ಬೆಂಗಳೂರು: ಮೊದಲ ಬಜೆಟ್ ಮಂಡಿಸುತ್ತಿರುವ ಸಿಎಂ ಬಸವರಾಜ ಬೊಮ್ಮಾಯಿ , ರಾಜ್ಯ ಅಭಿವೃದ್ಧಿಗೆ ಮೂರು ‘E’ ಮಂತ್ರಗಳನ್ನು ಜಪಿಸಿದ್ದಾರೆ. ಶಿಕ್ಷಣ (Education), ಉದ್ಯೋಗ (Employment) ಮತ್ತು ಸಬಲೀಕರಣ (Empowerment)ದ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಾರ್ಯತಂತ್ರ ರೂಪಿಸಲಾಗಿದೆ ಎಂದು ಹೇಳಿದರು.
ಕೋವಿಡ್ ನಡುವೆಯೂ ರಾಜ್ಯವು ಪ್ರಗತಿಯತ್ತ ಮುನ್ನಡೆಯುತ್ತಿದೆ. ವಿವಿಧ ಇಲಾಖೆಗಳ ಸಹಕಾರದಿಂದ ಕೋವಿಡ್ ನಿಯಂತ್ರಣ ಸಾಧ್ಯವಾಗಿದೆ. ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯೊಂದಿಗೆ ಮುನ್ನಡೆಯುತ್ತಿದ್ದೇವೆ ಎಂದು ಬಜೆಟ್ ಮಂಡನೆಯ ಆರಂಭದಲ್ಲಿ ಬೊಮ್ಮಾಯಿ ಅವರು ಹೇಳಿದರು.
ಕೃಷಿ, ಕೈಗಾರಿಕೆಯಲ್ಲಿ ಹೆಚ್ಚಿನ ಪಾಲುದಾರಿಕೆ ತರಲಾಗುತ್ತಿದೆ. ನವ ಭಾರತಕ್ಕಾಗಿ ನವಕರ್ನಾಟಕವನ್ನು ರೂಪಿಸಲಾಗುತ್ತಿದೆ. ಅತಿವೃಷ್ಟಿಯಿಂದ ಅಪಾರ ಹಾನಿಯುಂಟಾಗಿದೆ. ರಾಜ್ಯವು ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿ ಮತ್ತು ಕೋವಿಡ್ ಸಂಕಷ್ಟ ಎದುರಿಸುತ್ತಿದೆ ಎಂದರು.



