Connect with us

Dvgsuddi Kannada | online news portal | Kannada news online

ದೇಶದಲ್ಲಿ ಬೆಂಕಿ ಹಚ್ಚುವುದು ಸುಲಭ; ದೀಪ ಹಚ್ಚುವುದು ಬಹಳ ಕಷ್ಟ..! ; ತರಳಬಾಳು ಶ್ರೀ

ಸ್ಪೆಷಲ್

ದೇಶದಲ್ಲಿ ಬೆಂಕಿ ಹಚ್ಚುವುದು ಸುಲಭ; ದೀಪ ಹಚ್ಚುವುದು ಬಹಳ ಕಷ್ಟ..! ; ತರಳಬಾಳು ಶ್ರೀ

ಸಿರಿಗೆರೆ; ನಮ್ಮ ದೇಶದಲ್ಲಿ ಬೆಂಕಿ ಹಚ್ಚುವುದು ಸುಲಭ. ದೀಪ ಹಚ್ಚುವುದು ಬಹಳ ಕಷ್ಟ ಎಂದು ಸಿರಿಗೆರೆಯ ತರಳಬಾಳು ಜಗದ್ಗುರು ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ಶ್ರೀ ಬೃಹನ್ಮಠದ ಐಕ್ಯಮಂಟಪದಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರು, ಮಠದ ಶಿಷ್ಯರುಗಳ ಸಮಾಗಮದಲ್ಲಿ ಶಿವಜ್ಯೋತಿ ಹಚ್ಚುವುದರ ಮೂಲಕ ದೀಪಾವಳಿ ಹಬ್ಬವನ್ನು ಆಚರಿಸಿ ಸಂದೇಶ ಕರುಣಿಸಿದರು.

ದೀಪಾವಳಿ ಹಬ್ಬ ಬಂತೆಂದರೆ ಭಾರತೀಯರಿಗೆ ಎಲ್ಲಿಲ್ಲದ ಸಂಭ್ರಮ ಹಾಗೂ ಸಡಗರ. ಸಹಸ್ರಾರು ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಈ ದೀಪಾವಳಿ ಇಂದು ಕೇವಲ ಧಾರ್ಮಿಕ ಆಚರಣೆಯಾಗಿ ಉಳಿಯದೆ ಹೆಚ್ಚು ಸಾಂಸ್ಕೃತಿಕ ಆಚರಣೆಯಾಗಿ (cultural event) ಪರಿಣಮಿಸಿ ವಿಶ್ವದೆಲ್ಲೆಡೆ ವ್ಯಾಪಿಸಿದೆ.ಭಾರತೀಯರು ವರ್ಷಕ್ಕೊಮ್ಮೆ ದೀಪಾವಳಿಯ ಸಂದರ್ಭದಲ್ಲಿ ಮನೆಗಳಲ್ಲಿ ದೀಪಾಲಂಕಾರ ಮಾಡಿದರೆ ನಭೋಮಂಡಲದಲ್ಲಿ ಮಿನುಗುವ ಗ್ರಹನಕ್ಷತ್ರಗಳು ನಿತ್ಯವೂ ದೀಪಾವಳಿಯ ಸಡಗರದಲ್ಲಿರುವಂತೆ ತೋರುತ್ತವೆ ಎಂದು ಅಭಿಪ್ರಾಯಪಟ್ಟರು.


ಬೆಳಕು ಜ್ಞಾನದ ಸಂಕೇತ; ಕತ್ತಲು ಅಜ್ಞಾನದ ಸಂಕೇತ. “ತಮಸೋ ಮಾ ಜ್ಯೋತಿರ್ಗಮಯ” ಎಂದು ಶತಮಾನಗಳಿಂದ ಗಿಳಿಪಾಠ ಹೇಳಿದ್ದೇ ಹೇಳಿದ್ದು. ನಮ್ಮ ಅಜ್ಞಾನ ನಿವಾರಣೆಯಾಗಿ ಜ್ಞಾನ ಮೂಡಿದೆಯೇ? ನಮ್ಮ ಬದುಕು ಕತ್ತಲಿಂದ ಬೆಳಕಿನೆಡೆಗೆ ಸಾಗಿದೆಯೇ? ನಮ್ಮ ದೇಶದಲ್ಲಿ ಬೆಂಕಿ ಹಚ್ಚುವುದು ಸುಲಭ; ದೀಪ ಹಚ್ಚುವುದು ಬಹಳ ಕಷ್ಟ! ಇತ್ತೀಚೆಗೆ ಸಭೆ ಸಮಾರಂಭಗಳಲ್ಲಿ ಸುಲಭವಾಗಿ ದೀಪ ಹಚ್ಚಲು ಪ್ರತಿಯೊಂದು ಬತ್ತಿಯ ಮೇಲೂ ಕರ್ಪೂರದ ಬಿಲ್ಲೆ ಇಡುವ ಪದ್ಧತಿಯನ್ನು ಅನುಭವಿ ಕಾರ್ಯಕರ್ತರು ಜಾರಿಗೆ ತಂದಿದ್ದಾರೆ. ಆದರೂ ಉದ್ಘಾಟಕರು ದೀಪ ಹಚ್ಚಿದ ಕೆಲವೇ ಸೆಕೆಂಡುಗಳಲ್ಲಿ ದೀಪ ಆರಿ ಮಂಕು ಕವಿದಿರುತ್ತದೆ! ಇದು ಕತ್ತಲೆಯಿಂದ ಬೆಳಕಿನೆಡೆಗೆ ನಡೆಯುವ ಸಂಕೇತವಾಗುವುದರ ಬದಲು ಬೆಳಕಿನಿಂದ ಕತ್ತಲೆಯ ಕಡೆಗೆ ಧಾವಿಸುತ್ತಿರುವುದರ ಸಂಕೇತವಾಗಿದೆ. ನಮ್ಮ ಜನ ನಾಯಕರು ವೇದಿಕೆಯ ಮೇಲೆ ದೀಪ ಹಚ್ಚುವುದಕ್ಕಿಂತ ತಮ್ಮ ಭಾಷಣಗಳಲ್ಲಿ ಪಟಾಕಿ ಸಿಡಿಸುವುದೇ ಜಾಸ್ತಿ! ಅನೇಕ ದೀಪಾವಳಿಗಳು ಬಂದು ಹೋಗಿವೆ. ಆದರೂ ಮನುಷ್ಯನ ಹೃದಯ ಮಾತ್ರ ಇನ್ನೂ ಕಗ್ಗತ್ತಲ ಕೋಣೆಯಾಗಿಯೇ ಉಳಿದಿದೆ ಎಂದು ಅಭಿಪ್ರಾಯಪಟ್ಟರು.

ಇಂತಹ ಹಬ್ಬಗಳಂದು ಪುರಾಣ ಕಾಲದಲ್ಲಿದ್ದ ನರಕಾಸುರ, ತಾರಕಾಸುರ, ರಾವಣಾಸುರ ಇತ್ಯಾದಿ ರಾಕ್ಷಸರ ವಧೆಯಾಯಿತೆಂದು ತಿಳಿಯದೆ ಅವರೆಲ್ಲರೂ ನಮ್ಮೊಳಗೇ ಇನ್ನೂ ಜೀವಂತವಾಗಿದ್ದಾರೆಂದು ಭಾವಿಸಿ ನಮ್ಮೊಳಗಿರುವ ರಾಕ್ಷಸೀ ಗುಣಗಳನ್ನು ನಿರ್ಮೂಲನಗೊಳಿಸಿಕೊಳ್ಳುವ ಪ್ರಯತ್ನ ಮಾಡಿದರೆ ಈ ಹಬ್ಬಗಳು ಸಾರ್ಥಕವಾದಾವು ಎಂದ ಶ್ರೀ ಜಗದ್ಗುರುಗಳವರು ಈ ಬಹಳ ಹಿಂದೆ ತಾವು ಬರೆದ ಕವಿತೆಯನ್ನು ಅರ್ಥೈಸಿದರು.*

ಮತ್ಸರದ ಬತ್ತಿ

ಹತ್ತಿ ಉರಿಯುತಿದೆ ಸುತ್ತಲೂ

ಮತ್ಸರದ ಸುರುಸುರು ಬತ್ತಿ

ಹಚ್ಚಲಾದೀತೇ ಅದರಿಂದ
ಮತ್ತೊಂದು ಹಣತೆಯ ಬತ್ತಿ!

ಹಣತೆ ಹಣತೆಯ ಕೂಡಿದರೆ
ಕಂಗೊಳಿಸುವುದು ಜ್ಯೋತಿ
ಹಣತೆ ಬಿರುಸಿನ ಕುಡಿಕೆಯ ಕೂಡಿದರೆ ಉಗುಳುವುದು ಬೆಂಕಿ

ಯಾರ ಬದುಕಿನ ಅಂಗಳದಲ್ಲಿ
ಯಾರು ಇಡುವರೋ ಬತ್ತಿ
ಅದು ಸಿಡಿದಾಗಲೇ ಗೊತ್ತು ಬತ್ತಿ ಇಟ್ಟವನ ಯುಕ್ತಿ!

ಸುಳಿಯದಿರು ಸತ್ತಂತಿಹ ಪಟಾಕಿಗಳಿದ್ದೆಡೆಯಲ್ಲಿ
ಸಿಡಿಯುವುದು ಜೋಕೆ ನಿನ್ನ ಕಣ್ಣಾಲಿ!
ಮತ್ತೆಂದೂ ಕಾಣಲಾರೆ ಮುಂದಿನ ದೀಪಾವಳಿ!

ಶ್ರೀ ಜಗದ್ಗುರುಗಳವರು ಭಕ್ತಾದಿಗಳಿಗೆ ದೀಪಾವಳಿಯ ಹಣತೆಯನ್ನು ವಿತರಿಸಿ ಆಶೀರ್ವದಿಸಿದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಸ್ಪೆಷಲ್

To Top