ದಾವಣಗೆರೆ: ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಯಡಿ 975.93 ಕೋಟಿ ರೂ. ವೆಚ್ಚದಲ್ಲಿ ಕೈಗೊಂಡಿರುವ 90 ಕಾಮಗಾರಿಗಳ ಪೈಕಿ 24 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿದ್ದು, 54 ಕಾಮಗಾರಿಗಳು ಮಂದಗತಿಯಲ್ಲಿ ಸಾಗಿವೆ, ಉಳಿದ 11 ಕಾಮಗಾರಿಗಳು ಇನ್ನೂ ಟೆಂಡರ್ ಹಂತದಲ್ಲಿವೆ. ಎಲ್ಲ ಕಾಮಗಾರಿಗಳನ್ನು ಬರುವ ಬೇಸಿಗೆ ಕಾಲದ ಒಳಗಾಗಿ ಪೂರ್ಣಗೊಳಿಸುವಂತೆ ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ. ಬಸವರಾಜ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಾವಣಗೆರೆ ನಗರವನ್ನು ಸುಸಜ್ಜಿತ ನಗರವಾಗಿಸಲು ಕೇಂದ್ರ ಸರ್ಕಾರ ಇಲ್ಲಿಗೆ ಸ್ಮಾರ್ಟ್ ಸಿಟಿ ಯೋಜನೆಯನ್ನು ಜಾರಿಗೊಳಿಸಿದೆ. ಯೋಜನೆಯಡಿ ಕೈಗೊಂಡಿರುವ 90 ಕಾಮಗಾರಿಗಳ ಪೈಕಿ 24 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿವೆ. 54 ಕಾಮಗಾರಿಗಳು ನಡೆದಿದ್ದರೂ, ಮಂದಗತಿಯಲ್ಲಿ ಸಾಗಿದ್ದು, 11 ಕಾಮಗಾರಿಗಳು ಇನ್ನೂ ಟೆಂಡರ್ ಹಂತದಲ್ಲಿವೆ. ನಗರದ ಪ್ರಮುಖ ಅಭಿವೃದ್ಧಿ ಕಾಮಗಾರಿಗಳೂ ಕೂಡ ತ್ವರಿತವಾಗಿ ನಡೆಯುತ್ತಿಲ್ಲ, ಗುಣಮಟ್ಟದಲ್ಲಿ ಕೊರತೆ ಇದೆ ಎಂಬ ದೂರು ವ್ಯಾಪಕವಾಗಿ ಕೇಳಿ ಬರುತ್ತಿದೆ. ನಿಗದಿತ ಕಾಲಮಿತಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸದಿದ್ದರೆ, ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿ ಯೋಜನೆಗೆ ನೀಡಿರುವ ಅನುದಾನ ವಾಪಸ್ ಹೋಗುವ ಸಾಧ್ಯತೆಗಳಿರುತ್ತವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಅನುದಾನ ವಾಪಸ್ ಹೋದರೆ, ಖಂಡಿತ ನಿಮ್ಮೆಲ್ಲರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.
ಗುತ್ತಿಗೆದಾರರು ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಅಗತ್ಯ ಕೆಲಸಗಾರರ ಸಂಖ್ಯೆ, ಪೂರಕ ಉಪಕರಣಗಳನ್ನು ಹೊಂದಿರುವ ಬಗ್ಗೆ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಆಗಾಗ್ಗೆ ಪರಿಶೀಲನೆ ನಡೆಸಬೇಕು. ಸದ್ಯ ಚಳಿಗಾಲವಿದ್ದು, ಮಳೆ ಬರುವ ಸಾಧ್ಯತೆಗಳು ಕಡಿಮೆ ಇರುತ್ತದೆ. ಮುಂದಿನ ಮಳೆಗಾಲ ಪ್ರಾರಂಭವಾಗುವುದರ ಒಳಗಾಗಿ, ಅಂದರೆ ಬೇಸಿಗೆ ಕಾಲದ ಒಳಗಾಗಿ ಬಾಕಿ ಇರುವ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಅಧಿಕಾರಿಗಳು ಮತ್ತೆ ಕುಂಟು ನೆಪ ಹೇಳಿದರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ ಸಚಿವರು, ತ್ವರಿತ ಕಾಮಗಾರಿ ಕೈಗೊಳ್ಳಲು ವಿಫಲರಾಗುವ ಗುತ್ತಿಗೆದಾರರ ಮೇಲೆ ನಿಯಮಾನುಸಾರ ದಂಡ ವಿಧಿಸಲು ಅವಕಾಶವಿದ್ದು, ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರ ಮೇಲೆ ಈ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಅವರು ಯೋಜನೆ ಕಾಮಗಾರಿಗಳ ಕುರಿತು ವಿವರ ನೀಡಿ, ನಗರದಲ್ಲಿ 16.21 ಕೋಟಿ ರೂ. ವೆಚ್ಚದಲ್ಲಿ ಚರಂಡಿ ನೀರು ಪ್ರವಾಹ ಕಾಲುವೆ, 47 ಲಕ್ಷ ರೂ. ವೆಚ್ಚದಲ್ಲಿ 09 ಕಡೆ ಇ-ಶೌಚಾಲಯಗಳು, 4.76 ಕೋಟಿ ರೂ. ವೆಚ್ಚದಲ್ಲಿ ಮಂಡಿಪೇಟೆ ರಸ್ತೆ, 4.76 ಕೋಟಿ ರೂ. ನಡಿ ಎಂ.ಜಿ. ರಸ್ತೆ ಅಭಿವೃದ್ಧಿ, 2.82 ಕೋಟಿ ರೂ. ವೆಚ್ಚದಲ್ಲಿ 52 ಬಸ್ ತಂಗುದಾಣಗಳ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಉಳಿದಂತೆ 6.98 ಕೋಟಿ ರೂ. ವೆಚ್ಚದಲ್ಲಿ ಚಾಮರಾಜಪೇಟೆ ರಸ್ತೆ, 14.27 ಕೋಟಿ ರೂ. ವೆಚ್ಚದಲ್ಲಿ ಚೌಕಿಪೇಟೆ ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಬಾಷಾ ನಗರ ಚರಂಡಿ ಕಾಲುವೆ-5.30 ಕೋಟಿ ರೂ., ಮೀನು ಮಾರುಕಟ್ಟೆಯಿಂದ ಮಾಗೇನಹಳ್ಳಿ ವರೆಗಿನ ಚರಂಡಿ ಕಾಲುವೆ-9.88 ಕೋಟಿ ರೂ. ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ. 15 ಉದ್ಯಾನವನಗಳಲ್ಲಿ ಜಿಮ್ ಅಂಡ್ ಪ್ಲೇ ಉಪಕರಣ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ. ನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಶೌಚಾಲಯಗಳಿಗೆ 6.40 ಕೋಟಿ ರೂ., ಕೆ.ಆರ್ ಮಾರುಕಟ್ಟೆ ಡಬಲ್ ರಸ್ತೆ- 3.66 ಕೋಟಿ ರೂ., ಹೊಂಡದ ಸರ್ಕಲ್ ಕಲ್ಯಾಣಿ- 3.10 ಕೋಟಿ, ದಾವಣಗೆರೆ ನಗರದ 09 ಪ್ರಮುಖ ವೃತ್ತಗಳ ಅಭಿವೃದ್ಧಿಗೆ 7.99 ಕೋಟಿ ರೂ. ವಿದ್ಯುತ್ ಚಿತಾಗಾರ-2.45 ಕೋಟಿ ರೂ., ಮಂಡಕ್ಕಿ ಭಟ್ಟಿ ಪ್ರದೇಶ ಮೂಲಭೂತ ಸೌಕರ್ಯ ಅಭಿವೃದ್ಧಿಗೆ 18 ಕೋಟಿ, ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮಾರ್ಚ್ ಒಳಗಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು. 4.64 ಕೋಟಿ ರೂ. ನಲ್ಲಿ ಸ್ಮಾರ್ಟ್ ಸ್ಕೂಲ್ ಹಾಗೂ 4.92 ಕೋಟಿ ರೂ. ವೆಚ್ಚದಡಿ ಸ್ಮಾರ್ಟ್ ಕಾಲೇಜು ನಿರ್ಮಾಣಕ್ಕೆ ಟೆಂಡರ್ ಆಗಿದೆ. 120 ಕೋಟಿ ರೂ. ವೆಚ್ಚದಲ್ಲಿ ಕೆಎಸ್‍ಆರ್‍ಟಿಸಿ ಹೊಸ ನಿಲ್ದಾಣ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಮಿನಿ ಥಿಯೇಟರ್, ಶಾಪಿಂಗ್ ಮಾಲ್ ಒಳಗೊಂಡು, ಆಕರ್ಷಕ ಹಾಗೂ ಆಧುನಿಕ ವ್ಯವಸ್ಥೆಯನ್ನು ಒಳಗೊಳ್ಳಲಿದ್ದು, ಕಾಮಗಾರಿಗೆ ಚಾಲನೆ ನೀಡಬೇಕಿದೆ ಎಂದರು.
ಸಚಿವರು ಪ್ರತಿಕ್ರಿಯಿಸಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ 5.75 ಕಿ.ಮೀ. ರಿಂಗ್ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ನಡೆದಿದೆ ಇದರಲ್ಲಿ ಶೇ. 30 ರಷ್ಟು ಮಾತ್ರ ಕಾಮಗಾರಿಯಾಗಿದೆ. ಅದೇ ರೀತಿ ನಗರದ ಪ್ರಮುಖ 05 ರಸ್ತೆಗಳಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಪಾದಚಾರಿ ಫುಟ್‍ಪಾತ್ ನಿರ್ಮಾಣ ಕಾಮಗಾರಿ, ಗುರುಭವನ ರಸ್ತೆ ಫುಟ್‍ಪಾತ್ ನಿರ್ಮಾಣ ಕಾಮಗಾರಿ ನಡೆದಿದ್ದು ಕೇವಲ ಶೇ. 12 ರಷ್ಟು ಮಾತ್ರ ಆಗಿದೆ. ಅಧಿಕಾರಿಗಳು ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು, ಸಾರ್ವಜನಿಕರಿಗೆ ಉತ್ತರ ನೀಡಬೇಕಾದವರು ನಾವು. ಹೀಗಾಗಿ ಅಧಿಕಾರಿಗಳು ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸದ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ಸಭೆಯ ಆರಂಭದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್ ಅವರು ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ನಿರೀಕ್ಷಿತ ಮಟ್ಟದಲ್ಲಿ ವೇಗವಾಗಿ ನಡೆಯುತ್ತಿಲ್ಲ. ಕಾಮಗಾರಿಗಳ ಮಂದಗತಿಯಿಂದಾಗಿ ಸಾರ್ವಜನಿಕರು ತೊಂದರೆ ಎದುರಿಸುತ್ತಿದ್ದು, ಸರ್ಕಾರವನ್ನು ದೂಷಿಸುತ್ತಿದ್ದಾರೆ. ಅಧಿಕಾರಿಗಳ ಕಾರ್ಯ ವೈಖರಿಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುವಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಂದಿನ ಸಚಿವರ ಪ್ರಗತಿ ಪರಿಶೀಲನಾ ಸಭೆಯ ಬಗ್ಗೆ ಸಂಸದರಿಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಈ ರೀತಿ ಅಧಿಕಾರಿಗಳು ಸಮನ್ವಯತೆ ಸಾಧಿಸದಿದ್ದರೆ, ಅಭಿವೃದ್ಧಿ ಕಾರ್ಯಗಳು ತ್ವರಿತವಾಗಿ ಹೇಗೆ ನಡೆಯಲು ಸಾಧ್ಯ. ಮುಂದೆ ಈ ರೀತಿ ಆದರೆ ಸಹಿಸುವುದಿಲ್ಲ ಎಂದು ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿಗಳಿಗೆ ಹಾಗೂ ಮಹಾನಗರಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇದಕ್ಕೆ ದನಿಗೂಡಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳ ಇಂತಹ ಕ್ರಮಗಳಿಂದ ನಾವು ಮುಜುಗರ ಅನುಭವಿಸಬೇಕಾಗುತ್ತದೆ. ಇನ್ನು ಮುಂದೆ ಇಂತಹ ಅಚಾತುರ್ಯಗಳಾದರೆ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಬೇಕಾಗುತ್ತದೆ ಎಂದರು.
ಸಭೆಯಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ವಿ. ಶಾಂತಕುಮಾರಿ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮಹಾನಗರಪಾಲಿಕೆ ಮಹಾಪೌರ ಅಜಯ್‍ಕುಮಾರ್, ಆಯಕ್ತ ವಿಶ್ವನಾಥ ಮುದಜ್ಜಿ, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಪ್ರಸನ್ನಕುಮಾರ್, ವೀರೇಶ್, ದೂಡಾ ಅಧ್ಯಕ್ಷ ಎನ್.ಹೆಚ್. ಶಿವಕುಮಾರ್, ಸೇರಿದಂತೆ ಸ್ಮಾರ್ಟ್ ಸಿಟಿ ಯೋಜನೆ ಹಾಗೂ ಮಹಾನಗರಪಾಲಿಕೆ ಅಧಿಕಾರಿಗಳು, ಉಪಸ್ಥಿತರಿದ್ದರು.