ಡಿವಿಜಿ ಸುದ್ದಿ, ರಾಮನಗರ:ತಾಲ್ಲೂಕಿನ ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ಸ್ಥಾಪನೆ ವಿವಾದದ ಸ್ವರೂಪ ಪಡೆದ ಬೆನ್ನಲ್ಲೇ ಇಂದು ಉಪ ವಿಭಾಗಾಧಿಕಾರಿ (ಎಸಿ) ನೇತೃತ್ವದ ಅಧಿಕಾರಿಗಳ ತಂಡವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸರ್ಕಾರ ಸ್ಥಳಕ್ಕೆ ಭೇಟಿ ನೀಡಿ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ ದಾಕ್ಷಾಯಿಣಿ ಹಾಗೂ ಕನಕಪುರ ತಹಶೀಲ್ದಾರ್ ಆನಂದಯ್ಯ ಸ್ಥಳ ಭೇಟಿ ನೀಡಿ ಕ್ರೈಸ್ತರಿಂದ ವಸ್ತು ಸ್ಥಿತಿ ಮಾಹಿತಿ ಪಡೆದರು.
ಪರಿಶೀಲನೆ ನಂತರ ಮಾತನಾಡಿದ ತಹಶೀಲ್ದಾರ್ ಆನಂದಯ್ಯ , ಕಪಾಲಿ ಬೆಟ್ಟದ ಸುತ್ತ 235 ಎಕರೆ ಗೋಮಾಳವಿದೆ. ಇದರಲ್ಲಿ 80 ಎಕರೆಯಷ್ಟು ಜಮೀನನ್ನು ರೈತರು ಹಾಗೂ ಕಪಾಲಿ ಬೆಟ್ಟ ಅಭಿವೃದ್ದಿ ಟ್ರಸ್ಟ್‌ಗೆ ಸರ್ಕಾರ ಹಂಚಿಕೆ ಮಾಡಿದೆ. ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಟ್ರಸ್ಟ್‌ಗೆ 10 ಎಕರೆ ಜಾಗ ನೀಡಲಾಗಿದೆ.

ಸದ್ಯ ಪ್ರತಿಮೆಯ ಮೆಟ್ಟಿಲುಗಳ ನಿರ್ಮಾಣ ಕಾಮಗಾರಿ ನಡೆದಿದೆ. ಪ್ರತಿಮೆ ನಿರ್ಮಾಣಗೊಳ್ಳುತ್ತಿರುವ ಸ್ಥಳಕ್ಕೆ ಬೆಸ್ಕಾಂ ವಿದ್ಯುತ್ ಸಂಪರ್ಕ ನೀಡಿದೆ. ಜಿಲ್ಲಾ ಪಂಚಾಯಿತಿ ವತಿಯಿಂದ ಕೊಳವೆ ಬಾವಿ ಕೊರೆಯಿಸಲಾಗಿದೆ. ಅಧಿಕಾರಿಗಳು ನಿಯಮ ಮೀರಿ ಈ ಸವಲತ್ತು ಕಲ್ಪಿಸಿದ್ದಾರೆ ಎಂಬ ಆಕ್ಷೇಪ ಕೇಳಿ ಬಂದಿದೆ ಎಂದು ತಿಳಿಸಿದರು.
ಸರ್ಕಾರದ ಸೂಚನೆಯಂತೆ ಕಪಾಲಿ ಬೆಟ್ಟಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದೇವೆ. ಈ ಬಗ್ಗೆ ಸರ್ಕಾಕ್ಕೆ ಶೀಘ್ರ ವರದಿ ಸಲ್ಲಿಸುತ್ತೇವೆ
-ದಾಕ್ಷಾಯಿಣಿ, ಉಪ ವಿಭಾಗಾಧಿಕಾರಿ, ರಾಮನಗರ
ಪ್ರತಿಜ್ಞೆ ನೆನಪಿಸಿಕೊಳ್ಳಲಿ
ಬಿಜೆಪಿಗರು ಸಚಿವರಾಗುವಾಗ ಮಾಡಿದ ಪ್ರತಿಜ್ಞೆ ಮನನ ಮಾಡಿಕೊಳ್ಳಲಿ. ಆರ್. ಅಶೋಕ, ಅನಂತಕುಮಾರ್ ಹೆಗಡೆ ಸೇರಿದಂತೆ ಯಾರು ಬೇಕಾದರೂ ಸ್ಥಳ ಪರಿಶೀಲಿಸಸಲಿ. ಸಿ.ಟಿ. ರವಿ, ಅಶೋಕ್, ಈಶ್ವರಪ್ಪ ಅವರಿಗೆ ಒತ್ತಡ ಇದೆ. ಮಂತ್ರಿಯಾದವರು ರಾಜ್ಯದ ಹಿತ ಬಯಸಬೇಕು ಎಂದು ಡಿ.ಕೆ.ಶಿವಕುಮಾರ್ ಕನಕಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಬಿಜೆಪಿ ಸರ್ಕಾರ ಜಮೀನು ವಾಪಸ್ ಪಡೆಯುವ ಬಗ್ಗೆ ನಾನೇನು ಹೇಳಲಾರೆ. ಸಚಿವರಿಗೆ ಒತ್ತಡ ಇರಬಹುದು. ಯಾವ ಧರ್ಮ, ದೇವರು ಆರಾಧನೆ ಮಾಡಬೇಕು ಎನ್ನುವುದು ಅವರವರ ವೈಯಕ್ತಿಕ ವಿಚಾರ ಎಂದರು.
ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಯೇಸು ಪ್ರತಿಮೆ ನಿರ್ಮಾಣ ಒಳ್ಳೆಯದು. ಬಿಜೆಪಿಯವರಿಗೆ ತಾಕತ್ತಿದ್ದರೆ ರಾಮದೇವರ ಬೆಟ್ಟದಲ್ಲಿ ರಾಮನ ಪ್ರತಿಮೆ ನಿರ್ಮಾಣ ಮಾಡಲಿ ಎಂದು ಸಂಸದ ಡಿ.ಕೆ. ಸುರೇಶ್ ಸವಾಲು ಹಾಕಿದರು.



