ಅಂಕಣ
ಜರ್ಮನಿಯ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡದ ಕಂಪು
-ಶ್ರೀ ತರಳಬಾಳು ಜಗದ್ಗುರು ಡಾ||ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು, ಸಿರಿಗೆರೆ
ತರ್ಕಶಾಸ್ತ್ರದಲ್ಲಿ “ಬೀಜವೃಕ್ಷ ನ್ಮಾಯ” ಎಂಬ ಒಂದು ತಾರ್ಕಿಕ ನ್ಯಾಯವಿದೆ. (maxim). ಬೀಜ ಮೊದಲೋ ಮರ ಮೊದಲೋ ಎಂಬ ಪ್ರಶ್ನೆಗೆ ನಿಖರವಾಗಿ ಉತ್ತರ ಹೇಳುವುದು ಕಷ್ಟ. ಬೀಜ ಮೊದಲು ಎಂದರೆ ಅದರ ಬೆನ್ನಲ್ಲೇ ತೂರಿ ಬರುವ ಪ್ರಶ್ನೆ: “ಹಾಗಾದರೆ ಮರವಿಲ್ಲದೆ ಬೀಜ ಎಲ್ಲಿಂದ ಬಂತು?”. ಮರ ಮೊದಲು ಎಂದರೆ ಮರುಕ್ಷಣವೇ ಹೆಡೆಯೆತ್ತಿ ನಿಲ್ಲುವ ಪ್ರಶ್ನೆ: ‘ಬೀಜವಿಲ್ಲದೆ ಆ ಮರ ಹೇಗೆ ಹುಟ್ಟತು?’.ಇದೇ ರೀತಿ ಭಾಷೆ ಮೊದಲೋ ವ್ಯಾಕರಣ ಮೊದಲೋ ಎಂದು ಯಾರಾದರೂ ಕೇಳಿದರೆ ಉತ್ತರ ಹೇಳುವುದು ಕಷ್ಟವಾಗಲಾರದು. “ಭಾಷೆಯೇ ಮೊದಲು, ನಂತರ ಬಂದದ್ದು ವ್ಯಾಕರಣ” ಎಂಬ ಉತ್ತರಕ್ಕೆ ಯಾರ ತಕರಾರೂ ಇರಲು ಸಾಧ್ಯವಿಲ್ಲ.ಯಾವುದೇ ಭಾಷೆಯನ್ನು ಕಲಿಯಲು ವ್ಯಾಕರಣ ಸಹಾಯಕವಾಗಬಲ್ಲುದೇ ಹೊರತು ವ್ಯಾಕರಣ ಕಲಿತರೆ ಮಾತ್ರ ಭಾಷೆ ಕಲಿಯಲು ಸಾಧ್ಯ ಎಂದು ಹೇಳಲಾಗದು. ಯಾವ ಮಗುವಿಗೂ ತಾಯಿ ವ್ಯಾಕರಣ ಹೇಳಿಕೊಟ್ಟು ಮಾತನ್ನು ಕಲಿಸುವುದಿಲ್ಲ.ಮಗುವು ತಾಯಿಯ ಸಂಸರ್ಗದಲ್ಲಿ ಸಹಜವಾಗಿ ಮಾತನ್ನು ಕಲಿಯುತ್ತದೆ.
ಮೈಸೂರಿನ ಮಹಾರಾಜಾ ಕಾಲೇಜಿನಲ್ಲಿ ನಾವು ಓದುತ್ತಿದ್ದಾಗಾ ಮುಂದೆ ಸಂಸ್ಕೃತದ ಸ್ನಾತಕೋತರ ಅಧ್ಯಯನವನ್ನು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಮುಂದುವರಿಸಬೇಕೆಂಬುದು ನಮ್ಮ ಲಿಂಗೈಕ್ಕ ಗುರುವರ್ಯರ ಅಪೇಕ್ಷೆಯಾಗಿತ್ತು. ಆ ಉದ್ದೇಶಕ್ಕಾಗಿ ಮೈಸೂರಿನ ಖಾಸಗಿ ಶಾಲೆಯಲ್ಲಿ ಹಿಂದಿಯನ್ನು ಕಲಿಯಲು ಆರಂಭ ಮಾಡಿದೆವು. ಬನಾರಸ್‌ಗೆ ಹೋದ ನಂತರ ವ್ಯಾಕರಣದ ಮೂಲಕ ಕಲಿತ ಭಾಷೆ ಎಷ್ಟು ಅಪೂರ್ಣವೆಂಬುದು ನಮ್ಮ ಅರಿವಿಗೆ ಬಂತು. ಕ್ರಮೇಣ ಅಲ್ಲಿನವರೊಂದಿಗೆ ಮಾತನಾಡುತ್ತಾ ಅಲ್ಲಿಯೇ ಹುಟ್ಟ ಬೆಳೆದವರ ಹಾಗೆ ಹಿಂದೀ ಭಾಷೆಯ ಮೇಲೆ ಹಿಡಿತ ಸಾಧ್ಯವಾಯಿತು! ಬನಾರಸ್‌ನಲ್ಲಿ ಸ್ನಾತಕೋತ್ತರ ಅಧ್ಯಯನದ ಸಂದರ್ಭದಲ್ಲಿಯೇ ನಮ್ಮ ಜರ್ಮನ್ ಭಾಷೆಯ ಕಲಿಕೆ ಆರಂಭವಾಯಿತು. ಅದಕ್ಕೆ ಕಾರಣ ‘ಜಗದ್ಗುರುವಾಗುವವನು ಜಗತನ್ನು ಸುತ್ತಿ ಬರಬೇಕು,ಪಾಶ್ಚಾತ್ಯ ವಿಶ್ವವಿದ್ಯಾನಿಲಯಗಳಲ್ಲಿ ನಿನ್ನ ಓದನ್ನು ಮುಂದುವರಿಸಬೇಕು’ ಎಂದು ನಮ್ಮ ಗುರುವರ್ಯರ ಆಣತಿಯಾಗಿತ್ತು. ಬನಾರಸ್‌ನಲ್ಲಿ ನಡೆಸಿದ ನಮ್ಮ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರೆತ ಮೇಲೆ ವಿಯೆನ್ನಾ ವಿಶ್ವವಿದ್ಯಾನಿಲಯದ Afro Asian Institute ನಿಂದ ನಮಗೆ ಉನ್ನತ ಅಧ್ಯಯನಕ್ಕಾಗಿ ಫೆಲೋಷಿಪ್ ದೊರೆಯಿತು. ಅಲ್ಲಿಗೆ ಹೋಗುವ ಪೂರ್ವದಲ್ಲಿ ಪುಣೆಯ Goethe Institute ನಲ್ಲಿ ಮೂರು ತಿಂಗಳ ಕಾಲ ಜರ್ಮನ್ ಭಾಷೆಯ ಕಲಿಕೆ ಮುಂದುವರಿಯಿತು. ಆ ಕೇಂದ್ರದ ವಿದ್ಯಾರ್ಥಿನಿಲಯದಲ್ಲಿ ಎಲವೂ ಜರ್ಮನ್ ಭಾಷೆಯ ವಾತಾವರಣ. ಅಲ್ಲಿಗೆ ಬಂದು ಸೇರಿದ ವಿದ್ಯಾರ್ಥಿಗಳೆಲ್ಲರೂ ದಿನನಿತ್ಯ ಜರ್ಮನ್ ಭಾಷೆಯಲ್ಲಿಯೇ ಮಾತನಾಡುವುದು, ಓದುವುದು,ಬರೆಯುವುದು ಕಡ್ಡಾಯವಾಗಿತ್ತು. ಹೀಗಾಗಿ ಬನಾರಸ್‌ನಲ್ಲಿ ಮಾಡಿದ ಎರಡು ವರ್ಷಗಳ ಜರ್ಮನ್ ಡಿಪ್ಲೊಮಾಗಿಂತ ಮೂರೇ ತಿಂಗಳಲ್ಲಿ ಹೆಚ್ಚಾಗಿ ಜರ್ಮನ್ ಭಾಷೆ ಕಲಿತದ್ದು ಇಲ್ಲಿಯೇ! ಮುಂದೆ ವಿಯೆನ್ನಾ ವಿಶ್ವವಿದ್ಯಾನಿಲಯಕ್ಕೆ ಹೋಗಿ ಸೇರಿದಾಗ ಇಲ್ಲಿ ಗಳಿಸಿದ ಜರ್ಮನ್ ಭಾಷಾ ಜ್ಞಾನ ತುಂಬಾ ನೆರವಾಯಿತು.
ವಿಯೆನ್ನಾ ವಿಶ್ವವಿದ್ಯಾಲಯದಲ್ಲಿ ಓದಲು ಬೇಕಾದ ಭಾಷಾಜ್ಞಾನ ನಮಗೆ ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಅಲ್ಲಿ ನಡೆಸಿದ ಪರೀಕ್ಷಾ ಕ್ರಮ ವಿಭಿನ್ನವಾಗಿತ್ತು. ಪೂನಾದಲ್ಲಿ ಓದಿದ ಯಾವ ಪಠ್ಯಕ್ರಮವು ಅಲ್ಲಿರಲಿಲ್ಲ. ಪರೀಕ್ಷಾ ಕೊಠಡಿಯಲ್ಲಿ ಕುಳಿತಾಗ ಜರ್ಮನ್ ಭಾಷೆಯಲ್ಲಿರುವ ಯಾವುದೋ ಒಂದು ಪುಸಕದ ಆಯ್ದ ಪುಟಗಳ ಪ್ರತಿಲಿಪಿಯನ್ನು ಕೊಟ್ಟರು. ನಿಗದಿತ ಸಮಯದಲ್ಲಿ ಅದನ್ನುಷಓದಿಕೊಳಲು ಹೇಳಿ ನಂತರ ಪ್ರಶ್ನೆಪತ್ರಿಕೆಯನ್ನು ಕೊಟ್ಟು ನಮ್ಮಿಂದ ಉತ್ತರ ಪಡೆದರು. ಇದೇ ರೀತಿ ಕಿವಿಗೆ ಶ್ರವಣಯಂತ್ರವನ್ನು ಅಳವಡಿಸಿ ಜರ್ಮನ್ ಭಾಷೆಯಲ್ಲಿರುವ ಒಂದು ಸಂಭಾಷಣೆಯನ್ನು ಕೇಳುವಂತೆ ಮಾಡಿದರು. ನಂತರ ಪ್ರಶ್ನೆಪತ್ರಿಕೆಯನ್ನು ಕೈಯಲ್ಲಿ ಕೊಟ್ಟು ಪ್ರಶ್ನೆಗಳನ್ನು ಓದಿಕೊಳ್ಳಲು ಹೇಳಿ ಮತ್ತೆ ಆ ಸಂಭಾಷಣೆಯನ್ನು ಕೇಳುವಂತೆ ಮಾಡಿ ನಮ್ಮಿಂದ ಉತ್ತರ ಪಡೆದರು. ಹೀಗೆ ಜರ್ಮನ್ ಭಾಷೆಯಲ್ಲಿ ಓದಿ ಅರ್ಥ ಮಾಡಿಕೊಳುವ ಚಾಕ್ಷುಷ ಜ್ಞಾನ (Leseverstandnis) ಮತ್ತು ಜರ್ಮನ್ ಭಾಷೆಯ ಸಂಭಾಷಣೆಯನ್ನು ಕೇಳಿ ಅರ್ಥ ಮಾಡಿಕೊಳ್ಳುವ ಶ್ರವಣ ಜ್ಞಾನ (Hoerverstandnis)) ಇದೆಯೇ ಎಂಬುದನ್ನು ಪರೀಕ್ಷಿಸಿ ನಮನ್ನು ಉತ್ತೀರ್ಣಗೊಳಿಸಿದರು.
ಶಬ್ದಕ್ಕೂ ಅರ್ಥಕ್ಕೂ ಇರುವ ಸಂಬಂಧ ಅನನ್ಯವಾದುದು. ಪತಂಜಲಿಯು ಪಾಣಿನಿಯ ಸೂತ್ರಗಳ ಮೇಲೆ ಬರೆದ ತನ್ನ ಮಹಾಭಾಷ್ಯದ ‘ಪಶ್ವಶಾಹ್ನಿಕಾ’ ಎಂಬ ಅಧ್ಯಾಯದಲ್ಲಿ ತುಂಬಾ ವಿಸ್ತೃತವಾಗಿ ಇದನ್ನು ವಿವೇಚಿಸಿದ್ದಾನೆ. ‘ಕಃ ಶಬ್ದ’ ಅಂದರೆ ಏನು. ಎಂಬ ಪ್ರಶ್ನೆಯನ್ನು ಹಾಕಿಕೊಂಡು ಶಬ್ದ ಮತ್ತು ಅರ್ಥದ ಸಂಬಂಧದ ಸೂಕ್ಷತೆಯನ್ನು ಬಹಳ ಚೆನ್ನಾಗಿ ವಿಶ್ಲೇಷಿಸಿದ್ದಾನೆ. ಉದಾಹರಣೆಗೆ ‘ಗೌಃ’ (ಹಸು) ಎಂಬ ಶಬ್ದ ಏನನ್ನು ಸೂಚಿಸುತ್ತದೆ?ಹಸುವಿನ ಕೋಡು, ಬಾಲ, ಗೊರಸು ಅಥವಾ ಡುಬ್ಬವನ್ನಲ್ಲ ಅದರ ಕಪ್ಪು ಬಿಳುಪು, ಕಂದು ಬಣ್ಣವನ್ನಲ್ಲ. ಕೋಡು/ಕಾಲು ಮುರಿದಿದ್ದರೂ, ಬಾಲ ಕತ್ತರಿಸಿದ್ದರೂ ಹಸುವೆಂದು ಗುರುತಿಸಲಾಗುತ್ತದೆ. ಆದಕಾರಣ ಯಾವ ಶಬ್ದದ ಉಚ್ಚಾರಣೆಯಿಂದ ಇವುಗಳನ್ನೊಳಗೊಂಡ ಹಸುವಿನ ಪರಿಜ್ಞಾನ ಉಂಟಾಗುತ್ತದೆಯೋ ಅದು ‘ಹಸು’ ಶಬ್ದ ಎಂದು ವಿವರಿಸುತ್ತಾನೆ. ಮಹಾಕವಿ ಕಾಳಿದಾಸನೂ ಸಹ ತನ್ನ ‘ರಘುವಂಶ’ ಮಹಾಕಾವ್ಯದ ಆರಂಭದಲ್ಲಿ ‘ವಾಗರ್ಥಾವಿವ ಸಂಪೃಕ್ತೌ ವಾಗರ್ಥಃ ಪ್ರತಿಪತ್ತಯೇ /ಜಗತಃ ಪಿತರೌ ವಂದೇ ಪಾರ್ವತೀಪರಮೇಶ್ವರೌ॥’ ಎಂಬ ಶ್ಲೋಕದಲ್ಲಿ ಈ ಜಗತ್ತಿನ ತಾಯಿ-ತಂದೆಗಳಾದ ಪಾರ್ವತೀ ಪರಮೇಶ್ವರರ ಪರಸ್ಪರ ಸಂಬಂಧ ಹೇಗಿದೆ ಎಂದರೆ ‘ಶಬ್ದ’ ಮತ್ತು ಅದರ ‘ಅರ್ಥ’ದ ಸಂಬಂಧ ಇದ್ದ ಹಾಗೆ ಇದೆ ಎಂದು ಬಣ್ಣಿಸಿದ್ದಾನೆ. ಶಬ್ದ (world) ಮತ್ತು ಅದರ ಅರ್ಥವನ್ನು(meaning) ಪ್ರತ್ಯೇಕಿಸಲು ಬರುವುದಿಲ್ಲ. ಅವೆರಡರ ಸಂಬಂಧ ಅವಿನಾಭಾವ.
ಭಾಷೆಯನ್ನು ಕುರಿತು ಇಷ್ಟೆಲ್ಲಾ ಬರೆಯಲು ಕಾರಣ ಕಳೆದ ವಾರ ನಮಗೆ ಅನಿರೀಕ್ಷಿತವಾಗಿ ಬಂದ ಒಂದು ಮಿಂಚೋಲೆ. ಸುಮಾರು 12 ವರ್ಷಗಳ ಹಿಂದೆ ಅವರಿಂದ ಬಂದಿದ್ದ ಅಪರೂಪದ ಈ ಕೆಳಗಿನ ಪತ್ರ ನೆನಪಾಯಿತು:
“ಪರಮಪೂಜ್ಯ ಮಹಾಸ್ವಾಮಿಗಳಿಗೆ ಮುನೀಶನಗರದಿಂದ ನನ್ನ ಹೃತ್ಪೂರ್ವಕ ನಮನಗಳು. ನನ್ನ ಕಡೆಯಿಂದ ಇಷ್ಟು ದಿವಸ ಮೌನ ಇದ್ದರೂ, ಇದು ವಿಸ್ಮರಣ ಎಂದು ತಾವು ದಯವಟ್ಟು ತಿಳಿದುಕೊಳಬೇಡಿ.ಇದು ಸಾಧ್ಯವಿಲ್ಲ! ಎಂಬುದಕ್ಕೆ ಕಿರುಸನ್ನೆಯಾಗಿ ಹೊಸ ವರ್ಷದ ನನ್ನ ಹಾರ್ದಿಕ ಶುಭಾಶಯಗಳನ್ನು ಸ್ವೀಕರಿಸಿರಿ. ಈ ವರ್ಷ (೨೦೦೮) ನಾನು ಇಂಡಿಯಾಕ್ಕೆ ಬರಲಾಗಲಿಲ್ಲ ಆದರೆ ಪ್ರಾಯಶಃ ಮುಂದಿನ ಮಾರ್ಚ್ ತಿಂಗಳಿನಲ್ಲಿ ಮತ್ತೆ ಬರುವ ಸುಯೋಗ ಸಿಗುತ್ತದೆ.ತಾವೂ, ತಮ್ಮ ಸಂಸ್ಥಾನದ ನನ್ನ ಸ್ನೇಹಿತರೂ ಆರೋಗ್ಯದಲ್ಲೂ ಜೀವನತೃಪ್ತಿಯಲ್ಲೂ ಇರುವಿರಿ ಎಂದು ನಂಬುತ್ತೇನೆ. ಇಂತೀ ತಮ್ಮ…”
ಇದನ್ನು ಅಪ್ಪಟ ಕನ್ನಡ ಲಿಪಿಯಲ್ಲಿ ಸ್ವಂತ ಕೈಬರವಣಿಗೆಯಲ್ಲಿ ನಮಗೆ ಬರೆದವರು ಕನ್ನಡಿಗರಲ್ಲವೆಂದು ಹೇಳಿದರೆ ನೀವು ಆಶ್ಚರ್ಯಪಡುತ್ತೀರಿ. ಇದರಲ್ಲಿ ಉಲ್ಲೇಖಿತವಾಗಿರುವ ‘ಮುನೀಶನಗರ’ ನೀವು ಭಾರತದ ಭೂಪಟದಲ್ಲಿ ಹುಡುಕಿದರೆ ಸಿಗುವುದಿಲ್ಲ.ಈ ಪತ್ರ ನಮಗೆ ಬಂದಿರುವುದು ಜರ್ಮನಿಯ ಮೂನಿಚ್ ನಗರದಿಂದ.ಬರೆದವರು ಪ್ರೊಫೆಸರ್ ರಾಬರ್ಟ್ ಜೈಡನ್‌ಬೋಸ್ (Robert Zydenbos).ಮೂಲತಃ ಹಾಲೆಂಡ್ ದೇಶದವರಾದ ಇವರು ಕಳೆದ 20 ವರ್ಷಗಳಿಂದ ಜರ್ಮನಿಯ ಮ್ಯೂನಿಚ್ ವಿಶ್ವವಿದ್ಕಾನಿಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿದ್ದಾರೆ. ನೀಳಕಾಯ, ಎತ್ತರವಾದ ಮೈಕಟ್ಟು,ಕಿವಿಯವರೆಗೂ ಇಳಿಬಿದ್ದ ತಲೆಗೂದಲು. ಭಾರತಕ್ಕೆ ಬಂದಾಗ ಕಚ್ಚೆ ಪಂಜೆ,ಬಿಳಿ ಅಂಗಿ ಅದರ ಮೇಲೆ ಕಂದು ಬಣ್ಣದ ‘ವಾಷ್ ಕೋಟ್’ ಮತ್ತು ಕಾಲಲ್ಲಿ ಸಾದಾ ಚಪ್ಪಲಿ ಧರಿಸುವ ಅವರು ಅಪ್ಪಟ ಕನ್ನಡದಲ್ಲಿ ಮಾತನಾಡುತ್ತಾರೆ. ಅಪ್ಪಿತಪ್ಪಿ ಒಂದೂ ಇಂಗ್ಲೀಷ್ ಪದವನ್ನು ಬಳಸುವುದಿಲ್ಲ.ಅದಕ್ಕಾಗಿ ಅವರು ಬಹಳ ಕಷ್ಟಪಡುವುದಿಲ್ಲ: ಸಹಜವಾಗಿ ಮಾತನಾಡುತ್ತಾರೆ. ಅವರು ಮಾತನಾಡುವ ಶೈಲಿ ಸ್ವಲ್ಪಮಟ್ಟಗೆ ದಕ್ಷಿಣ ಕನ್ನಡದವರನ್ನು ಹೋಲುತ್ತದೆ. ಅವರು ಬರೆದ ಮೇಲ್ಕಂಡ ಪತ್ರವನ್ನು ನೀವು ಸರಿಯಾಗಿ ಗಮನಿಸಿದರೆ ಇಸವಿಯನ್ನು ಅವರು ಕನ್ನಡದ ಅಂಕಿಗಳಲ್ಲಿ ಬರೆದಿರುತ್ತಾರೆ. ಎಷ್ಟೋ ಜನ ಕನ್ನಡಿಗರಿಗೆ ಈಗ ಕನ್ನಡದ ಅಂಕಿಗಳು ಗೊತ್ತೇ ಇಲ್ಲ.ವಿದೇಶೀಯರಾದರೂ ಕನ್ನಡ ನಾಡು-ನುಡಿಯ ಬಗ್ಗೆ ವಿಶೇಷ ಅಭಿರುಚಿ ಇರುವ ಇವರನ್ನು ‘ಅಪ್ಪಟ ಕನ್ನಡಿಗ’ ಎನ್ನದೆ ಇನ್ನಾರನ್ನು ಹಾಗೆ ಕರೆಯಲು ಸಾಧ್ಯ!*
ಕಳೆದ ವಾರ ಅವರು ಬರೆದ ಮಿಂಚೋಲೆಯಲ್ಲಿ ಜರ್ಮನಿಯ ವಿಶ್ವವಿದ್ಯಾನಿಲಯಗಳಲ್ಲಿ ಕನ್ನಡ ಬೋಧನೆಯ ಸಮಸ್ಯೆಗಳನ್ನು ನಮೊಂದಿಗೆ ಹಂಚಿಕೊಂಡಿದ್ದಾರೆ.ಮ್ಯೂನಿಚ್ ವಿಶ್ವವಿದ್ಯಾನಿಲಯದಲ್ಲಿ ಇಂಡಾಲಜಿ ಅಧ್ಯಯನಕ್ಕೆ ತುಂಬಾ ತೊಂದರೆಯಾಗಿದೆ. ಭಾರತೀಯ ಧರ್ಮದ ಕುರಿತ ಅಧ್ಯಯನಕ್ಕಿಂತ ಟಬೆಟ್ಟನ ಬೌದಧರ್ಮ ಕುರಿತ ಆಧ್ಯಯನಕ್ಕೇ ಹೆಚ್ಚು ಒತ್ತು ಸಿಗುತ್ತಿದೆ. ನಿವೃತ್ತರಾದ ಇಬ್ಬರು ಪ್ರೊಫೆಸರ್‌ಗಳ ಜಾಗಗಳು ಭರ್ತಿಯಾಗಿಲ್ಲ. ಕೇವಲ ತಾತ್ಕಾಲಿಕ ವ್ಯವಸ್ಥೆಯಿಂದ ಬೋಧನೆ ನಡೆಯುತ್ತಿದೆ. ಇನ್ನು ಕನ್ನಡದ ವಿಷಯಕ್ಕೆ ಬಂದರೆ ಜರ್ಮನಿಯ Muchen and Wurzburg ಈ ಎರಡು ವಿಶ್ವವಿದ್ಯಾನಿಲಯಗಳಲ್ಲಿ ಮಾತ್ರ ಕನ್ನಡ ಬೋಧನೆಗೆ ಅವಕಾಶವಿದೆ.Wurzburg ನಲ್ಲಿ ಬೋಧನೆಗೆ ಬಹಳ ತೊಂದರೆಯಿದೆ. ಇಲ್ಲಿಗೆ ಬರುತ್ತಿದ್ದ ಮಂಗಳೂರಿನ ನಿವೃತ್ತ ಪ್ರೊಫೆಸರ್ ಅವರಿಗೆ ಯೂರೋಪಿನ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅರ್ಥಮಾಡಿಕೊಳುವುದು ಕಷ್ಟವಾಗುತ್ತಿದೆ.ಯಾವುದೋ ಕಾಲದ ಬೋಧನಾ ಸಾಮಗ್ರಿಗಳನ್ನು ಇಲ್ಲಿ ಬಳಸಲಾಗುತ್ತಿದೆ. ಆದಾಗ್ಯೂ ಈ ವಿಶ್ವವಿದ್ಯಾನಿಲಯವು ಕನ್ನಡ ಅಧ್ಯಯನಕ್ಕೆ ಅವಕಾಶವನ್ನು ಮುಂದುವರಿಸುವ ಧೈರ್ಯ ಮಾಡಿದೆ. ವಿಷಾದದ ಸಂಗತಿ ಎಂದರೆ Muchen and Wurzburg ಈ ಎರಡೂ ವಿಶ್ವವಿದ್ಯಾಲಯಗಳು ಪರಸ್ಪರ ಸಹಕಾರ ಕೊಡದೆ ವೈರಿಗಳಂತೆ ವರ್ತಿಸುತ್ತಿವೆ. ಈಗ ಮುಖ್ಯಸ್ಥರು ನಿವೃತ್ತಿಯಾಗಿದ್ದಾರೆ. ಪರಿಸ್ಥಿತಿ ಬದಲಾಗಬಹುದೆಂಬ ಆಶಾಭಾವನೆ ಇದೆ.ಮ್ಯೂನಿಚ್ ವಿಶ್ವವಿದ್ಯಾನಿಲಯದಲ್ಲಿ ಕಳೆದ 20 ವರ್ಷಗಳಿಂದ ನಾನು ಕನ್ನಡವನ್ನು ಬೋಧಿಸುತ್ತಿದ್ದೇನೆ.ಕಲಿಯಲು ಬರುವವರ ಸಂಖ್ಯೆ ಕಡಿಮೆಯಿದ್ದರೂ ಭಾರತೀಯರಲ್ಲದ ಅನೇಕರು ಬರುತ್ತಿದ್ದಾರೆ. ಒಂದು ವರ್ಷ ಪೂರೈಸಿದವರು ಅನೇಕ ವರ್ಷ ಅಧ್ಯಯನ ಮುಂದುವರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಉನ್ನತ ಓದಿನ ತರಗತಿಗೂ ಸೇರಿಕೊಂಡಿದ್ದಾರೆ. ಈಗ ಕೊರೊನಾ ಕಾರಣದಿಂದ ತರಗತಿಗಳು ಆನ್ ಲೈನಿನಲ್ಲಿ ನಡೆಯುತ್ತಿವೆ. ಹೀಗಾಗಿ ಇಟಲಿ ಮತ್ತು ಅಮೇರಿಕೆಯ ವಿದ್ಯಾರ್ಥಿಗಳೂ ಸಹ ಸೇರಿ ಆನ್ ಲೈನ್ ಶಿಕ್ಷಣವನ್ನು ಪಡೆಯುತ್ತಿದ್ದಾರೆ.
ಪ್ರೊಫೆಸರ್ Robert Zydenbos ರವರು ಇತ್ತೀಚೆಗೆ ಪಾಶ್ಚಿಮಾತ್ಯ ವಿದ್ಯಾರ್ಥಿಗಳ ಕನ್ನಡ ಕಲಿಕೆಗಾಗಿ. “A Manual of Modern Kannada” ಎಂಬ ಪುಸ್ತಕವನ್ನು ಆಂಗ್ಲಭಾಷೆಯಲ್ಲಿ ಬರೆದಿದ್ದಾರೆ. ಅವರು ಅನುಮತಿಸಿದರೆ. ಈ ಪುಸ್ತಕವನ್ನು ನಮ್ಮ ಮಠದಿಂದ ಪ್ರಕಟಿಸುವ ಆಲೋಚನೆ ಇದೆ. ಕಳೆದ 20 ವರ್ಷಗಳ ಕನ್ನಡ ಬೋಧನೆಯ ಹಿನ್ನೆಲೆಯಲ್ಲಿ ಅವರು ಕಷ್ಟಪಟ್ಟು ಸಿದ್ಧಪಡಿಸಿದ ಈ ಪುಸ್ತಕದಲ್ಲಿ 19 ಅಧ್ಯಾಯಗಳಿವೆ. ಆಸಕ್ತರು ಅಂತರಜಾಲದಲ್ಲಿ ಓದಬಹುದು.https://crossasia-books.ub.uni.heidelberg.de/catalog/book736 ಕೆಲವು ವರ್ಷಗಳ ಹಿಂದೆ ಕರ್ನಾಟಕದ ಪ್ರಮುಖ ವಿಶ್ವವಿದ್ಯಾನಿಲಯಗಳನ್ನು ನಾವು ಓದಿದ ವಿಯೆನ್ನಾ ವಿಶ್ವವಿದ್ಯಾನಿಲಯಕ್ಕೂ ಮತ್ತು ಜರ್ಮನಿಯ ಮ್ಯೂನಿಚ್, ಹೈಡೆಲ್‌ಬೆರ್ಗ್, ವೂರ್ತ್ಸ್‌ಬುರ್ಗ್, ಹಾಂಬುರ್ಗ್ ಮೊದಲಾದ ವಿಶ್ವವಿದ್ಯಾ ನಿಲಯಗಳಿಗೂ ಸಂಪರ್ಕ ಸೇತುವೆಯನ್ನಾಗಿಸಿ ಕನ್ನಡ ಅಧ್ಯಯನಕ್ಕೆ ಅನುವು ಮಾಡಿಕೊಡಬೇಕೆಂಬ ನಮ್ಮ ಒತ್ತಾಸೆಗೆ ಮಣಿದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು 5 ಕೋಟಿ ರೂ.ಗಳನ್ನು ಮುಂಜೂರು ಮಾಡಿದ್ದರು. ಕರ್ನಾಟಕದಿಂದ ಈ ವಿಶ್ವವಿದ್ಯಾನಿಲಯಗಳಿಗೆ ಒಂದು ನಿಯೋಗವನ್ನೂ ಕಳುಹಿಸಿದ್ದರು.ಆದರೆ ಈವರೆಗೂ ಕರ್ನಾಟಕ ಸರಕಾರದಿಂದ. ಯಾವ ಆರ್ಥಿಕ ಸಹಾಯವೂ ಬಂದಿಲ್ಲವೆಂದು ಪ್ರೊಫೆಸರ್ Robert Zydenbos ರವರು ನಮಗೆ ಬರೆದ ಮಿಂಚೋಲೆಯಲ್ಲಿ ತುಂಬಾ ವಿಷಾದ ವ್ಯಕ್ತಪಡಿಸಿದ್ದಾರೆ.ಕನ್ನಡಕ್ಕಾಗಿ ಪಾಶ್ಚಿಮಾತ್ಯರು ಅದರಲ್ಲೂ ವಿಶೇಷವಾಗಿ ಜರ್ಮನ್ ವಿದ್ವಾಂಸರನೇಕರು ದುಡಿದಿದಾರೆ.ಕಿಟ್ಟೆಲ್,ಕಾಲ್ಡ್ ವೆಲ್, ಗುಂಡರ್ಟ್, ರೈಸ್, ಹರ್ಮನ್ ಮೊಗ್ಲಿಂಗ್ ಮೊದಲಾದ ಪ್ರಸಿದ್ಧ ವಿದ್ವಾಂಸರ ಪಟ್ಟಗೆ ಈಗ ನಿವೃತ್ತಿಯ ಅಂಚಿನಲ್ಲಿರುವ ಪ್ರೊಫೆಸರ್ ರಾಬರ್ಟ್ ಜೈಡನ್‌ಬೋಸ್ ರವರೂ ಸೇರುತ್ತಾರೆ!
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com