Connect with us

Dvgsuddi Kannada | online news portal | Kannada news online

ದಾವಣಗೆರೆ: ಡಾ.ರಾಜ್‌ಕುಮಾರ್‌ ಕನ್ನಡಪರ ಹೋರಾಟಕ್ಕೆ ಸ್ಫೂರ್ತಿ; ಬಿ.ವಾಮದೇವಪ್ಪ

ದಾವಣಗೆರೆ

ದಾವಣಗೆರೆ: ಡಾ.ರಾಜ್‌ಕುಮಾರ್‌ ಕನ್ನಡಪರ ಹೋರಾಟಕ್ಕೆ ಸ್ಫೂರ್ತಿ; ಬಿ.ವಾಮದೇವಪ್ಪ

ದಾವಣಗೆರೆ: ವರನಟ, ಕರ್ನಾಟಕ ರತ್ನ ಡಾ.ರಾಜ್‌ಕುಮಾರ್ ಅವರ ಗೋಕಾಕ್ ಚಳವಳಿಯ ಹೋರಾಟವು ಎಲ್ಲ ಕನ್ನಡಪರ ಹೋರಾಟಗಳಿಗೆ ಸದಾ ಸ್ಫೂರ್ತಿಯಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ವಾಮದೇವಪ್ಪ ತಿಳಿಸಿದರು‌.

ನಗರದ ಕುವೆಂಪು ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಕನ್ನಡ ಜಾಗೃತಿ ಸಮಿತಿಯ ವತಿಯಿಂದ ಡಾ.ರಾಜ್‌ಕುಮಾರ್ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ “ಕನ್ನಡ ಅಭಿಮಾನದ ದಿನ” ಹಾಗೂ “ಕನ್ನಡ ಶಾಲೆ ಉಳಿಸಿ – ಕನ್ನಡ ಬೆಳೆಸಿ” ವಿಶೇಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡುತ್ತಿದ್ದರು.

ಡಾ.ರಾಜ್‌ಕುಮಾರ್ ಅವರ 84ನೇ ಜನ್ಮದಿನವನ್ನು ಕನ್ನಡ ಅಭಿಮಾನದ ದಿನವನ್ನಾಗಿ ಆಚರಿಸುತ್ತಿದ್ದೇವೆ. ಹಾಗೆಯೇ “ಕನ್ನಡ ಶಾಲೆ ಉಳಿಸಿ – ಕನ್ನಡ ಬೆಳೆಸಿ” ಎನ್ನುವ ವಿಶೇಷವಾದ ಅಭಿಯಾನದೊಂದಿಗೆ ಡಾ.ರಾಜ್ ಅವರ ಜನ್ಮದಿನವನ್ನು ವಿಶೇಷವಾಗಿ ಆಚರಿಸಬೇಕು ಎನ್ನುವುದು ಕನ್ನಡ ಸಾಹಿತ್ಯ ಪರಿಷತ್ತಿನ ಒತ್ತಾಸೆಯಾಗಿದೆ. ಇಂದು ಕನ್ನಡ ಶಾಲೆಗಳು ಉಳಿದರೆ ಮಾತ್ರ ಕನ್ನಡ ಉಳಿಯುತ್ತದೆ‌. ಕನ್ನಡ ಉಳಿದರೆ ಕನ್ನಡಿಗ ಉಳಿಯುತ್ತಾನೆ. ಹಾಗೆಯೇ ಕನ್ನಡಿಗ ಉಳಿದು ಬೆಳೆದರೆ ಮಾತ್ರ ಕರ್ನಾಟಕ ಬೆಳಗುತ್ತದೆ ಎನ್ನುವ ಪರಿಕಲ್ಪನೆಯೊಂದಿಗೆ ಕನ್ನಡ-ಕನ್ನಡಿಗ-ಕರ್ನಾಟಕ ವನ್ನು ವೈಭವೀಕರಿಸುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೆಲಸ ಮಾಡಲಿದೆ ಎಂದು ಬಿ.ವಾಮದೇವಪ್ಪ ನುಡಿದರು.

ಗೋಕಾಕ್ ಚಳವಳಿಯ ರೂವಾರಿ ಡಾ.ರಾಜ್‌ಕುಮಾರ್:ಕನ್ನಡ ಭಾಷೆಯನ್ನು ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳುವುದು, ಕನ್ನಡ ಭಾಷೆಯ ಉನ್ನತಿಗೆ ಮೂಲಭೂತ ಸೌಲಭ್ಯಗಳನ್ನು ನೀಡುವುದು ಹಾಗೂ ಕನ್ನಡ ಭಾಷೆಯ ಅಭಿವೃದ್ಧಿಗೆ ಪೂರಕವಾದ ಇನ್ನಿತರ ಅಂಶಗಳನ್ನು ಒಳಗೊಂಡ ಗೋಕಾಕ್ ವರದಿಯನ್ನು ಸರಕಾರ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಿ ನಡೆದ ಗೋಕಾಕ್ ಚಳುವಳಿಯ ಯಶಸ್ಸಿಗೆ ಡಾ.ರಾಜ್‌ಕುಮಾರ್ ಅವರ ಹೋರಾಟವೇ ಕಾರಣ ಎಂದು ಅಖಿಲ ಕರ್ನಾಟಕ ಡಾ.ರಾಜ್‌ಕುಮಾರ್ ಅಭಿಮಾನಿಗಳ ಸಂಘದ ರಾಜ್ಯ ಸಂಚಾಲಕ ಕೆ.ಜಿ.ಶಿವಕುಮಾರ್ ಅವರು ಅಭಿಪ್ರಾಯಪಟ್ಟರು.

ಡಾ.ರಾಜ್ ಅವರು ಕನ್ನಡಿಗರ ಹೃದಯದಲ್ಲಿ ಅಜರಾಮರವಾಗಿ ಉಳಿದಿದ್ದಾರೆ. ವಜ್ರೇಶ್ವರಿ ಕಂಬೈನ್ಸ್ ಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಅನೇಕ ಚಿತ್ರಗಳನ್ನು ನಿರ್ಮಿಸಿ ಲಕ್ಷಾಂತರ ಕಲಾವಿದರಿಗೆ, ತಂತ್ರಜ್ಞರಿಗೆ, ಸಹಾಯಕರಿಗೆ ಆಶ್ರಯ‌ ನೀಡಿದ ಕೀರ್ತಿ ಡಾ.ರಾಜ್ ಅವರಿಗೆ ಸಲ್ಲುತ್ತದೆ ಎಂದು ಅವರ ಒಡನಾಡಿಗಳಾಗಿದ್ದ ಕೆ.ಜಿ.ಶಿವಕುಮಾರ್ ಅವರು ಹೆಮ್ಮೆ ವ್ಯಕ್ತಪಡಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಅವರು ಮಾತನಾಡಿ ಡಾ.ರಾಜ್‌ಕುಮಾರ್ ಅವರ ಸಮಕಾಲೀನರು, ಒಡನಾಡಿಗಳೇ ಪುಣ್ಯವಂತರು. ಅಂತಥ ಮಹಾನ್ ಕಲಾವಿದ ಕನ್ನಡ ಭಾಷೆಯ ಚಲನಚಿತ್ರಗಳನ್ನು ಹೊರತುಪಡಿಸಿ ಬೇರಾವುದೇ ಭಾಷೆಯ ಚಲನಚಿತ್ರಗಳಲ್ಲಿ ನಟಿಸದೇ ಇದ್ದರೂ ದೇಶದಾದ್ಯಂತ ಪ್ರಖ್ಯಾತಿಯನ್ನು ಹೊಂದಿರುವುದು ಅವರ ಕಲಾ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಸಹಾಯಕ ಪ್ರಾಧ್ಯಾಪಕ ಡಾ.ಎ.ಎಂ.ರಾಜಶೇಖರಯ್ಯ ” ಕನ್ನಡ ಶಾಲೆ ಉಳಿಸಿ-ಕನ್ನಡ ಬೆಳೆಸಿ” ಎನ್ನುವ ವಿಷಯದ ಕುರಿತು ಮಾತನಾಡಿ ಕನ್ನಡ ಶಾಲೆಗಳ ಉಳಿವಿಗಾಗಿ ಇನ್ನೊಮ್ಮೆ ಗೋಕಾಕ್ ಚಳುವಳಿ ಮಾದರಿಯಲ್ಲಿ ಇನ್ನೊಂದು ಹೋರಾಟದ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಆಂಗ್ಲ ಮಾಧ್ಯಮ ಶಾಲೆಗಳ ಮಲಿನದಿಂದ ಕನ್ನಡ ಶಾಲೆಗಳ ವಿಲೀನವಾಗುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಯನ್ನು ಮುಂದಿಟ್ಟುಕೊಂಡು ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ‌. ಇದು ಕನ್ನಡಿಗರ ಪಾಲಿಗೆ ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ. ಯಾರು ಕನ್ನಡ ಶಾಲೆಗಳನ್ನು ಉಳಿಸಬೇಕು, ಹೇಗೆ ಉಳಿಸಬೇಕು ಎನ್ನುವ ಪ್ರಶ್ನೆ ನಮ್ಮ ಮುಂದಿದೆ ಎಂದರು.

ಗೋಕಾಕ್ ಚಳವಳಿಯಲ್ಲಿ ಹೇಗೆ ಕನ್ನಡಿಗರು ಸಿಡಿದೆದ್ದು ಹೋರಾಟ ಮಾಡಿದರೋ ಅದೇ ರೀತಿಯಲ್ಲಿ ಕನ್ನಡಿಗರು, ಶಿಕ್ಷಕ ಸಮುದಾಯ, ಸರಕಾರ ಇವರೆಲ್ಲರ ಜಂಟಿ ಸಹಭಾಗಿತ್ವದಲ್ಲಿ ಕನ್ನಡ ಶಾಲೆಗಳನ್ನು ಉಳಿಸಿ ಕನ್ನಡವನ್ನು ಬೆಳೆಸುವಲ್ಲಿ ಕಾರ್ಯತತ್ಪರರಾಗಬೇಕು. ಆಂಗ್ಲ ಮಾಧ್ಯಮ ಶಾಲೆಗಳ ಸೆಳೆತ ಜನರಲ್ಲಿ ಕಡಿಮೆಯಾಗಬೇಕಾದರೆ ಕನ್ನಡ ಶಾಲೆಗಳ ಗುಣಮಟ್ಟ, ವಿಶ್ವಾಸಾರ್ಹತೆ ವೃದ್ಧಿಯಾಗಬೇಕು. ಒಣ ಪ್ರತಿಷ್ಠೆಗಾಗಿ ಪಾಲಕರು ಮಕ್ಕಳನ್ನು ಆಂಗ್ಲ ಮಾಧ್ಯಮದ ಖಾಸಗಿ ಶಾಲೆಗಳಿಗೆ ಕಳುಹಿಸುವ ಹುಚ್ಚುತನ ಕಡಿಮೆಯಾಗಬೇಕು ಎಂದು ಡಾ.ಎ.ಎಂ.ರಾಜಶೇಖರಯ್ಯ ಅಭಿಪ್ರಾಯಪಟ್ಟರು.

ಡಾ.ರಾಜ್‌ಕುಮಾರ್ ಅವರ ಕುರಿತಾಗಿ ಉಪನ್ಯಾಸ ನೀಡಿದ ಹಿರಿಯ ಕನ್ನಡಪರ ಹೋರಾಟಗಾರ ಡಾ.ರಾಜ್‌ಕುಮಾರ್ ಬಂಕಾಪುರದ ಚನ್ನಬಸಪ್ಪ ಮಾತನಾಡಿ ವಿನಯತೆ, ಸರಳತೆ, ಮುಗ್ಧತೆ, ಪ್ರತಿಭೆ, ಕಟ್ಟುಮಸ್ತಾದ ಶರೀರ, ಸೊಗಸಾದ ಶಾರೀರ, ಗ್ರಾಮೀಣ ಸೊಗಡು, ಅತ್ಯಂತ ಸ್ಪಷ್ಟವಾದ ಕನ್ನಡ ನುಡಿಯ ಉಚ್ಚಾರಣೆ ಅವರನ್ನು ಶ್ರೇಷ್ಠ ಕಲಾವಿದನ್ನಾಗಿ ಮಾಡಿತು. ದಾವಣಗೆರೆ ಹಾಗೂ ಹುಬ್ಬಳ್ಳಿಯ ಸಿದ್ಧರೂಡಾ ಮಠದೊಂದಿಗೆ ಕೊನೆವರೆಗೂ ಅವಿನಾಭಾವ ಸಂಬಂದವಿಟ್ಟುಕೊಂಡಿದ್ದರು. ನಾಟಕ ತಂಡದೊಂದಿಗೆ ದಾವಣಗೆರೆಗೆ ಬಂದಾಗಲೆಲ್ಲ ಡಾ.ರಾಜ್‌ಕುಮಾರ್ ಅವರು ಸರಕಾರಿ ಪ್ರೌಢಶಾಲಾ ಮೈದಾನದ ಮರದ ಕೆಳಗೆ ಮಲಗುತ್ತಿದ್ದ ದಿನಗಳನ್ನು ಹಾಗೂ ಸಂಪತ್ತಿಗೆ ಸವಾಲ್ ಸಿನೆಮಾದ ಜನಪ್ರಿಯತೆಯ ಹಿನ್ನಲೆಯಲ್ಲಿ ನಡೆದ ಅಭೂತಪೂರ್ವ ಮೆರವಣಿಗೆಯನ್ನು ಬಂಕಾಪುರದ ಚನ್ನಬಸಪ್ಪ ಅವರು ಭಾವನಾತ್ಮಕವಾಗಿ ಸ್ಮರಿಸಿಕೊಂಡರು.

ಕಾರ್ಯಕ್ರಮದಲ್ಲಿ ಡಾ.ರಾಜ್‌ಕುಮಾರ್ ಹಾಡಿರುವ ನಗುತಾ ನಗುತಾ ಬಾಳೂ ನೀನು ನೂರು ವರುಷ, ಬಾನಿಗೊಂದು ಎಲ್ಲೆ ಎಲ್ಲಿದೆ ನಿನ್ನಾಸೆಗೆಲ್ಲಿ ಕೊನೆ ಇದೆ, ನಿನ್ನ ಕಂಗಳ ಬಿಸಿಯ ಹನಿಗಳ, ಕಣ್ಣೀರ ಧಾರೆ ಇದೇಕೆ ಇದೇಕೆ ಮುಂತಾದ ಕನ್ನಡ ಗೀತೆಗಳನ್ನು ಜಾನಪದ ಅಕಾಡೆಮಿ ಸದಸ್ಯೆ ಸಿ.ಕೆ.ರುದ್ರಾಕ್ಷಿ ಬಾಯಿ, ಪ್ರಹ್ಲಾದ್ ಎಸ್‌. ಭಟ್, ಕತ್ತಿಗೆ ಪರಮೇಶ್ವರಪ್ಪ, ಹೇಮಂತ್, ರುಕ್ಮಾ ಬಾಯಿ ಪ್ರಸ್ತುತಪಡಿಸಿ ಡಾ.ರಾಜ್ ಅವರಿಗೆ ಗೀತ ನಮನಗಳನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಡಾ‌.ಎಂ.ಜಿ.ಈಶ್ವರಪ್ಪ, ಕಸಾಪ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯೆ ಸಿ.ಕೆ.ರುದ್ರಾಕ್ಷಿ ಬಾಯಿ ಪುಟ್ಟ ನಾಯ್ಕ್, ಪತ್ರಕರ್ತ ಹಳೇಬೀಡು ರಾಮ್‌ಪ್ರಸಾದ್, ರಂಗಕರ್ಮಿ ಬಾ.ಮ.ಬಸವರಾಜಯ್ಯ, ಕಲಾವಿದ ಎ.ಮಹಾಲಿಂಗಪ್ಪ, ರಂಗಕರ್ಮಿ ಎಸ್.ಎಸ್.ಸಿದ್ಧರಾಜು, ಎಸ್.ಎಂ.ಮಲ್ಲಮ್ಮ, ವೀಣಾ ಕೃಷ್ಣಮೂರ್ತಿ, ದೇವಿಕಾ ಸುನಿಲ್, ಜೆ.ಓ.ಮಹೇಶ್ವರಪ್ಪ, ಮತ್ತಿತರರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಸ್ವಾಗತವನ್ನು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ ಹಾಗೂ ನಿರೂಪಣೆಯನ್ನು ಗೌರವ ಕಾರ್ಯದರ್ಶಿ ರೇವಣಸಿದ್ದಪ್ಪ ಅಂಗಡಿಯವರು ನೆರವೇರಿಸದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top