Connect with us

Dvgsuddi Kannada | online news portal | Kannada news online

ದಾವಣಗೆರೆ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಲುಮರದ ವೀರಾಚಾರಿಯ ಸಾವು ದುರಂತಮಯ; ರಾಘವೇಂದ್ರ ನಾಯರಿ ಸಂತಾಪ

ದಾವಣಗೆರೆ

ದಾವಣಗೆರೆ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಲುಮರದ ವೀರಾಚಾರಿಯ ಸಾವು ದುರಂತಮಯ; ರಾಘವೇಂದ್ರ ನಾಯರಿ ಸಂತಾಪ

ದಾವಣಗೆರೆ:“ನ್ಯಾಯಕ್ಕಾಗಿ ನೇಣಿಗೆ ಶರಣಾಗಲೂ ಸಿದ್ಧ” ಎನ್ನುತ್ತಾ ಸದಾ ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಹಲವಾರು ಹೋರಾಟಗಳನ್ನು ಮಾಡುತ್ತಿದ್ದ ಖ್ಯಾತ ಪರಿಸರ ಸಂರಕ್ಷಕ, ಕರ್ನಾಟಕ ಸರಕಾರದಿಂದ 2019 ರ ಸಾಲಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಾಲುಮರದ ವೀರಾಚಾರಿಯವರ ನಿಧನಕ್ಕೆ ಯಕ್ಷಗಾನ ಕಲಾವಿದ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಕಂಬನಿ ಮಿಡಿದಿದ್ದಾರೆ.

ಮಿಟ್ಲಕಟ್ಟೆಯ ಸಾಲುಮರದ ವೀರಾಚಾರಿಯವರು ತಮ್ಮ ಜೀವನವನ್ನೇ ಪರಿಸರ ರಕ್ಷಣೆ ಹಾಗೂ ಸಮಾಜ ರಕ್ಷಣೆಗಾಗಿ ಸಮರ್ಪಿಸಿಕೊಂಡಿದ್ದರು. ತನ್ನ ಕುಟುಂಬಕ್ಕಿಂತಲೂ ಹೆಚ್ಚಾಗಿ ಪರಿಸರ ಮತ್ತು ಸಮಾಜವನ್ನು ಪ್ರೀತಿಸುತ್ತಿದ್ದ ಅವರು ತನ್ನ ಜೀವಿತಾವಧಿಯಲ್ಲಿ ಸಾವಿರಾರು ಗಿಡಗಳನ್ನು ನೆಟ್ಟು, ಅವುಗಳನ್ನು ಪೋಷಿಸಿ ಪರಿಸರಕ್ಕೆ ತನ್ನದೇ ಆದ ಅನನ್ಯವಾದ ಕೊಡುಗೆಯನ್ನು ನೀಡಿದ್ದರು. ಸಾಲುಮರದ ವೀರಾಚಾರಿಯವರ ಪರಿಸರ ಸೇವೆಯನ್ನು ಗುರುತಿಸಿ ಕರ್ನಾಟಕ ಸರಕಾರವು 2019 ರ ಸಾಲಿನಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು. ಅವರ ಅಗಲುವಿಕೆ ನಮ್ಮ ನಾಡಿಗೆ ವಿಶೇಷವಾಗಿ ನಮ್ಮ ದಾವಣಗೆರೆ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ. ತಮ್ಮ ಊರಿನ ನ್ಯಾಯಬೆಲೆ ಅಂಗಡಿಯ ಭಷ್ಟಾಚಾರದ ವಿರುದ್ಧ ಹೋರಾಟ ಮಾಡುತ್ತಲೇ ನ್ಯಾಯ ಸಿಗದೇ ಅದೇ ಹೋರಾಟಕ್ಕೆ ತಮ್ಮ ಜೀವವನ್ನು ಅರ್ಪಿಸಿಕೊಂಡ ವೀರಾಚಾರಿಯವರು ಮಹಾನ್ ಹೋರಾಟಗಾರರಾಗಿದ್ದರು.

“ಸತ್ಯಕ್ಕಾಗಿ ಹರಿಶ್ಚಂದ್ರ ಸ್ಮಶಾನ ಕಾದ – ನ್ಯಾಯಕ್ಕಾಗಿ ಈ ವೀರಾಚಾರಿ ನೇಣಿಗೆ ಶರಣಾಗಲು ಸಿದ್ಧ” ಎಂದವರು ಸದಾ ಹೇಳುತ್ತಿದ್ದರು. ಶ್ರಮಜೀವಿಯಾಗಿದ್ದ ಸಾಲುಮರದ ವೀರಾಚಾರಿಯವರು ತಾವೇ ಸ್ವತಃ ತಯಾರು ಮಾಡುತ್ತಿದ್ದ ಕೃಷಿ ಉಪಕರಣಗಳನ್ನು ನಾಡಿನುದ್ದಕ್ಕೂ ಒಯ್ದು ಮಾರಾಟ ಮಾಡುತ್ತಿದ್ದರು. ಹೋದೆಡೆಯೆಲ್ಲ ತನ್ನ ವ್ಯವಹಾರದ ಜೊತೆ ಜೊತೆಗೆ ಜನರಿಗೆ ಪರಿಸರ ರಕ್ಷಣೆ, ಸಮಾಜಸೇವೆ ಮತ್ತು ಮಾನವೀಯತೆಯ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರು. ದೇಶ ನಿನಗೇನು ಕೊಟ್ಟಿದೆ ಎನ್ನುವುದಕ್ಕಿಂತ ದೇಶಕ್ಕೆ ನೀನೇನು ಕೊಟ್ಟೆ ಎಂದು ವಿಚಾರ ಮಾಡು ಮಾನವಾ ಎಂದು ಎಲ್ಲೆಡೆ ಮಾರ್ಮಿಕವಾಗಿ ಹೇಳುತ್ತಿದ್ದರು.

ಗ್ರಾಮೀಣ ಸೊಗಡಿನ ವೀರಾಚಾರಿಯವರ ಸರಳವಾದ ಗ್ರಾಮ್ಯ ಭಾಷೆಯು ಎಲ್ಲರನ್ನು ಸೆಳೆಯುತ್ತಿತ್ತು. ಅವರಿರುವ ಕಡೆ ಸದಾ ಜನಜಂಗುಳಿಯಿರುತ್ತಿತ್ತು. ಇಂತಹ ಮಹಾನ್ ಪರಿಸರ ಸಂರಕ್ಷಕ, ಜನಸೇವಕನ ಜೀವನ ಈ ರೀತಿಯಾಗಿ ದುರಂತಮಯವಾಗಿ ಅಂತ್ಯಗೊಂಡಿರುವುದು ಪ್ರಸ್ತುತ ವ್ಯವಸ್ಥೆ ನಾಚಿ ತಲೆತಗ್ಗಿಸುವಂತಿದೆ ಎಂದು ಕೆ.ರಾಘವೇಂದ್ರ ನಾಯರಿ ಅಕ್ಷರ ನಮನದ‌ ಮೂಲಕ ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top