Connect with us

Dvgsuddi Kannada | online news portal | Kannada news online

ಶೀಘ್ರವೇ ಅಶೋಕ ಟಾಕೀಸ್ ರೈಲ್ವೆ ಗೇಟ್ ಅಂಡರ್ ಬ್ರಿಡ್ಜ್  ನಿರ್ಮಾಣಕ್ಕೆ ಚಾಲನೆ : ರೈಲ್ವೆ  ಸಚಿವ ಸುರೇಶ್ ಅಂಗಡಿ

ದಾವಣಗೆರೆ

ಶೀಘ್ರವೇ ಅಶೋಕ ಟಾಕೀಸ್ ರೈಲ್ವೆ ಗೇಟ್ ಅಂಡರ್ ಬ್ರಿಡ್ಜ್  ನಿರ್ಮಾಣಕ್ಕೆ ಚಾಲನೆ : ರೈಲ್ವೆ  ಸಚಿವ ಸುರೇಶ್ ಅಂಗಡಿ

ಡಿವಿಜಿ ಸುದ್ದಿ, ದಾವಣಗೆರೆ: ಅಶೋಕ ಟಾಕೀಸ್ ರೈಲ್ವೆ  ಗೇಟ್‍ ಬಳಿ ನೆನೆಗುದಿಗೆ ಬಿದ್ದಿರುವ ರೈಲ್ವೆ ಅಂಡರ್ ಬ್ರಿಡ್ಜ್ ಅಥವಾ ಓವರ್‍ಬ್ರಿಡ್ಜ್ ಸಮಸ್ಯೆಗೆ ಪರಿಹಾರ ದೊರೆತಿದ್ದು, ಶೀಘ್ರದಲ್ಲಿಯೇ ಈ ಸ್ಥಳದಲ್ಲಿ ಎರಡು ಕಡೆ ವೆಂಟ್‍ಗಳ(ಅಂಡರ್‍ಬ್ರಿಡ್ಜ್)ನಿರ್ಮಾಣಕ್ಕೆ ಯೋಜನೆ ಸಿದ್ದಪಡಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ಕೇಂದ್ರದ ರಾಜ್ಯ ರೈಲ್ವೆ ಸಚಿವ ಸುರೇಶ್ ಸಿ.ಅಂಗಡಿ ಹೇಳಿದರು.

ಇಂದು ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ರೈಲ್ವೆ ಯೋಜನೆಗಳ ಕುರಿತು ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಅಶೋಕ ಟಾಕೀಸ್ ಬಳಿ ಇರುವ ರೇಲ್ವೆ ಗೇಟ್ ಬಳಿ ಸಾರ್ವಜನಿಕರ ಓಡಾಟಕ್ಕೆ ಅನೇಕ ವರ್ಷಗಳಿಂದ ಸಮಸ್ಯೆ ಉಂಟಾಗುತ್ತಿದ್ದು,ಈ ಬಾರಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದರು.

ಪ್ರಸ್ತುತ ರೇಲ್ವೆ ಗೇಟ್ ಬಳಿ ಒಂದು ಮತ್ತು ಪುಷ್ಪಾಂಜಲಿ ಟಾಕೀಸ್ ಬಳಿ ಲಾರಿಗಳನ್ನು ನಿಲ್ಲಿಸುವ ಜಾಗದಲ್ಲಿ ಒಂದು ಒಟ್ಟು ಎರಡು ರೈಲ್ವೆ  ಅಂಡರ್ ಬಿಡ್ಜ್ (ಆರ್‍ಯುಬಿ-ವೆಂಟ್)ಗಳನ್ನು ನಿರ್ಮಿಸಲಾಗುವುದು. ಈ ವೆಂಟ್‍ಗಳಿಂದ ದೊಡ್ಡ ದೊಡ್ಡ ವಾಹನಗಳೂ ಓಡಾಡುವ ರೀತಿಯಲ್ಲಿ ಯೋಜನೆ ಸಿದ್ದಪಡಿಸಿ ನಿರ್ಮಿಸುವ ಮೂಲಕ ಅನೇಕ ವರ್ಷಗಳ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು ಎಂದರು.

ಪಿ.ಬಿ.ರಸ್ತೆಯಲ್ಲಿರುವ ಎ.ಸಿ ರವರ ಕಚೇರಿಯನ್ನು ಬೇರೆಡೆ ಶಿಫ್ಟ್ ಮಾಡಿ, ಆ ಜಾಗದಲ್ಲಿ ಆರ್‍ಯುಬಿ ನಿರ್ಮಿಸಲಾಗುವುದು. ಜೊತೆಗೆ ಸಣ್ಣ ಪುಟ್ಟ ಮೋಟಾರ್ ಸೈಕಲ್ ಓಡಾಡಲು ಪಾಥ್ ನಿರ್ಮಿಸಲಾಗುವುದು ಎಂದರು.

2022 ರ ವೇಳೆಗೆ ದೇಶಾದ್ಯಂತ ಎಲ್ಲ ರೈಲ್ವೆಗಳನ್ನು ವಿದ್ಯುದೀಕರಣ ಮಾಡಲಾಗುವುದು. ಹಾಗೂ 2022 ರ ಅಂತ್ಯಕ್ಕೆ ರಾಜ್ಯಾದ್ಯಂತ ರೈಲ್ವೇ ಡಬ್ಲಿಂಗ್ ಕಾಮಗಾರಿಗಳನ್ನು ಮುಗಿಸಲು ಸಂಪೂರ್ಣ ಪ್ರಯತ್ನ ಮಾಡಲಾಗುವುದು.

ಮುಂಬೈ ಕೋಲ್ಕತ್ತಾ ವರೆಗೆ ರಫ್ತು ಮತ್ತು ಆಮದು ಮಾಡಲಿಕ್ಕೋಸ್ಕರ ಒಂದು ಡೆಡಿಕೇಟೆಡ್ ಟ್ರೈನ್ ಬಿಡಲಾಗಿದ್ದು ಇದೇ ರೀತಿಯ ರೈಲನ್ನು ರಾಜ್ಯದ ಅಂಕೋಲ-ಹುಬ್ಬಳಿಯಲ್ಲಿ ಬಿಡಲು ಪ್ರಸ್ತಾವನೆ ಆಗಿದೆ. ಆದರೆ ಈ ರೈಲಿನ ಕುರಿತಾಗಿ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವ ಕಾರಣ ಈಗ ಬಾಕಿ ಇದೆ. ಇದು ಇತ್ಯರ್ಥವಾದ ಬಳಿಕ ಆದಷ್ಟು ಶೀಘ್ರದಲ್ಲಿ ಕೆಲಸ ಆರಂಭಿಸಲಾಗುವುದು. ರಾಜ್ಯದ ಪ್ರಸ್ತಾಪಿತ ರೈಲ್ವೇ ಯೋಜನೆಗಳಿಗೆ ಸಂಬಂಧಿಸಿದಂತೆ ಡಿಸಿ ಗಳು ಮತ್ತು ಎಸ್‍ಎಲ್‍ಓ ಗಳು ಎಷ್ಟು ಬೇಗ ಭೂಸ್ವಾಧೀನ ಪ್ರಕ್ರಿಯೆ ನಡಸಿ ಜಾಗ ನೀಡುತ್ತಾರೋ ಅಷ್ಟು ಬೇಗ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು ಎಂದರು.

ತುಮಕೂರು-ಚಿತ್ರದುರ್ಗ-ದಾವಣಗೆರೆ ಹೊಸ ರೈಲ್ವೆ ಲೈನ್ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ದಾವಣಗೆರೆ ತಾಲ್ಲೂಕಿನ 14 ಗ್ರಾಮಗಳು ಒಳಪಡಲಿದ್ದು ಒಟ್ಟು ವಿಸ್ತೀರ್ಣ 238 ಎಕರೆ ಭೂಸ್ವಾಧೀನ ಮಾಡಬೇಕಿದ್ದು, ಈ ಪೈಕಿ 209 ಎಕರೆ ಭೂಸ್ವಾಧೀನಕ್ಕೆ ಅಂತಿಮ ನೋಟಿಫಿಕೇಷನ್ ಆಗಿದೆ. ಇನ್ನೊಂದು ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ವಿಶೇಷ ಭೂಸ್ವಧೀನಾಧಿಕಾರಿ ರೇಷ್ಮಾ ಹಾನಗಲ್ ಹೇಳಿದರು.

ಹುಬ್ಬಳ್ಳಿ-ಚಿಕ್ಕಜಾಜೂರು ರೈಲ್ವೇ ಟ್ರ್ಯಾಕ್ ಡಬ್ಲಿಂಗ್ ಲೈನ್ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆ ಇಲ್ಲ. ಆದರೆ ಒಂದು ಸ್ಟ್ರೆಚ್‍ಗೆ ಜನರಲ್ ಅವಾರ್ಡ್ ಮಾಡಬೇಕಿದ್ದು ರೂ. 5 ಕೋಟಿ ಠೇವಣಿ ಇರಿಸಬೇಕಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗಕ್ಕಾಗಿ ಎರಡು ಹಂತದಲ್ಲಿ ಒಟ್ಟು 1349.23 ಎಕರೆ ಜಮೀನು ಭೂಸ್ವಾಧೀನ ಮಾಡಿಕೊಳ್ಳಬೇಕಿದ್ದು ಇದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ ಎಂದು ವಿಶೇಷ ಭೂಸ್ವಾಧೀನಾಧಿಕಾರಿ ಸರೋಜಾ ಹೇಳಿದಾಗ, ಸಚಿವರು ಇನ್ನು ನಾಲ್ಕು ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಮುಗಿಸುವಂತೆ ತಿಳಿಸಿದರು.

ರೈಲ್ವೇ ಸೇವೆಗೆ ಸಂಬಂಧಿಸಿದಂತೆ ನಮ್ಮ ಆದ್ಯತೆ ಸುರಕ್ಷತೆ, ಸ್ವಚ್ಚತೆ ಮತ್ತು ಸಮಯಪ್ರಜ್ಞೆ ಆಗಿದೆ. ಸಮಯಕ್ಕೆ ಕೂಡ ಹೆಚ್ಚಿನ ಒತ್ತು ನೀಡಲಾಗುವುದು. ರೈಲ್ವೆ ಸಾರ್ವಜನಿಕರ ಆಸ್ತಿಯಾಗಿದ್ದು ಸಾರ್ವಜನಿಕರು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು ಎಂದು ಕರೆ ನೀಡಿದರು.

ರೈಲ್ವೇ ಅಂಡರ್ ಬ್ರಿಡ್ಜ್‍ಗಳಲ್ಲಿ ನೀರು ನಿಲ್ಲುವ ಸಮಸ್ಯೆ ಸಾಮಾನ್ಯವಾಗಿದ್ದು, ಈ ಸಮಸ್ಯೆ ಬಗೆಹರಿಸಲು ರೈಲ್ವೇ ಇಂಜಿನಿಯರ್‍ಗಳು ಸಂಶೋಧನೆ ನಡೆಸಬೇಕು. ಪಂಪ್ ಇಟ್ಟು ನೀರು ತೆಗೆಯುವುದು ಮುಖ್ಯವಲ್ಲ, ಬದಲಾಗಿ ಶಾಶ್ವತ ಪರಿಹಾರಕ್ಕಾಗಿ ಸಂಶೋಧನೆ ಕೈಗೊಳ್ಳುವಂತೆ ಅವರಿಗೆ ಸೂಚನೆ ನೀಡಿದರು

ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ, ದಾವಣಗೆರೆಯ ಹೊಸ ರೇಲ್ವೆ ಸ್ಟೇಷನ್‍ನ ಪ್ಲಾಟ್‍ಫಾರಂಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು. ಹಾಗೂ ಸ್ಟೇಷನ್‍ನ ಪ್ರವೇಶ ಮತ್ತು ನಿರ್ಗಮನಗಳಲ್ಲಿ ಎರಡು ಕಡೆ ಎಸ್ಕಲೇಟರ್‍ಗಳನ್ನು ಈ ಸಾಲಿನ ಡಿಸೆಂಬರ್ ಅಂತ್ಯದೊಳಗೆ ನಿರ್ಮಿಸಬೇಕು ಎಂದರು.

ಹರಿಹರ ರೈಲ್ವೇ ನಿಲ್ದಾಣದ ಉನ್ನತೀಕರಣ, ಹರಪನಹಳ್ಳಿ ಸ್ಟೇಷನ್‍ನಲ್ಲಿ ರಾತ್ರಿ ಮತ್ತು ಬೆಳಗಿನ ಜಾವ ಸ್ಟ್ರೀಟ್ ಲೈಟ್‍ಗಳ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ಸೌಲಭ್ಯ ಆಗಬೇಕು. ಬಾತಿ-ಕರೂರ್ ರೈಲ್ವೇ ಕ್ರಾಸಿಂಗ್ ಬಳಿ ನೀರು ಸಂಗ್ರಹವಾಗುತ್ತಿದೆ. ಈ ಬಗ್ಗೆ ಇಂಜಿನಿಯರ್‍ಗಳು ಕ್ರಮ ಕೈಗೊಳ್ಳಬೇಕೆಂದರು.

ವಾಸ್ಕೋ-ಯಶವಂತಪುರದ ಟ್ರೈನುಗಳು ಚಿಕ್ಕಜಾಜೂರಿನಲ್ಲಿ ನಿಲುಗಡೆ ಮಾಡಬೇಕು. ಎಲ್‍ಸಿ 174 ಆನಗೋಡು ಇಲ್ಲಿ ಫ್ಲೈಓವರ್ ಆಗಬೇಕು. ಮಂಡ್ಯ-ಹಡಗಲಿ ಹೈವೇ ಆಗಬೇಕು, ಜೊತೆಗೆ ಮಾಯಕೊಂಡದಲ್ಲಿ ಫ್ಲೈ ಓವರ್ ನಿರ್ಮಿಸಬೇಕು. ಭರಮಸಾಗರ-ಜಗಳೂರು ಏತ ನೀರಾವರಿ ಕಾಮಗಾರಿಗೆ ರೈಲ್ವೇಯವರು ಅನುಮತಿ ನೀಡಬೇಕು ಎಂದು ಹೇಳಿದರು.

ಸಭೆಯಲ್ಲಿ ಶಾಸಕರಾದ ಎಸ್.ಎ ರವೀಂದ್ರನಾಥ್, ಪ್ರೊ. ಲಿಂಗಣ್ಣ, ಎಸ್.ವಿ ರಾಮಚಂದ್ರಪ್ಪ, ಜಿಪಂ ಅಧ್ಯಕ್ಷೆ ದೀಪಾ ಜಗದೀಶ್, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಪಾಲಿಕೆ ಸದಸ್ಯರು, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ರೈಲ್ವೇ ಜಿಎಂ ಎ.ಕೆ ಸಿಂಗ್, ಮೈಸೂರ್ ರೈಲ್ವೇ ಡಿಆರ್‍ಎಂ ಅಪರ್ಣ ಗರಗ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಎಸಿ ಮಮತಾ ಹೊಸಗೌಡರ್, ದೂಡಾ ಆಯುಕ್ತ ಬಿ.ಟಿ ಕುಮಾರಸ್ವಾಮಿ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

 

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top