. ಈ ವಿಳಂಬ ಸಲ್ಲದು. ತಹಶೀಲ್ದಾರರಿಂದ ಆದಷ್ಟು ಬೇಗ ನಗರದ ಹೊರಭಾಗದಲ್ಲಿ ಜಾಗ ಪಡೆದುಕೊಂಡು ಕಾಂಪೌಂಡ್ ನಿರ್ಮಿಸಿ ಅಲ್ಲಿ ನಗರದ ಹಂದಿಗಳನ್ನು ನಿರ್ವಹಿಸಬೇಕು. ಕಾಂಪೌಂಡ್‍ನಿಂದ ಹಂದಿಗಳು ಹೊರಬಾರದಂತೆ ಸಿಬ್ಬಂದಿ ನಿಯೋಜನೆ ಮಾಡಬೇಕು. ಮತ್ತು ಆ ಹಂದಿಗಳಿಂದ ಅಲ್ಲಿನ ಜನರಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಮುಂದಿನ ದಿಶಾ ಸಭೆ ಒಳಗೆ ನಗರದ ಹಂದಿ ಹಾವಳಿಗೆ ಕಡಿವಾಣ ಹಾಕುವಂತೆ ಪಾಲಿಕೆ ಆಯುಕ್ತರಿಗೆ ಸಂಸದರು ಸೂಚನೆ ನೀಡಿದರು.

ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಪ್ರಕ್ರಿಯಿಸಿ, ನಗರದಲ್ಲಿ ಸುಮಾರು 15 ಜನ ಹಂದಿ ಮಾಲೀಕರಿದ್ದು, ಅವರ ಸಭೆ ಕರೆದು ಮಾತನಾಡಲಾಗಿದೆ. ಆದಷ್ಟು ಶೀಘ್ರದಲ್ಲಿ ಹಂದಿಗಳನ್ನು ನಗರದ ಹೊರವಲಯಕ್ಕೆ ಸ್ಥಳಾಂತರಿಸಿ, ಅದನ್ನು ನಿರ್ವಹಿಸಲು ಒಬ್ಬ ಸೂಪರ್‍ವೈಸರ್ ನೇಮಕ ಮಾಡಲಾಗುವುದು. ಹಾಗೂ ಹಂದಿ ಮಾಲೀಕರು ಹಸಿಕಸದ ಬೇಡಿಕೆ ಇಟ್ಟಿದ್ದು, ಪ್ರತಿ ದಿನ ಹಸಿಕಸ ಪೂರೈಸುವ ವ್ಯವಸ್ಥೆ ಮಾಡಲಾಗುವುದು ಎಂದರು.

ಸ್ವಚ್ಚತೆ ಮೇಲೆ ನಿಗಾ ಇಡಲು ನಗರಪ್ರದಕ್ಷಿಣೆ : ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾತನಾಡಿ, ತ್ಯಾಜ್ಯ ವಿಲೇವಾರಿ ಜಮೀನಿನಲ್ಲಿ ತ್ಯಾಜ್ಯ ಸಂಸ್ಕರಣೆ ಕಾರ್ಯಾಚರಣೆಯನ್ನು ದೇವನಗರಿ ಗ್ರೀನ್ ಪ್ಲಾನೆಟ್ ಇನ್ಫಾ ಪ್ರೈ.ಲಿ ಇವರಿಗ ಇಓಐ ಮೂಲಕ ಪ್ರಾಯೋಗಿಕವಾಗಿ ನಿರ್ವಹಿಸಲು ವಹಿಸಿದ್ದು ಪ್ರತಿ ದಿನ 30 ಟನ್ ತ್ಯಾಜ್ಯ ಸಂಸ್ಕರಿಸಲಾಗುತ್ತಿದೆ. ತ್ಯಾಜ್ಯ ಸಂಗ್ರಹಣೆಗಾಗಿ ರೂ.7.63 ಕೋಟಿ ವೆಚ್ಚದಲ್ಲಿ ವಿವಿಧ ರೀತಿಯ ವಾಹನಗಳನ್ನು ಖರೀದಿಸಲು ಕರಡು ಟೆಂಡರ್ ಅನುಮೋದನೆಗೆ ಡಿಎಂಎ ಗೆ ಕಳುಹಿಸಲಾಗಿದೆ ಎಂದರು.

ತ್ಯಾಜ್ಯ ಸಂಗ್ರಹಣೆ ವಿಚಾರದಲ್ಲಿ ವಿಳಂಬ ಸಲ್ಲದು. ಸ್ಮಾರ್ಟ್‍ಸಿಟಿ ಎಂಬ ಹೆಸರು ಬಂದರೂ ನಗರದಲ್ಲಿ ಕಸ ಎಲ್ಲೆಡೆ ಕಾಣಬರುತ್ತಿದೆ. ಸಾಕಷ್ಟು ಪೌರಕಾರ್ಮಿಕರಿದ್ದರೂ ಸಮರ್ಪಕವಾಗಿ ಕೆಲಸ ಆಗುತ್ತಿಲ್ಲ. ಉಸ್ತುವಾರಿ ಮಂತ್ರಿಗಳು ಮತ್ತು ತಾವು ಈ ಹಿಂದಿನ ಸಭೆಯೊಂದರಲ್ಲಿ ಸರಿಯಾಗಿ ಕೆಲಸ ಮಾಡದ ಕಾರ್ಮಿಕರನ್ನು ತೆಗೆದುಹಾಕುವಂತೆ ಕೂಡ ಸೂಚಿಸಿದ್ದೆವು. ಕಾರ್ಮಿಕರು ಸಮರ್ಪಕವಾಗಿ ಕೆಲಸ ಮಾಡುವಂತೆ ನಗರಪ್ರದಕ್ಷಿಣೆ ವೇಳೆ ಖಾತ್ರಿಪಡಿಸಿಕೊಳ್ಳಬೇಕು. ನಾನು ಮತ್ತು ಡಿಸಿ ಯವರು ಕೂಡ ತಮ್ಮೊಂದಿಗೆ ನಗರಪ್ರದಕ್ಷಿಣೆಗೆ ಬಂದು ವೀಕ್ಷಿಸುವುದಾಗಿ ತಿಳಿಸಿದ ಅವರು ಪಾಲಿಕೆ ಪೌರಕಾರ್ಮಿಕರಿಗೆ ನಗರ ಸ್ವಚ್ಚತೆಗೆ ಬಗ್ಗೆ ಸೂಚನೆ ನೀಡುವಂತೆ ತಿಳಿಸಿದರು.

ಜಿ.ಪಂ ಅಧ್ಯಕ್ಷೆ ಶಾಂತಕುಮಾರಿ ಮಾತನಾಡಿ, 39 ವಾರ್ಡಿನಲ್ಲಿ ಸ್ವಚ್ಚತೆ ಇಲ್ಲ. ಪೌರಕಾರ್ಮಿಕ ಮಹಿಳೆಯರು ಬಂದರೂ ಕಸ ಸ್ವಚ್ಚ ಮಾಡುವುದಿಲ್ಲ ಎಂದು ದೂರಿದರೆ, ತಾ.ಪಂ ಅಧ್ಯಕ್ಷೆ ಮಮತಾ ಮಲ್ಲೇಶಪ್ಪ ತಮ್ಮ ವಾರ್ಡಿಗೆ ಬರುವ ಮಹಿಳೆಯರು ಸಾರ್ವಜನಿಕರೊಂದಿಗೇ ಜಗಳ ಆಡುತ್ತಾರೆ. ಚರಂಡಿ ಇತರೆ ಕಸವನ್ನು ನಾವು ಸ್ವಚ್ಚಗೊಳಿಸಲು ಆಗುವುದಿಲ್ಲವೆನ್ನುತ್ತಾರೆಂದು ದೂರಿದರು.

ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ ಮಾತನಾಡಿ, 2020-21 ನೇ ಸಾಲಿನಲ್ಲಿ ಪ್ರತಿ ಮನೆಗೆ ಕುಡಿಯುವ ನೀರಿನ ಸಂಪರ್ಕ ಒದಿಸಲು ಜಲಜೀವನ್ ಮಿಷನ್ ಯೋಜನೆಯಡಿ 370 ಗ್ರಾಮಗಳನ್ನು ಮೊದಲ ಹಂತದಲ್ಲಿ ತೆÉಗೆದುಕೊಳ್ಳಲಾಗಿದೆ. ಈಗಾಗಲೇ 221 ಡಿಪಿಆರ್‍ಗಳನ್ನು ತಯಾರಿಸಿ ಟೆಂಡರ್ ಕರೆಯಲಾಗಿದ್ದು ಹೊನ್ನಾಳಿಯ ಒಂದು ಮತ್ತು ಚನ್ನಗಿರಿಯ 5 ಗ್ರಾಮಗಳಲ್ಲಿ ಕಾಮಗಾರಿ ಕಾರ್ಯಾದೇಶ ನೀಡಲಾಗಿದೆ. ಕೆಲವು ಗ್ರಾಮಗಳಲ್ಲಿ ವಿವಿಧ ಹಂತದ ಟೆಂಡರ್ ಪ್ರಕ್ರಿಯೆಯಲ್ಲಿದೆ. 150 ಗ್ರಾಮಗಳ ಡಿಪಿಆರ್ ತಯಾರಿಕೆ ಪ್ರಗತಿಯಲ್ಲಿದೆ ಎಂದರು.

ಪ್ರಧಾನಮಂತ್ರಿ ಆವಾಸ್ ಯೋಜನೆ(ನಗರ) ಯೋಜನೆಯಡಿ ಮನೆ ಕಟ್ಟಿಸದೇ ಇರುವಂತಹ 1361 ನಿವೇಶನ ಬ್ಲಾಕ್ ಮಾಡಲಾಗಿದೆ ಎಂದರು. ಡಿಸಿ ಮಹಾಂತೇಶ ಬೀಳಗಿ ಮಾತನಾಡಿ, ಈ ನಿವೇಶನಗಳನ್ನು ಆಶ್ರಯ ಯೋಜನೆಯಡಿ 20*30 ನಿವೇಶನ ನೀಡಲು ಸರ್ಕಾರದಿಂದ ಅಧಿಕೃತ ಆದೇಶ ಬರಲಿದೆ. ಲೇಔಟ್ ಮಾಡಲು ಅನುದಾನ ಸಹ ಬೇಕಾಗಿದ್ದು ಅಧಿಕೃತ ಆದೇಶ ಬಂದ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಗ್ರಾಮೀಣ ಭಾಗದ ವಸತಿರಹಿತರಿಗಾಗಿ ಪ್ರತಿ ಗ್ರಾ.ಪಂ ಗೆ 20 ಮನೆಗಳ ಗುರಿಯನ್ನು ನಿಗದಿಪಡಿಸಿದ್ದು, ಗ್ರಾಮೀಣ ಭಾಗದಲ್ಲಿ ಗ್ರಾಮ ಸಭೆ ಮಾಡಿ ಅದನ್ನು ರೆಕಾರ್ಡ್ ಮಾಡಬೇಕು. ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ನೀಡಬೇಕೆಂದರು. ಸರ್ಕಾರದ ಹಣದಲ್ಲಿ ಭ್ರಷ್ಟಾಚಾರ ಆಗಬಾರದು. ಮನೆ ನೀಡುವ ಬಗ್ಗೆ ದೂರುಗಳು ಬಂದಿದ್ದು ಅಧಿಕಾರಿಗಳು ಎಚ್ಚರಿಕೆ ಕೆಲಸ ಮಾಡಬೇಕೆಂದರು.

ಸ್ವಚ್ಚ ಭಾರತ್ ಮಿಷನ್ : ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ 3669 ಕಾರ್ಯ ಕೈಗೆತ್ತಿಕೊಳ್ಳಲಾಗಿದೆ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ತಿಳಿಸದರು. ಕೆಯುಐಡಿಎಫ್‍ಡಿಸಿ ಯಿಂದ 4455 ವೈಯಕ್ತಿಕ ಶೌಚಾಲಯ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 96 ಇ-ಟಾಯ್ಲೆಟ್‍ಗಳ ಪೈಕಿ ಮೊದಲನೇ ಹಂತದಲ್ಲಿ 23 ಪೂರ್ಣಗೊಂಡಿದ್ದು 06 ಪ್ರಗತಿಯಲ್ಲಿವೆ ಎಂದು ಸ್ಮಾರ್ಟ್‍ಸಿಟಿ ಎಂಡಿ ರವೀಂದ್ರ ಮಲ್ಲಾಪುರ ತಿಳಿಸಿದರು. ವರದಿಯನ್ನು ಸಮರ್ಪಕವಾಗಿ ನೀಡದ ಈ ಇಬ್ಬರು ಅಧಿಕಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ದಿಶಾ ವಿಚಕ್ಷಣಾ ಸಮಿತಿ ಸದಸ್ಯರಾದ ಬಸವರಾಜ್ ಮಾತನಾಡಿ, ಹೊನ್ನಾಳಿ ತಾಲ್ಲೂಕಿನ ರಾಂಪುರದಲ್ಲಿ 60 ವರ್ಷಗಳ ಹಿಂದೆ ಮಹಾಮಾರಿಯಿಂದ ಅನೇಕ ಸಾವು ನೋವು ಸಂಭವಿಸಿದ್ದ ಹಿನ್ನೆಲೆಯಲ್ಲಿ ಅಲ್ಲಿನ ಜನರನ್ನು ತುಂಗಾಭದ್ರ ನದಿ ದಂಡೆ ಬಳಿ ಸ್ಥಳಾಂತರಿಸಲಾಗಿತ್ತು. ಆದರೆ ಈಗ ಪ್ರವಾಹದಿಮದ ಇವರಿಗೆ ಇನ್ನೂ ಹೆಚ್ಚಿನ ತೊಂದರೆಯಾಗುತ್ತಿರುವ ಕಾರಣ ಸೂಕ್ತ ವಸತಿ ಸೌಲಭ್ಯ ಮಾಡಿಕೊಡಬೇಕೆಂದರು. ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ವೃತ್ತಿಪರ ಕೋರ್ಸ್‍ಗಳ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ವಿದ್ಯಾರ್ಥಿವೇತನ ಪೋರ್ಟಲ್ ಬದಲಾವಣೆಯಿಂದ ಮೂರುವರ್ಷಗಳ ವಿದ್ಯಾರ್ಥಿ ವೇತನ ಪಾವತಿಯಾಗಿರುವುದಿಲ್ಲ. ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು. ಹಾಗೂ ಜಗಳೂರು ತಾಲ್ಲೂಕಿನ ಸುಮಾರು 10 ಗ್ರಾಮಗಳಲ್ಲಿ ನರೇಗಾ ಕಾಯ್ದೆ ಪ್ರಕಾರ 60:40 ಅನುಪಾತ ನಿರ್ವಹಿಸಲಾಗುತ್ತಿಲ್ಲ. ಸಾಮಗ್ರಿ ಕಾಂಪೋನೆಂಟ್ ಶೇ.80 ಇದೆ ಎಂದರು.

ನರೇಗಾ ಯೋಜನೆಯಡಿ ಗುತ್ತಿದುರ್ಗ ಗ್ರಾಮವೊಂದರಲ್ಲೇ ಈ ಸಾಲಿನಲ್ಲಿ ಸುಮಾರು ರೂ.5 ಕೋಟಿ ಹೆಚ್ಚಿಗೆ ಖರ್ಚು ಮಾಡಲಾಗಿದೆ. 2019-20 ನೇ ಸಾಲಿನಲ್ಲಿ ರೂ.7.19 ಕೋಟಿ ಪಾವತಿ ಮಾಡಲಾಗಿದೆ ಎಂದು ವರದಿಯಲ್ಲಿದೆ ಎಂದರು. ಜಿ.ಪಂ.ಉಪಕಾರ್ಯದರ್ಶಿ ಆನಂದ್ ಪ್ರತಿಕ್ರಿಯಿಸಿ ನರೇಗಾ ಎಂಐಎಸ್ ನಲ್ಲಿ ಕಳೆದ ಸಾಲುಗಳ ಬಾಕಿ ಪಾವತಿ ಸೇರಿ ಒಟ್ಟಿಗೆ ತೋರಿಸುವುದರಿಂದ ಈ ರೀತಿ ಹೆಚ್ಚಿಗೆ ಕಾಣುತ್ತದೆ. ಪ್ರತಿ ಸಾಲಿಗೆ ವಿಂಗಡಣೆ ಅದರಲ್ಲಿ ಗೊತ್ತಾಗುವುದಿಲ್ಲ. ಹಿಂದಿನ ಬಾಕಿ ಇರುವ ಕಾರಣ ಹೀಗಾಗುತ್ತದೆ. ಎಂದರು.

ಜಿ.ಪಂ ಸಿಇಓ, 60 ಲೇಬರ್ ಮತ್ತು 40 ಸಾಮಗ್ರಿ ಕಾಂಪೋನೆಂಟ್ ಅನುಪಾತ ಜಿಲ್ಲಾ ಮಟ್ಟದಲ್ಲಿ ನಿರ್ವಹಿಸಬೇಕು. ಕೆಲ ತಾಲ್ಲೂಕುಗಳಲ್ಲಿ ಮಟೀರಿಯಲ್ ಕಾಂಪೋನೆಂಟ್ ಆಗಿರುವುದಿಲ್ಲ, ಮತ್ತು ಕೆಲವೆಡೆ ಲೇಬರ್ ಆಗಿರುವುದಿಲ್ಲ. ಅದನ್ನು ಜಿಲ್ಲಾ ಮಟ್ಟದಲ್ಲಿ ಅವರೇಜ್ ನೋಡಿ ಸರಿದೂಗಿಸಲಾಗುವುದು. ಆದರೆ ಕಳೆದ ಬಾರಿ ಜಗಳೂರಿನಲ್ಲಿ ಮಟೀರಿಲ್ ಕಾಂಪೋನೆಂಟ್ ಹೆಚ್ಚಾದ ಕಾರಣ ಈ ಬಾರಿ ಕೇವಲ ಲೇಬರ್ ಕಾಂಪೋನೆಂಟ್ ಕೆಲಸ ಮಾಡಿಸಲಾಗುತ್ತಿದೆ ಎಂದರು.

ಜಗಳೂರು ಕ್ಷೇತ್ರದ ಶಾಸಕರಾದ ಎಸ್.ವಿ.ರಾಮಚಂದ್ರಪ್ಪ ಪ್ರತಿಕ್ರಿಯಿಸಿ ಹಿಂದೆ ನರೇಗಾದಡಿ ತಾಲ್ಲೂಕಿನಲ್ಲಿ ಲೋಪಗಳಾಗಿದ್ದವು. ಆದರೆ ಈ ಬಾರಿ ಕೇವಲ ಲೇಬರ್ ಕೆಲಸ ಮಾಡಿಸಲಾಗುತ್ತಿದೆ ಎಂದ ಅವರು ವಿಚಕ್ಷಣಾ ಸಮಿತಿ ಸದಸ್ಯರು ಇಡೀ ತಾಲ್ಲೂಕಿನ ಕಾಮಗಾರಿಗಳ ವರದಿಯೊಂದಿಗೆ ತಾಲ್ಲೂಕನ್ನು ಭೇಟಿ ಮಾಡುವಂತೆ ತಿಳಿಸಿದರು.

ಸಮಿತಿ ಸದಸ್ಯ ಮುಪ್ಪಣ್ಣ ಮಾತನಾಡಿ ನಗರದ ಟಿವಿ ಸ್ಟೇಷನ್ ಕೆರೆ ಬಳಿ ಪ್ರತಿ ದಿನ 250 ರಿಂದ 300 ಜನರು ವಾಯುವಿಹಾರ ಮಾಡುವವರಿದ್ದು, ಅವರ ಅನುಕೂಲಕ್ಕೆ ಜಿಮ್ ಮತ್ತು ಯೋಗ ಹಾಲ್ ನಿರ್ಮಿಸಿಕೊಡುವಂತೆ ಹಾಗೂ ಅಲ್ಲಿ ಸಮರ್ಪಕ ಬೀದಿ ದೀಪ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.ಸಂಸದರು ದೂಢಾ ವತಿಯಿಂದ ಟಿವಿ ಸ್ಟೇಷನ್ ಕೆರೆ ಅಭಿವೃದ್ದಿ ಕೈಗೊಳ್ಳಲಾಗುತ್ತಿದ್ದು ಈ ವ್ಯವಸ್ಥೆ ಮಾಡಿಸಲು ತಿಳಿಸಲಾಗುವುದು ಎಂದರು.

ತಾ.ಪಂ ಅಧ್ಯಕ್ಷರ ಅಳಲು : ತಾಲ್ಲೂಕು ಪಂಚಾಯ್ತಿ ಅಧ್ಯಕ್ಷರು ತಾವು ಜನರಿಂದ ಆಯ್ಕೆ ಆಗಿ ಬಂದ ಜನಪ್ರತಿನಿಧಿಗಳೆಂದು ಜನರು ತಮ್ಮಲ್ಲಿ ಅಹವಾಲು ಹೊತ್ತು ಬರುತ್ತಾರೆ. ಆದರೆ ನಮಗೆ ತೀರಾ ಸೀಮಿತಿ ಅನುದಾನ ಇದ್ದು, ಅದನ್ನು ಬಳಕೆ ಮಾಡಲು ಇಓ ಅನುಮತಿ ಬೇಕು. ನಮ್ಮ ಹುದ್ದೆ ಅತಂತ್ರವೆನಿಸುತ್ತಿದೆ ಎಂದು ಸಂಸದರ ಬಳಿ ಹೇಳಿಕೊಂಡರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶಾಂತಕುಮಾರಿ ಕೆ.ವಿ, ಪುರ ಪಂಚಾಯ್ತಿ, ಪಟ್ಟಣ ಪಂಚಾಯ್ತಿ, ತಾ.ಪಂ ಅಧ್ಯಕ್ಷರು, ದಿಶಾ ವಿಚಕ್ಷಣಾ ಸಮಿತಿ ಸದಸ್ಯರು, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top
(adsbygoogle = window.adsbygoogle || []).push({});