ನವದೆಹಲಿ: ಬ್ಯಾಂಕ್ ಖಾಸಗಿಕರಣ ವಿರೋಧಿಸಿ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್(ಯುಎಫ್ಬಿಯು) ಮಾ. 15, 16ರಂದು ದೇಶವ್ಯಾಪಿ ಬ್ಯಾಂಕ್ ಮುಷ್ಕರ ನಡೆಸಲು ನಿರ್ಧರಿಸಿವೆ.
ಕೇಂದ್ರ ಬಜೆಟ್ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬ್ಯಾಂಕ್ಗಳ ಖಾಸಗೀಕರಣ ಕುರಿತು ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿ-ಸಿಬ್ಬಂದಿ ಈಗ ಖಾಸಗೀಕರಣ ವಿರೋಧಿಸಿ ಮುಷ್ಕರ ಕೈಗೊಳ್ಳಲು ಮುಂದಾಗಿದ್ದಾರೆ.
ಸಾರ್ವಜನಿಕ ವಲಯದ ಬ್ಯಾಂಕ್ಗಳ ಖಾಸಗೀಕರಣ ಕುರಿತು ಬಜೆಟ್ ಭಾಷಣದಲ್ಲಿ ನಿರ್ಮಲಾ ಸೀತಾರಾಮನ್ ಪ್ರಸ್ತಾಪಿಸಿದ್ದನ್ನು ವಿರೋಧಿಸಿ ಯುಎಫ್ಬಿಯು ರಾಷ್ಟ್ರವ್ಯಾಪಿ ಬಂದ್ಗೆ ಕರೆ ನೀಡಿದೆ. ಹೈದರಾಬಾದ್ನಲ್ಲಿ 9 ಬ್ಯಾಂಕ್ ಸಂಘಟನೆಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಆಲ್ ಇಂಡಿಯಾ ಬ್ಯಾಂಕ್ ಎಂಪ್ಲಾಯಿಸ್ ಅಸೋಸಿಯೇಷನ್ (ಎಐಬಿಇಎ) ಜತೆಗೆ ಎಐಬಿಒಸಿ, ಎನ್ಸಿಬಿಇ, ಎಐಬಿಒಎ, ಬಿಇಎಫ್ಐ, ಐಎನ್ಬಿಇಎಫ್, ಐಎನ್ಬಿಒಸಿ, ಎನ್ಒಬಿಡಬ್ಲ್ಯು ಮತ್ತು ಎನ್ಒಬಿಒ ಮುಂತಾದ ಸಂಘಟನೆಗಳು ಒಗ್ಗೂಡಿ ಈ ಬಂದ್ಗೆ ನಿರ್ಧರಿಸಿವೆ.
ಹೈದರಾಬಾದ್ನಲ್ಲಿ ನಡೆದ ಸಭೆಯಲ್ಲಿ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿರುವ ಐಡಿಬಿಐ ಬ್ಯಾಂಕ್ ಹಾಗೂ ಇನ್ನೂ ಎರಡು ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ಗಳ ಖಾಸಗೀಕರಣ, ಎಲ್ಐಸಿ ಬಂಡವಾಳ ಹಿಂದೆಗೆತ, ಜನರಲ್ ಇನ್ಶೂರೆನ್ಸ್ ಕಂಪನಿ ಖಾಸಗೀಕರಣ ಇತ್ಯಾದಿಗಳು ಸಾರ್ವಜನಿಕ ಕ್ಷೇತ್ರದ ಕಂಪನಿಗಳಿಗೆ ಮಾರಕ. ಹೀಗಾಗಿ ಫೆ. 19ರಂದು ಎಲ್ಲ ರಾಜ್ಯಗಳ ರಾಜಧಾನಿಯಲ್ಲಿ ಧರಣಿ ನಡೆಸಲಾಗುವುದು. ಬಳಿಕ ಫೆ. 20ರಿಂದ ಮಾ. 10ರವರೆಗೆ ಎಲ್ಲ ರಾಜ್ಯ, ಜಿಲ್ಲೆ, ನಗರಗಳಲ್ಲಿ ಧರಣಿಗಳನ್ನು ನಡೆಸಿ, ಮಾರ್ಚ್ 15 ಮತ್ತು 16ರಂದು ಎರಡು ದಿನಗಳ ಕಾಲ ದೇಶಾದ್ಯಂತ ಬ್ಯಾಂಕ್ ಮುಷ್ಕರ ನಡೆಸಲಿವೆ.