ದಾವಣಗೆರೆ: ಯಕ್ಷಗಾನ ಕಲೆಯು ಕೇವಲ ಮನೋರಂಜನಾ ಕಲೆಯಾಗಿರದೇ ಜನರ ಆರಾಧನೆಯ ದೈವೀ ಕಲೆಯಾಗಿದೆ. ಸಿನೆಮಾ, ಧಾರವಾಹಿಗಳ ವೈಭವೀಕರಣದ ಮಧ್ಯೆಯೂ ಯಕ್ಷಗಾನ ಕಲೆಯು ತನ್ನ ಅಸ್ತಿತ್ವವನ್ನು ಸಮರ್ಥವಾಗಿ ಉಳಿಸಿಕೊಂಡಿದೆ ಎಂದರೆ ಅದು ತನ್ನ ಗುಣಮಟ್ಟದ ಮೌಲ್ಯವನ್ನು ಉಳಿಸಿಕೊಂಡಿರುವುದೇ ಕಾರಣವಾಗಿದೆ ಎಂದು ದಾವಣಗೆರೆ ರೆಡ್ ಕ್ರಾಸ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಹಾಗೂ ಲೆಕ್ಕ ಪರಿಶೋಧಕ ಉಮೇಶ್ ಶೆಟ್ಟಿಯವರು ಹೇಳಿದರು.
ನಗರದ ಎಂಸಿಸಿ ಬಿ ಬ್ಲಾಕ್‌ನ ಪದ್ಮಶ್ರೀ ಚಿಂದೋಡಿ ಲೀಲಾ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಯಕ್ಷಸೌರಭ ಯಕ್ಷಗಾನ ಸಂಸ್ಥೆಯ ನಾಲ್ಕನೇ ವಾರ್ಷಿಕೋತ್ಸವ ಮತ್ತು “ಭಸ್ಮಾಸುರ ಮೋಹಿನಿ” ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಯಕ್ಷಗಾನದಲ್ಲಿ ಪ್ರದರ್ಶನಗೊಳ್ಳುವ ಮಹಾಭಾರತ, ರಾಮಾಯಣ ಆಧಾರಿತ ಪೌರಾಣಿಕ ಕಥೆಗಳು ಜನರಲ್ಲಿ ಅದರಲ್ಲೂ ಬಹುಮುಖ್ಯವಾಗಿ ವಿಧ್ಯಾರ್ಥಿಗಳು ಮತ್ತು ಯುವಜನರಲ್ಲಿ ಸಂಸ್ಕಾರ ಮತ್ತು ಜ್ಞಾನ ಸಂಪತ್ತು ಬೆಳೆಸಲು ಸಹಕಾರಿಯಾಗುತ್ತವೆ. ಕರಾವಳಿ ಭಾಗದಲ್ಲಿ ಉದಯವಾದ ಈ ಕಲೆಯು ಇಂದು ವಿಶ್ವ ಮಾನ್ಯತೆಯನ್ನು ಹೊಂದಿದೆ ಎಂದರೆ ಯಕ್ಷಗಾನದ ಕಲಾ ಶ್ರೀಮಂತಿಕೆ ಅರ್ಥವಾಗುತ್ತದೆ ಎಂದರು. ಯಕ್ಷಸೌರಭದ ಅಧ್ಯಕ್ಷ ಸಕ್ಕಟ್ಟು ರಾಜಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಅವರು ಮಾತನಾಡಿ, ಕನ್ನಡದ ಅಸ್ಮಿತೆಯನ್ನು ಉಳಿಸುವಲ್ಲಿ ಯಕ್ಷಗಾನ ಕಲೆಯ ಪಾತ್ರ ಬಹು ದೊಡ್ಡದು. 700-800 ವರ್ಷಗಳ ಇತಿಹಾಸವಿರುವ ಯಕ್ಷಗಾನ ಕಲೆಯು ಅತ್ಯಂತ ಶಾಸ್ತ್ರೀಯ ಕಲೆಯಾಗಿದೆ. ಯಕ್ಷಗಾನ ಸಾಹಿತ್ಯದ ಇತಿಹಾಸವನ್ನು ಗಮನಿಸಿದರೆ ಸಾವಿರಕ್ಕೂ ಅಧಿಕ ಕವಿಗಳನ್ನು ಗುರುತಿಸಬಹುದು. ಆರು ಸಾವಿರಕ್ಕೂ ಹೆಚ್ಚಿನ ಯಕ್ಷಗಾನ ಪ್ರಸಂಗಗಳು, 10 ಲಕ್ಷಕ್ಕೂ ಅಧಿಕ ಸಂಖ್ಯೆಯ ಯಕ್ಷಗಾನ ಪದ್ಯಗಳ ರಚನೆಯಾಗಿವೆ. ಇಷ್ಟಲ್ಲದೇ 40 ಕ್ಕೂ ಹೆಚ್ಚು ಪಿಹೆಚ್‌ಡಿ ಪ್ರಬಂಧಗಳು ದಾಖಲಾಗಿವೆ. ಒಂದು ಕಲಾ ಪ್ರಕಾರದ ಮೇಲೆ ಇಷ್ಟೊಂದು ಪ್ರಮಾಣದ ಸಾಹಿತ್ಯ ಚಟುವಟಿಕೆಗಳನ್ನು ಕೇವಲ ಕನ್ನಡ ಭಾಷೆಯನ್ನು ಬಳಸಿ ರಚನೆ ಮಾಡಿರುವುದು ಒಂದು ದಾಖಲೆಯೇ ಸರಿ. ಇಂತಹ ಮಹಾನ್ ಕಲೆಯನ್ನು ದಾವಣಗೆರೆಯಲ್ಲಿ ಇನ್ನಷ್ಟು ಪ್ರಸರಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸರ್ವ ಸಹಕಾರವನ್ನು ನೀಡಲಿದೆ ಎಂದರು.
ಮುಖ್ಯ ಅತಿಥಿ ಸಮಾಜ ಸೇವಕ ಹಾಗೂ ದಾವಣಗೆರೆ ಜಿಲ್ಲಾ ಯೋಗ ಒಕ್ಕೂಟದ ಅಧ್ಯಕ್ಷ ಲಯನ್ ವಾಸುದೇವ ರಾಯ್ಕರ್ ಮಾತನಾಡಿ, ಅತ್ಯಂತ ಶ್ರೀಮಂತ ಕಲಾ ಪ್ರಕಾರವಾದ ಯಕ್ಷಗಾನ ಕಲೆ ನಮ್ಮ ನಾಡಿನ ಭವ್ಯ ಸಂಸ್ಕೃತಿಯ ಪ್ರತೀಕವಾಗಿದೆ. ಕಲೆಯು ಶ್ರೀಮಂತಿಕೆಯಿಂದ ಕೂಡಿದ್ದರೂ ಕಲಾವಿದರು ಮಾತ್ರ ಆರ್ಥಿಕವಾಗಿ ಸಿರಿವಂತರಾಗಿಲ್ಲ. ಈ ನಿಟ್ಟಿನಲ್ಲಿ ನಾವೆಲ್ಲರೂ ಯಕ್ಷಗಾನ ಕಲೆಗೆ ಮತ್ತು ಕಲಾವಿದರಿಗೆ ಸಹಕಾರ ಮತ್ತು ಪ್ರೋತ್ಸಾಹ ನೀಡಬೇಕು ಎಂದರು.
ಬಿಜೆಪಿ ಯುವ ಮುಖಂಡ ಶ್ರೀನಿವಾಸ್ ದಾಸಕರಿಯಪ್ಪ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಕೋರಿದರು. ಮುಖ್ಯ ಅತಿಥಿ ಹೋಟೆಲ್ ಉದ್ಯಮಿ ಮಂಜುನಾಥ್ ದಾಸ್ ಮಾತನಾಡಿ ಯಕ್ಷಗಾನ ಕಲೆ ಮತ್ತು ಕಲಾವಿದರಿಗೆ ಸರಕಾರಗಳ ಜೊತೆಗೆ ಸಂಘ ಸಂಸ್ಥೆಗಳು ಸಹಕಾರ ನೀಡಬೇಕು ಎಂದರು.
ಯಕ್ಷಸೌರಭದ ಸಂಸ್ಥಾಪಕ ಹಾಗೂ ಯಕ್ಷ ಗುರು ಕರ್ಜೆ ಸೀತಾರಾಮ ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು ಹಾಗೂ ಸಂಸ್ಥೆಯ ಶಿಷ್ಯರು ಹಾಗೂ ಪದಾಧಿಕಾರಿಗಳು ಅವರಿಗೆ ಗುರು ವಂದನೆ ಸಲ್ಲಿಸಿದರು. ಎಸ್‌ಎಸ್‌ಎಲ್‌ಸಿ ಹಾಗೂ ಶೈಕ್ಷಣಿಕವಾಗಿ ಸಾಧನೆ ಮಾಡಿದ ಸಂಸ್ಥೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಿ ಅಭಿನಂದಿಸಲಾಯಿತು. ಯಕ್ಷಸೌರಭದ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ನಾಯರಿ ಕಾರ್ಯಕ್ರಮ ನಿರೂಪಿಸಿದರು, ರಾಘವೇಂದ್ರ ಪಿ ಶೇಟ್ ಸ್ವಾಗತಿಸಿದರು ಹಾಗೂ ರಾಗಿಣಿ ಮಾಲತೇಶ್ ವಂದನಾರ್ಪಣೆ ಮಾಡಿದರು.
ಯಕ್ಷಗಾನ ಪ್ರದರ್ಶನದ ಹಿಮ್ಮೇಳದಲ್ಲಿ ಭಾಗವತರಾಗಿ ಬಿ.ಸುಬ್ರಾಯ ಹೆಬ್ಬಾರ್, ಮದ್ದಳೆವಾದಕರಾಗಿ ಸಂಪತ್ ಆಚಾರ್ಯ ಉಡುಪಿ, ಚಂಡೆ ವಾದಕರಾಗಿ ಕಾರ್ತಿಕ್ ಧಾರೇಶ್ವರ ಹಾಗೂ ಮುಮ್ಮೇಳದಲ್ಲಿ ಭಸ್ಮಾಸುರನ ಪಾತ್ರದಲ್ಲಿ ಅಮೂಲ್ಯ ಸಿ., ಮೋಹಿನಿಯಾಗಿ ಅನಘ ಉಪಾಧ್ಯ, ಈಶ್ವರನಾಗಿ ಹರ್ಷಿತಾ ಪ್ರಸಾದ, ದೇವೇಂದ್ರನಾಗಿ ಅನಿರುದ್ಧ ಉಪಾಧ್ಯ, ಪಾರ್ವತಿಯಾಗಿ ಧನ್ಯಶ್ರೀ, ಬ್ರಹ್ಮನಾಗಿ ಸಹನಾ ಸೇರಿಗಾರ, ವಿಷ್ಣುವಾಗಿ ಮಾನ್ಯಶ್ರೀ, ಬ್ರಾಹ್ಮಣನಾಗಿ ಶ್ರೀನಿವಾಸ ಉಪಾಧ್ಯ, ಅಗ್ನಿಯಾಗಿ ಭಾರ್ಗವ ಆರ್., ಕುಬೇರನಾಗಿ ಶ್ರೀಲಕ್ಷಿ, ವರುಣನಾಗಿ ಸಿಂಧೂ, ಯಮಧರ್ಮನಾಗಿ ರೋಹಿತ್, ವಾಯುವಾಗಿ ಗಂಗಾ, ವೀರಭದ್ರನಾಗಿ ಸೃಜನ್ ಎಸ್.ಆಚಾರ್ಯ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದರು.
ಕಾರ್ಯಕ್ರಮದಲ್ಲಿ ಮಾಲತೇಶ್ ರಾವ್, ಉದಯ ಸೇರಿಗಾರ್, ರಾಜೇಶ್ ಆಚಾರ್ಯ, ವಾದಿರಾಜ್ ಉಪಾಧ್ಯ, ವಾಣಿ ಶ್ರೀನಿವಾಸ್, ವಿದ್ಯಾಲತಾ, ಉಷಾ ರಾಘವೇಂದ್ರ, ಲತಾ, ವಾಣಿ, ಅನಂತ ಹೆಗಡೆ, ಹಟ್ಟಿಯಂಗಡಿ ಆನಂದ ಶೆಟ್ಟಿ, ಬಾಳೆಹೊಳೆ ಪ್ರದೀಪ್ ಕಾರಂತ, ನೀಲಾವರ ಭಾಸ್ಕರ ನಾಯಕ್, ಹೇಮಾ ಶಾಂತಪ್ಪ ಪೂಜಾರಿ, ಕಾಡೂರು ಮೋಹನದಾಸ್ ಶೆಟ್ಟಿ, ರತ್ನಾಕರ ಶೇಟ್, ಕೆ.ಶಶಿಶೇಖರ್ ಮುಂತಾದವರು ಉಪಸ್ಥಿತರಿದ್ದರು.