ಡಿವಿಜಿ ಸುದ್ದಿ, ಬೆಂಗಳೂರು: ಅಧಿಕಾರದ ಆಸೆಯಿಂದ ಯಡಿಯೂರಪ್ಪ, ಶೋಭಾ ಕರಂದ್ಲಾಜೆ 2006ರಲ್ಲಿ ನಮ್ಮ ಮನೆ ಬಾಗಿಲಿಗೆ ಬಂದಿದ್ದರು. ನಾನು ಅಧಿಕಾರಕ್ಕಾಗಿ ಬಿಜೆಪಿ ಜತೆ ಹೋಗಿರಲಿಲ್ಲ. ಆದರೆ, ಪಕ್ಷದ ಉಳಿವಿಗಾಗಿ ಬಿಜೆಪಿ ಜೊತೆ ಮೈತ್ರಿ ಕಡಿದುಕೊಳ್ಳುವ ನಿರ್ಧಾರ ಮಾಡಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ಜೆಡಿಎಸ್ ಪಕ್ಷದ ರಾಜ್ಯ ಸಮಾವೇಶದಲ್ಲಿ ನಾತನಾಡಿದ ಅವರು, ಬಿಜೆಪಿಯವರಿಗೆ ಕಾಂಗ್ರೆಸ್ ಬಗ್ಗೆ ಭಯ ಇಲ್ಲ, ಇರುವುದು ಜೆಡಿಎಸ್ ಬಗ್ಗೆ ಮಾತ್ರ. ಬಿಜೆಪಿ ಸರ್ಕಾರವನ್ನು ನಡೆಸುತ್ತಿಲ್ಲ. ಅದು ವಿಎಚ್‌ಪಿ, ಆರೆಸ್ಸೆಸ್ ಕಾರ್ಯಸೂಚಿಯಂತೆ ನಡೆಯುತ್ತಿದೆ. ರಾಜ್ಯದ 224 ಕ್ಷೇತ್ರಗಳಲ್ಲಿ ಬಿಜೆಪಿ ದುರಾಡಳಿತದ ಬಗ್ಗೆ ಮನೆ ಮನೆಗೆ ತೆರಳಿ ಕರಪತ್ರ ಹಂಚುತ್ತೇವೆ ಎಂದರು.
2009ರಲ್ಲಿ ನಮಗೆ 9 ಸಚಿವ ಸ್ಥಾನ ಬಿಟ್ಟುಕೊಡಲು ಸೋನಿಯಾ ಮುಂದಾಗಿದ್ದರು. ಆದರೆ, ಅಧಿಕಾರಕ್ಕಾಗಿ ಪಕ್ಷದ ಹಿತ ಬಲಿ ಕೊಡಲಿಲ್ಲ. 2014ರಲ್ಲಿ ರಾಜನಾಥ್ ಸಿಂಗ್ ಅವರು 10 ಸಚಿವ ಸ್ಥಾನ ಕೊಡುವುದಾಗಿ ಹೇಳಿದರು. ಆಗ ಪಕ್ಷದ ಹಿತ ಬಲಿ ಕೊಡಲಿಲ್ಲ ಎಂದು ತಿಳಿಸಿದರು.
ಸೋಲು ಯಾವತ್ತೂ ಶಾಶ್ವತ ಅಲ್ಲ, ಸೋಲಿನಿಂದ ಕಾರ್ಯಕರ್ತರು ಎದೆಗುಂದಬಾರದು. 1989ರಲ್ಲಿ ದೇವೇಗೌಡರು ಹೊಳೆನರಸೀಪುರ ಮತ್ತು ಕನಕಪುರಗಳಲ್ಲಿ ಸೋತಿದ್ದರು. ಆದರೆ, ನಾಲ್ಕೇ ವರ್ಷದಲ್ಲಿ ಪಕ್ಷ ಮೈಕೊಡವಿ ಎದ್ದು ನಿಂತಿತು. ದೇವೇಗೌಡರು ದೇಶದ ಪ್ರಧಾನಿಯಾದರು ಎಂದರು.
ಸಮಾಜ ಒಡೆಯದು ರಕ್ತ ಹರಿಯಬೇಕು ಎಂಬುದು ಬಿಜೆಪಿ ಉದ್ದೇಶ. ಮಂಗಳೂರಿಗೂ, ಕುಮಾರಸ್ವಾಮಿಗೂ ಏನು ಸಂಬಂಧ ಎಂದು ಕೇಳುತ್ತೀರಿ..? ಅದೇ ಕನಕಪುರಕ್ಕೂ ಪ್ರಭಾಕರ ಭಟ್ಟರಿಗೂ ಏನು ಸಂಬಂಧ. ಮುಂದಿನ ದಿನಗಳಲ್ಲಿ ಲಿಂಗಾಯತರು ಬಿಜೆಪಿ ಕೈಕೊಡಲಿದ್ದಾರೆ ಎಂದರು.