ದಾವಣಗೆರೆ: ರಾಜಕಾಲುವೆ ಒತ್ತುವರಿ; ಕಾಮಗಾರಿಗೆ ಅಡ್ಡಿ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ: ನಗರದಲ್ಲಿನ ರಾಜ ಕಾಲುವೆ (ಮುಖ್ಯ ಚರಂಡಿ) ಒತ್ತುವರಿಯಿಂದ ಕಾಮಗಾರಿಗೆ ಅಡ್ಡಿ ಉಂಟಾಗಿದೆ ಎಂದು ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಹೇಳಿದರು.

ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ಸಿಟಿ ಲೆವೆಲ್ ಅಡೈಸರಿ ಫೋರಂ ಸಭೆಯಲ್ಲಿ ಮಾತನಾಡಿದರು.

ನಗರದಲ್ಲಿ ಮಳೆ ಹೆಚ್ಚು ಬಂದಾಗ, ನೀರು ಸರಾಗವಾಗಿ ಹರಿಯದೆ, ತಗ್ಗು ಪ್ರದೇಶಗಳಿಗೆ ನುಗ್ಗಿ, ತೊಂದರೆ ಉಂಟಾಗುವುದನ್ನು ತಪ್ಪಿಸಲು ರಾಜ ಕಾಲುವೆ ಹಾಗೂ ಚರಂಡಿಗಳ ನಿರ್ಮಾಣವಾಗುತ್ತಿದ್ದು ಶೇ. 50 ರಷ್ಟು ಕಾಮಗಾರಿ ಪೂರ್ಣಗೊಂಡಿದೆ ಎಂದರು.

ನಗರದ ಹಳೆಯ ಭಾಗದಲ್ಲಿ ಚರಂಡಿ ಹಾಗೂ ರಸ್ತೆಯಲ್ಲಿ ನೀರಿನ ತೊಟ್ಟಿ, ಶೌಚಾಲಯ, ಮೆಟ್ಟಿಲುಗಳು, ಸ್ಟೇರ್‍ಕೇಸ್, ಸ್ಟೋರ್‍ರೂಂ ಇತ್ಯಾದಿಗಳನ್ನು ಅನಧಿಕೃತವಾಗಿ ಕಟ್ಟಿಕೊಂಡಿರುವುದನ್ನು ಗಮನಿಸಲಾಗಿದ್ದು, ಕಾಮಗಾರಿಗಳಿಗೆ ತೀವ್ರ ತೊಂದರೆಯಾಗಿದೆ. ಮಹಾನಗರಪಾಲಿಕೆಯಿಂದ ತೆರವು ಮಾಡಿಕೊಟ್ಟಲ್ಲಿ, ಚರಂಡಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ರವೀಂದ್ರ ಮಲ್ಲಾಪುರ ಹೇಳಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಪ್ರತಿಕ್ರಿಯಿಸಿ, ಮಹಾನಗರಪಾಲಿಕೆ ಆಯುಕ್ತರು ಕೂಡಲೆ ಅಂತಹ ಒತ್ತುವರಿಯನ್ನು ತೆರವುಗೊಳಿಸಿ, ಚರಂಡಿ ನಿರ್ಮಾಣ ಕಾರ್ಯಕ್ಕೆ ಅನುವು ಮಾಡಿಕೊಡಬೇಕು. ಇದರಲ್ಲಿ ಯಾವುದೇ ಪ್ರಭಾವಗಳಿಗೆ ಮಣಿಯದೆ, ತುರ್ತಾಗಿ ತೆರವುಗೊಳಿಸುವಂತೆ ನಿರ್ದೇಶನ ನೀಡಿದರು.

ಇ-ಟಾಯ್ಲೆಟ್ ಸಮರ್ಪಕ ನಿರ್ವಹಣೆ : ನಗರ ವ್ಯಾಪ್ತಿಯಲ್ಲಿ ಈಗಾಗಲೆ 1 ಮತ್ತು 2 ನೇ ಹಂತದಲ್ಲಿ ಒಟ್ಟು 29 ಇ-ಟಾಯ್ಲೆಟ್‍ಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಾಣವಾಗಿದ್ದು, ಇನ್ನೂ 17 ನಿರ್ಮಾಣವಾಗಬೇಕಿದೆ. ಆದರೆ ಹಲವೆಡೆ ಇ-ಟಾಯ್ಲೆಟ್‍ಗಳ ಅಸಮರ್ಪಕ ನಿರ್ವಹಣೆಯಿಂದ ಹಾಳಾಗಿದ್ದು, ದೂರುಗಳು ಕೇಳಿಬರುತ್ತಿವೆ ಎಂದು ಸಂಸದರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಸ್ಮಾರ್ಟ್ ಸಿಟಿ ಯೋಜನೆಯ ರವೀಂದ್ರ ಮಲ್ಲಾಪುರ ಉತ್ತರಿಸಿ, ಇ-ಟಾಯ್ಲೆಟ್‍ಗಳನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಸದುದ್ದೇಶದಿಂದ ನಿರ್ಮಿಸಿದ್ದು, ಕೆಲವು ಕಿಡಿಗೇಡಿಗಳು ಕಾಯಿನ್ ಬಾಕ್ಸ್‍ನಲ್ಲಿ ಕಬ್ಬಿಣದ ತುಂಡು, ಕಟ್ಟಿಗೆ ತುಂಡುಗಳನ್ನು ಹಾಕಿ ಹಾಳು ಮಾಡುತ್ತಿದ್ದಾರೆ. ನಗರದಲ್ಲಿ ಎಲ್ಲ 46 ಇ-ಟಾಯ್ಲೆಟ್‍ಗಳನ್ನು ನಿರ್ಮಾಣ ಮಾಡಿ, ನಿರ್ವಹಣೆಗಾಗಿ ಮಹಾನಗರಪಾಲಿಕೆಗೆ ಹಸ್ತಾಂತರ ಮಾಡಲಾಗುವುದು. ರಸ್ತೆ ಸುರಕ್ಷತೆಗಾಗಿ ನಗರದಲ್ಲಿ ಹಾಕಿರುವ ಫ್ಲೆಕ್ಸಿಬಲ್ ಮೀಡಿಯನ್, ಮಾರ್ಕರ್, ಸೋಲಾರ್ ಬ್ಲಿಂಕರ್ಸ್‍ಗಳನ್ನು ದುಷ್ಕರ್ಮಿಗಳು ಕತ್ತರಿಸಿ, ಕಳುವು ಮಾಡಿಕೊಂಡು, ತಮ್ಮ ವಾಹನಗಳಿಗೆ ಅಳವಡಿಸಿರುವುದು ಕಂಡುಬಂದಿದ್ದು, ಅಂತಹ ವಾಹನಗಳ ಫೋಟೋ ಸಹಿತ ನಗರದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಪೊಲೀಸ್ ಅಧಿಕಾರಿಗಳು ಇನ್ನೂ ಕ್ರಮ ಕೈಗೊಂಡಿಲ್ಲ ಎಂದರು. ಸಭೆಯ ಮಧ್ಯದಲ್ಲಿಯೇ ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಮಾತನಾಡಿದ ಸಂಸದರು, ಇದುವರೆಗೂ ಕ್ರಮ ಕೈಗೊಳ್ಳದ ಪೊಲೀಸ್ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕೂಡಲೆ ಅಂತಹ ವಾಹನಗಳನ್ನು ವಶಕ್ಕೆ ಪಡೆದು ಕಾನೂನು ರೀತ್ಯ ಕ್ರಮ ಜರುಗಿಸುವಂತೆ ತಾಕೀತು ಮಾಡಿದರು.

ಸಭೆಯಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಮಹಾನಗರಪಾಲಿಕೆ ಮಹಾಪೌರ ಅಜಯ್‍ಕುಮಾರ್, ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ಸಿಟಿ ಲೆವೆಲ್ ಅಡೈಸರಿ ಫೋರಂ ಸದಸ್ಯರು, ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು, ಇಂಜಿನಿಯರ್‍ಗಳು ಉಪಸ್ಥಿತರಿದ್ದರು.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *