Connect with us

Dvg Suddi-Kannada News

ಪ್ರವಾಹ, ಕೇಂದ್ರದ ‘ಬರೆ’ಯ ನಡುವೆಯೂ ಯಡಿಯೂರಪ್ಪ ‘ಭರಪೂರ’ ಬಜೆಟ್ ..!

ಪ್ರಮುಖ ಸುದ್ದಿ

ಪ್ರವಾಹ, ಕೇಂದ್ರದ ‘ಬರೆ’ಯ ನಡುವೆಯೂ ಯಡಿಯೂರಪ್ಪ ‘ಭರಪೂರ’ ಬಜೆಟ್ ..!

ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಕಳೆದ ವರ್ಷ ಉಂಟಾಗಿದ್ದ ಭೀಕರ ಪ್ರವಾಹ ಮತ್ತು ಕೇಂದ್ರ ಸರ್ಕಾರದ ಅನುದಾನ ಕೊರತೆಯ ನಡುವೆಯೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಈ ಬಾರಿಯ ಬಜೆಟ್ ನಲ್ಲಿ  ಡೀಸೆಲ್ , ಪೆಟ್ರೋಲ್ ಬೆಲೆ ಏರಿಕೆಯ ಹೊರತಾಗಿಯೂ ಭರಪೂರ ಬಜೆಟ್ ಮಂಡಿಸಿದ್ದಾರೆ.

ಈ ಬಾರಿಯ ಬಜೆಟ್ ಗಾತ್ರ ಒಟ್ಟು  2,37,893 ಕೋಟಿಯಷ್ಟಿದ್ದು, ಅದರಲ್ಲಿ ಒಟ್ಟು 2,33,134 ಕೋಟಿ ತೆರಿಗೆ ಸಂಗ್ರಹ ನಿರೀಕ್ಷೆಯ ಗುರಿ ಹೊಂದಲಾಗಿದೆ.  ಆದಾಯಕ್ಕಿಂತ 4759 ಕೋಟಿ ವೆಚ್ಚ ಹೆಚ್ವಚಾಗಿದೆ. ಹೀಗಾಗಿ ಇದೊಂದು ಕೊರತೆಯ ಬಜೆಟ್ ಆಗಿದೆ.

ಮುಖ್ಯಮಂತ್ರಿ ಬಿ.ಎಸ್. ಯುಡಿಯೂರಪ್ಪ ಅವರು 120 ಪುಟಗಳ ಬಜೆಟ್ ಪುಸ್ತಕವನ್ನು  1 ಗಂಟೆ  46 ನಿಮಿಷದಲ್ಲಿ ಓದಿ ಮುಗಿಸಿದರು.  ಯಡಿಯೂರಪ್ಪ ಬಜೆಟ್ ಮಂಡನೆ  ಆರಂಭಿಸುತ್ತಿದ್ದಂತೆ  ಪ್ರತಿಪಕ್ಷ ಸದಸ್ಯರು ಬಜೆಟ್ ಪ್ರತಿ ನೀಡುವಂತೆ ಒತ್ತಾಯಿಸಿ ಗಲಾಟೆ ಆರಂಭಿಸಿದರು. ಈ ತಡೆಯನ್ನು  ಬಿಟ್ಟರೆ ಎಲ್ಲಿಯೂ ಸಿಎಂ ಬಜೆಟ್ ಮಂಡನೆಗೆ ತಡೆ ನೀಡದೆ ಬಜೆಟ್ ಓದಿ ಮುಗಿಸಿದರು. ಈ ಬಾರಿ ಬಜೆಟ್  ಇಲಾಖೆವಾರು ಅನುದಾನ ವಿಭಜನೆ ಮಾಡದೆ, 6 ವಲಯಗಳನ್ನಾಗಿ ವಿಂಗಡಿಸಿ ಬಜೆಟ್ ನಲ್ಲಿ ಅನುದಾನ ಹಂಚಿಕೆ ಮಾಡಲಾಯಿತು.

ಭೀಕರ ಪ್ರವಾಹದಿಂದ ತತ್ತರಿಸಿದ್ದ ರಾಜ್ಯಕ್ಕೆ ಅಪಾರ ಪ್ರಮಾಣದ ಹಣ ವಿನಿಯೋಗ ಹಾಗೂ ಸರ್ಕಾರದ  ತೆರೆ ಸಂಗ್ರಹದ ಹಣ, ಅನುದಾನದ ಕೊರತೆಯ ನಡುವೆಯೇ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಮ್ಮದೇ ತೆರೆಗೆ ಸಂಗ್ರಹದ ಮೂಲ ಕಂಡುಕೊಂಡು ಬಜೆಟ್ ಮಂಡಿಸಿದ್ದಾರೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಿದ್ದ ಸುಮಾರು 11 ಸಾವಿರ ಕೋಟಿ ಜಿಎಸ್‌ಟಿ ಪಾಲು ಮತ್ತು ಅನುದಾನದಲ್ಲಿಯೂ ಸುಮಾರು 8000 ಕೋಟಿ ಬಂದಿಲ್ಲ. ಇನ್ನೊಂದೆಡೆ ನೆರೆ, ಬರವನ್ನು 35,160 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ಡೀಸೆಲ್ , ಪೆಟ್ರೋಲ್ ಬೆಲೆ ಏರಿಕೆ

ಹಣಕಾಸಿನ ಕರತೆಯನ್ನು ನೀಗಿಸಲು  ಪೆಟ್ರೋಲ್ ಮೇಲಿನ ತೆರಿಗೆಯನ್ನು ಶೇ. 32ರಿಂದ 35ಕ್ಕೆ ಮತ್ತು ಡೀಸೆಲ್ ಮೇಲಿನ ತೆರಿಗೆ ಶೇ 21ರಿಂದ ಶೇ 24ಕ್ಕೆ ಹೆಚ್ಚಳ  ಮಾಡಲಾಗಿದ್ದು,  ಪ್ರತಿ ಲೀಟರ್‌ ಪೆಟ್ರೋಲ್  1.60 ಮತ್ತು ಡೀಸೆಲ್ 1.59 ರೂಪಾಯಿ  ಹೆಚ್ಚಳವಾಗಲಿದೆ.

ಬಜೆಟ್ ಪ್ರಮುಖಾಂಶಗಳು

ಕೃಷಿ, ಪ್ರವಾಸೋದ್ಯಮಕ್ಕೆ ಆದ್ಯತೆ

ಪ್ರಾದೇಶಿಕ ಅಸಮತೋಲನ ನಿವಾರಣೆ, ಕೃಷಿ, ಕೈಗಾರಿಕೆ, ಪ್ರವಾಸೋದ್ಯಮಕ್ಕೆ ನಮ್ಮ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ಕೌಶಲ ಅಭಿವೃದ್ಧಿ ಮೂಲಕ ನಿರುದ್ಯೋಗ ನಿವಾರಣೆಗೆ ಗಮನ ನೀಡುತ್ತಿದ್ದೇವೆ. ರಾಜ್ಯದ ಒಟ್ಟಾರೆ ಜಿಡಿಪಿ ಕಳೆದ ವರ್ಷ ಶೇ 7.8ರಷ್ಟಿತ್ತು. 2019–20ರ ಸಾಲಿನಲ್ಲಿ ಇದು ಶೇ 6.8 ಮುಟ್ಟಬಹುದು ಎಂದು ನಿರೀಕ್ಷಿಸಲಾಗಿದೆ.

ಪ್ರಮುಖ ಯೋಜನೆಗಳ ಮುಂದುವರಿಕೆ

ಭಾಗ್ಯಲಕ್ಷ್ಮಿ, ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಸೇರಿದಂತೆ ಪ್ರಮುಖ ಯೋಜನೆಗಳನ್ನು ಮುಂದುವರಿಸುತ್ತೇವೆ

ಗ್ರಾಮ ಒನ್ ಯೋಜನೆ

ಸರ್ಕಾರದ ಎಲ್ಲ ಸೇವೆಗಳನ್ನು ಒಂದೇ ಸೂರಿನಡಿ ತರಲು ಬೆಂಗಳೂರು–1, ಕರ್ನಾಟಕ–1 ಮಾದರಿಯಲ್ಲಿ ಗ್ರಾಮ–1 ಕೇಂದ್ರಗಳ ಸ್ಥಾಪನೆಗೆ ಕ್ರಮ.

ರೈತರಿಗೆ ಕಿಸಾನ್‌ ಕಾರ್ಡ್‌ ವಿತರಣೆ

ಎಲ್ಲ ರೈತರು ಮತ್ತು ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ ಒದಗಿಸುವುದು. ರೈತರನ್ನು ಸಾಲಮುಕ್ತರಾಗಿಸಲು ಪಣ ತೊಟ್ಟಿದ್ದೇವೆ. ಬರ ನಿರೋಧಕ ಬೆಳೆಗಳಿಗೆ ಪ್ರೋತ್ಸಾಹ. ಸಿರಿಧಾನ್ಯಗಳನ್ನು ಬೆಳೆಯಲು ಪ್ರತಿ ಹೆಕ್ಟೇರ್‌ಗೆ 10 ಸಾವಿರದಂತೆ ಪ್ರೋತ್ಸಾಹಧನ ಕೊಡುತ್ತಿದ್ದೇವೆ. ಸಿರಿಧಾನ್ಯಗಳ ಪಟ್ಟಿಗೆ ಇನ್ನಷ್ಟು ಧಾನ್ಯಗಳನ್ನು ಸೇರಿಸಲು ಕ್ರಮ

ಸಾವಯವ ಕೃಷಿಗೆ ಹೆಚ್ಚಿನ ಪ್ರೋತ್ಸಾಹ

ನೀರಿನಲ್ಲಿ ಕರಗುವ ಗೊಬ್ಬರ, ಸೂಕ್ಷ್ಮ ಪೋಷಕಾಂಶಗಳ ಮಾಹಿತಿ ಮತ್ತು ಸಂಪನ್ಮೂಲಗಳನ್ನು ರೈತರಿಗೆ ಒದಗಿಸುತ್ತೇವೆ. ಸಾವಯವ ಕೃಷಿಗೆ ಪ್ರೋತ್ಸಾಹ ನೀಡಲು 200 ಕೋಟಿ ಮೀಸಲಿಟ್ಟಿದ್ದೇವೆ.

ಅಡಿಕೆ ಬೆಳೆಗಾರಿಗೆ ಬಡ್ಡಿ ವಿನಾಯ್ತಿ

ಅಡಿಕೆ ಬೆಳೆಗಾರರ ಪ್ರಾಥಮಿಕ ಸಹಕಾರ ಸಂಘಗಳಿಗೆ 2 ಲಕ್ಷದವರೆಗಿನ ಸಾಲಕ್ಕೆ ಶೇ 5ರಷ್ಟು ಬಡ್ಡಿ ವಿನಾಯ್ತಿ

ನೆರೆ ಪರಿಹಾರಕ್ಕೆ ಆದ್ಯತೆ

ಪ್ರಕೃತಿಯ ಮುನಿಸು, ನೈಸರ್ಗಿಕ ವಿಕೋಪ ಪರಿಹಾರಕ್ಕೆ ಆದ್ಯತೆ ನೀಡಿದ್ದೇವೆ. ಒಂದೆಡೆ ನೆರೆ ಮತ್ತೊಂದೆಡೆ ಬರವನ್ನು ರಾಜ್ಯ ಏಕಕಾಲಕ್ಕೆ ಎದುರಿಸಿತು. 7 ಲಕ್ಷ ಜನರ ಬದುಕಿಗೆ ತೊಂದರೆಯಾಯಿತು. 4.69 ಲಕ್ಷ ಹೆಕ್ಟೇರ್ ಕೃಷಿ ಭೂಮಿ ಹಾನಿಗೀಡಾಯಿತು. ರಸ್ತ,ಎ ಸೇತುವೆ, ಶಾಲೆ, ಅಂಗನವಾಡಿಗಳಿಗೆ ಹಾನಿಯಾಯಿತು. 35,160 ಕೋಟಿ ರೂಪಾಯಿ ನಷ್ಟವಾಗಿದೆ. 1869 ಕೋಟಿ ರೂಪಾಯಿ ಕೇಂದ್ರ ಸರ್ಕಾರ ನೀಡಿದೆ. ಈವರೆಗೆ 6.45 ಲಕ್ಷ ರೈತರಿಗೆ ಪರಿಹಾರ ಒದಗಿಸಿದ್ದೇವೆ.  ಪರಿಹಾರ ಮತ್ತು ಪುನರ್ವಸತಿಗೆ ಸಾಕಷ್ಟು ಗಮನ ಕೊಟ್ಟಿದ್ದೇವೆ. ಸುಭಿಕ್ಷ ಮತ್ತು ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ.

ಶೀತಲಗೃಹಗಳ ಸ್ಥಾಪನೆಗೆ ಕ್ರಮ

ತೋಟಗಾರಿಕೆ ಬೆಳೆಗಳ ಸುಗಮ ನಿರ್ವಹಣೆಗೆ 5000 ಮೆಟ್ರಿಕ್ ಟನ್ ಸಾಮರ್ಥ್ಯದ 10 ಶೀತಲಗೃಹಗಳನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸಲಾಗುವುದು.

ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯಕ್ಕೆ 155 ಕೋಟಿ

ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳನ್ನು ಗಮನದಲ್ಲಿರಿಸಿಕೊಂಡು ಶಿವಮೊಗ್ಗ ಕೃಷಿ ವಿಶ್ವ ವಿದ್ಯಾಲದ ಅಭಿವೃದ್ಧಿ ಕಾರ್ಯ ವಿಸ್ತರಣೆಗೆ 155 ಕೋಟಿ ಅನುದಾನ

ಆಹಾರ ಸಂಸ್ಕರಣಾ ಘಟಕಗಳಿಗೆ ಅಗತ್ಯ ನೆರವು

ನೀರು ಮತ್ತು ಗೊಬ್ಬರದ ವೈಜ್ಞಾನಿಕ ಬಳಕೆಗೆ ಕ್ರಮ ತೆಗೆದುಕೊಳ್ಳುತ್ತೇವೆ. ಆಹಾರ ಸಂಶೋಧನೆಗಳ ಬಲವರ್ಧನೆ ನಮ್ಮ ಆದ್ಯತೆ. ಆಹಾರ ಸಂಸ್ಕರಣಾ ಘಟಕಗಳು ಮತ್ತು ಉದ್ದಿಮೆಗಳಿಗೆ ತೋಟಗಾರಿಕೆ, ಆಹಾರ ಸಂಸ್ಕರಣಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮೌಲ್ಯವರ್ಧಿತ ಸಂಸ್ಕರಣೆ, ದಾಸ್ತಾನು ಮತ್ತು ಪ್ಯಾಕಿಂಗ್‌ಗೆ ಸಂಬಂಧಿಸಿದ ಅಗತ್ಯ ನೆರವು ಒದಗಿಸಲಾಗುವುದು

ಜಲಾನಯನ ಪ್ರದೇಶ ಅಭಿವೃದ್ಧಿಗೆ ಕ್ರಮ

ಸುಜಲಾ–3 ಯೋಜನೆ ಮಾದರಿಯಲ್ಲಿಯೇ ವಿಶ್ವಬ್ಯಾಂಕ್ ಸಹಕಾರದಲ್ಲಿ 10 ಲಕ್ಷ ಹೆಕ್ಟೇರ್ ಜಲಾನಯನ ಪ್ರದೇಶದಲ್ಲಿ ಭೂ ಮೌಲ್ಯ ಸಂವರ್ಧನಗೆ ಕ್ರಮ.

ನೀರಾವರಿ ಒದಗಿಸಲು ಕ್ರಮ

2020–21ನೇ ಸಾಲಿನಲ್ಲಿ 1 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಹೆಚ್ಚುವರಿಯಾಗಿ ಜಲಸಂಪನ್ಮೂಲ ಇಲಾಖೆಯ ಮೂಲಕ ನೀರಾವರಿ ಒದಗಿಸಲು ಕ್ರಮ ತೆಗೆದುಕೊಳ್ಳುತ್ತೇವೆ.

ಮಹದಾಯಿ  500 ಕೋಟಿ, ಎತ್ತಿನಹೊಳೆಗೆ 1500 ಕೋಟಿ ಅನುದಾನ

ಮಹದಾಯಿ ಯೋಜನೆ  500 ಕೋಟಿ, ಎತ್ತಿನಹೊಳೆಗೆ 1500 ಕೋಟಿ ಅನುದಾನ

ವರಾಹ ಯೋಜನೆ ಘೋಷಣೆ

ಹೈನುಗಾರಿಕೆ, ಕುರಿ, ಮೇಕೆ, ಹಂದಿ ಸಾಕಾಣಿಕೆಗೆ ಇರುವ ಸಾಧ್ಯತೆಗಳನ್ನು ಅನ್ವೇಷಿಸಿ ಸಮಗ್ರ ನೀತಿ ರೂಪಿಸಲಾಗುವುದು. ವಿದೇಶಿ ಹಂದಿ ತಳಿಗಳನ್ನು ಆಮದು ಮಾಡಿಕೊಳ್ಳಲು ವರಾಹ ಯೋಜನೆ ಘೋಷಣೆ.

ಮೀನುಗಾರಿಕೆ

ಕರ್ನಾಟಕ ಮತ್ಸ್ಯ ವಿಕಾಸ ಯೋಜನೆಯ ಮೂಲಕ 2020–21 ಸಾಲಿನಲ್ಲಿ ಅಗತ್ಯ ಅನುದಾನ.

ಮಹಿಳಾ ಮೀನುಗಾರ ಸಬಲೀಕರಣ ಯೋಜನೆ ಮೂಲಕ ದ್ವಿಚಕ್ರ ವಾಹನ ವಿತರಣೆ.

ಹಿನ್ನೀರು ಮೀನುಗಾರಿಕೆ ಸದೃಢಗೊಳಿಸಲು ಕ್ರಮ

ಮೀನುಗಾರಿಕೆ ಬಂದರು ಮತ್ತು ಪೂರಕ ಸೌಕರ್ಯಗಳಿಗಾಗಿ ಉಡುಪಿ ಜಿಲ್ಲೆಯಲ್ಲಿ ಬಂದರು ಅಭಿವೃದ್ಧಿ

ಮಳೆ ನೀರು, ಜಲಸಂರಕ್ಷಣೆಗೆ ವಿಶೇಷ ಯೋಜನೆ

ಜಲಸಂರಕ್ಷಣೆ ಮತ್ತು ಮಳೆ ನೀರು ಸಂರಕ್ಷಣೆಗಾಗಿ ವಿಶೇಷ ಯೋಜನೆ ರೂಪಿಸುತ್ತೇವೆ. 810 ಅತಿ ಸಣ್ಣ ಜಲಾನಯನ ಪ್ರದೇಶಗಳಲ್ಲಿ ಯೋಜನೆ ಜಾರಿ ಮಾಡುತ್ತೇವೆ.

ವಾಣಿಜ್ಯ ತೆರಿಗೆ

ರಾಜ್ಯದಲ್ಲಿ ವಾಣಿಜ್ಯ ತೆರಿಗೆ ಪುನರ್‌ ರಚನೆಗೆ ಕ್ರಮ. ತೆರಿಗೆ ಆಡಳಿತದಲ್ಲಿ ವೃತ್ತಿಪರತೆ ಉತ್ತೇಜಿಸಲು ಹಾಗೂ ಅಸಾಧಾರಣೆ ಸೇವೆಗಳನ್ನು ಗುರುತಿಸಲು ಸೂಕ್ತ ಪ್ರಶಸ್ತಿ ಹಾಗೂ ಪುರಸ್ಕಾರ ಯೋಜನೆ ಆರಂಭ.

ರಾಜ್ಯ ವ್ಯಾಪಿ ಸುರಕ್ಷಾ ಆ್ಯಪ್‌ ವಿಸ್ತರಣೆಗೆ ಕ್ರಮ

ಬೆಂಗಳೂರು ನಗರದ 2 ಲಕ್ಷಕ್ಕೂ ಹೆಚ್ಚು ಮಹಿಳೆಯರು ಸುರಕ್ಷಾ ಆ್ಯಪ್ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಈ ಸೇವೆಯನ್ನು ರಾಜ್ಯವ್ಯಾಪಿ ವಿಸ್ತರಿಸುತ್ತೇವೆ. ಮಹಿಳೆಯರಿಗೆ ತುರ್ತ ಸ್ಪಂದನಾ ವಾಹನಗಳ ಮೂಲಕ ರಕ್ಷಣೆ ನೀಡಲು ಕ್ರಮ ತೆಗೆದುಕೊಳ್ಳುತ್ತೇವೆ.

ಪ್ರವಾಸೋದ್ಯಮ

ಹೊಸ ಪ್ರವಾಸೋದ್ಯಮ ನೀತಿಗೆ ಚಾಲನೆ. ಸುಧಾಮೂರ್ತಿ ನೇತೃತ್ವದಲ್ಲಿ ‘ಕರ್ನಾಟಕ ಪ್ರವಾಸೋದ್ಯಮ ಕಾರ್ಯಪಡೆ’ ಸ್ಥಾಪನೆ. ಪ್ರವಾಸಿಗರ ಆಕರ್ಷಣೆಗೆ  100 ಕೋಟಿ, ಪ್ರವಾಸೋದ್ಯಮದ ಅಭಿವೃದ್ಧಿಗೆ  500 ಕೋಟಿ ಅನುದಾನ.

ಹಿರಿಯರಿಗೆ ಪ್ರವಾಸ ಭಾಗ್ಯ

ರಾಜ್ಯ ಪ್ರವಾಸೋದ್ಯಮ ನಿಗಮ, ರೈಲ್ವೆ ಇಲಾಖೆಯ ಐಆರ್‌ಸಿಟಿಸಿ ಸಹಯೋಗದಲ್ಲಿ 60 ವರ್ಷ ಮೀರಿದ ಬಡ ಫಲಾನುಭವಿಗಳಿಗಾಗಿ  20 ಕೋಟಿ ವೆಚ್ಚದಲ್ಲಿ ‘ಜೀವನ ಚೈತ್ರ ಯಾತ್ರೆ’ ಆರಂಭಿಸಲು ಕ್ರಮ.

ಲಂಬಾಣಿ ಭಾಷಾ ಅಕಾಡೆಮಿ ಸ್ಥಾಪನೆ

ಲಂಬಾಣಿ ಸಂಸ್ಕೃತಿ ಮತ್ತು ಭಾಷೆಯ ಉಳಿವಿಗೆ  50 ಲಕ್ಷ ಅನುದಾನದಲ್ಲಿ ಲಂಬಾಣಿ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಸ್ಥಾಪನೆಗೆ ಕ್ರಮ

ಫಿಲಂ ಸಿಟಿಗೆ 500 ಕೋಟಿ

ಕರ್ನಾಟಕದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಜಾಗತಿಕ ಮಟ್ಟದ ಫಿಲಂ ಸಿಟಿ ಸ್ಥಾಪನೆಗೆ ₹ 500 ಕೋಟಿ ಅನುದಾನ.
ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣ

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ ₹ 66 ಕೋಟಿ ವೆಚ್ಚದಲ್ಲಿ 100 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆ ನಿರ್ಮಾಣ.

‌ಯುವಜನತೆಯಲ್ಲಿ ನಾಯಕತ್ವ

ಯುವಜನತೆಯಲ್ಲಿ ನಾಯಕತ್ವ ಹಾಗೂ ಮೌಲ್ಯ ರೂಪಿಸಲು ‘ಅನಂತ್‌ಕುಮಾರ್ ಪ್ರತಿಷ್ಠಾನ’ ಸ್ಥಾಪನೆ.  10 ಕೋಟಿ ಅನುದಾನ.

ಅನುಭವನ ಮಂಟಪ ನಿರ್ಮಾಣಕ್ಕೆ 500 ಕೋಟಿ

500 ಕೋಟಿ ವೆಚ್ಚದಲ್ಲಿ ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ. 2020–21ನೇ ಸಾಲಿನಲ್ಲಿ 100 ಕೋಟಿ ಅನುದಾನ.

ಚಿತ್ರದುರ್ಗದ ಮುರುಘಾ ಮಠದ ಆವರಣದಲ್ಲಿ 325 ಕೋಟಿ ಎತ್ತರದ ಜಗಜ್ಯೋತಿ ಬಸವೇಶ್ವರರ ಕಂಚಿನ ಪುತ್ಥಳಿ ನಿರ್ಮಾಣ. 20 ಕೋಟಿ ಅನುದಾನ.

ಬಿಎಂಟಿಸಿಗೆ 1500 ಹೊಸ ಬಸ್‌ ಖರೀದಿ

ಬಿಎಂಟಿಸಿಯಿಂದ  600 ಕೋಟಿ ವೆಚ್ಚದಲ್ಲಿ 1500 ಬಸ್‌ಗಳ ಖರೀದಿ. ಇದಕ್ಕಾಗಿ ಬಿಎಂಟಿಸಿಗೆ ರಾಜ್ಯ ಸರ್ಕಾರದಿಂದ ಪ್ರತಿ ವರ್ಷಕ್ಕೆ 100 ಕೋಟಿ ಸಾಲರೂಪದ ಸಹಾಯಧನ.

ಉಪನಗರ ರೈಲು ಯೋಜನೆ

ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರ ₹ 18,000 ಕೋಟಿ ಮಂಜೂರು ಮಾಡಿದೆ. ಈ ಯೋಜನೆಗೆ ರಾಜ್ಯ ಸರ್ಕಾರ  500 ಕೋಟಿ ಅನುದಾನ ಮೀಸಲಿಡಲಿದೆ.

ಬೆಂಗಳೂರು ಅಭಿವೃದ್ಧಿಗೆ ಹೆಚ್ಚು ಒತ್ತು

ಸರ್ವತೋಮುಖ ಅಭಿವೃದ್ಧಿಗೆ ಬದ್ಧ. ಬೆಂಗಳೂರು ನಗರಕ್ಕೆ ಸೀಮಿತವಾಗಿ ಪ್ರತ್ಯೇಕ ಪೌರ ನಿಗಮ ಕಾಯ್ದೆ ರಚನೆ.

ಬೆಂಗಳೂರಿಗೆ ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯಡಿ 8344 ಕೋಟಿ ಅನುದಾನ

ಶುಭ್ರ ಬೆಂಗಳೂರು ಯೋಜನೆಯಡಿ ಘನತ್ಯಾಜ್ಯ ನಿರ್ವಹಣೆಗೆ 999 ಕೋಟಿ ಮಂಜೂರು.

ವಿದ್ಯುತ್ ಚಾಲಿತ ವಾಹನಗಳಿಗೆ ಪ್ರೋತ್ಸಾಹ

ರಾಮನಗರ ತಾಲ್ಲೂಕು ಹಾರೋಹಳ್ಳಿ ಬಳಿ  10 ಕೋಟಿ ವೆಚ್ಚದಲ್ಲಿ ವಿದ್ಯುತ್ ಚಾಲಿತ ವಾಹನಗಳು ಮತ್ತು ಇಂಧನ ಶೇಖರಣಾ ಕ್ಲಸ್ಟರ್ ಸ್ಥಾಪನೆಗೆ ಕ್ರಮ.

ಕೈಗಾರಿಕಾ ಕ್ಲಸ್ಟರ್

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ‘ಉತ್ಪನ್ನ ನಿರ್ದಿಷ್ಟ ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿ’ಗೆ ಕ್ರಮ. ಅದರಂತೆ ಶಿವಮೊಗ್ಗದಲ್ಲಿ ಹೆಲ್ತ್‌ ಆಂಡ್ ವೆಲ್‌ನೆಸ್, ಧಾರವಾಡದಲ್ಲಿ ‘ಹೋಂ ಅಂಡ್ ಪರ್ಸನಲ್ ಕೇರ್ ಕನ್ಸೂಮರ್ ಗೂಡ್ಸ್‌ ಮ್ಯಾನ್ಯುಫ್ಯಾಕ್ಚರಿಂಗ್ ಕ್ಲಸ್ಟರ್’ ಅಭಿವೃದ್ಧಿ.
ಹೂಡಿಕೆದಾರರ ಆಕರ್ಷಣೆಗೆ ಕ್ರಮ

2020ರ ನವೆಂಬರ್‌ನಲ್ಲಿ ಕರ್ನಾಟಕದಲ್ಲಿ ಜಾಗತಿಕ ಮಟ್ಟದ ‘ಇನ್‌ವೆಸ್ಟ್ ಕರ್ನಾಟಕ 2020’ ಹೂಡಿಕೆದಾರರ ಸಮಾವೇಶ ಆಯೋಜನೆ.

ನದಿ ಮಾಲಿನ್ಯಕ್ಕೆ ಕಡಿವಾಣ

17 ನದಿಗಳಲ್ಲಿ ಮಾಲಿನ್ಯಕ್ಕೆ ಕಡಿವಾಣ ಹಾಕಲು  1690 ಕೋಟಿ ವೆಚ್ಚದಲ್ಲಿ 20 ನಗರ ಪಟ್ಟಣಗಳಲ್ಲಿ ಮಲತ್ಯಾಜ್ಯ ಸಂಸ್ಕರಣ ಘಟಕ ಸ್ಥಾಪನೆಗೆ ಕ್ರಮ. 2020–21ನೇ ಸಾಲಿನಲ್ಲಿ 100 ಕೋಟಿ ಅನುದಾನ ಘೋಷಣೆ.

 ಮನೆ ಮನೆಗೆ ಗಂಗೆ ಯೋಜನೆ

ಮನೆ ಮನೆಗೆ ಗಂಗೆ ನೂತನ ಯೋಜನೆ ಘೋಷಣೆ. 10 ಲಕ್ಷ ಮನೆಗಳಿಗೆ ನೀರಿನ ಸಂಪರ್ಕ ಒದಗಿಸಲು ಕ್ರಮ. ವಿಜಯಪುರ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಬೃಹತ್ ಕುಡಿಯುವ ನೀರು ಯೋಜನೆ ಜಾರಿಗೆ  700 ಕೋಟಿ ಅನುದಾನ.

 ಗ್ರಾಮೀಣ ಸುಮಾರ್ಗ ಯೋಜನೆ

 ಗ್ರಾಮೀಣ ರಸ್ತೆಗಳ ಸುಧಾರಣೆಗೆ ‘ಗ್ರಾಮೀಣ ಸುಮಾರ್ಗ ಯೋಜನೆ’ ಘೋಷಣೆ. 20,000 ಕಿ.ಮೀ. ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಕ್ರಮ. ₹ 780 ಕೋಟಿ ಮೀಸಲು.

ಹೈದರಾಬಾದ್ ಕರ್ನಾಟಕ

ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ  1500 ಕೋಟಿ

ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘಕ್ಕೆ  500 ಕೋಟಿ ಅನುದಾನ

ಮೊಬೈಲ್ ಕ್ಲಿನಿಕ್

ರಾಜ್ಯದಲ್ಲಿ ಕಟ್ಟಡ ಕಾರ್ಮಿಕರ ಆರೋಗ್ಯ ರಕ್ಷಣೆಗಾಗಿ 10 ‘ಮೊಬೈಲ್ ಕ್ಲಿನಿಕ್’, 10 ಸಂಚಾರಿ ಶಿಶುಪಾಲನಾ ಕೇಂದ್ರ ಆರಂಭ.

ಬ್ರೈಲ್‌ ಕಂ ಟಾಕಿಂಗ್‌ ಲೈಬ್ರರಿ ಸ್ಥಾಪನೆ

ಬೆಂಗಳೂರು ಮತ್ತು ಕಲಬುರ್ಗಿಯಲ್ಲಿ ಬ್ರೈಲ್‌ ಕಂ ಟಾಕಿಂಗ್‌ ಲೈಬ್ರರಿ ಸ್ಥಾಪನೆಗೆ ₹ 30 ಲಕ್ಷ ಮೀಸಲು. ಮೈಸೂರಿನ ಬ್ರೈಲ್‌ ಮುದ್ರಣಾಲಯದಲ್ಲಿ  80 ಲಕ್ಷ ವೆಚ್ಚದ ಹೊಸ ಮುದ್ರಣ ಯಂತ್ರ ಸ್ಥಾಪನೆ.
ಉಪಕಾರ ಯೋಜನೆ

ಬಾಲಮಂದಿರದಿಂದ 21 ವರ್ಷ ತುಂಬಿದ ನಂತರ ಬಿಡುಗಡೆ ಹೊಂದುವರವರಿಗೆ ಜೀವನೋಪಾಯ ರೂಪಿಸಿಕೊಳ್ಳಲು ತಿಂಗಳಿಗೆ  5000 ಆರ್ಥಿಕ ನೆರವು ನೀಡುವ ಉಪಕಾರ ಯೋಜನೆ.

ಮಕ್ಕಳ ಅಯವ್ಯಯ

2020–21ನೇ ಸಾಲಿನ ಅಯವ್ಯಯದಲ್ಲಿ ಶೇ. 15ರಷ್ಟನ್ನು ಮೀಸಲಿಟ್ಟಿದ್ದೇವೆ. ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯದ ಬದ್ಧತೆಯನ್ನು ಇದು ತೋರಿಸುತ್ತದೆ.

ಮಕ್ಕಳ ಅಯವ್ಯಯ ವನ್ನು ನಮ್ಮ ಸರ್ಕಾರ ಇತಿಹಾಸದಲ್ಲಿ ಮೊದಲ ಬಾರಿಗೆ ಮಂಡಿಸುತ್ತಿದೆ. ಇದಕ್ಕಾಗಿ 36,340 ಕೋಟಿ ಮೀಸಲಿಡಲಾಗಿದೆ.

ಕೆಎಸ್‌ಆರ್‌ಟಿಸಿ ಹೊಸ ಬಸ್‌ ಖರೀದಿ

ಕೆಎಸ್ಆರ್‌ಟಿಸಿಗೆ 2450 ಹೊಸ ಬಸ್ ಖರೀದಿಗೆ ನಿರ್ಧಾರ.

ನವಜಾತ ಶಿಶು ಪೋಷಣಾ ಘಟಕಗಳ ಸ್ಥಾಪನೆ

ನವಜಾತ ಶಿಶುಗಳ ಪೋಷಣೆ ಸುಧಾರಿಸಲು ವೈದ್ಯಕೀಯ ಕಾಲೇಜುಗಳಲ್ಲಿ ಅಗತ್ಯ ಘಟಕಗಳ ಸ್ಥಾಪನೆ. ಹಾಗ ಎಲ್ಲ ನವಜಾತ ಶಿಶುಗಳಿಗೆ ಶ್ರವಣ ದೋಷ ಪರಿಶೀಲನೆಗೆ ಕ್ರಮ. ಶ್ರವಣ ದೋಷ ಮುಕ್ತ ರಾಜ್ಯವಾಗಿಸಲು ನಿರ್ಧಾರ.

 ಶಿಕ್ಷಕ ಮಿತ್ರ ಆ್ಯಪ್ ಅಭಿವೃದ್ಧಿ

ಶಿಕ್ಷಕರಿಗೆ ಎಲ್ಲ ಸೇವಾ ಸೌಲಭ್ಯಗಳನ್ನು ಅಂತರ್ಜಾಲದ ಮೂಲಕ ಒದಗಿಸಲು ಕ್ರಮ. ಶಿಕ್ಷಕರಿಗಾಗಿ ‘ಶಿಕ್ಷಕ ಮಿತ್ರ’ ಆ್ಯಪ್ ಅಭಿವೃದ್ಧಿಪಡಿಸಲು ಕ್ರಮ.

ವಸತಿ ಶಾಲೆಗಳ ಮೇಲ್ದರ್ಜೆಗೆ ಕ್ರಮ

ಅಲ್ಪಸಂಖ್ಯಾತರ ಇಲಾಖೆ ನಿರ್ವಹಿಸುತ್ತಿರುವ 5 ಮೊರಾರ್ಜಿ ವಸತಿ ಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳಾಗಿ ಮೇಲ್ದರ್ಜೆಗೆ ಏರಿಸಲು ಕ್ರಮ.

ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ 2 ಲಕ್ಷ ಮನೆಗಳ ನಿರ್ಮಾಣಕ್ಕೆ  1500 ಕೋಟಿ ಒದಗಿಸಲು ಕ್ರಮ.

ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲ ಸೌಕರ್ಯ ವೃದ್ಧಿಗೆ ಕ್ರಮ.

ಮಕ್ಕಳು ಪಠ್ಯವನ್ನು ಉಲ್ಲಾಸದಿಂದ ಕಲಿಯುವಂತೆ ಮಾಡಲು ತಿಂಗಳಲ್ಲಿ 2 ದಿನ ಬ್ಯಾಗ್‌ ರಹಿತ ದಿನವಾಗಿ ಮಾಡಲು ಸೂಚನೆ.

ಸ್ಕೌಟ್ಸ್‌ ಮತ್ತು ಗೈಡ್ಸ್‌ ಕೇಂದ್ರಗಳಿಗೆ 4 ಕೋಟಿ ರೂಪಾಯಿ ಅನುದಾನ.

 ದ್ವಿಚಕ್ರ ವಾಹನ ಸಾಲ ಸೌಲಭ್ಯ

ಇ–ಕಾಮರ್ಸ್‌ ಉದ್ಯೋಗಕ್ಕೆ ಸೇರುವವರಿಗೆ ದೇವರಾಜ್ ಅರಸ್ ನಿಗಮದ ಮೂಲಕ ದ್ವಿ ಚಕ್ರ ವಾಹನ ಕೊಳ್ಳಲು ಸಾಲ ಸೌಲಭ್ಯ.

ಶಿವಮೊಗ್ಗ, ಮೈಸೂರಿನಲ್ಲಿ ಔಷಧಿ ತಯಾರಿಕಾ ಘಟಕ ಸ್ಥಾಪನೆ

ಬುಡಕಟ್ಟು ವೈದ್ಯ ಪದ್ಧತಿಗೆ ಪೂರಕವಾಗಿ ಔಷಧಿ ತಯಾರಿಗಾಗಿ ಶಿವಮೊಗ್ಗ ಮತ್ತು ಮೈಸೂರಿನಲ್ಲಿ ಘಟಕ ಸ್ಥಾಪನೆ.

ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ. 25ರಷ್ಟು ಸ್ಥಾನ ಮೀಸಲು

ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಆಯಾ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಸ್ಥಾನಗಳನ್ನು ಮೀಸಲಿಡಲು ಕ್ರಮ.

.

 

 

 

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top