Connect with us

Dvgsuddi Kannada | online news portal | Kannada news online

ದಾವಣಗೆರೆ: ನೂತನ ಗಾಂಧಿ ಭವನದಲ್ಲಿ ಅ.02 ರಂದು  ಮಹಾತ್ಮ ಗಾಂಧಿ, ಲಾಲ್ ಬಹಾದ್ದೂರ್  ಶಾಸ್ತ್ರೀಜಿ ಜಯಂತಿ ಆಚರಣೆ

ದಾವಣಗೆರೆ

ದಾವಣಗೆರೆ: ನೂತನ ಗಾಂಧಿ ಭವನದಲ್ಲಿ ಅ.02 ರಂದು  ಮಹಾತ್ಮ ಗಾಂಧಿ, ಲಾಲ್ ಬಹಾದ್ದೂರ್  ಶಾಸ್ತ್ರೀಜಿ ಜಯಂತಿ ಆಚರಣೆ

ದಾವಣಗೆರೆ: ನಗರದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಗಾಂಧಿ ಭವನದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್‍ಬಹಾದ್ದೂರ್ ಶಾಸ್ತ್ರೀಜಿಯವರ ಜಯಂತಿಯನ್ನು ಅ.02 ರಂದು ಬೆಳಿಗ್ಗೆ 9 ಗಂಟೆಗೆ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್‍ಬಹಾದ್ದೂರ್ ಶಾಸ್ತ್ರೀಜಿಯವರ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ವರ್ಷ ಗಾಂಧಿ ಜಯಂತಿಯನ್ನು ಮಹಾನಗರಪಾಲಿಕೆಯಲ್ಲಿ ಹಮ್ಮಿಕೊಳ್ಳಲಾಗುತ್ತಿತ್ತು, ಈ ಬಾರಿ ನಗರದಲ್ಲಿ ನೂತನವಾಗಿ ಉದ್ಘಾಟನೆಯಾಗಿರುವ ಗಾಂಧಿ ಭವನದಲ್ಲಿ ಸರಳವಾಗಿ ಹಾಗೂ ವಿಶೇಷವಾಗಿ ಗಾಂಧಿ ಜಯಂತಿ ಆಚರಿಸಲಾಗುವುದು ಎಂದರು.

ಕೋವಿಡ್ ಸೋಂಕು ಹರಡುವಿಕೆಯನ್ನು ತಡೆಗಟ್ಟಲು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ವಯ ಕಾರ್ಯಕ್ರಮ ನಡೆಸಲಾಗುವುದು. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಹಾಗೂ ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗುವುದು. ಕಾರ್ಯಕ್ರಮದ ಅಂಗವಾಗಿ ಸರ್ವಧರ್ಮ ಪ್ರಾರ್ಥನೆ, ಗಾಂಧೀಜಿಯವರ ಜೀವನ ಸಾಧನೆ ಕುರಿತಂತೆ ಹಾಗೂ ಗಾಂಧಿ ಭವನದಲ್ಲಿ ನಿರ್ಮಾಣವಾಗಿರುವ ಕಲಾಕೃತಿಗಳ ಕುರಿತು ವಿಶೇಷ ಉಪನ್ಯಾಸ ಹಾಗೂ ಮಾಹಿತಿ ನೀಡಲು ಯುವಕರನ್ನು ಆಯೋಜಿಸಬೇಕು. ಗಾಂಧೀಜಿಯವರಿಗೆ ಪ್ರಿಯವಾದ ರಘುಪತಿ ರಾಘವ ರಾಜಾರಾಂ, ವೈಷ್ಣವಜನತೋ ಸೇರಿದಂತೆ ಇತರೆ ಭಜನೆಗಳನ್ನು ಪ್ರಸ್ತುತಪಡಿಸಬೇಕು. ಹಾಗೂ ಕಾರ್ಯಕ್ರಮದ ನಿರೂಪಣೆಯನ್ನು ಪೊಲೀಸ್ ಇಲಾಖೆಗೆ ವಹಿಸಲಾಗುವುದು ಎಂದು ತಿಳಿಸಿದರು.

ಗಾಂಧೀಜಿಯವರ ಪ್ರತಿಮೆಗೆ ದೊಡ್ಡ ನೂಲಿನ ಮಾಲೆ ಹಾಗೂ ಕಾರ್ಯಕ್ರಮಕ್ಕೆ ಹಾಜರಾಗುವ ಎಲ್ಲಾ ಅಧಿಕಾರಿಗಳಿಗೂ ಖಾದಿ ಟೋಪಿ ಒದಗಿಸುವುದನ್ನು ಖಾದಿ ಬೋರ್ಡ್‍ಗೆ ವಹಿಸಿದ್ದು, ವೇದಿಕೆ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯಗಳನ್ನು ಮಹಾನಗರಪಾಲಿಕೆಗೆ ಜವಾಬ್ದಾರಿ ನೀಡಲಾಗಿದೆ. ಪೆಂಡಾಲ್ ಹಾಕದೆ ಮುಕ್ತವಾಗಿ ಸಮಾರಂಭವನ್ನು ಆಚರಿಸಬೇಕು. ಗಾಂಧೀಜಿ ಹಾಗೂ ಶಾಸ್ತ್ರೀಜಿಯವರ ಭಾವಚಿತ್ರವನ್ನು ವೇದಿಕೆಯಲ್ಲಿ ಸ್ಥಾಪಿಸಿ, ಭಾವಚಿತ್ರಗಳಿಗೆ ಖಾದಿ ಹಾರ, ಹೂವಿನ ಅಲಂಕಾರ, ಪೂಜಾ ಸಾಮಾಗ್ರಿ ಮುಂತಾದ ವ್ಯವಸ್ಥೆಗಳನ್ನು ಮಾಡುವ ಜವಾಬ್ದಾರಿಯನ್ನು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗಕ್ಕೆ ವಹಿಸಲಾಗಿದೆ ಎಂದರು.

ಗಾಂಧಿಜಯಂತಿಯಂದು ನಗರಾದ್ಯಂತ ಬೆಳಿಗ್ಗೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಹಾಗೂ ಕಾರ್ಯಕ್ರಮಕ್ಕೆ ಸಂಬಂಧಿಸಿದ ಫೋಟೋ, ವಿಡಿಯೋ ತುಣುಕುಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ತಲುಪಿಸಬೇಕು. ಜಯಂತಿಯಂದು ನಗರದಲ್ಲಿರುವ ಜಿಲ್ಲಾ ಮತ್ತು ದಾವಣಗೆರೆ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ತಮ್ಮ ಕಚೇರಿಯ ಸಿಬ್ಬಂದಿಯವರೊಂದಿಗೆ ಬಿಳಿ ಖಾದಿ ಬಟ್ಟೆ ಧರಿಸಿ ಕಾರ್ಯಕ್ರಮದಲ್ಲಿ ತಪ್ಪದೇ ಭಾಗವಹಿಸಬೇಕು. ಕಾರ್ಯಕ್ರಮದಲ್ಲಿ ಗೈರು ಹಾಜರಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಎಸಿ ಮಮತ ಹೊಸಗೌಡರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಕೌಸರ್ ರೇಷ್ಮ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ವಿಜಯಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವಿಚಂದ್ರ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top