ಡಿವಿಜಿ ಸುದ್ದಿ, ಚಿತ್ರದುರ್ಗ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಬೆಂಗಳೂರು ಹಾಗೂ ಬೆಳಗಾವಿ ಜಿಲ್ಲೆಗೆ ಅರ್ಧದಷ್ಟು ಪಾಲು ಸಿಕ್ಕಿದ್ದು, ಚಿತ್ರದುರ್ಗ ಸೇರಿ ಅನೇಕ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ. ಇದು ಸಹಜವಾಗಿ ಬೇಸರ ಮೂಡಿಸಿದೆ. ಆದರೆ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಲ್ಲ ಎಂದು ಜಿ. ಎಚ್ . ತಿಪ್ಪಾರೆಡ್ಡಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ಯಾಗ ಮಾಡಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ ಸರ್ಕಾರ ಸುಭದ್ರಗೊಳಿಸಿದವರಿಗೆ ಮಂತ್ರಿ ಸ್ಥಾನ ನೀಡಿರುವುದು ಸ್ವಾಗತಾರ್ಹ. ಆದರೆ, ನಾನು ಮಂತ್ರಿಯಾಗಬೇಕೆಂಬುದು ಜನರ ಬಯಕೆಯಾಗಿತ್ತು. ಇನ್ನು 8 ಮಂತ್ರಿ ಸ್ಥಾನ ನೀಡಿದರೆ ಒಳಿತಾಗುತ್ತಿತ್ತು ಎಂದಿದ್ದಾರೆ.
ಲೋಕಸಭೆಯಿಂದ ಹಿಡಿದು ಸ್ಥಳೀಯ ಸಂಸ್ಥೆ ಚುನಾವಣೆ ವರೆಗೂ ಎಲ್ಲಾ ಹಂತದಲ್ಲಿ ಪಕ್ಷಕ್ಕಾಗಿ ದುಡಿದಿದ್ದೇನೆ. ಇನ್ನೆರಡು ತಿಂಗಳು ಸುಧಾರಿಸಿಕೊಳ್ಳುವಂತೆ ಮುಖ್ಯಮಂತ್ರಿ ಹೇಳಿದ್ದಾರೆ. ಹಿರಿಯ ಸಚಿವರನ್ನು ಪಕ್ಷ ಸಂಘಟನೆಗೆ ಬಳಸಿಕೊಂಡು ಹೊಸಬರಿಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.



