Connect with us

Dvgsuddi Kannada | online news portal | Kannada news online

ದಾವಣಗೆರೆ: ಜಿಲ್ಲೆಯ 34 ಗ್ರಾಮಗಳನ್ನು ಕಂದಾಯ ಗ್ರಾಮವಾಗಿ ಘೋಷಣೆ; ಸಚಿವ ಆರ್. ಅಶೋಕ

ಪ್ರಮುಖ ಸುದ್ದಿ

ದಾವಣಗೆರೆ: ಜಿಲ್ಲೆಯ 34 ಗ್ರಾಮಗಳನ್ನು ಕಂದಾಯ ಗ್ರಾಮವಾಗಿ ಘೋಷಣೆ; ಸಚಿವ ಆರ್. ಅಶೋಕ

ದಾವಣಗೆರೆ: ರಾಜ್ಯದಲ್ಲಿ 1035 ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 84 ಜನವಸತಿ ಪ್ರದೇಶಗಳ 39 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿದ್ದು ಅದರಲ್ಲಿ ಹೊನ್ನಾಳಿ ತಾಲ್ಲೂಕಿನಲ್ಲಿ 05 ಗ್ರಾಮಗಳು ಕೂಡ ಸೇರ್ಪಡೆಯಾಗಿವೆ ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು.

ಹೊನ್ನಾಳಿ ಪಟ್ಟಣದ ಅಗಳ ಮೈದಾನದಲ್ಲಿ ಹಮ್ಮಿಕೊಂಡಿದ್ದ ನೂತನ ಕಂದಾಯ ಉಪವಿಭಾಗಾಧಿಕಾರಿಗಳ ಕಚೇರಿ (ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲೂಕುಗಳ ವ್ಯಾಪ್ತಿ) ಉದ್ಘಾಟನಾ ಸಮಾರಂಭ ಹಾಗೂ ಸಂಜೀವಿನಿ ಯೋಜನೆ ಅಡಿಯಲ್ಲಿ ಸ್ತ್ರೀಶಕ್ತಿ ಸಂಘಗಳಿಗೆ ನಿಧಿ ಚೆಕ್ ವಿತರಣೆ ಹಾಗೂ ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರದ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಲು ರಾಜ್ಯ ಸರ್ಕಾರ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ ಈ ಮೂಲಕ ಇಡೀ ಜಿಲ್ಲಾಡಳಿತ ಯಂತ್ರವನ್ನ ಜನರ ಮನೆ ಬಾಗಿಲಿಗೆ ಕೊಂಡೊಯ್ಯುವ ಮೂಲಕ ಜನರ ಸಂಕಷ್ಟಗಳಿಗೆ ಮಿಡಿಯುವ ಜನಸ್ನೇಹಿ ಸರ್ಕಾರ ನಮ್ಮದಾಗಿದೆ.ಕಂದಾಯ ಗ್ರಾಮಗಳನ್ನಾಗಿ ಘೋಷಣೆ ಮಾಡುವುದರಿಂದ ಆ ಗ್ರಾಮಕ್ಕೆ ಸರ್ಕಾರದ ಅನೇಕ ಸೌಲಭ್ಯ ಮತ್ತು ಅನುದಾನಗಳು ದೊರೆಯುತ್ತವೆ ಎಂದರು.

ಗ್ರಾಮ ವಾಸ್ತವ್ಯದ ಮೂಲಕ ಅಧಿಕಾರಗಳು ಹಳ್ಳಿಯ ಜನರ ಮನೆಬಾಗಿಲಿಗೆ ಹೋಗಿ ಅವರ ಕಷ್ಟಗಳಿಗೆ ಸ್ಪಂದಿಸುವ ಯೋಜನೆ ಜಾರಿಗೆ ತರಲಾಗಿದೆ. ಕಂದಾಯ ಇಲಾಖೆ ಮುಖಾಂತರ ಹಲವಾರು ಜನಪರ ಕಾರ್ಯಕ್ರಮಗಳ ಆಯೋಜನೆ ಮಾಡಲಾಗಿದೆ. ಹೊನ್ನಾಳಿ-ನ್ಯಾಮತಿ ಮತಕ್ಷೇತ್ರದ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಸರ್ಕಾರದಿಂದ ಅನುದಾನ ಬಿಡುಗಡೆಗೊಳಿಸಿ ಆಸ್ಪತ್ರೆ, ಬಸ್‍ಸ್ಟಾಂಡ್, ಶಾಲಾ ಕೊಠಡಿಗಳು, ಉಪವಿಭಾಗಾಧಿಕಾರಿ ಕಚೇರಿಯಂತಹ ಅನೇಕ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಕಾರ್ಯ ಮಾಡುತ್ತಿದ್ದಾರೆ.

ಜಿಲ್ಲೆಗೆ ಕೋವಿಡ್ ಸಂದರ್ಭದಲ್ಲಿ 23.48 ಕೋಟಿ ಅನುದಾನವನ್ನು ಮಂಜೂರು ಮಾಡಲಾಗಿದೆ. 26.956 ಜನರಿಗೆ 26.59 ಕೋಟಿ ಬೆಳೆ ಪರಿಹಾರ ಮಂಜೂರು ಮಾಡಲಾಗಿದೆ. ಮಳೆಹಾನಿಯಿಂದ ಮನೆ ಕಳೆದುಕೊಂಡವರಿಗೆ ಪರಿಹಾರ ಹಾಗೂ ಕೊವೀಡ್‍ನಿಂದ ಮೃತಪಟ್ಟ 214 ಜನರ ಕುಟುಂಬಗಳಿಗೆ 6.05 ಕೋಟಿ ಪರಿಹಾರ ಒದಗಿಸಲಾಗಿದೆ. ಬಡವರ ಕಲ್ಯಾಣಕ್ಕಾಗಿ ಅನೇಕ ಅವಕಾಶಗಳನ್ನು ರೂಪಿಸುವ ಆಲೋಚನೆ ಹೊಂದಿ ಸರ್ಕಾರದ ಸೌಲತ್ತು ಪ್ರತಿಯೊಬ್ಬರಿಗೂ ದೊರೆಯುವಂತೆ ಮಾಡುವುದೇ ಸರ್ಕಾರದ ಮುಖ್ಯ ಗುರಿಯಾಗಿದೆ ಮುಖ್ಯಮಂತ್ರಿ ಬೊಮ್ಮಾಯಿ ನೇತೃತ್ವದ ಸರ್ಕಾರ ಬಡವರ ಪರವಾದ ಸರ್ಕಾರವಾಗಿದೆ ಹಾಗೂ ಬಡವರ ಭಾವನೆಗಳಿಗೆ ಸ್ಪಂದಿಸುವ ಸರ್ಕಾರ ನಮ್ಮದಾಗಿದೆ ಎಂದರು.

ನಗರಾಭಿವೃದ್ಧಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಭೈರತಿ ಬಸವರಾಜ್ ಮಾತನಾಡಿ ನೂತನ ಉಪವಿಭಾಗಾಧಿಕಾರಿ ಕಚೇರಿಯ ವ್ಯಾಪ್ತಿಯ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ರೈತರಿಗೆ ಪಹಣಿ, ಮ್ಯುಟೇಶನ್, ಪೌತಿಖಾತೆಗಳ ಸಮಸ್ಯೆ ಪರಿಹರಿಸುವ ಕಾರ್ಯಗಳು ಕಚೇರಿಯಿಂದ ನಡೆಯಲಿ. ಅಧಿಕಾರಿಗಳು ಪ್ರಾಮಾಣಿಕವಾಗಿ ಜನರ ಕಷ್ಟಗಳಿಗೆ ಸ್ಪಂದಿಸುವಂತಾಗಬೇಕು, ಜಿಲ್ಲೆಯ ಕಂದಾಯ ಇಲಾಖೆಯಲ್ಲಿ 20 ಸಾವಿರ ಕಡತಗಳು ಬಾಕಿ ಇದ್ದು ವಿಲೇವಾರಿಗೆ ಕಡತಯಜ್ಞ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ ಎಂದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ-ನ್ಯಾಮತಿ ಅವಳಿ ಕ್ಷೇತ್ರದ ಶಾಸಕರಾದ ಎಂ.ಪಿ ರೇಣುಕಾಚಾರ್ಯ ಮಾತನಾಡಿ ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲ್ಲೂಕುಗಳನ್ನು ಒಳಗೊಂಡಂತೆ ಜನರು ದಾವಣಗೆರೆಯ ಉಪವಿಭಾಗಾಧಿಕಾರಿ ಕಚೇರಿಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಹೊನ್ನಾಳಿ ಪಟ್ಟಣದಲ್ಲಿ ಉವಿಭಾಗಾಧಿಕಾರಿ ಕಚೇರಿಯನ್ನು ಉದ್ಘಾಟಿಸಲಾಗಿದೆ. ಕಚೇರಿಯು ಎಂಟು ತಿಂಗಳುಗಳ ಹಿಂದೆಯೇ ಕಂದಾಯ ಸಚಿವರಿಂದ ಮಂಜೂರಾಗಿತ್ತು, ಸಣ್ಣಪುಟ್ಟ ತೊಡಕುಗಳನ್ನು ನಿವಾರಿಸಿ ಇಂದು ಅಧಿಕೃತವಾಗಿ ಉದ್ಘಾಟಿಸಲಾಗಿದೆ ಎಂದರು.

ಕ್ಷೇತ್ರದ ಪ್ರತಿ ಹಳ್ಳಿಯಲ್ಲಿ ಸಿಮೆಂಟ್ ರಸ್ತೆಗಳನ್ನು ನಿರ್ಮಾಣ ಮಾಡಿ ಧೂಳುಮುಕ್ತ ಕ್ಷೇತ್ರವನ್ನಾಗಿಸುವ ಗುರಿ ಹೊಂದಲಾಗಿದೆ. ಈಗಾಗಲೇ 127 ಶಾಲಾ ಕೊಠಡಿಗಳು ಮಂಜೂರಾಗಿದ್ದು, ಅಂಗನವಾಡಿ ಕಟ್ಟಡಗಳನ್ನು ಕೂಡ ಮಂಜೂರು ಮಾಡಿಸಲಾಗುವುದು. ಹೊನ್ನಾಳಿಯಲ್ಲಿ ಆಡಳಿತಸೌಧ ಕಟ್ಟಡ ನಿರ್ಮಿಸುವುದು, ನ್ಯಾಮತಿಯಲ್ಲಿ ಟ್ರೀ ಪಾರ್ಕ್ ನಿರ್ಮಾಣ, ನ್ಯಾಮತಿ ಹೊನ್ನಾಳಿ ಚತುಷ್ಪಥ ರಸ್ತೆ ನಿರ್ಮಾಣ, ಹೊನ್ನಾಳಿ ನ್ಯಾಮತಿ ಯುಜಿಡಿ ಹಾಗೂ ಕುಡಿಯುವ ನೀರು ಕಾಮಗಾರಿ ಸೇರಿದಂತೆ ಅನೇಕ ಯೋಜನೆಗಳಿಗೆ ಅನುದಾನ ನೀಡುವಂತೆ ಈಗಾಗಲೇ ಮನವಿ ನೀಡಲಾಗಿದೆ. ಇಂದಿನ ಕಾರ್ಯಕ್ರಮದಲ್ಲಿ 5000 ಜನರಿಗೆ ವಿವಿಧ ಯೋಜನೆಗಳ ಪ್ರಮಾಣಪತ್ರ ಸೌಲಭ್ಯಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ರೈತರು ಹಾಗೂ ಜನಸಾಮಾನ್ಯರು ಸಣ್ಣಪುಟ್ಟ ಕೆಲಸಗಳಿಗಾಗಿ ನೂರಾರು ರೂಪಾಯಿ ಖರ್ಚು ಮಾಡಿಕೊಂಡು ದಾವಣಗೆರೆಗೆ ಬರಬೇಕಾಗಿತ್ತು ಅದನ್ನು ತಪ್ಪಿಸುವ ಉದ್ದೇಶದಿಂದ ಹೊನ್ನಾಳಿ, ನ್ಯಾಮತಿ, ಚನ್ನಗಿರಿ ತಾಲ್ಲೂಕುಗಳನ್ನು ಒಳಗೊಂಡಂತೆ ಉಪವಿಭಾಗಾಧಿಕಾರಿ ಕಚೇರಿ ಉದ್ಘಾಟನೆ ಮಾಡಲಾಗಿದೆ. ಜನರಿಗೆ ಪೂರಕವಾಗಿ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶವನ್ನು ಜಿಲ್ಲಾಡಳಿತ ಹೊಂದಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್ ಹಾಗೂ ಡಿ.ಎಸ್ ಅರುಣ್ ಮಾತನಾಡಿದರು. ಕಾರ್ಯಕ್ರಮದಲ್ಲಿ 1576 ವಿವಿಧ ಫಲಾನುಭವಿಗಳಿಗೆ ಮಾಶಾಸನ ಮಂಜೂರಾತಿ ಪತ್ರಗಳನ್ನು ನೀಡಲಾಯಿತು. ಹಾಗೂ ವಿವಿಧ ಯೋಜನೆಯ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ನೂತನ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಸ್ವಾಗತ ಮಾತುಗಳನ್ನಾಡಿದರು.

ವೇದಿಕೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ದಾವಣಗೆರೆ ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ರೇಷ್ಮಾ ಕೌಸರ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ನಿರ್ದೇಶಕ ಪಿ.ರಮೇಶ್, ಹೊನ್ನಾಳಿ ಡಿವೈಎಸ್ಪಿ ಸಂತೋಷ, ಪುರಸಭೆ ಅಧ್ಯಕ್ಷ ಬಾಬು ಹಾಗೂ ಇತರರು ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top