ಡಿವಿಜಿ ಸುದ್ದಿ.ಕಾಂ, ದಾವಣಗೆರೆ: ದೇಶದಲ್ಲಿ ಆರ್ಥಿಕ ಚಟುವಟಿಕೆಗಳನ್ನು ಇನ್ನಷ್ಟು ಚುರುಕುಗೊಳಿಸುವ ಮತ್ತು ಹೊಸ ಗ್ರಾಹಕರನ್ನು ಆಕರ್ಷಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಹಣಕಾಸು ಸೇವೆಗಳ ಇಲಾಖೆ ನಿರ್ದೇಶನ ಮೇರೆಗೆ ದಾವಣಗೆರೆ ಜಿಲ್ಲೆಯಲ್ಲಿ ಅ.4 ರಿಂದ 6ರವರಗೆ ಗ್ರಾಹಕ ಮೇಳವನ್ನು ತೊಗಟವೀರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಲೀಡ್ ಬ್ಯಾಂಕ್ ವಿಭಾಗೀಯ ಪ್ರಬಂಧಕ ಸುಶೃತ್ ಡಿ. ಶಾಸ್ತ್ರಿ ತಿಳಿಸಿದ್ದಾರೆ.
ಸದರಿ ಗ್ರಾಹಕ ಮೇಳದಲ್ಲಿ ಸಣ್ಣ – ಮಧ್ಯಮ- ಅತೀ ಸಣ್ಣ ಉದ್ದಿಮೆಗಳಿಗೆ ಸಾಲ, ಗೃಹಸಾಲ, ಶೈಕ್ಷಣಿಕ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ, ಕೃಷಿ ಸಾಲ ಮತ್ತು ಸ್ವಸಹಾಯ ಗುಂಪುಗಳಿಗೆ ನೀಡುವ ಸಾಲ ಯೋಜನೆಗಳಿಗೆ ಒತ್ತು ನೀಡಲಾಗುತ್ತದೆ. ಅರ್ಹ ಅರ್ಜಿದಾರರಿಗೆ ಶೀಘ್ರ ಸಾಲ ಮಂಜೂರಾತಿಯನ್ನು ನೀಡಲಾಗುವುದು. ಜಿಲ್ಲೆಯಲ್ಲಿರುವ ಅರ್ಹ ನಿರುದ್ಯೊಗಿಗಳಿಗೆ ಸ್ವ ಉದ್ಯೋಗ ಕಲ್ಪಿಸುವ ಸಲುವಾಗಿ ಮತ್ತು ಸಾರ್ವಜನಿಕರಿಗೆ ಹಣಕಾಸು ಅರಿವನ್ನು ಮೂಡಿಸುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಮೂರು ದಿನಗಳ ಈ ಮೇಳದಲ್ಲಿ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಪ್ರಮುಖ ಬ್ಯಾಂಕುಗಳು ಭಾಗವಹಿಸಲಿದ್ದು, ದೇಶದಾದ್ಯಂತ 2 ಹಂತಗಳಲ್ಲಿ ನಡೆಯುವ ಈ ಮಹತ್ವಾಕಾಂಕ್ಷಿ ಯೋಜನೆ ಮೊದಲ ಹಂತದಲ್ಲಿ ಸುಮಾರು 250 ಜಿಲ್ಲೆಗಳಲ್ಲಿ ನಡೆಯಲಿದೆ. ಈ ಪೈಕಿ ದಾವಣಗೆರೆ ಜಿಲ್ಲೆ ಮೊದಲ ಹಂತದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜ ನೀಡುವ ಅತ್ಯಂತ ಮಹತ್ತರವಾದ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರ ಮೂಲಕ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಲು ಕೋರಲಾಗಿದೆ.