Connect with us

Dvgsuddi Kannada | online news portal | Kannada news online

ಡಿ. 26 ರಿಂದ ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ ಖರೀದಿ ಕೇಂದ್ರ ಆರಂಭ : ಜಿಲ್ಲಾಧಿಕಾರಿ

ದಾವಣಗೆರೆ

ಡಿ. 26 ರಿಂದ ಬೆಂಬಲ ಬೆಲೆಯಲ್ಲಿ ಭತ್ತ, ರಾಗಿ ಖರೀದಿ ಕೇಂದ್ರ ಆರಂಭ : ಜಿಲ್ಲಾಧಿಕಾರಿ

ಡಿವಿಜಿ ಸುದ್ದಿ, ದಾವಣಗೆರೆ:  ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ ರೈತರುಗಳಿಂದ ರಾಗಿ ಮತ್ತು ಭತ್ತವನ್ನು ಡಿ. 26 ರಿಂದ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಜಿಲ್ಲಾಡಳಿತ ಭವನದಲ್ಲಿ ಟಾಸ್ಕ್‍ಪೋರ್ಸ್ ಸಮಿತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಸಾಮಾನ್ಯ ಭತ್ತ ರೂ.1815, ಎ ಗ್ರೇಡ್ ಭತ್ತ ರೂ.1835 ಹಾಗೂ ರಾಗಿ ರೂ.3150 ನಿಗದಿಪಡಿಸಿದ್ದು ಒಬ್ಬ ರೈತ 40 ಕ್ವಿಂಟಾಲ್‍ವರೆಗೆ ಭತ್ತವನ್ನು ಹಾಗೂ 75 ಕ್ವಿಂಟಾಲ್‍ವರೆಗೆ ರಾಗಿಯನ್ನು ಖರೀದಿ ಕೇಂದ್ರಕ್ಕೆ ತರಬಹುದು. ಇಲಾಖೆಯ ಅಧಿಕಾರಿಗಳು ಈ ಕೃಷಿ ಉತ್ಪನ್ನಗಳ ಗುಣಮಟ್ಟವನ್ನು ಪರೀಕ್ಷಿಸಿದ ನಂತರ ಖರೀದಿ ಕೇಂದ್ರಕ್ಕೆ ನೀಡಿದ 3 ದಿನಗಳ ಒಳಗೆ ರೈತರ ಖಾತೆಗೆ ನೇರವಾಗಿ ಹಣ ಪಾವತಿಸಲಾಗುವುದು.

ಅರ್ಹ ರೈತರಿಗೆ ಇದರಿಂದ ಪ್ರಯೋಜನವಾಗಬೇಕು. ದಲ್ಲಾಳಿ ಹಾಗೂ ಮಧ್ಯವರ್ತಿಗಳಿಂದ ರೈತರಿಗೆ ಯಾವುದೇ ಅನ್ಯಾಯವಾಗದಂತೆ ಅಧಿಕಾರಿಗಳು ಕ್ರಮ ವಹಿಸಬೇಕು. ಒಂದು ವೇಳೆ ಅಂತಹ ಘಟನೆಗಳು ಕಂಡು ಬಂದಲ್ಲಿ ಸಹಿಸುವುದಿಲ್ಲ. ನಾನೇ ಮಾರುವೇಷದಲ್ಲಿ ಬಂದು ಖರೀದಿ ಕೇಂದ್ರಗಳ ಭೇಟಿ ನೀಡಿ ಪರಿಶೀಸುತ್ತೇನೆ ಹಾಗೂ ಖರೀದಿ ಕೇಂದ್ರದ ಪ್ರಕ್ರಿಯೆ ಪರೀಕ್ಷಿಸಲು ನನ್ನ ವತಿಯಿಂದಲೇ ಮಾರುವೇಷದಲ್ಲಿ ವ್ಯಕ್ತಿಗಳನ್ನು ಕಳುಹಿಸುತ್ತೇನೆ. ಹಾಗಾಗಿ ಎಚ್ಚರಿಕೆಯಿಂದ ಇರಬೇಕು.
-ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ರೈತರು ಪಹಣಿಯೊಂದಿಗೆ ಖರೀದಿ ಕೇಂದ್ರಗಳಲ್ಲಿ ತಮ್ಮ ಹೆಸರನ್ನು ಡಿ.26 ರಿಂದ 2020 ರ ಜನವರಿ 10 ರೊಳಗೆ ನೋಂದಾಯಿಸಿಕೊಳ್ಳಬಹುದಾಗಿದ್ದು, ರೈತರ ಬಯೋಮಿಟ್ರಿಕ್ ತೆಗೆದುಕೊಳ್ಳಲಾಗುವುದು. ಭತ್ತ ಖರೀದಿಗೆ ಸಂಬಂಧಿಸಿದಂತೆ ಜಿಲ್ಲೆಯ ಹೊನ್ನಾಳಿ, ಹರಿಹರ ಹಾಗೂ ದಾವಣಗೆರೆ ತಾಲ್ಲೂಕುಗಳಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ಆರಂಭಿಸುತ್ತಿದ್ದು, ರೈತರು ಮಾದರಿ(ಸ್ಯಾಂಪಲ್)ಗಳನ್ನು ಮಾತ್ರ ಈ ಕೇಂದ್ರಗಳಲ್ಲಿ ನೀಡಬೇಕು. ಅಕ್ಕಿ ಗಿರಣಿ ಮಾಲೀಕರು ಡಿ.30 ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದರು.

ರಾಗಿ ಖರೀದಿ ಕೇಂದ್ರಗಳನ್ನು ಜಗಳೂರು, ಹೊನ್ನಾಳಿ, ಹರಿಹರ ಮತ್ತು ದಾವಣಗೆರೆ ತಾಲ್ಲೂಕುಗಳ ಎಪಿಎಂಸಿ ಆವರಣದಲ್ಲಿ ಆರಂಭಿಸಲಾಗುವುದು. ಈ ಬಾರಿ 13925 ಟನ್ ಸಂಗ್ರಹ ನಿರೀಕ್ಷೆ ಇದ್ದು, ಕಳೆದ ಬಾರಿ 14060 ಟನ್ ಖರೀದಿ ಮಾಡಲಾಗಿತ್ತು. ಇಲ್ಲಿ ಖರೀದಿಸುವ ರಾಗಿಯನ್ನು ಪಡಿತರ ವ್ಯವಸ್ಥೆ ಮೂಲಕ ವಿತರಣೆ ಮಾಡಲಾಗುವುದು. ಹಾಗೂ ಖರೀದಿಸಿ ರಾಗಿ ಜಿಲ್ಲೆಯಲ್ಲಿರುವ ವಿವಿಧ ಉಗ್ರಾಣಗಳಲ್ಲಿ ಸಂಗ್ರಹಿಸಿ ಇಡಲಾಗುವುದು.ಖರೀದಿ ಕೇಂದ್ರಗಳಲ್ಲಿ ತೂಕ, ಗುಣಮಟ್ಟದಲ್ಲಿ ರೈತರಿಗೆ ಯಾವುದೇ ಮೋಸವಾಗಬಾರದು. ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಬೇಕು. ಸಿಬ್ಬಂದಿಗಳ ಅವಶ್ಯಕತೆ ಇದ್ದಲ್ಲಿ ರೇಷ್ಮೆ ಇಲಾಖೆಯ ಸಿಬ್ಬಂದಿಗಳನ್ನು ಬಳಸಿಕೊಳ್ಳಬಹುದು ಎಂದರು.

ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ ಮಾತನಾಡಿ, ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ರೈತರು ಉತ್ತಮ ಗುಣಮಟ್ಟದ ಭತ್ತ ಮತ್ತು ರಾಗಿಯನ್ನು ಜಿಲ್ಲೆಯ ಯಾವುದೇ ಖರೀದಿ ಕೇಂದ್ರಗಳಿಗೆ ನೀಡಬಹುದಾಗಿದೆ. ರಾಗಿಯನ್ನು ರಾಜ್ಯ ಉಗ್ರಾಣ ನಿಗಮದವರು ಸಂಗ್ರಹಿಸಿ ಇಡಲಿದ್ದಾರೆ. ಸುಮಾರು 31000 ಟನ್‍ಗಳಷ್ಟ ಧಾನ್ಯ ಸಂಗ್ರಹಿಸುವ ಉಗ್ರಾಣಗಳು ಜಿಲ್ಲೆಯಲ್ಲಿ ಇವೆ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಎಪಿಎಂಸಿ ಕಾರ್ಯದರ್ಶಿ ಪ್ರಭು, ಕೆಎಫ್‍ಸಿಎಸ್‍ಸಿ ರಾಜ್ಯ ವ್ಯವಸ್ಥಾಪಕ ಜವಳಿ, ಕೆಎಫ್‍ಸಿಎಸ್‍ಸಿ ಜಿಲ್ಲಾ ವ್ಯವಸ್ಥಾಪಕ ಮುನೀರ್ ಬಾಷಾ, ಎಪಿಎಂಸಿ ಸಹಾಯಕ ನಿರ್ದೇಶಕರ ಸೋಮಶೇಖರ್, ಕೃಷಿ ಅಧಿಕಾರಿಗಳು, ಎಲ್ಲ ತಾಲ್ಲೂಕುಗಳ ಎಪಿಎಂಸಿ ಕಾರ್ಯದರ್ಶಿಗಳು, ಇತರೆ ಅಧಿಕಾರಿಗಳು ಹಾಜರಿದ್ದರು.

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top