ಬೆಂಗಳೂರು: ರಾಜ್ಯ ಸರ್ಕಾರ ಯಶಸ್ವಿನಿ ಯೋಜನೆಯಡಿಯಲ್ಲಿ ಬರುವ 200ಕ್ಕೂ ಹೆಚ್ಚು ಚಿಕಿತ್ಸಾ ದರವನ್ನು ಪರಿಷ್ಕರಣೆ ಮಾಡಿದೆ. ಯೋಜನೆ ವ್ಯಾಪ್ತಿಗೆ ಮತ್ತಷ್ಟು ಆಸ್ಪತ್ರೆಗಳನ್ನು ಸೇರಿಸಲಾಗಿದೆ. ಕಾರ್ಡ್ ಹೊಂದಿದರು 5 ಲಕ್ಷ ವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದು.
2003ರಲ್ಲಿ ಈ ಯೋಜನೆ ಆರಂಭಿಸಲಾಯಿತು. ಕಾರಣಾಂತರದಿಂದ 2018ರಲ್ಲಿ ಯೋಜನೆ ಸ್ಥಗಿತಗೊಳ್ಳಿಸಲಾಗಿದೆ. ಬಳಿಕ ರಾಜ್ಯದ ಸರ್ಕಾರವು 2023ರ ಜನವರಿಯಲ್ಲಿ ಸಹಕಾರ ಸಂಘದ ಅಡಿಯಲ್ಲಿ ಮರುಜಾರಿಗೊಳಿಸಿತ್ತು. 2023-24ನೇ ಸಾಲಿಗೆ ಈಗಾಗಲೇ ಸದಸ್ಯರ ನೋಂದಣಿಗೆ ಮಾರ್ಚ್ 31ರ ವರೆಗೆ ವಿಸ್ತರಣೆಯಾಗಿತ್ತು. ಇದರ ಬೆನ್ನಲ್ಲೇ, 200 ಕ್ಕೂ ಹೆಚ್ಚು ಚಿಕಿತ್ಸಾ ದರವನ್ನು ಪರಿಷ್ಕರಣೆ ಮಾಡಲಾಗಿದೆ.
ಯಶಸ್ವಿನಿ ಯೋಜನೆಯಡಿ ಬರುವ ದರ ಕಡಿಮೆಯಿದ್ದ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಗಳು ಈ ಯೋಜನೆಯ ಫಲಾನುಭವಿಗಳಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುತ್ತಿದ್ದವು. ಇದರಿಂದ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುವುದು ಕಷ್ಟವಾಗಿತ್ತು. ಇದನ್ನು ಅರಿತ ರಾಜ್ಯ ಸರ್ಕಾರ ಯೋಜನೆಯ ಚಿಕಿತ್ಸಾ ದರವನ್ನು 300% ವರೆಗೂ ಹೆಚ್ಚಳ ಮಾಡಿದೆ. ಪರಿಣಾಮ 370 ರಷ್ಟಿದ್ದ ಖಾಸಗಿ ಆಸ್ಪತ್ರೆಗಳ ಸಂಖ್ಯೆ 600ರ ಗಡಿ ದಾಟಿದೆ ಈ ಬಗ್ಗೆ ಸರ್ಕಾರ ಮಾಹಿತಿ ನೀಡಿದೆ.
ಯಶಸ್ವಿನಿ ಯೋಜನೆಯಡಿ 2,128 ಚಿಕಿತ್ಸೆಗಳು ಲಭ್ಯವಾಗಲಿದ್ದು, ಈ ಪೈಕಿ 206 ಚಿಕಿತ್ಸೆಗಳ ದರ ಪರಿಷ್ಕರಣೆ ಮಾಡಲಾಗಿದೆ. ಈ ಮೊದಲು ಯೋಜನೆಯಡಿ 1,650 ಚಿಕಿತ್ಸೆಗಳನ್ನು ಒದಗಿಸಲಾಗುತ್ತಿತ್ತು. ಯೋಜನೆಯಡಿ ಒಟ್ಟು 637 ನೆಟ್‌ವರ್ಕ್ ಆಸ್ಪತ್ರೆಗಳು ನೋಂದಣಿಯಾಗಿದ್ದು, ಇದರಲ್ಲಿ 602 ಖಾಸಗಿ ಆಸ್ಪತ್ರೆಗಳು ನೋಂದಣಿ ಮಾಡಿಕೊಂಡಿವೆ.
ಯಶಸ್ವಿನಿ ಕಾರ್ಡ್ ಹೊಂದಿರುವ ಫಲಾನುಭವಿಗಳು ಗರಿಷ್ಠ 5 ಲಕ್ಷ ರೂಪಾಯಿ ವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದು. ಈ ಯೋಜನೆಯಡಿ ವ್ಯಕ್ತಿಯು ನೋಂದಣಿ ಮಾಡಿಕೊಂಡಿರುವ ನೆಟ್‌ವರ್ಕ್ ಆಸ್ಪತ್ರೆಗಳಿಗೆ ನೇರವಾಗಿ ತೆರಳಿ ಚಿಕಿತ್ಸೆ ಪಡೆದುಕೊಳ್ಳಬಹುದು. ಇದರಿಂದಾಗಿ ಯೋಜನೆಯ ಫಲಾನುಭವಿಗಳಿಗೆ ಚಿಕಿತ್ಸೆ ಸುಲಭವಾಗಿ ದೊರೆಯಲಿದೆ.