ಅಗ್ನಿಕುಂಡದಂತೆ ಝಳಪಿಸುವ ಬಿಸಿಲು.
ಕಾದು ಕೊಂಡದಂತಾದ ಡಾಂಬರಿನ ಹಾದಿ.
ಅದರ ಮೇಲೆ ನಮ್ಮ ಹೋರಾಟದ ನಿಚ್ಚಳ ಹೆಜ್ಜೆ.
ಪ್ರತಿ ಹೆಜ್ಜೆ ಇಟ್ಟಾಗಲೂ ಪಾದ ಬೊಬ್ಬಿಡುತ್ತದೆ.ನಿಜ, ನಮ್ಮ ಪಾದಗಳ ತುಂಬಾ ಬೊಬ್ಬೆ ಎದ್ದಿವೆ. ಅವಾದರೂ ಎಂಥ ಬೊಬ್ಬೆಗಳು. ಒಂದೊಂದೂ ಕಾಸಿನಗಲ. ಉರಿ ಎನ್ನುವುದು ಪಾದದಿಂದ ಶುರುವಾಗಿ ನೆತ್ತಿ ತಲುಪಿ ಕಾಡುತ್ತದೆ. ಅಷ್ಟು ಉರಿಯನ್ನು ಸಹಿಸಿಕೊಳ್ಳುವುದು ಕಷ್ಟಕಷ್ಟ. ಒಂದು ಕಡೆ ಇನ್ನೂ ಮುಂದಿರುವ ಹೋರಾಟದ ಹಾದಿ ಇನ್ನೊಂದು ಕಡೆ ಬೊಬ್ಬಿರಿವ ಪಾದ. ಹೇಗೋ ಉಪಶಮನ ಮಾಡಿ ಮತ್ತೆ ನಡೆಯಲು ಶುರುಮಾಡಿದರೆ ಸಂಜೆವೇಳೆಗೆ ಕಾಲು ರವರವ ನರಕದಂತಾಗುತ್ತದೆ.

ಇದನ್ನೆಲ್ಲಾ ನೋಡಿ ಭಕ್ತರು ಆತಂಕ ವ್ಯಕ್ತಪಡಿಸಿದ್ದಾರೆ. ಜಗತ್ತಿನಾದ್ಯಂತ ಇರುವ ನಮ್ಮ ಹಿತೈಷಿಗಳು ಪ್ರೀತಿಯಿಂದ ದೂರವಾಣಿ ಕರೆ ಮಾಡಿ ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಸ್ವಾಮೀಜಿ ಎಲ್ಲಿ ಅಸ್ವಸ್ಥರಾಗಿಬಿಡುತ್ತಾರೋ ಅನ್ನುವ ಕಳವಳ ಅವರನ್ನು ಕಾಡಿದೆ. ಸತ್ಯ ಏನಂದರೆ ನಾವು ಭಕ್ತರ ಬಗ್ಗೆ ಎಷ್ಟು ಕಾಳಜಿ ವ್ಯಕ್ತಪಡಿಸುತ್ತೇವೋ ನಮ್ಮ ಬಗ್ಗೆ ಭಕ್ತರೂ ಅಷ್ಟೇ ಕಾಳಜಿ ವ್ಯಕ್ತಪಡಿಸಿದ್ದಾರೆ. ಆದರೆ ಆತಂಕ ಪಡುವ ಅವಶ್ಯಕತೆ ಇಲ್ಲ. ನಮ್ಮದು ಯೋಗ ಮತ್ತು ಧ್ಯಾನದ ಕುಲುಮೆಯಲ್ಲಿ ಮಿಂದೆದ್ದ ಕಾಯ. ಹಿಮಾಲಯದಂಥ ದುರ್ಗಮ ಪರಿಸ್ಥಿತಿಯಲ್ಲೂ ಶುದ್ಧ ಶ್ವಾಸ ಪಡೆದಿದ್ದೇವೆ. ಈ ಪಾದದ ಬೊಬ್ಬೆಗಳೆಲ್ಲಾ ಯಾವ ಲೆಕ್ಕ?ನಮ್ಮ ಪಾದಗಳಲ್ಲಿ ಬೊಬ್ಬೆ ಬಂದು ರಕ್ತ ಸೋರಿದರೂ ನಾವು ವಿಶ್ರಮಿಸುವುದಿಲ್ಲ. ಮುಂದಿಟ್ಟ ಹೆಜ್ಜೆ ಹಿಂದಿಡುವುದಿಲ್ಲ.ನಮಗೆ ಭಕ್ತರ ಮತ್ತು ಅವರ ಮಕ್ಕಳ ಭವಿಷ್ಯ ಮುಖ್ಯ. ಅದಕ್ಕಾಗಿ ನಾವು ಎಂಥ ತ್ಯಾಗಕ್ಕೂ ಹೋರಾಟಕ್ಕೂ ಸಿದ್ಧರಾಗಿದ್ದೇವೆ.

ಇನ್ನೊಂದು ಮಾತು. ನಮ್ಮ ಜೊತೆ ಸಾವಿರಾರು ಹೆಜ್ಜೆಗಳು ಮೂಡುತ್ತಿವೆ. ಹನಿಹನಿ ಗೂಡಿದರೆ ಹಳ್ಳ ಅನ್ನುವ ಹಾಗೆ ಹೆಜ್ಜೆ ಹೆಜ್ಜೆ ಸೇರಿದರೆ ಅದು ಸಾವಿರ ಹೆಜ್ಜೆಯ ಸಾಗರ. ಚಿಂತಿಸಬೇಡಿ, ನಿಮ್ಮ ಪ್ರೀತಿಯೊಂದಿದ್ದರೆ..ಹರ ಮಹಾದೇವನ, ಬಸವಾದಿ ಪ್ರಮಥರ ಹಾಗೂ ಲಿಂಗೈಕ್ಯ ಜಗದ್ಗುರು ಡಾ.ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳವರ ಆಶೀರ್ವಾದ ಒಂದಿದ್ದರೆ ನಮಗೆ ಏನೂ ಆಗುವುದಿಲ್ಲ. ಗೆದ್ದು ಬರುತ್ತೇವೆ. ಈ ಬೊಬ್ಬೆಗಳೆಲ್ಲಾ ಯಾವ ಲೆಕ್ಕ.

ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ
ಪಂಚಮಸಾಲಿ ಜಗದ್ಗುರು ಪೀಠ,ಹರಿಹರ.


