Connect with us

Dvg Suddi-Kannada News

ಡಾ.ಬಿ ಆರ್ ಅಂಬೇಡ್ಕರ್ ರವರ ಸಂವೈಧಾನಿಕ ಚಿಂತನೆಯ ವಿಶ್ಲೇಷಣೆ

ಅಂಕಣ

ಡಾ.ಬಿ ಆರ್ ಅಂಬೇಡ್ಕರ್ ರವರ ಸಂವೈಧಾನಿಕ ಚಿಂತನೆಯ ವಿಶ್ಲೇಷಣೆ

  • ಅಶೋಕ್ ಕುಮಾರ್, ಸಹ ಪ್ರಾಧ್ಯಾಪಕರು, ರಾಜ್ಯ ಶಾಸ್ತ್ರ ವಿಭಾಗ, ಸರ್ಕಾರಿ ಕಲಾ ಕಾಲೇಜು, ಬೆಂಗಳೂರು.

ಡಾ.ಬಿ ಆರ್ ಅಂಬೇಡ್ಕರವರು ವ್ಯಕ್ತಿ ಮಾತ್ರವಲ್ಲ.ವ್ಯಕ್ತಿತ್ವವಾಗಿ ಗುರುತಿಸಲ್ಪಡುತ್ತಾರೆ .ಶ್ರೇಣೀಕೃತವಾದ ಅಸಮಾನತೆಯನ್ನು ಪೋಷಿಸುವ, ತಾರತಮ್ಯಗಳನ್ನು ಮಾನ್ಯ ಮಾಡುವ ಜಡ ಭಾರತದ ಇತಿಹಾಸವನ್ನು ಬದಲಿಸಿ, ಸಮತಾ ಸಮಾಜ ನಿರ್ಮಾಣ ಮಾಡಲು   ಪಣತೊಟ್ಟ ಮಹಾ ಮಾನವತಾವಾದಿಯಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗಿದ್ದಾರೆ.

ಬುದ್ಧ, ಬಸವ ಮತ್ತು ಜ್ಯೋತಿಬಾಪುಲೆ ಅವರಂತಹ ಅಗ್ರಪಂಕ್ತಿಯ ಸಮಾಜ ಸುಧಾರಕ ಮತ್ತು ಮಾನವ ಹಕ್ಕುಗಳ ರಕ್ಷಕ ಅಂಬೇಡ್ಕರ್. ಅವರ ಬದುಕು ಬರಹ ಮತ್ತು ಭಾಷಣಗಳು ಬದ್ಧತೆಯಿಂದ ಕೂಡಿವೆ. ಅಂಬೇಡ್ಕರ್ ಎಂಬ ಶಕ್ತಿಯು ಭರತ ಖಂಡದ ದೌರ್ಜನ್ಯ ದಬ್ಬಾಳಿಕೆಗಳ ಆಗರವಾದಸಮಾಜದ ಕೊಳೆಯನ್ನು ತೊಳೆಯುವ ಸಾಧನವಾಗಿತ್ತು.

ಅಂಬೇಡ್ಕರವರು ತಮ್ಮ ಬಾಲ್ಯದ ಕಹಿಅನುಭವಗಳು ಮತ್ತು ಬದುಕಿನುದ್ದಕ್ಕೂ ಎದುರಿಸಿದ ಅವಮಾನಗಳಿಂದ ವಿಚಲಿತರಾಗಲಿಲ್ಲ .ಅವರಿಗೆ ಆಗುತ್ತಿದ್ದ ಅವಮಾನಗಳಿಂದ ದೃತಿಗೆಡದೆ ಎದುರಾಗುತ್ತಿದ್ದ ಸಮಸ್ಯೆಗಳಿಗೆ ಛಲದಿಂದ ಪರಿಹಾರ

ಕಂಡುಕೊಳ್ಳುವಲ್ಲಿ ನಿಷ್ಣಾತರಾಗಿದ್ದರು. ಅಂಬೇಡ್ಕರ್ ಅವರ ಬದುಕು ಆಂದೋಲನವೇ ಆಗಿತ್ತು. ಮಡಿವಂತ ಅಂಧಾನುಕರಣೆಯ ಸಾಮಾಜಿಕ ಅನಿಷ್ಟಗಳಿಗೆ ಶಾಶ್ವತವಾದ ಪರಿಹಾರವನ್ನು ನೈತಿಕ ಮತ್ತು ಸಂವಿಧಾನಿಕ ಮಾರ್ಗದ ಮೂಲಕ ಕಂಡುಹಿಡಿಯಲು ಹಾತೊರೆಯುತ್ತಿದ್ದ ದಿವ್ಯ ಚೇತನವೇ ಅಂಬೇಡ್ಕರ್.

ಅಂಬೇಡ್ಕರ್ ಅವರಿಗೆ ಜೀವನ ಪ್ರೀತಿ ತುಂಬಾ ಮುಖ್ಯ ಆಗಿತ್ತು .ಜೀವ ಮತ್ತು ಜೀವನ ಎರಡು ಅಮೂಲ್ಯ ಎಂಬುದು ಅವರ ಅಭಿಲಾಷೆ ,ಆದ್ದರಿಂದ ಪ್ರತಿಯೊಬ್ಬನಿಗೂ ಜೀವಿಸಲು ಬೇಕಾದ ಅವಶ್ಯಕತೆಗಳನ್ನು ಸರ್ಕಾರ ಸಮಾನವಾಗಿ ಹಂಚಿಕೆಮಾಡಬೇಕೆಂದು ಪ್ರತಿಪಾದಿಸುತ್ತಿದ್ದರು.ರಾಜ್ಯ ಮತ್ತು ರಾಜ್ಯಾಂಗದ ಇಚ್ಛೆಗಳು ಸಮಾಜದ ಕಟ್ಟಕಡೆಯ ಮನುಷ್ಯನ ಕಲ್ಯಾಣಕ್ಕೆ ಒತ್ತು ನೀಡುವುದಾಗಿರಬೇಕೆಂದು ಹೇಳುತ್ತಿದ್ದರು.ದಮನಿತ ವರ್ಗಗಳ ಬದುಕನ್ನು ಹಸನ ಗೊಳಿಸುವುದೇ ಅವರಿಗೆ ಶುದ್ಧವಾದ ಕಾಯಕವಾಯಿತು, ಅವರ ಮನ ನಿರಂತರವಾಗಿ ಮಿಡಿಯುತ್ತಿದ್ದುದು ನಿರುದ್ಯೋಗಿಗಳು ,ನಿರ್ವಸತಿಗರು, ದುರ್ಬಲ ವರ್ಗಗಳ ಏಳಿಗೆಗಾಗಿ. ದಮನಿತ ಸಮುದಾಯಗಳ ನೆರವಿಗೆ ಬಂದ ದೋದಗಿದ ಯಾವುದೇ ಅವಕಾಶಗಳನ್ನು ಅವರು ಕೈಚೆಲ್ಲಿ ಕೂರಲಿಲ್ಲ.

ಅವರು ಅಧಿಕಾರ ರಾಜಕಾರಣವನ್ನು ಪ್ರಗತಿಯ ದೃಷ್ಟಿಕೋನದಿಂದ ಒಪ್ಪಿಕೊಳ್ಳುತ್ತಿದ್ದರು. ಅವರು ದಮನಿತರ ಪ್ರಗತಿಗೆ ಅಡಚಣೆಯಾಗಿದ್ದ ಬ್ರಾಹ್ಮಣಶಾಹಿಯ ಬಗ್ಗೆ ಕಟ್ಟೆಚ್ಚರವನ್ನು ವಹಿಸಿದ್ದರು. ಆದ್ದರಿಂದಲೇ ಸವರ್ಣಿಯರಿಂದ ಕೂಡಿದ ಗಾಂಧಿ ಪ್ರಭಾವಿತ ಕಾಂಗ್ರೆಸ್ ಅನ್ನು ಅವರು ನಿರಂತರವಾಗಿ ಅನುಮಾನದಿಂದಲೇ ನೋಡುತ್ತಿದ್ದರು.

ಡಾ.‌ ಬಿ ಆರ್ ಅಂಬೇಡ್ಕರ್… ರಹಿತ ಭಾರತ  !

ಡಾ ಬಿ ಆರ್ ಅಂಬೇಡ್ಕರ್ ಎಂಬುದು ಸಮಯೋಚಿತವಾದ ಸಮಕಾಲೀನ ಪ್ರಜ್ಞೆ.ಭಾರತದಲ್ಲಿ ಪೂರ್ವಾಗ್ರಹಪೀಡಿತ ವಾದ ಧೋರಣೆಗಳಿಂದ ಅವಜ್ಞೆಗೆ ಒಳಗಾದ ತಳಮಟ್ಟದ ಸಮುದಾಯಗಳ ಬದುಕನ್ನು ಹಸನುಗೊಳಿಸುವಲ್ಲಿ ನಿಸ್ವಾರ್ಥ ಪಾತ್ರಧಾರಿಯಾಗಿದ್ದರು. ಕಳಂಕ ರಹಿತ ರಾಜಕಾರಣ ಮತ್ತು ಪ್ರತಿಫಲಾಪೇಕ್ಷೆ ರಹಿತ ಸೇವೆಗಳು ಇವರ ಜೀವನದ ಹೆಜ್ಜೆ ಗುರುತುಗಳು

ಡಾ ಬಿ ಆರ್ ಅಂಬೇಡ್ಕರ್ ಎಂಬ ದಿವ್ಯ ಚೇತನ ಭಾರತದಲ್ಲಿ ಜನಿಸದೆ ಇದ್ದರೆ ಭಾರತದ ಸ್ಥಿತಿಗತಿ ಹೇಗಿರುತ್ತಿತ್ತು ?  ಎಂತಹ ಭಾರತ ನಿರ್ಮಾಣವಾಗುತ್ತಿತ್ತು ? ಎಂತಹ ಸಂವಿಧಾನ ರಚನೆಯಯಾಗುತ್ತಿತ್ತು  ? ಇಂತಹ ಕಾಡುವ ಪ್ರಶ್ನೆಗಳಿಗೆ ಉತ್ತರವೆಂದರೆ ಭಾರತ ನಾಲ್ಕು ವರ್ಣಗಳ ಭಾರತವೇ ಆಗಿರುತ್ತಿತ್ತು .ಶೋಷಕ ಸಮಾಜವೇ ಆಗಿರುತ್ತಿತ್ತು. ಬಂಡವಾಳಶಾಹಿಗಳ ಜಮೀನ್ದಾರರ ಭಾರತವೇ ಆಗಿರುತ್ತಿತ್ತು.

ಭಾರತದಲ್ಲಿ ಅಂಬೇಡ್ಕರ್ ಎಂಬ ಬುದ್ಧ ಹುಟ್ಟಿದ ದೆಸೆಯಿಂದ ಕೋಟ್ಯಂತರ ಜನರ ಬವಣೆ ನೀಗು ವಂತಾಯಿತು. ಅಂಬೇಡ್ಕರ್ ಎಂಬ ಬುದ್ಧನೇ ದಮನಿತರ ಬಾಳಿಗೆ ಬೆಳಕಾದ ಭಾರತೀಯರಿಗೆ ಆತ್ಮವಿಶ್ವಾಸದ ಛಲದ ಪಾಠವನ್ನು ಬೋಧಿಸಿದ ಮೊದಲ ಗುರುವಾದ ಆದ್ದರಿಂದಲೇ ಡಾ ಬಿ ಆರ್ ಅಂಬೇಡ್ಕರ್ ಸಾಮಾಜಿಕ ನ್ಯಾಯ ಸಾಮಾಜಿಕ ಮೌಲ್ಯ ಸ್ಥಾಪನೆಯ ಅಸ್ತಿ ಭಾರವೆಂದು ಭಾರತದಲ್ಲಿ ಪರಿಗಣಿಸಲಾಗುತ್ತಿದೆ.

ಸಾರ್ವಕಾಲಿಕ ಪ್ರತಿಭೆ

ಡಾ ಬಿ ಆರ್ ಅಂಬೇಡ್ಕರ್ ಎಂಬ ಪ್ರತಿಭೆ ಬುದ್ಧಿಜೀವಿ ವರ್ಗದಲ್ಲಿ ಆತ್ಮವಂಚನೆಯಿಲ್ಲದೆ ಚರ್ಚೆಯಾಗ ದಿರುವುದು ವಿಷಾದನೀಯ ಸಂಗತಿ. ಯಾವುದೇ ಒಬ್ಬ ವ್ಯಕ್ತಿಯ ಸಾಮರ್ಥ್ಯವನ್ನು ಮತ್ತು ಬೌದ್ಧಿಕತೆಯನ್ನು ಜನುಮದ ಹಿನ್ನೆಲೆಯಿಂದ ನೋಡುವ ಜಾಯಮಾನ ಅಸಹನೀಯವಾದ ಆಲೋಚನಾ ಕ್ರಮ. ಅಂಬೇಡ್ಕರ್ ಅವರ ಚಿಂತನೆಗಳು ಜಾತಿ ಧರ್ಮ ಪ್ರದೇಶ ಲಿಂಗಗಳೆಂಬ ಮಿತಿ ಮೀರಿದ ಮಾನುಷ ಪ್ರಜ್ಞೆ  ಡಾ ಬಿಆರ್ ಅಂಬೇಡ್ಕರವರು ತಮ್ಮ ಪಾಂಡಿತ್ಯ ಮತ್ತು ಪ್ರತಿಭೆಯನ್ನು ಸಾರ್ವಜನಿಕ ಬದುಕನ್ನು ಹಸನುಗೊಳಿಸಲು ಬಳಸಿದರು.

ಅವರು ತಮ್ಮಲ್ಲಿನ ಸಂಘಟನಾ ಸಾಮರ್ಥ್ಯ ಬುದ್ಧಿವಂತಿಕೆ ತಿಳುವಳಿಕೆ ದೂರದರ್ಶಿತ್ವ ಗಳನ್ನು ಅಧಿಕಾರ ಲಾಲಸೆಗಾಗಿ ಅಥವಾ ಸಂಪತ್ತುಗಳಿಕೆಗೆ ಬಳಸಿಕೊಳ್ಳಲಿಲ್ಲ .ಅವರು ಬಯಸಿದ್ದರೆ ದಲಿತ ಪ್ರತ್ಯೇಕ ಭಾರತದ ಶಾಶ್ವತ ಪ್ರಧಾನಮಂತ್ರಿಯಾಗಿ ಪ್ರತಿಷ್ಠಾಪನೆ ಆಗಬಹುದಿತ್ತು. ಅವರಲ್ಲಿನ ರಾಜ್ಯಶಾಸ್ತ್ರದ ನೈಪುಣ್ಯತೆಯು ಅವರ ಅಧಿಕಾರದ ರಾಜಕಾರಣಕ್ಕೆ ಒತ್ತಾಸೆ ಯಾಗಲಿಲ್ಲ .ಅವರ ವಾಣಿಜ್ಯಶಾಸ್ತ್ರದ ಜ್ಞಾನ ಅವರನ್ನು ವಾಣಿಜ್ಯೋದ್ಯಮಕ್ಕೆ ಪ್ರೇರೇಪಿಸಲಿಲ್ಲ.

ಅವರು ಸಮಾಜಶಾಸ್ತ್ರಜ್ಞ ರಾಗಿದ್ದರು ಆದರೆ ಅವರ ಚಿಂತನೆ ಸಮಾಜಶಾಸ್ತ್ರದ ಸಿದ್ಧಾಂತಗಳ ಸೃಷ್ಟಿಗೆ ಮಾತ್ರ ಸೀಮಿತವಾಗಲಿಲ್ಲ, ಬದಲಾಗಿ ಸಮಾಜದ ಪ್ರಗತಿಯ ಪ್ರತಿಬಿಂಬವಾದರು. ಅರ್ಥಶಾಸ್ತ್ರಜ್ಞರಾಗಿ ಕಡೆಗಣಿಸಲ್ಪಟ್ಟ ಸಮುದಾಯದ ಸಬಲೀಕರಣಕ್ಕೆ ಪೂರಕವಾದ ನೀತಿಗಳನ್ನು ರೂಪಿಸಿದರು. ಅರ್ಥಶಾಸ್ತ್ರಜ್ಞರಾಗಿದ್ದರು ಸಹ ತಮ್ಮ ಬದುಕಿನ ಅಂತ್ಯದ ತನಕ ಆರ್ಥಿಕ ಮುಗ್ಗಟ್ಟಿನಿಂದಲೇ ಬದುಕಿದರು ಅವರು ನಿಧನರಾದಾಗ ಅವರ ತಿಜೋರಿಯಲ್ಲಿ ಇದ್ದಿದ್ದು ಕೇವಲ 300 ರೂಪಾಯಿಗಳು ಮಾತ್ರ

ಸಂವೈಧಾನಿಕ ಮತ್ತು ರಾಷ್ಟ್ರೀಯ ಪ್ರಜ್ಞೆ

ಡಾ ಬಿ ಆರ್ ಅಂಬೇಡ್ಕರ್ ಅವರು ಬ್ರಿಟಿಷರ ದಾಸ್ಯದಲ್ಲಿ ದ್ಧ ಭಾರತವು ರಾಜಕೀಯವಾಗಿ ವಿಮೋಚನೆ ಹೊಂದುವುದರ ಜೊತೆಗೆ ಸಾಮಾಜಿಕವಾಗಿಯೂ ವಿಮೋಚನೆಯಾಗಬೇಕೆಂದು ಒತ್ತಾಯಿಸುತ್ತಿದ್ದರು ಮಹಾತ್ಮ ಗಾಂಧೀಜಿ ಮತ್ತು ಡಾ ಬಿ ಆರ್ ಅಂಬೇಡ್ಕರ್ ರವರ ಹೋರಾಟದ ಹಾದಿಗಳ ನಡುವೆಯೂ ಭಾರತ ಬ್ರಿಟಿಷರಿಂದ ರಾಜಕೀಯವಾಗಿ ವಿಮೋಚನೆಯಾಯಿತು. ರಾಜಕೀಯ ಸ್ವಾತಂತ್ರ್ಯ ಭಾರತದ ಬಹುಸಂಖ್ಯಾತ ಮೇಲ್ವರ್ಗ ಗಳಿಂದ ಕೂಡಿದ ಕಾಂಗ್ರೆಸ್ ಕೂಟಕ್ಕೆ ಹಸ್ತಾಂತರಿಸಲ್ಪಟ್ಟಿತು.

ಭಾರತಕ್ಕೆ ಪರಮಾಧಿಕಾರವೇನೋ ಪ್ರಾಪ್ತವಾಯಿತು. ನಮ್ಮದೇ ಆದ ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗಗಳ ರಚನೆ ಅಧಿಕಾರ ಕಾರ್ಯಗಳು,ಪ್ರಜೆಗಳ ಹಕ್ಕು ಮತ್ತು ಸ್ವಾತಂತ್ರ್ಯಗಳನ್ನು ಸೂಚಿಸುವ ರಾಷ್ಟ್ರದ ಸಾರ್ವಭೌಮ ಕಾನೂನಾದ ಸಂವಿಧಾನವನ್ನು ರೂಪಿಸಬೇಕಾದ ಅಗತ್ಯತೆ ನಿರ್ಮಾಣವಾಯಿತು. ಭಾರತದಂತಹ ಬಹು ಜಾತಿಯ- ಬಹುಧರ್ಮೀಯ- ಬಹುಜನಾಂಗೀಯ -ಬಹು ಭಾಷೆಯ- ಪ್ರಾದೇಶಿಕ ಅಸಮತೋಲಿತ ಸಂಕೀರ್ಣಮಯವಾದ ಸಮಾಜಕ್ಕೆ ಸ್ಪಷ್ಟವಾದ ಸಂವಿಧಾನವನ್ನು ರೂಪಿಸುವುದು ಒಂದು ಸವಾಲಿನ ಕಾರ್ಯವಾಗಿತ್ತು.

ವೈವಿಧ್ಯತೆಗಳಿಲ್ಲದ, ಏಕರೂಪ ನಾಗರೀಕತೆ ಮತ್ತು ಸಂಸ್ಕೃತಿಗಳ ನೆಲೆವೀಡುಗಳಾದ   ದೇಶಗಳಿಗೆ ಸಂವಿಧಾನಗಳನ್ನು ರಚನೆ ಮಾಡುವುದು ನಿರಾಯಾಸವಾದ ಕಾರ್ಯ.ಆದರೆ ಭಾರತದಂತಹ ರಾಷ್ಟ್ರಕ್ಕೆ ಸಂವಿಧಾನ ರಚನೆ ತುಂಬಾ ಶ್ರಮದಾಯಕವಾದುದು.  ಅಂಬೇಡ್ಕರ್ ರವರು ಸಂವಿಧಾನ ಪ್ರಜ್ಞೆಯ ಮೂಲಕ ರಾಷ್ಟ್ರೀಯ ಪ್ರಜ್ಞೆಯನ್ನು ಬೆಸೆಯುವ ಧೋರಣೆ ಹೊಂದಿದ್ದರು.  ಆ ಮೂಲಕ ರಾಷ್ಟ್ರದ ಬಹುಸಂಖ್ಯಾತ ಜಾತಿಗಳಿಗೆ ಶಾಶ್ವತವಾದ ರಾಷ್ಟ್ರೀಯ ಪ್ರಜ್ಞೆಯನ್ನು ಬೆಳೆಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ ಆದ್ದರಿಂದಲೇ ಡಾ ಬಿ ಆರ್ ಅಂಬೇಡ್ಕರ್ ರವರು ರಾಷ್ಟ್ರೀಯ ಪ್ರಜ್ಞೆ ಮತ್ತು ಸಂವಿಧಾನಿಕ ಪ್ರಜ್ಞೆ ಗಳೆರಡುಒಂದೇ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಸಂವಿಧಾನ ರಚನಾ ಸಭೆಯ ಸದಸ್ಯತ್ವದ ಸಂಕಷ್ಟ

ಡಾ ಬಿ ಆರ್ ಅಂಬೇಡ್ಕರ್ ರವರು ಸಂವಿಧಾನ ರಚನಾ ಸಭೆಯ ಸದಸ್ಯರಾದ ಹಿನ್ನೆಲೆ ತುಂಬಾ ಕಷ್ಟದಾಯಕವಾದಂತಹ ಮಾರ್ಗವಾಗಿತ್ತು ಅಂಬೇಡ್ಕರ್ ರವರನ್ನು ಸಂವಿಧಾನ ರಚನಾ ಸಭೆಯ ಸದಸ್ಯರನ್ನಾಗಿ ಆಯ್ಕೆ ಮಾಡಲು ಪುರೋಹಿತಶಾಹಿ ಮನಸ್ಥಿತಿಯ ಕಾಂಗ್ರೆಸ್ ಪಕ್ಷಕ್ಕೆ ಇಚ್ಚೆ ಇರಲಿಲ್ಲ .ಅವರು ಕಾಂಗ್ರೆಸ್ ಪಕ್ಷದ ವಿರೋಧದಿಂದಾಗಿ ಬಾಂಬೆ ಪ್ರಾಂತ್ಯದಿಂದ ಆಯ್ಕೆಯಾಗಲು ಸಾಧ್ಯವಾಗಲಿಲ್ಲ .ತರುವಾಯ ಬಂಗಾಳದ ಪ್ರಾಂತೀಯ ಅಸೆಂಬ್ಲಿಯ ಸಹಾಯದಿಂದ ಸಂವಿಧಾನ ರಚನಾ ಸಭೆಗೆ ಆಯ್ಕೆಯಾದರೂ ಮುಸ್ಲಿಂ ಲೀಗ್, ಆಂಗ್ಲೋ ಇಂಡಿಯನ್ ಸದಸ್ಯರು,ಜೋಗೇಂದ್ರನಾಥ್ ಮಂಡಲ್. ಪರಿಶಿಷ್ಟ ಜಾತಿಯ ಮತ್ತು ಪಕ್ಷೇತರ ಸದಸ್ಯರ ಬೆಂಬಲದಿಂದಾಗಿ ಸಂವಿಧಾನ ರಚನಾ ಸಭೆಗೆ ಆಯ್ಕೆಯಾಗಬೇಕಾಯಿತು.

ನಂತರ ಬಂಗಾಳದ ವಿಭಜನೆ ಪರಿಣಾಮವಾಗಿ ಅಂಬೇಡ್ಕರ್ ಅವರು ತಮ್ಮ ಸದಸ್ಯತ್ವವನ್ನು ಕಳೆದುಕೊಳ್ಳಬೇಕಾಯಿತು .ಈ ಹೊತ್ತಿಗೆ ಸಂವಿಧಾನ ರಚನಾ ಸಭೆಯಲ್ಲಿ ಅಂಬೇಡ್ಕರ್ ರವರು ಪ್ರದರ್ಶಿಸಿದ್ದ ಸಂವಿಧಾನದ ಪಾಂಡಿತ್ಯದಿಂದಾಗಿ ಅವರು ಸಂವಿಧಾನ ರಚನಾ ಸಭೆಗೆ ತುಂಬಾ ಅನಿವಾರ್ಯವಾದರು. ಅವರನ್ನು ಹೊರತುಪಡಿಸಿ ಈ ದೇಶಕ್ಕೆ ವ್ಯವಸ್ಥಿತವಾದ ಸಂವಿಧಾನವನ್ನು ಹೊಂದಲು ಸಾಧ್ಯವಿಲ್ಲ ಎಂಬುದು ಸಂವಿಧಾನ ರಚನಾ ಸಭೆಯ ಸದಸ್ಯರಿಗೆ ಮನವರಿಕೆಯಾಗಿತ್ತು . ಅಂಬೇಡ್ಕರ್ ರವರು ಹೊಂದಿದ್ದ ಬುದ್ಧಿ ಮತ್ತೆ ಮತ್ತು ಅವರ ವಿಶ್ಲೇಷಣಾತ್ಮಕ ವಾದಂತಹ ಆಲೋಚನೆಗಳು,ಕಾಯಿದೆ ಸಂಬಂಧಿತ ಜ್ಞಾನ ಅವರನ್ನು ಮತ್ತೆ ಸಂವಿಧಾನರಚನಾಸಭೆಯ ಸದಸ್ಯರನ್ನಾಗಿ ಮಾಡಲೇಬೇಕು ಎಂಬ ಅಭಿಪ್ರಾಯವು ಸದಸ್ಯರಲ್ಲಿ ಮೂಡಲು ಕಾರಣವಾಯಿತು.

ಕಾಂಗ್ರೆಸ್ ಸಹ ಆತ್ಮಾವಲೋಕನ ಮಾಡಿಕೊಂಡು ಅಂಬೇಡ್ಕರ್ ಅವರನ್ನು ಭಾರತದ ಸಂವಿಧಾನಾತ್ಮಕ ವಿಷಯಗಳ ತತ್ವಜ್ಞಾನಿ ಮತ್ತು ಮಾರ್ಗದರ್ಶಕ ಎಂದು ಪರಿಭಾವಿಸಿ ಅವರ ಮರು ಆಯ್ಕೆಯ ಅನಿವಾರ್ಯತೆಯನ್ನು ಪ್ರತಿಪಾದಿಸಿತು. ಅಂಬೇಡ್ಕರ್ ರವರು ಸಂವಿಧಾನ ರಚನಾ ಸಭೆಯಲ್ಲಿ ಇರಲೇಬೇಕಾದ ಔಚಿತ್ಯವನ್ನು ಅವರ ಕಾನೂನಿನ ಜ್ಞಾನದ ಆಧಾರದ ಮೇಲೆ ನಿರ್ಣಯಿಸಲಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಅವರನ್ನು ಮರು ಆಯ್ಕೆ ಮಾಡಿದ್ದು ಅವರಲ್ಲಿನ ಸಂವೈಧಾನಿಕ ಜ್ಞಾನದಿಂದ ಮಾತ್ರ ,ಇಲ್ಲಿ ಪ್ರಾತಿನಿಧ್ಯದ ಮಾನದಂಡ ನಿರ್ಧಾರಕವಾಗಿರಲಿಲ್ಲ ಎಂಬುದನ್ನು ಎಲ್ಲರೂ ಅರಿಯಬೇಕು.

ಡಾ ಬಿ ಆರ್ ಅಂಬೇಡ್ಕರ್ ರವರು ಸಂವಿಧಾನ ರಚನಾ ಸಭೆಯ ಸದಸ್ಯರಾಗಿದ್ದ ಸಂದರ್ಭದಲ್ಲಿ ಹಲವಾರು ಉಪ ಸಮಿತಿಗಳಲ್ಲಿ (ಸಲಹಾ ಸಮಿತಿ, ಮೂಲಭೂತ ಹಕ್ಕುಗಳು ಉಪಸಮಿತಿ ,ಅಲ್ಪಸಂಖ್ಯಾತರ ಉಪ ಸಮಿತಿ, ಕೇಂದ್ರ ಸಂವಿಧಾನ ಸಮಿತಿ) ಸಲ್ಲಿಸಿದ ಸೇವೆಯು ಅತ್ಯಂತ ಮೌಲ್ಯಯುಕ್ತ ಎಂದು ಪರಿಗಣಿಸಲಾಗಿತ್ತು. ಅವರು ಮೂಲಭೂತ ಹಕ್ಕುಗಳ ಉಪಸಮಿತಿಗೆ ಸಲ್ಲಿಸಿದ್ದ states and minorities ಎಂಬ ಶೀರ್ಷಿಕೆಯ ಮನವಿಯಲ್ಲಿ ಹಕ್ಕುಗಳು ಎಂದರೇನು ? ಹಕ್ಕುಗಳನ್ನು ಸ್ವತಂತ್ರ ಭಾರತದ ಸಂವಿಧಾನದ ಮುಖೇನ ಹೇಗೆ ಕಾಪಾಡಬೇಕೆಂಬುದರ ಬಗ್ಗೆ ನಿಖರವಾಗಿ ವಿಚಾರಗಳನ್ನು ಪ್ರತಿಪಾದಿಸಿದ್ದರು.

ಇಂತಹ ಅವಿಸ್ಮರಣೀಯ ಕಾರ್ಯಗಳಿಂದಾಗಿ ಅಂಬೇಡ್ಕರವರ ಪ್ರಸ್ತುತತೆಯನ್ನು ಮತ್ತು ಅವರ ಮರು ಪ್ರವೇಶವನ್ನು ಯಾವುದೇ ಭಿನ್ನಾಭಿಪ್ರಾಯವಿಲ್ಲದ ಧರ್ಮನಿರಪೇಕ್ಷ ಭಾವನೆಯಿಂದ ಸಂವಿಧಾನ ರಚನಾ ಸಭೆಯ ಸದಸ್ಯರು ಸ್ವಾಗತಿಸಿದರು.ಡಾ ಬಿ ಆರ್ ಅಂಬೇಡ್ಕರ್ ಇಲ್ಲದೆ ಸ್ವಾತಂತ್ರ್ಯದ ಘನಿಭೂತಿಕರಣ ಮತ್ತು ಶಾಸನೀಕರಣಗಳು ಸುಲಭಸಾಧ್ಯವಲ್ಲ ಎಂಬುದು ಕಾಂಗ್ರೆಸ್ಗೆ ಮನವರಿಕೆಯಾದ ನಿಮಿತ್ತ ಅಂಬೇಡ್ಕರ್ ಅವರನ್ನು ಒಪ್ಪಿಕೊಳ್ಳಲೇಬೇಕಾಯಿತು. ಈ ಸಂಬಂಧವಾಗಿ ಸಂವಿಧಾನ ರಚನಾ ಸಭೆಯ ಅಧ್ಯಕ್ಷರಾಗಿದ್ದ ಡಾ ಬಾಬು ರಾಜೇಂದ್ರ ಪ್ರಸಾದ್ ರವರು ಬಾಂಬೆ ಪ್ರಾಂತ್ಯದ ಪ್ರಧಾನಮಂತ್ರಿಯಾಗಿದ್ದ ಶ್ರೀ ಬಿ ಜೆ ಖೇರ್ ರವರಿಗೆ ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾ ಸಭೆಗೆ ಮರು ಆಯ್ಕೆ ಮಾಡಲೇಬೇಕಾದ ಸಮಂಜಸತೆಯನ್ನು ದಿನಾಂಕ 30 june 1947 ರಲ್ಲಿ ಪತ್ರದ ಮುಖೇನ ಸೂಚಿಸಿದರು. ಪತ್ರದ ಪ್ರಮುಖ ಸಾಲುಗಳು ಇಂತಿವೆ….

           ” Apart from any other consideration we have found Dr BR Ambedkar’s work both in the constituent assembly and the various committees to which he was appointed to he of Such an order as to require that we should not be deprived of his    services………………………….

I am anxious that he should attend the next session of constituent assembly commencing from the 14 July 1947″

ತತ್ಪರಿಣಾಮವಾಗಿ ಡಾ ಬಿ ಆರ್ ಅಂಬೇಡ್ಕರ್ ರವರು ಜುಲೈ 1947 ರಂದು ಸಂವಿಧಾನ ರಚನಾ ಸಭೆಗೆ ಮರು ಆಯ್ಕೆಯಾದರು. ನೆಹರೂರವರು ತಾತ್ಕಾಲಿಕ ಸರ್ಕಾರವನ್ನು ರಚನೆ ಮಾಡಿದ ತರುವಾಯ ಅಂಬೇಡ್ಕರ್ ಅವರನ್ನು ಸ್ವತಂತ್ರ ಭಾರತದ ಪ್ರಪ್ರಥಮ ಕಾನೂನು ಮಂತ್ರಿ ಆಗುವಂತೆ ಆಹ್ವಾನಿಸಿದರು. ನಂತರ ಅವರು 29 ಅಗಸ್ಟ್1947 ರಂದು ಸರ್ವಾನುಮತದಿಂದ ಅವಿರೋಧವಾಗಿ ಸಂವಿಧಾನ ರಚನಾ ಕರಡು ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದರು.

ಸಂವಿಧಾನ ರಚನಾ ರೂವಾರಿ, ಶ್ರಮ ಮತ್ತು ಟೀಕೆಗಳು

ಡಾ ಬಿ ಆರ್ ಅಂಬೇಡ್ಕರ್ ಅವರ ವೃತ್ತಿಪರತೆ ಸಂವಿಧಾನದ ಬಗೆಗಿನ ಅಸಾಧಾರಣವಾದ ಜ್ಞಾನ “ಸ್ಟೇಟ್ ಅಂಡ್ ಮೈನಾರಿಟೀಸ್” ಮೇಲಣ ಅವರ ಅದ್ಭುತವಾದ ಕಾರ್ಯಗಳು, ನಿರ್ವಂಚನೆಯಿಂದ ಕೂಡಿದ ಅವರ ರಾಷ್ಟ್ರಪ್ರೇಮ ಭಾವನೆಗಳು ಅವರನ್ನು ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಲ್ಪಟ್ಟ ಅರ್ಹತೆ ಗಳಾದವು.

ಭಾರತದಂತಹ ದೇಶಕ್ಕೆ ಸಂವಿಧಾನ ರಚನೆ ಮಾಡುವುದು ಅತ್ಯಂತ ಕ್ಲಿಷ್ಟಕರವಾದ ಬೌದ್ಧಿಕ ಶ್ರಮದಿಂದ ಕೂಡಿದ ಜಾಣ್ಮೆಯ ಕಾರ್ಯ. ವಿಶ್ವದ ವಿವಿಧ ಸಂವಿಧಾನಗಳನ್ನು ಅಧ್ಯಯನ ಮಾಡಿರುವ, ಉತ್ತಮ ರಾಜಕೀಯ ಜ್ಞಾನ ಹೊಂದಿರುವ, ಗತಿಸಿದ ಘಟನಾವಳಿಗಳ ಅಧ್ಯಯನ ಮಾಡಿರುವ ,ವರ್ತಮಾನದ ವಿಶ್ಲೇಷಣೆ ಮಾಡುವ ಸಾಮರ್ಥ್ಯ ಹೊಂದಿರುವ, ಭವಿಷ್ಯದ ಸಮಸ್ಯೆ ಮತ್ತು ಸವಾಲುಗಳನ್ನು ನಿರೀಕ್ಷಿಸ ಬಲ್ಲ, ವಿವಿಧ ನಾಗರಿಕತೆಗಳು -ವಿವಿಧ ಸಮಾಜಗಳು- ವಿವಿಧ ಸಂಸ್ಕೃತಿಗಳ ಆಳವಾದ ಪರಿಚಯವಿರುವ, ವಿಶ್ವದ ಇತಿಹಾಸ, ಪ್ರಜಾಪ್ರಭುತ್ವ ,ಅರಾಜಕತೆ ಸಾಮ್ರಾಜ್ಯಶಾಹಿ ನೀತಿಗಳ ಅರಿವು, ವಿವಿಧ ದೇಶಗಳ ಆಡಳಿತ ಪದ್ಧತಿಗಳು, ಕಾನೂನು ವ್ಯವಸ್ಥೆ ಸಾಮಾಜಿಕ ಪದ್ಧತಿಗಳ ಬಗ್ಗೆ ಅಪಾರವಾದ ಜ್ಞಾನ ಹೊಂದಿರುವ ಬಹುಮುಖಿ ತಜ್ಞರಿಂದ ಮಾತ್ರ ಒಂದು ಉತ್ತಮವಾದ ಸಂವಿಧಾನವನ್ನು ರಚಿಸಲು ಸಾಧ್ಯ ಆ ಸಂದರ್ಭದಲ್ಲಿ ಅಂತಹ ಸಾಮರ್ಥ್ಯ ಹೊಂದಿದ್ದವರೆಂದರೆ ಡಾ ಬಿ ಆರ್ ಅಂಬೇಡ್ಕರ್ ರವರು ಮಾತ್ರ.ಇದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ.

ವಿಶ್ವದಲ್ಲಿಯೇ ವಿಸ್ತೃತವಾದ ಬೃಹತ್ ಸಂವಿಧಾನವೂಂದರ ರಚನೆಯ ಶಿಲ್ಪಿ ಡಾ ಬಿಆರ್ ಅಂಬೇಡ್ಕರ್ ಎಂಬುದನ್ನು ಮಡಿವಂತ ಮನಸ್ಸಿನ ಸಂಪ್ರದಾಯ ಶೀಲ ಸ್ಪೃಶ್ಯ ಮನಸ್ಥಿತಿಗಳು ಜೀರ್ಣಿಸಿಕೊಳ್ಳಲು ಈಗಲೂ ಸಿದ್ಧರಿಲ್ಲ .ಸಂವಿಧಾನ ಜಾರಿಗೆ ಬಂದು ಏಳು ದಶಕಗಳು ಪೂರೈಸುವ ಸನಿಹದಲ್ಲಿ ದ್ದೇವೆ. ಭಾರತದ ಸಾಮಾಜಿಕ..ರಾಜಕೀಯ …ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಲಾಭವನ್ನು ಸಂಘಟಿತ ಮತ್ತು ಅಸಂಘಟಿತ ಸಮುದಾಯಗಳು ಪಡೆದುಕೊಂಡು ಪ್ರಗತಿಯತ್ತ ದಾಪುಗಾಲು ಹಾಕುತ್ತಿವೆ.

ದೇಶದ ವಿವಿಧ ರಂಗಗಳಲ್ಲಿ ದಮನಿತರು ಹಿಂದುಳಿದ ವರ್ಗದವರು ಹಾಗೂ ಮೇಲ್ವರ್ಗದವರು ಹಂತಹಂತವಾಗಿ ಸಂವಿಧಾನಿಕ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾ ಪ್ರಗತಿಯೆಡೆಗೆ ಸಾಗುತ್ತಿದ್ದರೂ ಸಹ ಪ್ರಾಂಜಲ ಮನಸ್ಸಿನ ವರು ಅಂಬೇಡ್ಕರ್ ಅವರನ್ನು ಅಪನಿಂದನೆಗಳಿಂದ ಟೀಕಿಸುತ್ತಿದ್ದಾರೆ. ಅಂಬೇಡ್ಕರವರು ವಿರಚಿತ ಸಂವಿಧಾನವನ್ನು ವಿರೋಧಿಸುವ ಬಹುಪಾಲು ಮಂದಿ ಸಂವಿಧಾನದ ಸಾಮಾನ್ಯ ಜ್ಞಾನವನ್ನು ಹೊಂದಿದವರಾಗಿರುವುದಿಲ್ಲ ,ಒಮ್ಮೆಯೂ ಸಂವಿಧಾನದ ಪ್ರತಿಯನ್ನು ನೋಡದ ಮತ್ತು ಅದರ ಆಶಯಗಳನ್ನು ಅಧ್ಯಯನ ಮಾಡದವರಾಗಿದ್ಧಾರೆ.

ಸಂವಿಧಾನದ ನಿಜವಾದ ಆಶಯಗಳನ್ನು ಸರಿಯಾಗಿ ಅರಿಯದವರು ಸಂವಿಧಾನದ ಬಗ್ಗೆ ಮತ್ತು ಡಾ ಬಿ ಆರ್ ಅಂಬೇಡ್ಕರ್ ರವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಶಿಕ್ಷಣ ತಜ್ಞರು ಬುದ್ಧಿಜೀವಿಗಳು ಸಂವಿಧಾನದ ಬಗ್ಗೆ ಜ್ಞಾನ ಹೊಂದಿರುವ ತಜ್ಞರು ಸಂವಿಧಾನದ ನಿಜವಾದ ಆಶಯಗಳನ್ನು ಜನರಿಗೆ ತಿಳಿಸುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ. ಭಾರತ ಸಂವಿಧಾನ ರಚನಾ ಸಭೆಯ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಡಾ ಬಿ ಆರ್ ಅಂಬೇಡ್ಕರ್ ರವರು ತಮ್ಮ ಪ್ರಯತ್ನದಲ್ಲಿ ಸಾಮಾಜಿಕ ನ್ಯಾಯವನ್ನು ಸಂವಿಧಾನ ಭದ್ರಬುನಾದಿಯನ್ನಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಂವಿಧಾನ ರಚನಾ ಸಭೆಯು ಭಾರತದ ಪ್ರಜೆಗಳ ಪರವಾಗಿ ಸಂವಿಧಾನವನ್ನು ಅಂತಿಮಗೊಳಿಸಿದ್ದು, ಈ ಮಹತ್ತರ ಕಾರ್ಯವನ್ನು ಅಂಬೇಡ್ಕರ್ ರವರು ಕಾಯಾ-ವಾಚಾ-ಮನಸಾ ಪೂರ್ಣಗೊಳಿಸಿದ್ದಾರೆ.

ಸಂವಿಧಾನ ರಚನಾ ಸಭೆಯಲ್ಲಿ ಪ್ರತಿಯೊಂದು ವಿಷಯದ ಕರಡಿನ ಬಗ್ಗೆ ವಿವರವಾಗಿ ಮಂಡನೆ – ಖಂಡನೆ ನಡೆಸಲಾಗುತ್ತಿತ್ತು. ಪ್ರತಿಯೊಂದು ವಿಷಯವನ್ನು ಚರ್ಚಿಸಿ ಮತಕ್ಕೆ ಹಾಕಿ ನಿರ್ಣಯಿಸಲಾಗುತ್ತಿತ್ತು. ಚರ್ಚೆಯಲ್ಲಿ ಯಾವುದೇ ವಿಷಯದ ಬಗ್ಗೆ ಒಬ್ಬ ಸದಸ್ಯ ಅಸಮ್ಮತಿ ವ್ಯಕ್ತಪಡಿಸಿದರೆ ಅವರಿಗೆ ತೃಪ್ತಿಯಾಗುವ ತನಕ ಆ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿತ್ತು. ಅಂದರೆ ಸಂವಿಧಾನ ರಚನಾ ಸಭೆಯು ಪ್ರಜಾಸತ್ತಾತ್ಮಕವಾದ ಪ್ರಾತಿನಿಧಿಕ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿತ್ತು. ಏಕಪಕ್ಷೀಯವಾಗಿಯಾಗಲಿ ಅಥವಾ ಯಾವುದೇ ಒತ್ತಡಗಳಿಗೆ ಒಳಗಾಗುತ್ತಿರಲಿಲ್ಲ.ಡಾ ಬಿ ಆರ್ ಅಂಬೇಡ್ಕರವರು ತಯಾರಿಸಿದ ಕರಡಿನ ಅಂಶಗಳ ಮಂಡನೆಯ ನಂತರ ನಡೆಯುತ್ತಿದ್ದ ಚರ್ಚೆಗಳಿಗೆ ಅಂಬೇಡ್ಕರ್ ಅವರೇ ಸೂಕ್ತವಾದ ಸಮರ್ಥನೆಗಳನ್ನು ನೀಡುತ್ತಿದ್ದರು ಆ ಸಮರ್ಥನೆಗಳು ಇಡೀ ಸಭೆಯನ್ನು ಬೆರಗುಗೊಳಿಸುತ್ತಿತ್ತು ಆ ಮಟ್ಟಿನ ಸಂವಿಧಾನಿಕ ಜ್ಞಾನವನ್ನು ಅವರು ಹೊಂದಿದ್ದರು

ಡಾ ಬಿ ಆರ್ ಅಂಬೇಡ್ಕರ್ ಅವರಿಗೆ ಸಂವಿಧಾನ ರಚನೆಯ ಮುಕ್ತ ಅವಕಾಶವನ್ನು ನೀಡಿರಲಿಲ್ಲ ಎಂಬ ಸತ್ಯವು ಬಹುಪಾಲು ಭಾರತೀಯರಿಗೆ ತಿಳಿದಿಲ್ಲ. ಸಂವಿಧಾನ ಕರಡು ರಚನಾ ಸಮಿತಿಯ ಸದಸ್ಯರಾದ ಎನ್ ಸಾದುಲ್ಲಾ ರವರು ಈ ಬಗ್ಗೆ ಹೀಗೆ ಪ್ರತಿಕ್ರಿಯಿಸಿದ್ದಾರೆ. ” ಭಾರತ ಸಂವಿಧಾನ ರಚನೆಯ ಪೂರ್ಣ ಹೊಣೆಯನ್ನು ಅಂಬೇಡ್ಕರ್ ರವರಿಗೆ ವಹಿಸಿದ್ದರೆ ಅದ್ಭುತವಾದ ಶಾಸನವೊಂದು ಹೊರಹೊಮ್ಮುತ್ತಿತ್ತು”.ಡಾ ಬಿ ಆರ್ ಅಂಬೇಡ್ಕರ್ ಅವರ ಸಂವಿಧಾನಿಕ ಸಾಮರ್ಥ್ಯದ ಬಗ್ಗೆ ಸಂವಿಧಾನ ರಚನಾ ಸಮಿತಿಯ ಸಲಹೆಗಾರರಾದ ಬಿ ಎನ್ ರಾವ್ ರವರು ತಮ್ಮ constitution in making ಎಂಬ ಕೃತಿಯಲ್ಲಿ ಬರೆಯುತ್ತಾ. “ನಾನು ಮತ್ತು ಸಂವಿಧಾನ ರಚನಾ ಸಮಿತಿಯ ಸದಸ್ಯರು ವಿಶ್ವದ ವಿವಿಧ ದೇಶಗಳನ್ನು ಭೇಟಿ ಮಾಡಿ ಇಂಗ್ಲೆಂಡಿನ ರಾಜಕೀಯ ತತ್ವಜ್ಞಾನಿಯಾದ ಪ್ರೊಫೆಸರ್ ಜೆನ್ನಿಂಗ್ಸ್ ರವರೊಂದಿಗೆ ಚರ್ಚಿಸಿದಾಗ ಅಂಬೇಡ್ಕರ್ ಅವರ ಬಗ್ಗೆ ಅವರು ಹೀಗೆ ಅಭಿಪ್ರಾಯವನ್ನು ವ್ಯಕ್ತಪಡಿಸಿದರು ಎಂದಿದ್ದಾರೆ.

             “There is a one person in your own country whom we refer several times. He is a political genius having abundant knowledge and command on all the world constitutions and political science. His name is Dr BR Ambedkar. Professor Jennings further adds to his comment that I don’t understand why you people are travelling everywhere when there is already a master of all world constitutions in your own country”

ಎಂತಹ ಬೌದ್ಧಿಕ ದಿವಾಳಿತನ,ನಮ್ಮ ದೇಶದಲ್ಲಿ ಇರುವ ಅದ್ಭುತ ಪ್ರತಿಭೆಯನ್ನು ನಮ್ಮವರೆ ಗುರುತಿಸದಾದರೂ, ಆದರೂ ಅಂತಿಮವಾಗಿ ಅಂಬೇಡ್ಕರ್ ರವರಿಗೆ ಸಂವಿಧಾನ ರಚನೆಯ ಹೊಣೆಗಾರಿಕೆ ವಹಿಸಿಕೊಡಲಾಯಿತು .ಈ ಸಂಬಂಧವಾಗಿ ಮಥಾಯ್ ರವರ ಬಳಿ ಅಂಬೇಡ್ಕರವರು ಹೆಮ್ಮೆಯಿಂದ ಹೀಗೆ ಹೇಳಿಕೊಳ್ಳುತ್ತಾರೆ.

“ಹಿಂದುಗಳು ವೇದ ಗಳಿಗಾಗಿ ವ್ಯಾಸನ ಮೊರೆ ಹೋದರು, ರಾಮಾಯಣ ಕ್ಕಾಗಿ ವಾಲ್ಮೀಕಿ ಮೊರೆಹೋದರು ಮತ್ತು ಸಂವಿಧಾನಕ್ಕಾಗಿ ನನ್ನ ಮೊರೆ ಹೋದರು” ಡಾ ಬಿ ಆರ್ ಅಂಬೇಡ್ಕರ್ ರವರು ವಿರಚಿತ ಸಂವಿಧಾನವನ್ನು ಅಂಗೀಕರಿಸಿದ ಸಂದರ್ಭದಿಂದ ಪ್ರಸ್ತುತದತನಕ ಟೀಕೆಗಳು ವಿಮರ್ಶೆಗಳು ಧಾರಾಳವಾಗಿ ನಿರಂತರವಾಗಿ ಹರಿದುಬರುತ್ತಲೇ ಇವೆ ಬಹುಶಃ ಸ್ವಾತಂತ್ರ್ಯಾನಂತರ ರಾಷ್ಟ್ರೀಯವಾಗಿ- ಅಂತರಾಷ್ಟ್ರೀಯವಾಗಿ, ಟೀಕೆ -ವಿಮರ್ಶೆ ಮತ್ತು ಹೊಗಳಿಕೆಗಳಿಗೂ ಅತ್ಯಂತ ಹೆಚ್ಚು ಪ್ರಮಾಣದಲ್ಲಿ ಒಳಪಟ್ಟಿರುವ ವ್ಯಕ್ತಿಯೆಂದರೆ ಡಾ ಬಿ ಆರ್ ಅಂಬೇಡ್ಕರ್ ರವರು ಮಾತ್ರ .

ಇದು ಪ್ರಜಾಪ್ರಭುತ್ವದ ಪ್ರತೀಕವಾಗಿದೆ ಚರ್ಚೆ,ವಿಮರ್ಶೆ,ಸಮ್ಮತಿ ಮತ್ತು ಖಂಡನೆ ಪ್ರಜಾಪ್ರಭುತ್ವದ ಆಧಾರಸ್ತಂಭಗಳು ಪ್ರಜಾಪ್ರಭುತ್ವವೆಂದರೆ ಅಭಿಪ್ರಾಯ ಭೇದವೇ ಆಗಿರುತ್ತದೆ .ಆದರೆ ಚರ್ಚೆ ಇತಿಹಾಸವನ್ನು ತಿರುಚುವುದು ಆಗಬಾರದು, ವ್ಯಕ್ತಿಯ ತೇಜೋವಧೆಯನ್ನೂ ಮಾಡುವುದಾಗಬಾರದು. ಸೂಕ್ತವಾದದ್ದನ್ನು ಸಮ್ಮತಿಸಬೇಕು ಅಪ್ರಯೋಜಕ ವಾದುದನ್ನು ಅಸಮ್ಮತಿಸಬೇಕು. ಡಾ ಬಿ ಆರ್ ಅಂಬೇಡ್ಕರ್ ಅವರು ವಾಲ್ಮೀಕಿ ಚೌದರಿ ,ಅರುಣ್ ಶೌರಿ, ವಲ್ಲಭಭಾಯಿ, ಎಲ್ ಕೆ ಅಡ್ವಾಣಿ ಹಾಗೂ ಸರ್ಕಾರದ ಮಂತ್ರಿಮಹೋದಯರು ಗಳಿಂದ ನಿರಂತರವಾಗಿ ಟೀಕೆಗೆ ಒಳಪಡುತ್ತಲೇ ಇದ್ದಾರೆ. ಭಾರತ ಸಂವಿಧಾನ ರಚನೆಯ ಕೀರ್ತಿಯನ್ನು ಅಂಬೇಡ್ಕರ್ ಅವರಿಗೆ ನೀಡಲು ಒಂದು ನಿರ್ದಿಷ್ಟ ವರ್ಗಕ್ಕೆ ಇಚ್ಛೆ ಇಲ್ಲ.

ಅಂಬೇಡ್ಕರ್ ಅವರನ್ನು ಮತ್ತು ಅವರಿಂದ ರಚಿಸಲ್ಪಟ್ಟ ಸಂವಿಧಾನವನ್ನು ದುರುದ್ದೇಶ ಪೂರ್ವಕವಾಗಿ ಟೀಕಿಸುತ್ತಲೇ ಬರುತ್ತಿದ್ದಾರೆ. ಅರುಣ್ ಶೌರಿಯವರು ತಮ್ಮ worshipping the false God ಕೃತಿಯಲ್ಲಿ”the followers of Ambedkar seems to be fool as they revere Indian constitution as their religious text and Ambedkar as their God”ಎಂಬುದಾಗಿ ಅಸಮಾಧಾನವನ್ನು ತೋಡಿಕೊಂಡಿದ್ದಾರೆ.

ಡಾ ಬಿ ಆರ್ ಅಂಬೇಡ್ಕರ್ ರವರ ಸಂವಿಧಾನಿಕ ಚಿಂತನೆಗಳನ್ನು ಸಹಿಸಿಕೊಳ್ಳದ ವಿಕೃತ ಮನಸ್ಸುಗಳು ಅಂಬೇಡ್ಕರ್ ಪ್ರತಿಮೆಗಳನ್ನು ಭಗ್ನ ಗೊಳಿಸುತ್ತಿವೆ. ಅಂಬೇಡ್ಕರ್ ರವರಿಂದ ವಿರಚಿತ ಸಂವಿಧಾನದ ಕೃತಿಗಳನ್ನು ಬಹಿರಂಗ ಸ್ಥಳಗಳಲ್ಲಿ ಅದರಲ್ಲಿಯೊ ಪಾರ್ಲಿಮೆಂಟ್ ನಂತಹ ಪವಿತ್ರ ಸ್ಥಳಗಳಲ್ಲಿ ಸುಡಲಾಗುತ್ತಿದೆ

ಡಾ ಬಿ ಆರ್ ಅಂಬೇಡ್ಕರ್ ಮತ್ತು ಭಾರತ ಸಂವಿಧಾನ ರಚನೆಯ ಬಗ್ಗೆ ಏನೆಲ್ಲ ಚರ್ಚೆ…ತರ್ಕ, ಟೀಕೆ-ಟಿಪ್ಪಣಿಗಳು ವಿಮರ್ಶೆಗಳು ನಡೆದರೂ ಸಹ ಭಾರತದಂತಹ ದೇಶಕ್ಕೆ ಸಂವಿಧಾನವನ್ನು ರಚನೆ ಮಾಡುವುದು ನಿಜಕ್ಕೂ ಅಸಾಧಾರಣವಾದ ಕಾರ್ಯ. ಡಾ ಬಿ ಆರ್ ಅಂಬೇಡ್ಕರ್ ಅವರು ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು ಸಮಿತಿಯ ಸದಸ್ಯರು ಸಂವಿಧಾನ ರಚನೆಗಾಗಿ ಕೈಜೋಡಿಸಿದ್ದು ತುಂಬಾ ಕಡಿಮೆ. ಸಂವಿಧಾನ ಕರಡನ್ನು ತಯಾರು ಮಾಡುವ ಕಾರ್ಯದಲ್ಲಿ ಅಂಬೇಡ್ಕರವರು ಅಪಾರವಾದ ಶ್ರಮವನ್ನು ವಹಿಸಿದ್ದಾರೆ. ಕರಡು ರಚನಾ ಸಮಿತಿಯ ಎಲ್ಲಾ ಸದಸ್ಯರು ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾಗಿಲ್ಲ ಆದರೂ ಸಹ ಅಂಬೇಡ್ಕರ್ ರವರು ತಮ್ಮ ಪಾಂಡಿತ್ಯದ ಫಲವಾಗಿ ಸಂವಿಧಾನ ರಚನೆಯ ಕಾರ್ಯದಲ್ಲಿ ತಮ್ಮನ್ನು ಅಹರ್ನಿಶಿ ಸಮರ್ಪಿಸಿಕೊಂಡಿದ್ದಾರೆ. ಈ ಸಂಬಂಧವಾಗಿ ಟಿ ಟಿ ಕೃಷ್ಣಮಾಚಾರಿಯವರು ಸದಸ್ಯರ ಕಾರ್ಯದ ವಿವರವನ್ನು ಹೀಗೆ ವಿವರಿಸಿದ್ದಾರೆ

” ಒಬ್ಬ ಸದಸ್ಯ ರಾಜೀನಾಮೆ ನೀಡಿದ ಮತ್ತೊಬ್ಬ ಸದಸ್ಯ ಮರಣ ಹೊಂದಿದ  (ಎರಡೂ ಹುದ್ದೆಗಳು ಖಾಲಿಯಾಗಿಯೇ ಉಳಿದಿದ್ದವು) ಒಬ್ಬ ಸದಸ್ಯ ಅಮೇರಿಕಾದಲ್ಲಿ ನೆಲೆಸಿದ್ದ ( ಆ ಹುದ್ದೆಯು ಖಾಲಿಯಾಗಿಯೇ ಇತ್ತು) ಒಬ್ಬ ಸದಸ್ಯ ನಿರಂತರವಾಗಿ ರಾಜಕೀಯ ಚಟುವಟಿಕೆಗಳಲ್ಲಿ ತಲ್ಲೀನನಾಗಿರುತ್ತಿದ್ದ. ಇತರರು ದೆಹಲಿಯ ಶೀತ ಪ್ರಕೃತಿಗೆ ಹೊಂದಿಕೊಳ್ಳಲಾಗದೆ ದೂರವೇ ಉಳಿದು ಬಿಡುತ್ತಿದ್ದರು ಕೆಲವರು ಆರೋಗ್ಯ ಸಮಸ್ಯೆಯಿಂದ ದೂರವಿರುತ್ತಿದ್ದರು. ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಸಂವಿಧಾನ ರಚನೆಯ ಸಂಪೂರ್ಣ ಹೊಣೆಗಾರಿಕೆಯನ್ನು ಅಂಬೇಡ್ಕರ್ ಅವರ ಹೆಗಲಿಗೆ ಹೊರಿಸಲಾಯಿತು ಧೃತಿಗೆಡದ ಅಂಬೇಡ್ಕರವರು ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ಪೂರೈಸಿದರು ಅವರಿಗೆ ನಾವೆಲ್ಲರೂ ಋಣಿಗಳು”    ಎಂಬುದಾಗಿ ಪ್ರಶಂಶಿಸಿದ್ದಾರೆ

ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿದ್ದ ಡಾ ಬಾಬು ರಾಜೇಂದ್ರ ಪ್ರಸಾದ್ ರವರು ಡಾ ಬಿ ಆರ್ ಅಂಬೇಡ್ಕರ್ ಅವರನ್ನು ಅವರ ಕಾರ್ಯವನ್ನು ಶ್ಲಾಘಿಸುತ್ತಾ ಇತರರಿಗಿಂತ ಅಧಿಕವಾಗಿ ಅವರನ್ನು ನಾನು ಪ್ರಶಂಸಿಸುತ್ತೇವೆ. ಅವರ ಸಮರ್ಪಣಾ ಭಾವ ಮತ್ತು ಕಾರ್ಯನಿಷ್ಠೆಯಿಂದಾಗಿ ಅವರನ್ನು ನಾವುಗಳು ಸಂವಿಧಾನ ಕರಡು ರಚನಾ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವುದಕ್ಕಿಂತ ಉತ್ತಮ ಕಾರ್ಯವನ್ನು ನಾವು ಮಾಡಿಲ್ಲ ಎಂಬುದಾಗಿ ನುಡಿದಿದ್ದಾರೆ.

ಸಂವಿಧಾನ ರಚನಾ ಸಭೆಯಲ್ಲಿ ಅಂತಿಮವಾಗಿ ಡಾ ಬಿ ಆರ್ ಅಂಬೇಡ್ಕರ್ ಅವರು ಭಾಷಣವನ್ನು ಮಾಡುತ್ತಾ ,ಜನವರಿ 26.1950ರಂದು, ನಾವುಗಳು ವಿರೋಧಾಭಾಸಗಳ ಜೀವನಕ್ಕೆ ಪದಾರ್ಪಣೆ ಮಾಡುತ್ತಿದ್ದೇವೆ. ರಾಜಕಾರಣದಲ್ಲಿ ನಾವು ಸಮಾನತೆಯನ್ನು ಹೊಂದಬಹುದು,  ಇನ್ನೆಷ್ಟು ಕಾಲ ನಾವು ಸಾಮಾಜಿಕ ಮತ್ತು ಆರ್ಥಿಕ ಬದುಕಿನಲ್ಲಿ ಸಮಾನತೆಯನ್ನು ನಿರಾಕರಣೆ ಮಾಡಬಹುದು. ಹೆಚ್ಚುಕಾಲ ಸಮಾನತೆಯ ನಿರಾಕರಣೆ ಮಾಡುವುದರಿಂದ ಪ್ರಜಾಪ್ರಭುತ್ವ ಆಪತ್ತಿಗೆ ಒಳಪಡುತ್ತದೆ. ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವವೆಂದರೆ ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಪ್ರತಿಷ್ಠಾಪಿಸುವ ಸರ್ಕಾರದ ಪದ್ಧತಿ.

ನಮ್ಮ ಸಂವಿಧಾನ ಕಾರ್ಯಶೀಲ ವಾದುದು ಸಲೀಲ ವಾದುದು ಯುದ್ಧ ಕಾಲ ಮತ್ತು ಶಾಂತಿ ಕಾಲಗಳೆರಡರಲ್ಲೂ ದೇಶವನ್ನು ಮುನ್ನಡೆಸಲು ಸರ್ವಶಕ್ತ ವಾಗಿದೆ ಎಂಬುದಾಗಿ ಸಂವಿಧಾನದ ಬಗ್ಗೆ ಧನಾತ್ಮಕವಾದ ಮಾತುಗಳನ್ನು ಆಡಿದರು.

ಅಂದರೆ ಡಾ ಬಿ ಆರ್ ಅಂಬೇಡ್ಕರ್ ರವರು ಅಭಿಪ್ರಾಯಪಡುವಂತೆ ಸಂವಿಧಾನದ ಆಶಯಗಳು ಸ್ಪಷ್ಟವಾಗಿವೆ. ಆದರೆ ಅದನ್ನು ಜಾರಿಗೊಳಿಸುವ ಮನಸ್ಥಿತಿಗಳು ಉತ್ತಮವಾಗಿರಬೇಕು ಆಗ ಮಾತ್ರ ಸಂವಿಧಾನ ಯಶಸ್ವಿಯಾಗಿ ಜಾರಿಗೆ ಬರಲು ಸಾಧ್ಯ .ಇಲ್ಲವಾದರೆ ಸಂವಿಧಾನ ಮಹತ್ವವನ್ನು ಕಳೆದುಕೊಳ್ಳುತ್ತದೆ.

ಸಂವಿಧಾನ ವಿಫಲವಾಗಲು ಸಾಧ್ಯವಿಲ್ಲ ಸಂವಿಧಾನದ ಆಶಯ ಅರಿಯದವರು ಅಂದರೆ ಆಳುವ ವರ್ಗ ಅದನ್ನು ವಿಫಲಗೊಳಿಸಲು ಪ್ರಯತ್ನಿಸಬಹುದು ಅಷ್ಟೇ ಆದರೆ ಭಾರತದ ಸಂವಿಧಾನದ ಮೂಲ ರಚನೆ ಭದ್ರವಾದ ಅಡಿಪಾಯದಿಂದ ಕೂಡಿದೆ. ಸಂವಿಧಾನ ಉಲ್ಲಂಘನೆಯಾಗದಂತೆ ಮತ್ತು ದುರುಪಯೋಗ ದಂತಹ ತಡೆ ಕ್ರಮಗಳನ್ನು ಸಂವಿಧಾನದಲ್ಲಿಯೇ ಅಳವಡಿಸಲಾಗಿದೆ ಆದ್ದರಿಂದ ಅಗತ್ಯತೆಗನುಗುಣವಾಗಿ ಸಂವಿಧಾನವನ್ನು ತಿದ್ದುಪಡಿ ಮಾಡಬಹುದು. ಯಾರಿಂದಲೂ ಸಂಪೂರ್ಣವಾಗಿ ಸಂವಿಧಾನವನ್ನು ಬದಲಾವಣೆ ಮಾಡಲು ಅಥವಾ ನಿಷ್ಕ್ರಿಯಗೊಳಿಸಲು ಸಾಧ್ಯವಿಲ್ಲ.

 

 

Continue Reading
You may also like...
Click to comment

Leave a Reply

Your email address will not be published. Required fields are marked *

More in ಅಂಕಣ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top