Connect with us

Dvgsuddi Kannada | online news portal | Kannada news online

ಸಾವು ಸನ್ನಿಹಿತವಾದಾಗ ‘ಶಿವಾ ಶಿವಾ’ ಎಂದರೆ ಸಾವು ಬಿಡುವುದೇ?

ಪ್ರಮುಖ ಸುದ್ದಿ

ಸಾವು ಸನ್ನಿಹಿತವಾದಾಗ ‘ಶಿವಾ ಶಿವಾ’ ಎಂದರೆ ಸಾವು ಬಿಡುವುದೇ?

  • ಶ್ರೀ ತರಳಬಾಳು ಜಗದ್ಗುರು ಡಾ|| ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಸಿರಿಗೆರೆ

ಸುಮಾರು 42 ವರ್ಷಗಳ ಹಿಂದಿನ ಒಂದು ಘಟನೆ. ಜರ್ಮನಿಯ ಬಯೇರ್ (Bayern) ಪ್ರಾಂತ್ಯದ Niederaltaich ಎಂಬ ಪ್ರಸಿದ್ದ ನಗರ. ಅಲ್ಲೊಂದು `ಬೆನೆಡಿಕ್ಟಿನ್ (Benedictine) ಪರಂಪರೆಗೆ ಸೇರಿದ ಕ್ರೈಸ್ತ ಸನ್ಯಾಸಿಗಳ ಆಶ್ರಮ (monastery). ಅವರ ಮುಖ್ಯ ಧ್ಯೇಯ: ಪ್ರಾರ್ಥನೆ ಮತ್ತು ಕಾಯಕ (Prayer and Work). ಅವರು ಕಪ್ಪುಬಣ್ಣದ ನಿಲುವಂಗಿಯನ್ನು ತೊಡುತ್ತಾರೆ. ಹೊರಗೆ ಹೆಚ್ಚಾಗಿ ಹೋಗುವುದಿಲ್ಲ,ಆಶ್ರಮದಲ್ಲಿಯೇ ಇದ್ದುಕೊಂಡು ಅಂತರ್ಮುಖಿಗಳಾಗಿ ಸದಾ ದೇವರ ಪ್ರಾರ್ಥನೆಯಲ್ಲಿ ಮತ್ತು ಯಾವುದಾದರೂ ಬೌದ್ಧಿಕ/ಶಾರೀರಿಕ ಕೆಲಸದಲ್ಲಿ ತೊಡಗಿರುತ್ತಾರೆ. ಹೀಗೆ ಹಿಂದೂಗಳಲ್ಲಿರುವಂತೆ ಕ್ರೈಸ್ತರಲ್ಲಿಯೂ ಅನೇಕ ಪಂಥಗಳಿವೆ. ವಿಭಿನ್ನ ವಿಚಾರಧಾರೆಗಳಿವೆ. ಅವುಗಳನ್ನು ಪ್ರತಿನಿಧಿಸುವ ವಿಭಿನ್ನ ಚರ್ಚುಗಳಿವೆ. ಕ್ರೈಸ್ತರಲ್ಲಿಯೇ ವಿಭಿನ್ನ ಪಂಥದವರು ಒಂದೆಡೆ ಸೇರಿ ಪರಸ್ಪರ ಸೌಹಾರ್ದಯುತವಾಗಿ ನಡೆಸುವ ಸಂವಾದಕ್ಕೆ `Ecumenism’ ಎಂದು ಕರೆಯುತ್ತಾರೆ. ಅಂತಹ ಒಂದು ಧಾರ್ಮಿಕ ಸಂವಾದ ಮೇಲ್ಕಂಡ ಆಶ್ರಮದಲ್ಲಿ ಏರ್ಪಾಡಾಗಿತ್ತು.

ಆಗ ನೆರೆಯ ದೇಶವಾದ ಆಸ್ಟ್ರಿಯಾದ ವಿಯೆನ್ನಾ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ನಾವು ಕ್ರೈಸ್ತ ಸ್ನೇಹಿತರೊಂದಿಗೆ ಅಲ್ಲಿಗೆ ಹೋಗಿದ್ದೆವು.ಆ ಸಂವಾದದಲ್ಲಿ ಭಾಗವಹಿಸಿದವರೆಲ್ಲರೂ ನಮ್ಮನ್ನು ಹೊರತುಪಡಿಸಿ ಕ್ರೈಸ್ತ ಧರ್ಮದವರೇ ಆಗಿದ್ದರು. ನಮಗೆ ಅವರು ವಿದೇಶೀಯರಾಗಿ ಕಂಡರೆ ಅವರಿಗೆ ನಾವು ವಿದೇಶೀಯರಾಗಿದ್ದೆವು. ಅವರ ಮಾತೃಭಾಷೆಯಾದ ಜರ್ಮನ್ನಲ್ಲಿ ನಾವು ಮಾತನಾಡುವುದನ್ನು ಕಂಡು ಸಹಜವಾಗಿಯೇ ಅವರಿಗೆ ನಮ್ಮ ಬಗ್ಗೆ ಕುತೂಹಲ ಉಂಟಾಯಿತು. ಎಂದೂ ಭಾರತವನ್ನು ನೋಡರಿಯದ ಅವರು ನಮ್ಮ ಧರ್ಮದಲ್ಲಿ ಪ್ರಾರ್ಥನಾ ಪದ್ದತಿ ಹೇಗಿದೆಯೆಂದು ತಿಳಿದುಕೊಳ್ಳಬೇಕೆಂಬ ತೀವ್ರ ಆಸಕ್ತಿಯನ್ನು ವ್ಯಕ್ತಪಡಿಸಿದರು. ನಮ್ಮ ಸಂಪ್ರದಾಯದ ಪ್ರಕಾರ ನಿತ್ಯವೂ ನಾವು ಮಾಡುವ `ಇಷ್ಟಲಿಂಗ ಪೂಜೆ’ಯ ಬಗ್ಗೆ ವಿವರಣೆ ನೀಡಿದಾಗ ಅದನ್ನು ಮಾಡಿ ತೋರಿಸಬೇಕೆಂಬ ಬೇಡಿಕೆಯನ್ನಿತ್ತರು. ಅವರ ಒತ್ತಾಸೆ ನಮ್ಮನ್ನು ಸಂದಿಗ್ಧತೆಗೆ ಎಡೆಮಾಡಿಕೊಟ್ಟಿತು. ಪೂಜೆ ಎಂಬುದು ಬಹಿರಂಗವಾಗಿ ಅಭಿನಯಿಸಿ ತೋರಿಸುವ ಒಂದು ಕಲೆಯಲ್ಲ; ಅದೊಂದು ಆತ್ಮಾನುಸಂಧಾನದ ಸಾಧನ. ಎಲ್ಲರೆದುರಿಗೆ ವೇದಿಕೆಯ ಮೇಲೆ ಕುಳಿತು ಲಿಂಗಪೂಜೆಯನ್ನು ಮಾಡಿದರೆ ಅದೊಂದುದು ಪ್ರದರ್ಶನವಾಗುತ್ತದೆಯಲ್ಲವೇ? ಮಾಡದೇ ಇದ್ದರೆ ಅವರಿಗೆ ನಮ್ಮ ಪೂಜಾ ಪದ್ದತಿ ಗೊತ್ತಾಗುವುದು ಹೇಗೆ? ಹಾಗಂತ ಅದನ್ನು ಪ್ರದರ್ಶನದ ಸರಕನ್ನಾಗಿ ಮಾಡಲಾದೀತೆ! ಈ ಧರ್ಮಸಂಕಟ ನಮ್ಮನ್ನು ಕಾಡತೊಡಗಿತು.

ಪರಿಹಾರಕ್ಕಾಗಿ ನಮ್ಮ ಗುರುವರ್ಯರ ಮಾರ್ಗದರ್ಶನವನ್ನು ಪಡೆಯಬೇಕೆಂದರೆ ಅವರು ಸಿರಿಗೆರೆಯಲ್ಲಿ, ನಾವು ಸಾವಿರ ಸಾವಿರ ಮೈಲುಗಳ ದೂರದ ಜರ್ಮನಿಯಲ್ಲಿ ಈಗಿನಂತೆ ಆಗ ಮೊಬೈಲ್, ವಾಟ್ಸ್ಯಾಪ್, ಇ-ಮೇಲ್ ಸೌಲಭ್ಯಗಳು ಇರಲಿಲ್ಲ, ಅಂತರರಾಷ್ಟ್ರೀಯ ಫೋನ್ ಕರೆ ತುಂಬಾ ದುಬಾರಿ. ಅದೂ ಸಿಗುವುದು ಕಷ್ಟ. ಒಂದೇ ಒಂದು ಸಂಪರ್ಕ ಸಾಧನವೆಂದರೆ ಏರ್ ಮೇಲ್. ಅದರೆ ಬರೆದ ಪತ್ರಕ್ಕೆ ಉತ್ತರ ಬರಬೇಕೆಂದರೆ ಕನಿಷ್ಠ ಒಂದು ವಾರವಾದರೂ ಬೇಕು. ಹೀಗಾಗಿ ಸ್ವತಃ ತೀರ್ಮಾನ ತೆಗೆದುಕೊಳ್ಳುವುದು ಅನಿವಾರ್ಯವಾಯಿತು. ಭಾರತದಿಂದ ಹೊರಡುವಾಗ `ಜಗದ್ಗುರುವಾಗುವವನು ಜಗತ್ತನ್ನು ಸುತ್ತಿ ಬರಬೇಕು. ಆದರೆ ಪ್ರಪಂಚ ಸುತ್ತಿ ಬಂದ ಮಾತ್ರಕ್ಕೆ ಪ್ರಪಂಚ ಜ್ಞಾನ ಉಂಟಾಗುತ್ತದೆ ಎಂದು ತಿಳಿದುಕೊಳ್ಳಬೇಡ. ಇಲಿ, ಹೆಗ್ಗಣಗಳೂ ಸಹ ಹಡಗಿನಲ್ಲಿ ಹೋಗಿಬರುತ್ತವೆ’ ಎಂದು ನಮ್ಮ ಗುರುವರ್ಯರು ಹೇಳಿದ್ದ ಕಿವಿಮಾತು ನಮ್ಮನ್ನು ಆಲೋಚನಾಪರರನ್ನಾಗಿ ಮಾಡಿತು. ಎಲ್ಲಿ ಹೇಳಿದರಲ್ಲಿ ವ್ಯವಸ್ಥೆ ಮಾಡುವುದಾಗಿ ಬೆನೆಡಿಕ್ಟಿನ್ ಸನ್ಯಾಸಿ ಹೇಳಿದರು. ತುಂಬಾ ಆಲೋಚನೆ ಮಾಡಿ ಸಂವಾದ ನಡೆಯುವ ವೇದಿಕೆಯ ಮೇಲೆ ಮಾಡಲು ಒಪ್ಪದೇ ಅವರ ಚರ್ಚಿನೊಳಗಿದ್ದ ಒಂದು ಪುಟ್ಟ ಪ್ರಾರ್ಥನಾ ಕೊಠಡಿ (Chapel) ಒಳಗೆ ಮಾಡಲು ಸಮ್ಮತಿಸಿದೆವು. ಮಾರನೆಯ ದಿನ ಬೆಳಿಗ್ಗೆ ನಿತ್ಯ ಪೂಜೆ ಮಾಡುವ ವೇಳೆಯಲ್ಲಿ ಮಾಡುವುದಾಗಿಯೂ ಆಸಕ್ತರು ಸ್ನಾನ ಮಾಡಿಕೊಂಡು ಬಂದು ಪೂಜೆಯಲ್ಲಿ ಭಾಗವಹಿಸಬಹುದೆಂದು ಸೂಚಿಸಿದೆವು.

ಪ್ರಾರ್ಥನಾ ಕೊಠಡಿಯಲ್ಲಿ ನಾವು ಪೂಜೆಗೆ ಕುಳಿತುಕೊಳ್ಳಲು ಆಯ್ಕೆ ಮಾಡಿಕೊಂಡ ಸ್ಥಳದ ಹಿಂಭಾಗದ ಕಟ್ಟೆಯ (Alter) ಮೇಲೆ ಒಂದು ಬೆಳ್ಳಿಯ ಶಿಲುಬೆ ಇತ್ತು. ಅದರಿಂದ ನಿಮ್ಮ ಪೂಜೆಗೆ ಏನೂ ತೊಂದರೆಯುಂಟಾಗುವುದಿಲ್ಲವೇ ಎಂದು ಬೆನೆಡಿಕ್ಟಿನ್ ಸನ್ಯಾಸಿ ನಮ್ಮನ್ನು ಕೇಳಿದರು. ಆಗ ತಟ್ಟನೆ ನಮ್ಮ ನೆನಪಿಗೆ ಬಂದದ್ದು ಪ್ರಹ್ಲಾದನ ಕಥೆ. `ನಿನ್ನ ಹರಿ ಅರಮನೆಯ ಈ ಕಂಭದಲ್ಲಿ ಇದ್ದಾನೆಯೇ?’ ಎಂದು ಹಿರಣ್ಯಕಶಿಪು ಗದರಿಸಿ ಕೇಳಿದಾಗ ದೈವಭಕ್ತನಾದ ಪ್ರಹ್ಲಾದ ವಿಚಲಿತನಾಗದೆ `ಸರ್ವಾಂತರ್ಯಾಮಿಯಾದ ಹರಿಯು ಈ ಕಂಬದಲ್ಲಿಯೂ ಇದ್ದಾನೆ, ಆ ಕಂಬದಲ್ಲಿಯೂ ಇದ್ದಾನೆ’ ಎಂದು ಕೊಟ್ಟ ಉತ್ತರವನ್ನು ಪಾದ್ರಿಗಳಿಗೆ ವಿವರಿಸಿದೆವು. ನಂಬಿದ ಭಕ್ತನಿಗೆ ಅರಮನೆಯ ಕಂಬದಲ್ಲಿ ದೇವರು ಕಾಣಬಹುದಾದರೆ ಚರ್ಚಿನ ಶಿಲುಬೆಯಲ್ಲಿಯೂ ಇರಲೇಬೇಕಲ್ಲವೇ? ಆದಕಾರಣ ನಮಗೆ ಯಾವ ತೊಂದರೆಯೂ ಇಲ್ಲವೆಂದು ಸ್ಪಷ್ಟವಾಗಿ ಹೇಳಿದೆವು. ಮಾರನೆಯ ದಿನ ಬೆಳಿಗ್ಗೆ ಸ್ನಾನ ಮಾಡಿ ಮಡಿಯುಟ್ಟು, ಆ ಪ್ರಾರ್ಥನಾ ಕೊಠಡಿಗೆ ಲಿಂಗಪೂಜೆಗೆಂದು ಬಂದಾಗ ಸುತ್ತಲೂ ನೆಲದ ಮೇಲೆ ಅನೇಕ ಕ್ರೈಸ್ತ ಧರ್ಮೀಯರು ಶುಚಿರ್ಭೂತರಾಗಿ ಕುಳಿತು ಪೂಜೆಯನ್ನು ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದರು. ಏಕಾಗ್ರತೆಗೆ ತೊಂದರೆಯಾದರೂ ಪೂಜೆಯನ್ನು ಮಾಡಿ ಮುಗಿಸಿದೆವು. ಆದರೆ ನಮಗೊಂದು ಆಶ್ಚರ್ಯ ಕಾದಿತ್ತು. Alter ಮೇಲೆ ನಿನ್ನೆ ಇದ್ದ ಶಿಲುಬೆಯೇ ಇರಲಿಲ್ಲ!ಖಾಸಗಿಯಾಗಿ ಕೇಳಿದಾಗ ಆ ಬೆನೆಡಿಕ್ಟಿನ್ ಸನ್ಯಾಸಿ ಕೊಟ್ಟ ಉತ್ತರ: `ನಮ್ಮ ಧರ್ಮದವರು ಅನೇಕರು ಈ ಶಿಲುಬೆಯನ್ನು ತುಂಬಾ ಭಕ್ತಿಯಿಂದ ಆರಾಧಿಸುತ್ತಾರೆ. ಅದರ ಮುಂದೆ ಅನ್ಯಧರ್ಮೀಯರಾದ ನೀವು ಕುಳಿತು ಮಾಡುವ ‘ಲಿಂಗಪೂಜೆ’ಯಿಂದ ನಮ್ಮ ಧರ್ಮದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಬಾರದೆಂಬ ಕಾರಣದಿಂದ ಅದನ್ನು ಪಕ್ಕದ ಕೊಠಡಿಗೆ ಸ್ಥಳಾಂತರಿಸಿದೆ.’ ಆ ಪಾದ್ರಿಗಳ ಪ್ರಾಮಾಣಿಕ ಉತ್ತರ ನಮ್ಮನ್ನು ಆಲೋಚನಾಪರರನ್ನಾಗಿಸಿತು.

ಯಾವುದೇ ಧರ್ಮವಿರಲಿ ಅದರಲ್ಲಿ ಐದು ರೀತಿಯ ವ್ಯಕ್ತಿಗಳು ಇರುತ್ತಾರೆ. ತಾವು ಜನಿಸಿದ ಧರ್ಮದಲ್ಲಿ ಸಂಪೂರ್ಣ ಶ್ರದ್ಧಾಭಕ್ತಿಯುಳವರದು ಮೊದಲನೆಯ ವರ್ಗ, ಅದೇ ಧರ್ಮದಲ್ಲಿ ಹುಟ್ಟಿದ್ದರೂ ಅದರ ಆಚರಣೆಗಳನ್ನು ಪಾಲಿಸದೇ ಇರುವವರದು ಎರಡನೆಯ ವರ್ಗ, ಆ ಧರ್ಮದಲ್ಲಿ ಹುಟ್ಟಿ ನಂಬಿಕೆ ಇಲ್ಲದಿದ್ದರೂ ಕಾಟಾಚಾರಕ್ಕೆ ಮಾಡುವವರದು ಮೂರನೆಯ ವರ್ಗ. ಬೇರೊಂದು ಧರ್ಮಕ್ಕೆ ಮಾರುಹೋಗಿ ತಾವು ಜನಿಸಿದ ಧರ್ಮವನ್ನು ಬಿಟ್ಟು ಮಾರುಹೋದ ಧರ್ಮದ ಆಚರಣೆಗಳನ್ನು ಪ್ರಾಮಾಣಿಕವಾಗಿ ಮಾಡುವವರದು ನಾಲ್ಕನೆಯ ವರ್ಗ. ಇನ್ನು ಐದನೆಯ ವರ್ಗದವರೆಂದರೆ ತಾವು ಜನಿಸಿದ ಧರ್ಮದಲ್ಲಿಯೇ ಇದ್ದು ಅನ್ಯಧರ್ಮದ ತಾತ್ವಿಕ ವಿಚಾರಗಳಿಗೆ ಮಾರುಹೋದವರು.

ನಾಲ್ಕು ದಶಕಗಳಿಗಿಂತ ಹಳೆಯವಾದ ಈ ಎಲ್ಲ ನೆನಪುಗಳು ನಮ್ಮ ಸ್ಮೃತಿ ಪಟಲದಲ್ಲಿ ಈಗ ಸುಳಿದಾಡಲು ಕಾರಣ:ವಿಶ್ವವನ್ನು ಕಾಡುತ್ತಿರುವ ಮಹಾಮಾರಿ ಕೊರೊನಾ ವೈರಾಣು ವಿರುದ್ಧ ನಡೆಯುತ್ತಿರುವ ಸಮರದ ಸಂದರ್ಭದಲ್ಲಿ ನಮ್ಮ ನಾಡಿನ ಧಾರ್ಮಿಕ ಮುಖಂಡರು ತಂತಮ್ಮ ಸಮುದಾಯದವರಿಗೆ ಪೂಜೆ ಮಾಡಲು ಕರೆಕೊಡುತ್ತಾ ಬಂದಿರುವ ಕರೆ. ಇದನ್ನು ನಾವು ವಿರೋಧಿಸಿದ್ದು ಕೆಲವರಿಗೆ ಅಪಥ್ಯವೆನಿಸಿತು. ನಾವು ವಿರೋಧಿಸಿದ್ದು ಯಾವುದೇ ಪೂಜೆಯನ್ನಲ್ಲ, ನಿರ್ದಿಷ್ಟ ಸಮುದಾಯದವರು ನಿರ್ದಿಷ್ಟ ದಿನಾಂಕದಂದು ಪೂಜೆ ಮಾಡಲು;ಕೊಟ್ಟ ಕರೆಯನ್ನು ಪೂಜೆ ಮಾಡಿದ ಫೋಟೋ ಕಳುಹಿಸಿಕೊಡಲು ಕೆಲವರು ಕೇಳಿದ್ದು ಪೂಜೆ ಮಾಡುವಂತೆ ಪುಸಲಾಯಿಸುವುದಕ್ಕಾಗಿಯೋಅಥವಾ ಪುರಾವೆಗಾಗಿಯೋ? ಅವುಗಳನ್ನು ದೇವರಿಗೆ ಕಳುಹಿಸೇಕೆಂದರೆ ದೇವರ ವಿಳಾಸವಾದರೂ ಏನು? ಭಕ್ತ ಮತ್ತು ಭಗವಂತನ ಸಂಬಂಧ `ಶರಣ ಸತಿ, ಲಿಂಗ ಪತಿ’ ಎಂಬಂತೆ ಮಧುರ ಭಕ್ತಿಯಿಂದ ಕೂಡಿದ್ದು, ಪತಿ-ಪತ್ನಿಯರು ಪ್ರೀತಿ ಮಾಡುವುದಕ್ಕೆ ಹೇಗೆ ಏಕಾಂತತೆ ಮುಖ್ಯವೋ ಹಾಗೆಯೇ ಪೂಜೆಗೆ ಏಕಾಗ್ರತೆ ಮುಖ್ಯ. ಭಾರತೀಯ ನಾರಿಯರು ತಮ್ಮ ಪತಿರಾಯರಿಗೆ ಮಕ್ಕಳೆದುರಿನಲ್ಲಿ ಮುತ್ತಿಡಲು ಸಂಕೋಚಪಟ್ಟುಕೊಳ್ಳುತ್ತಾರಲ್ಲವೇ? ಕ್ಯಾಮೆರಾದ ಕಣ್ಣುಗಳು ನೀವು ಪೂಜೆ ಮಾಡುವುದನ್ನು ನೋಡುವಾಗ ನಿಮ್ಮ ಮನಸ್ಸಿನ ಏಕಾಗ್ರತೆಗೆ ಭಂಗ ಬರುವುದಿಲ್ಲವೇ? `ನಂಬಿ ಕರೆದೊಡೆ ಓ ಎನ್ನನೇ;ಶಿವನು?’ ಎನ್ನುವ ಬಸವಣ್ಣನವರ ವಚನವನ್ನು ಉಲ್ಲೇಖಿಸಿ ಕರೆ ಕೊಟ್ಟವರು ಅದೇ ವಚನದಲ್ಲಿ ಬರುವ ಮುಂದಿನ ಸಾಲು ‘ನಂಬದೆ ನೆಚ್ಚದೆ ಬರಿದೆ ಕರೆವರ ಕೊಂಬ ಮೆಟ್ಟಿ ಕೂಗೆಂದ ನಮ್ಮ ಕೂಡಲ ಸಂಗಮದೇವಾ’ ಎಂಬ ಎಚ್ಚರಿಕೆಯ ಮಾತನ್ನು ಗಮನಿಸಬೇಕಾಗಿತ್ತು.

ಪೂಜೆ ಮಾಡಿದ ಪ್ರತಿಷ್ಠಿತ ವ್ಯಕ್ತಿಗಳ ಭಾವಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟವಾದವು. ಒಂದು ರೀತಿಯಲ್ಲಿ ಲಿಂಗಪೂಜೆಯ ಅಣಕವೇ ನಡೆದು ಹೋಯಿತು. ಪ್ರಧಾನಿ ಮೋದಿಯವರು ದೀಪ ಹಚ್ಚಲು ಕರೆಕೊಟ್ಟದ್ದು ಜಗತ್ತನ್ನು ಹೈರಾಣಾಗಿಸಿರುವ ವೈರಾಣುವಿನ ವಿರುದ್ದ ದೇಶದ 135 ಕೋಟಿ ಜನರ ಐಕ್ಯತೆ ಮತ್ತು ಸಮಗ್ರತೆಯನ್ನು ಸಾಧಿಸುವ ಸಲುವಾಗಿಯೇ ಹೊರತು ದೀಪ ಹಚ್ಚುವುದರಿಂದಲೇ ಕೊರೊನಾ ಮಹಾಮಾರಿ ಓಡಿಸೋಗುತ್ತದೆಯೆಂಬ ಭ್ರಮೆಯಿಂದ ಅಲ್ಲ, ಇಲ್ಲವಾದರೆ ಜನರನ್ನು ಗೃಹಬಂಧನಗೊಳಿಸುವ ಪ್ರಮೇಯವೇ ಇರಲಿಲ್ಲ. ದೇವರ ಪೂಜೆ ಮತ್ತು ಪ್ರಾರ್ಥನೆ ಅಂತರಂಗದ ಆತ್ಮೋನ್ನತಿಗಾಗಿ,ನಿತ್ಯನಿರತಿಶಯವಾದ ಸಚ್ಚಿದಾನಂದದ ಸಾಕ್ಷಾತ್ಕಾರಕ್ಕಾಗಿ,ಭವಬಂಧನಗಳಿಂದ ಮುಕ್ತಿ ಯನ್ನು ಪಡೆಯಲು; ಸಾವಿನ ದವಡೆಯಿಂದ ಪಾರಾಗಲು ಅಲ್ಲ. ಹಡಪದ ಅಪ್ಪಣ್ಣನವರ ಈ ಮುಂದಿನ ವಚನ ಇಲ್ಲಿ ಸ್ಮರಣೀಯ:

ಸಾವಾಗ ದೇವನೆಂದರೆ ಸಾವು ಬಿಡುವುದೇ?
ಇದಾವ ಮಾತೆಂದು ನುಡಿವಿರಿ ಎಲೆ ಅಣ್ಣಗಳಿರಾ ಬಾಳುವಲ್ಲಿ ಬದುಕುವಲ್ಲಿ
ಗುರುಲಿಂಗಜಂಗಮವನರಿಯದೆ, ಹಾಳುಹರಿಯ ತಿಂದ ಶುನಕನಂತೆ ಕಾಲ್ಗೆಡೆದು ಓಡಾಡಿ ಏಳಲಾರದೆ ಬಿದ್ದಾಗ ಶಿವಶಿವಾ ಎಂದರೆ ಅಲ್ಲಿ ದೇವನಿಪ್ಪನೆ ಇದ ನೋಡಿ ನಾಚಿ ನಗುತಿರ್ದ ನಮ್ಮ ಬಸವಪ್ರಿಯ ಕೂಡಲ ಚೆನ್ನಬಸವಣ್ಣ!

– ಹಡಪದ ಅಪ್ಪಣ್ಣ

ಕಳೆದ ವಾರ ನಮ್ಮ ಮೊಬೈಲಿಗೆ ವಾಟ್ಯ್ಸಾಪ್ ಮೂಲಕ ಬಂದ ಒಂದು ಕುಂಟು ಕುದುರೆಯ ಕಥೆ. ಬುದ್ಧನ ಜಾತಕ ಕಥೆಯಾದ ಇದನ್ನು ನಿರೂಪಿಸಿರುವವರು ಸುಪ್ರಸಿದ್ದ ವಾಗ್ಮಿಗಳು ಮತ್ತು ವಿಚಾರವಾದಿಗಳೂ ಆದ ಗುರುರಾಜ ಕರ್ಜಗಿಯವರು. 2600 ವರ್ಷಗಳಷ್ಟು ಹಿಂದಿನ ಈ ಕಥೆ ಇಂದಿಗೂಹೇಗೆ ಪ್ರಸ್ತುತ ಎಂಬುದನ್ನು ತುಂಬಾ ಚೆನ್ನಾಗಿ ನಿರೂಪಿಸಿದ್ದಾರೆ. ಧ್ವನಿ ಮುದ್ರಿಕೆಯಲ್ಲಿ ಅವರಾಡಿದ ಮಾತುಗಳನ್ನೇ ಪರಿಷ್ಕರಿಸಿ ಸಂಕ್ಷಿಪ್ತವಾಗಿ ಇಲ್ಲಿ ನಿರೂಪಿಸಲಾಗಿದೆ:

ಒಬ್ಬ ರಾಜನಿದ್ದ. ಅವನಿಗೆ ಕುದುರೆಗಳ ಖಯ್ಯಾಲಿ. ಯಾವ ದೇಶಕ್ಕೆ ಹೋದರೂ ಅಲ್ಲಿ ಕಂಡು ಬಂದ ಒಳ್ಳೆಯ ಕುದುರೆಗಳನ್ನು ಖರೀದಿಸಿಕೊಂಡು ಬರುತ್ತಿದ್ದ. ಒಮ್ಮೆ ಅರಬ್ಬಿ ದೇಶದಿಂದ ಒಂದು ವಿಶಿಷ್ಟ ಜಾತಿಯ ಕುದುರೆಯನ್ನು ಕೊಂಡು ತಂದ. ಎತ್ತರವಾಗಿ ತುಂಬಾ ಸುಂದರವಾಗಿದ್ದ ಕುದುರೆ. ಅದರ ಮೇಲೆ ಅವನಿಗೆ ತುಂಬಾ ಪ್ರೀತಿ ಉಂಟಾಯಿತು. ರಾಜನಾಗಿದ್ದರೂ ಅವನೇ ಸ್ವತಃ ಅದರ ಮೈತೊಳೆಯುತ್ತಿದ್ದ. ತಾನೇ ಮೇಯಿಸುತ್ತಿದ್ದ. ಅದರ ಮೇಲೆ ಕುಳಿತು ಸವಾರಿ ಮಾಡಲು ತುಂಬಾ ಖುಷಿಪಡುತ್ತಿದ್ದ. ಒಮ್ಮೆ ಅದು ಕುಂಟುತ್ತಿರುವುದನ್ನು ನೋಡಿ ದುಃಖಿತನಾದ. ರಾಜ್ಯದಲ್ಲಿರುವ ಎಲ್ಲವೈದ್ಯರನ್ನು ಕರೆಸಿ ತಪಾಸಣೆ ಮಾಡಿಸಿದರೂ ಏನೂ ಪ್ರಯೋಜನವಾಗಲಿಲ್ಲ. ಎಲ್ಲರೂ ಕುದುರೆ ಚೆನ್ನಾಗಿಯೇ ಇದೆ, ಏನೂ ದೋಷವಿಲ್ಲ ಎಂದು ವರದಿ ಮಾಡಿದರು. ಹಾಗಾದರೆ ಕುದುರೆ ಕುಂಟುತ್ತಿದೆ ಏಕೆ? ಆ ಸಂದರ್ಭಕ್ಕೆ ಸರಿಯಾಗಿ ಬುದ್ಧ ಭಗವಾನ್ ಬಂದರು. ರಾಜ ಅವರಲ್ಲಿ ವಿನಂತಿಸಿಕೊಂಡ. ಬುದ್ದರು ಇಡೀ ಒಂದು ದಿನ ಕುದುರೆಯೊಂದಿಗೆ ಇದ್ದು ಪರೀಕ್ಷಿಸಿ ಏನೂ ದೋಷವಿಲ್ಲವೆಂದು ಹೇಳಿದರು. ಹಾಗಾದರೆ ಈ ಕುದುರೆ ಕುಂಟುತ್ತಿದೆ ಏಕೆ? ಮತ್ತೆ ರಾಜನದು ಅದೇ ಪ್ರಶ್ನೆ. ಅದಕ್ಕೆ ಬುದ್ದ ಕೊಟ್ಟ

ಉತ್ತರ: `ಕುದುರೆಯಲ್ಲಿ ಯಾವ ದೋಷವೂ ಇಲ್ಲ. ಆದರೆ ಅದಕ್ಕೆ ತರಬೇತಿ ಕೊಡಲು ನೀನುನೇಮಿಸಿರುವ ವ್ಯಕ್ತಿ ಕುಂಟುತ್ತಾನೆ. ಅವನು ಕುಂಟುವುದನ್ನು ನೋಡಿ ನೋಡಿ ಕುದುರೆಯೂ ಅವನನ್ನೇ ಅನುಕರಿಸಿ ಕುಂಟುತ್ತಿದೆ!’ ರಾಜ ಆ ತರಬೇತುದಾರನನ್ನು ತೆಗೆದುಹಾಕಿ, ಬೇರೊಬ್ಬನನ್ನು ನೇಮಿಸಿಕೊಂಡ ಮೇಲೆ ಕುದುರೆ ಕುಂಟುವುದನ್ನು ನಿಲ್ಲಿಸಿತು.

ಈ ಕಥೆಯನ್ನು ಗುರುರಾಜ ಕರ್ಜಗಿ ಅವರು ರೋಚಕವಾಗಿ ನಿರೂಪಿಸಿದ ಮೇಲೆ ನೀಡುವ ನೀತಿ ಪಾಠದ ವಿವರಣೆ: ‘ಮತ್ತೊಬ್ಬರಿಗೆ ಮಾರ್ಗದರ್ಶನ ಮಾಡುವವರು ತುಂಬಾ ಹುಷಾರಾಗಿರಬೇಕು. ಗೊತ್ತಿಲ್ಲದಂತೆ ಅವರ ಗುಣದೋಷಗಳು ಅವರ ಹಿಂಬಾಲಕರಿಗೂ ಬಂದುಬಿಡುತ್ತವೆ. ಶಾಲೆಯಲ್ಲಿ ವಿದ್ಯಾಗುರುಗಳೂ, ಸಮಾಜದಲ್ಲಿ ಧರ್ಮಗುರುಗಳೂ, ಸಾಮಾಜಿಕ ಜೀವನದಲ್ಲಿ ನಾಯಕರು ಮೈಯೆಲ್ಲಾ ಕಣ್ಣಾಗಿರಬೇಕು. ಅವರು ಕುಂಟಿದರೆ ಅವರನ್ನು ಆದರ್ಶ ಎಂದು ನಂಬಿದವರೂ ಸಹ ಕುಂಟುತ್ತಾರೆ. ದೇಶ ಕುಂಟುತ್ತದೆ.!’

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top