ದಾವಣಗೆರೆ
ನ್ಯಾಮತಿ ಬ್ಯಾಂಕ್ ಕಳ್ಳತನ: ಸಾಲಕೊಡಲಿಲ್ಲ ಎಂಬ ಕಾರಣಕ್ಕೆ ಯೂಟ್ಯೂಬ್ ವಿಡಿಯೋ ನೋಡಿ 13 ಕೋಟಿ ಮೌಲ್ಯದ ಚಿನ್ನ ದರೋಡೆಗೆ ಸ್ಕೆಚ್; 6 ಆರೋಪಿಗಳು ಸಿಕ್ಕಿದ್ದೇ ರೋಚಕ..!!!
ದಾವಣಗೆರೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನಗೆ ಸಾಲ ಕೊಡಲಿಲ್ಲ ಎಂಬ ಕಾರಣಕ್ಕೆ ಅದೇ ಬ್ಯಾಂಕ್ ದರೋಡೆ ( bank Robbery) ಸ್ಕೆಚ್ ಹಾಕಿದ್ದನು. ಇದಕ್ಕಾಗಿ ಯೂಟ್ಯೂಬ್ (YouTube) ವಿವಿಧ ಓಟಿಪಿ ಆನ್ ಲೈನ್ ಪ್ಲಾಟ್ಫಾರ್ಮ್ ಗಳಲ್ಲಿ ಬ್ಯಾಂಕ್ ರಾಬರಿಗೆ (ಕಳ್ಳತನ) ಸಂಬಂಧಿಸಿದಂತೆ ಅನೇಕ ಸರಣಿ ವಿಡಿಯೋ ನೋಡಿದ್ದ ಆರೋಪಿ, ಸುಮಾರು 6 ತಿಂಗಳು ಕಾಲ ಬ್ಯಾಂಕ್ ದರೋಡೆಗೆ ಸ್ಕೆಚ್ ರೂಪಿಸಿದ್ದನು.
ವ್ಯವಸ್ಥೆತವಾಗಿ ಪೊಲೀಸರಿಗೆ ಸಣ್ಣ ಸುಳಿವು ಸಿಗದಂತೆ 13 ಕೋಟಿ ಮೌಲ್ಯದ 17.7 ಕೆಜಿ ಚಿನ್ನವನ್ನು 6 ಜನರ ಜೊತೆ ಸೇರಿ ಕಳ್ಳತನ ಮಾಡಿದ್ದನು. ರಾಜ್ಯದಲ್ಲಿಯೇ ಸಂಚಲನ ಸೃಷ್ಠಿಸಿದ್ದ ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದ ಬ್ಯಾಂಕ್ ಕಳ್ಳತನ ಪ್ರಕರಣವನ್ನು ಪತ್ತೆ ಮಾಡುವುದು ಪೊಲೀಸರಿಗೆ ದೊಡ್ಡ ಸವಾಲು ಆಗಿತ್ತು. ಇದೀಗ ಕಳ್ಳತನವಾಗಿದ್ದ 13 ಕೋಟಿ ಮೌಲ್ಯದ 17.7 ಕೆಜಿ ಚಿನ್ನ ವಶಪಡಿಸಿಕೊಂಡು, ಪ್ರಕರಣದ ತಮಿಳುನಾಡು ಮೂಲದ ಪ್ರಮುಖ ಆರೋಪಿ ಸಹಿತ 6 ಜನರನ್ನು ಬಂಧಿಸಲಾಗಿದೆ ಎಂದು ದಾವಣಗೆರೆ ಎಸ್ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 28, 2025ರಂದು, ದಾವಣಗೆರೆಯ ನ್ಯಾಮತಿ ಎಸ್‌ಬಿಐ ಬ್ಯಾಂಕಿನ ಶಾಖೆಯಲ್ಲಿ ಅಂದಾಜು 13 ಕೋಟಿ ಮೌಲ್ಯದ (ನಿವ್ವಳ ತೂಕ -17.7 ಕೆಜಿ) ಅಡವಿಟ್ಟ ಚಿನ್ನಾಭರಣಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿರುವ ಬಗ್ಗೆ ಪ್ರಕರಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬ್ಯಾಂಕ್ ಸಿಬ್ಬಂದಿಗಳು ಸುಮಾರು ಬೆಳಿಗ್ಗೆ 9 ಗಂಟೆಗೆ ಎಂದಿನಂತೆ ಬ್ಯಾಂಕ್ ತೆರೆಯಲು ಬಂದಾಗ ಈ ಪ್ರಕರಣ ಬೆಳಕಿಗೆ ಬಂದಿತ್ತು.
ಪ್ರಕರಣದ ತಾಂತ್ರಿಕ ಅಂಶಗಳು & ಮಾಹಿತಿಗಳನ್ನು ತಾಳೆ ಮಾಡಿ ನೋಡಿ, ಮಾಹಿತಿಯನ್ನು ಆಳವಾಗಿ ವಿಶ್ಲೇಷಿಸಿದಾಗ ಪೊಲೀಸರಿಗೆ ಆರೋಪಿಗಳ ಬಗ್ಗೆ ಮಹತ್ವದ ಸುಳಿವು ದೊರೆತಿದೆ. ಇದರ ಆಧಾರದ ಮೇಲೆ 6 ಆರೋಪಿಗಳನ್ನು ಬಂಧಿಸಲಾಗಿದೆ.
- 1 ವಿಜಯಕುಮಾರ್ ತಂದೆ ರಾಜಪ್ಪ, 30 ವರ್ಷ, ಸಿಹಿ ತಿಂಡಿ ವ್ಯಾಪಾರ, ಸುರಹೊನ್ನೆ ಶಾಂತಿನಗರ, ಮೂಲತಃ ಮಧುರೈ. ತಮಿಳುನಾಡು.
- 2 ಅಜಯಕುಮಾರ್ ತಂದೆ ರಾಜಪ್ಪ, 28 ವರ್ಷ, ಸಿಹಿ ವ್ಯಾಪಾರ, ಸುರಹೊನ್ನೆ ಶಾಂತಿನಗರ, ವಿಜಯ್ ಅವರ ಮಧುರೈ ಸಹೋದರ ನ್ಯಾಮತಿ
- 3 ಅಭಿಷೇಕ ತಂದೆ ರಾಮಪ್ಪ, 23 ವರ್ಷ, ಪೇಂಟಿಂಗ್ ಕೆಲಸ, ಬೆಳಗುತ್ತಿ ಕ್ರಾಸ್ ಶಾಂತಿನಗರ ಶಾಲೆಯ ಎದುರು, ನ್ಯಾಮತಿ,
- 4 ಚಂದ್ರು ತಂದೆ ಪರಶುರಾಮಪ್ಪ, 23 ವರ್ಷ, ತೆಂಗಿನಕಾಯಿ ವ್ಯಾಪಾರ, ಸುರಹೊನ್ನೆ ಶಾಂತಿನಗರ, ನ್ಯಾಮತಿ
- 5 ಮಂಜುನಾಥ್ ತಂದೆ ನಿಂಗಪ್ಪ, 32ವರ್ಷ, ಚಾಲಕ, ಸುರಹೊನ್ನೆ ಶಾಂತಿನಗರ, ನ್ಯಾಮತಿ
- 6 ಪರಮಾನಂದ ತಂದೆ ಚಿನ್ನಪ್ಪ, 30 ವರ್ಷ, ಸಿಹಿ ತಿಂಡಿ ವ್ಯಾಪಾರ, ಸುರಹೊನ್ನೆ ಶಾಂತಿನಗರ, ನ್ಯಾಮತಿ
- ಇವರನ್ನು ಬಂಧಿಸಿ 17.07 ಕೆಜಿ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.
ವಿಚಾರಣೆ ವೇಳೆ ಸಿಕ್ಕ ಕುತೂಹಲಕಾರಿ ಅಂಶಗಳು:
ಮೊದಲನೇ ಎ1 ಆರೋಪಿ ವಿಜಯ್‌ಕುಮಾರ್ & 2ನೇ ಆರೋಪಿ ಅಜಯ್ ಅಣ್ಣತಮ್ಮಂದಿರಾಗಿದ್ದು ಆರೋಪಿ-6 ಪರಮಾನಂದ ಇವರುಗಳ ತಂಗಿಯ ಗಂಡನಾಗಿರುತ್ತಾನೆ. ಇನ್ನುಳಿದ ಅಭಿ, ಮಂಜು, ಚಂದ್ರು, ನ್ಯಾಮತಿಯ ಬಳಿ ಸುರಹೊನ್ನೆಯವರಾಗಿರುತ್ತಾರೆ. ವಿಜಯಕುಮಾರ್‌ನು ನ್ಯಾಮತಿ ಪಟ್ಟಣದಲ್ಲಿ ವಿಐಪಿ ಸ್ನಾಕ್ಸ್ ಹೆಸರಿನ ಬೇಕರಿ ಮತ್ತು ಸ್ವೀಟ್ಸ್ ಅಂಗಡಿಯನ್ನು ಅವನ ತಂದೆಯೊಂದಿಗೆ ಸುಮಾರು 30 ವರ್ಷಗಳಿಂದ ನಡೆಸಿಕೊಂಡು ಬಂದಿದ್ದು, ಅದರಲ್ಲಿ ಹೆಚ್ಚು ಲಾಭಗಳನ್ನು ಗಳಿಸಲು ಸಾಧ್ಯವಾಗುತ್ತಿಲ್ಲವಾದ್ದರಿಂದ ಅವನ ವ್ಯಾಪಾರದಲ್ಲಿ ಅಭಿವೃದ್ದಿ ಪಡಿಸಲು ಸುಮಾರು 15 ಲಕ್ಷ ರೂಪಾಯಿಗಳ ಸಾಲಕ್ಕಾಗಿ ಮಾರ್ಚ್ 2023 ರಲ್ಲಿ ನ್ಯಾಮತಿಯ ಎಸ್‌ಬಿಐ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದನು. ಕ್ರೆಡಿಟ್ ಸ್ಕೋರ್ ಸರಿಯಾಗಿ ಇಲ್ಲದಿದ್ದರಿಂದ ಅವನ ಅರ್ಜಿ ತಿರಸ್ಕೃತಗೊಂಡಿದ್ದು ನಂತರ ಅವನು ತಮ್ಮ ಸಂಬಂಧಿಕರ ಹೆಸರಿನಲ್ಲಿ ಸಾಲಕ್ಕಾಗಿ ಮತ್ತೆ ಅದೇ ಎಸ್ ಬಿ ಐ ನ್ಯಾಮತಿ ಬ್ರಾಂಚ್‌ನಲ್ಲಿ ಅರ್ಜಿ ಸಲ್ಲಿಸಿಕೊಳ್ಳುತ್ತಾನೆ. ಆಗಲು ಸಹ ಸದರಿ ಅರ್ಜಿಗಳು ತಿರಸ್ಕೃತಗೊಳ್ಳುತ್ತವೆ.ಆರೋಪಿ ವಿಜಯ ಹೇಳಿಕೆಯಂತೆ ಬ್ಯಾಂಕ್ ನವರು ಸರಿಯಾಗಿ ಸ್ಪಂದಿಸುತ್ತಿಲ್ಲ, ಸರಿಯಾದ ರೀತಿಯಲ್ಲಿ ನಡೆದುಕೊಳ್ಳುತ್ತಿರಲಿಲ್ಲ ಅವನನ್ನು ತಿರಸ್ಕಾರ ಭಾವನೆಯಿಂದ ನೋಡುತ್ತಿದ್ದು ಇದರ ಬಗ್ಗೆ ವಿಜಯಕುಮಾರ್‌ಗೆ ಬೇಜಾರು & ಬ್ಯಾಂಕ್ ನ ಬಗ್ಗೆ ಬಹಳ ದ್ವೇಷದ ಭಾವನೆ ಬೆಳೆದಿತ್ತು.
ಈಗಾಗಲೇ ಯೂಟ್ಯೂಬ್‌ನಲ್ಲಿ ಹಾಗೂ ವಿವಿಧ ಓಟಿಪಿ ಆನ್ಲೈನ್ ಪ್ಲಾಟ್ಫಾರ್ಮ್ ಗಳಲ್ಲಿ ಬ್ಯಾಂಕ್ ದರೋಡೆ, ಬ್ಯಾಂಕ್ ರಾಬರಿ ಹಾಗೂ ಬ್ಯಾಂಕ್ ಕಳ್ಳತನಕ್ಕೆ ಸಂಬಂಧಿಸಿದಂತೆ ಅನೇಕ ಸರಣಿ ವಿಡಿಯೋಗಳನ್ನು ಸುಮಾರು 6 ತಿಂಗಳು ಕಾಲ ನೋಡಿ ತಾನು ಒಂದು ಬ್ಯಾಂಕ್ ಕಳ್ಳತನ ಮಾಡಲು ಬೇಕಾಗುವಂತಹ ಎಲ್ಲಾ ಮಾಹಿತಿಗಳನ್ನು ಹಾಗೂ ಕೌಶಲ್ಯಗಳನ್ನು ಪದೇ ಪದೇ ಆ ವಿಡಿಯೋಗಳನ್ನು ನೋಡಿ ಸಂಗ್ರಹಿಸಿ ಬ್ಯಾಂಕ್ ಕಳ್ಳತನ ಹೇಗೆ ಎಂದು ಮಾಡಬಹುದೆಂಬುವ ಬಗ್ಗೆ ಕರಗತ ಮಾಡಿಕೊಂಡಿದ್ದನು.ಕೃತ್ಯ ಎಸಗುವ ಸಂಬಂಧ ಸುಮಾರು ಆರು ತಿಂಗಳಿಂದ ಅದಕ್ಕೆ ಬೇಕಾಗುವ ಎಲ್ಲಾ ವಿವಿಧ ಸಲಕರಣೆಗಳನ್ನು ಶಿವಮೊಗ್ಗದಿಂದ ಹಾಗೂ ನ್ಯಾಮತಿ ಪಟ್ಟಣದಿಂದ ತಂದು ಸಂಗ್ರಹಿಸಿಕೊಂಡಿದ್ದಾಗಿ ಹೇಳಿರುತ್ತಾನೆ.
ಪ್ರಕರಣ ಎಸಗುವ 3 ತಿಂಗಳ ಹಿಂದೆ ವಿಜಯಕುಮಾರ್, ತನ್ನ ತಮ್ಮ (ಅಜಯ್), ಭಾಮೈದ ಹಾಗೂ ಮೂರು ಜನ ಸ್ನೇಹಿತರನ್ನು ಕರೆದು ಸುರಹೊನ್ನೆ ಶಾಲೆಯ ಬಳಿ ಕೃತ್ಯಕ್ಕೆ ಸಂಬಂಧಿಸಿದ ರೂಪು ರೇಷಗಳ ಬಗ್ಗೆ ತಯಾರು ಮಾಡಿದ್ದನ್ನು ಚರ್ಚಿಸುತ್ತಾರೆ. ನಮ್ಮೆಲ್ಲರಿಗೂ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗಬೇಕು, ಒಳ್ಳೆಯ ಐಷಾರಾಮ ಜೀವನ ಮಾಡಲು ಹಣದ ಅವಶ್ಯಕತೆ ಬಹಳ ಇರುವುದರಿಂದ ತಾನೊಂದು ಪ್ಲಾನ್ ಮಾಡಿದ್ದು, ಅದರಂತೆ ಬ್ಯಾಂಕ್ ದರೋಡೆ ಮಾಡಿದರೆ ಬೇಗ ಶ್ರೀಮಂತರಾಗಬಹುದೆಂದು ಅವರಿಗೆ ಮನವರಿಕೆ ಮಾಡಿಕೊಟ್ಟು ತನ್ನ ಪ್ಲಾನ್ ಬಗ್ಗೆ ತಿಳಿಸುತ್ತಾನೆ.
ಇನ್ನುಳಿದ ಕೆಲವರು ಉಳಿದ ಅವಶ್ಯಕ ವಸ್ತುಗಳಾದ ಮಂಕಿ ಕ್ಯಾಪ್, ಗ್ಲೌಸ್, ಬ್ಲಾಕ್ ಶರ್ಟ್ ಮತ್ತು ಪ್ಯಾಂಟ್ ಗಳನ್ನು ಮಾರ್ಕೆಟ್‌ನಿಂದ ಕೊಂಡು ತರುತ್ತಾರೆ. 15 ದಿನಗಳ ಹಿಂದೆಯೇ ವಿಜಯನು ಅಭಿಷೇಕನೊಂದಿಗೆ ಬ್ಯಾಂಕ್ ಕಳ್ಳತನ ಮಾಡುವ ಬಗ್ಗೆ ನ್ಯಾಮತಿ ಎಸ್ ಬಿ ಐ ಬ್ಯಾಂಕ್ ಸುತ್ತ ಹೋಗಿ ಬ್ಯಾಂಕ್ ಕಳ್ಳತನ ಮಾಡಬೇಕು ಎಂದು ಅಭ್ಯಾಸ ಮಾಡಿರುತ್ತಾನೆ. ಒಂದೊಂದು ಸಣ್ಣ ವಿಷಯಕ್ಕೂ ತುಂಬಾ ಅಚ್ಚುಕಟ್ಟಾಗಿ ತಯಾರಾಗುತ್ತಾರೆ. ರಾತ್ರಿ ವೇಳೆಯಲ್ಲಿಯೂ ಬಂದು ಎಲ್ಲಾ ರೀತಿಯ ವೀಕ್ಷಣೆ ಯಾವಯಾವಗ ಇತ್ತು ಯರ‍್ಯಾರ ಚಲವಲನಗಳು ಇತ್ತೆಂದು ತುಂಬಾ ದಿನ ವೀಕ್ಷಣೆ ಮಾಡಿದ್ದನು.
ಕಳವು ಮಾಲು ಬಿಚ್ಚಿಟ್ಟು ವಿಲೆಗೆ ಪ್ರಯತ್ನ: ಕದ್ದು ತಂದಂತಹ ಚಿನ್ನವನ್ನು ವಿಜಯಕುಮಾರನು ತನ್ನ ಸಿಲ್ವರ್ ಕಲರ್ ಡಸ್ಟರ್ ಕಾರಿನ ಡಿಕ್ಕಿಯಲ್ಲಿ ಬಚ್ಚಿಟ್ಟಿದ್ದು ಅದನ್ನು ಯಾವ ರೀತಿಯಲ್ಲಿ ವಿಲೇವಾರಿ ಮಾಡಬೇಕೆಂದು ಪ್ರತ್ತೇಕವಾದ ಪ್ಲಾನ್ ಮಾಡುತ್ತಾನೆ. ಕೃತ್ಯಕ್ಕೆ ಬಳಸಿದ ವಸ್ತುಗಳಾದ ಮಂಕಿ ಕ್ಯಾಪ್, ಹ್ಯಾಂಡ್ ಗ್ಲೌಸ್‌ಗಳನ್ನು ನಾಶಪಡಿಸಿದ್ದು, ಇನ್ನುಳಿದ ಹೈಡ್ರಾಲಿಕ್ ಕಟ್‌ರ್, ಗ್ಯಾಸ್ ಸಿಲೆಂಡರ್ ಇತರ ವಸ್ತುಗಳನ್ನು ಸವಳಂಗ ಕೆರೆಗೆ ಎಸೆದಿರುವುದಾಗಿ ತಿಳಿಸಿರುತ್ತಾನೆ.ಎಸ್.ಬಿ.ಐ. ಬ್ಯಾಂಕ್ ನಿಂದ ತಂದಿದ್ದಂತಹ ಹಾರ್ಡ್ ಡಿಸ್ಕ್, ಡಿವಿಆರ್‌ನ್ನು ಮೊದಲು ಕಲ್ಲಿನಿಂದ ಜಜ್ಜಿ ಹಾಳು ಮಾಡಿ ನಂತರ ಕೆರೆಗೆ ಎಸೆದಿರುತ್ತಾರೆ.
ನಂತರ ನವೆಂಬರ್ ಮೊದಲನೆ ವಾರದಲ್ಲಿ ವಿಜಯ ತನ್ನ ಸ್ವಂತ ಊರಾದ ತಮಿಳುನಾಡಿನ ಮಧುರೈ ನ ಮನೆಗೆ ವಿಜಯ ಒಬ್ಬನೇ ತನ್ನ ಡಸ್ಟರ್ ಕಾರಿನಲ್ಲಿ ತಲುಪಿ, ಮನೆಯು ಊರಿನ ಹೊರಗಡೆ ನಿರ್ಜನ ಪ್ರದೇಶದಲ್ಲಿದ್ದು ಸುತ್ತಲೂ ದಟ್ಟ ಅರಣ್ಯವಿರುತ್ತದೆ. ಅಲ್ಲಿದ್ದಂತಹ ಸುಮಾರು 30 ಅಡಿ ಆಳವಿರುವ ಬಾವಿಯಲ್ಲಿ ಒಂದು ಸಣ್ಣ ಲಾಕರ್‌ಗೆ ಚಿನ್ನವನ್ನು ತುಂಬಿ ಅದಕ್ಕೆ ಹಗ್ಗ ಕಟ್ಟಿ ಆ ಬಾವಿಯಲ್ಲಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಬಚ್ಚಿಟ್ಟಿರುತ್ತಾನೆ. ಈ ವಿಷಯವನ್ನು ಯಾರಿಗೂ ಹೇಳಿರುವುದಿಲ್ಲ.
ಆ ಚಿನ್ನದಲ್ಲಿ ಸ್ವಲ್ಪ ಭಾಗ ತೆಗೆದುಕೊಂಡು ಬ್ಯಾಂಕ್‌ಗಳಲ್ಲಿ ಮತ್ತು ಚಿನ್ನದ ಅಂಗಡಿಗಳಲ್ಲಿ ಅವನ ಹಾಗೂ ಅವನ ಸಂಬಂಧಿಕರ ಹೆಸರಿನಲ್ಲಿ ಅಡವಿಟ್ಟು ಹಣವನ್ನು ಪಡೆಯುತ್ತಾರೆ. ಆ ಹಣದಿಂದ ಸ್ವಲ್ಪ ಹಣವನ್ನು ಅಭಿ, ಚಂದ್ರು, ಮಂಜುಗೆ ತಲಾ 1 ಲಕ್ಷ ತಂದುಕೊಟ್ಟು ಊರಿನಲ್ಲಿ ಒಂದು ದೊಡ್ಡ ಮನೆ ಕಟ್ಟಿಸಿದ್ದು, ಕೆಲವು ನಿವೇಶನಗಳನ್ನು ಖರೀದಿ ಮಾಡಿದ್ದು, ತಮ್ಮ ಸಂಬಂಧಿ ಯಾದವರಿಗೆ ಸ್ವಲ್ಪ ಚಿನ್ನವನ್ನು ಕೊಟ್ಟಿರುವುದಾಗಿ ತಿಳಿಸಿರುತ್ತಾರೆ. ಉಳಿದ ಚಿನ್ನವನ್ನು 2ರಿಂದ 3 ವರ್ಷಗಳ ವರೆಗೆ ತೆಗೆಯಬಾರದೆಂದು, ಪೊಲೀಸರು ಆ ಪ್ರಕರಣದ ತನಿಖೆ ಅಥವಾ ವಿಚಾರಣೆಯನ್ನು ನಿಲ್ಲಿಸಿದಾಗ ಈ ಚಿನ್ನವನ್ನು ಹೊರತೆಗೆಯುವುದೆಂದು ಯೋಜಿಸಿರುತ್ತಾರೆ.
ಸ್ಥಳಕ್ಕೆ ಐಜಿಪಿ & ಎಸ್‌ಪಿ, ಎಎಸ್‌ಪಿ ಒಳಗೊಂಡಂತೆ ಎಲ್ಲಾ ಅಧಿಕಾರಿಗಳು ಬೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದರು. ಎಫ್‌ಎಸ್‌ಎಲ್ ವ್ಯಾನ್, ಸೋಕೊ ಅಧಿಕಾರಿ, ಡಾಗ್ ಸ್ಯ್ಕಾಡ್ & ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ಮಾಡಿರುತ್ತದೆ. ಬ್ಯಾಂಕ್‌ನ ಬಲಬಾಗದ ಕಬ್ಬಿಣದ ಕಿಟಿಕಿಯ ಗ್ರೀಲ್‌ನ್ನು ಕಟ್ ಮಾಡಿ ಕಳ್ಳರು ಒಳ ಪ್ರವೇಶಿಸಿದ್ದು ತದನಂತರ ಸಿಸಿ ಟಿವಿ, ಅಲರಾಮ್ ಮತ್ತು ಎಲ್ಲಾ ವೈರಗಳ ಕನೆಕ್ಷನ್ ತೆಗೆದು ನಂತರ ಸ್ಟ್ರಾಂಗ್ ರೂಂಗೆ ಇದ್ದಂತಹ ಗ್ರೀಲ್ ಡೋರನ ಬೀಗವನ್ನು ಮುರಿದು ಒಳಗೆ ಬಂದು ಅಲ್ಲಿ ಇದ್ದಂತಹ ನಾಲ್ಕು ಕರೆನ್ಸಿ ಚೆಸ್ಟ್ ಗಳಲ್ಲಿ ಒಂದನ್ನು ಗ್ಯಾಸ್ ಕಟ್ಟರ್‌ನ ಸಹಾಯದಿಂದ ಕೊರೆದು ಲಾಕರ್ ಬಾಗಿಲು ತೆಗೆದು ಅದರಲ್ಲಿ ಸಾರ್ವಜನಿಕರು ಅಡವಿಟ್ಟಿದ್ದ ಚಿನ್ನಾಭರಣಗಳ ಟ್ರೇನಲ್ಲಿ ಇದ್ದಂತಹ ಸುಮಾರು 17.7 ಕೆಜಿ ಆಭರಣಗಳನ್ನು ಕದ್ದುಕೊಂಡು ಸಾಕ್ಷಿ ನಾಶ ಮಾಡುವ ಸಲುವಾಗಿ ಸ್ಟ್ರಾಂಗ್ ರೂಂ, ಬ್ಯಾಂಕ್ ಮ್ಯಾನೆಜರ್ ರೂಮ್ ಹಾಗೂ ಕಟ್ ಮಾಡಿರುವ ಕಿಟಿಕಿಯವರೆಗೆ ಖಾರದ ಪುಡಿಯನ್ನು ಚಲ್ಲಿ ಹೋಗಿದ್ದರು.
ಆ ದಿವಸ ಹೆಚ್ಚು ಮಳೆ ಬರುತ್ತಿದ್ದು ಬ್ಯಾಂಕ್ ನ ಹಿಂದೆ ಹೆಚ್ಚು ಜಾಲಿ ಗಿಡಗಳು ಬೆಳೆದಿರುತ್ತದೆ ಹಾಗೂ ಮಳೆ ನೀರು ನಿಂತಿರುತ್ತದೆ ಹಾಗೂ ಕೃತ್ಯ ನಡೆದ ಸ್ಥಳದಲ್ಲಿ ಯಾವುದೇ ರೀತಿಯ ಸಾಕ್ಯಗಳನ್ನು ಸಂಗ್ರಹಿಸುವುದು ಕಠಿಣವಾಗಿರುತ್ತದೆ. ಪ್ರಕರಣದ ತನಿಖಾಧಿಕಾರಿಯನ್ನಾಗಿ ಚನ್ನಗಿರಿ ಉಪ ವಿಭಾಗದ ಶ್ಯಾಮ್ ವರ್ಗೀಸ್ ಅವರನ್ನು ನೇಮಕ ಮಾಡಿದ್ದು, ಈ ತನಿಖೆಯಲ್ಲಿ ಸಹಕರಿಸಲು ಡಿವೈಎಸ್‌ಪಿ ಗ್ರಾಮಾಂತರ ಉಪವಿಭಾಗ ಬಸವರಾಜ್ ಬಿ.ಎಸ್ ರವರನ್ನು ಒಳಗೊಂಡಂತೆ ಐದು ತಂಡಗಳನ್ನು ರಚಿಸಲಾಗಿತ್ತು. ಮೊದಲ ದಿನದಿಂದಲ್ಲೇ ಪ್ರತಿ ತಂಡಕ್ಕೂ ಪ್ರತ್ಯೇಕವಾದ ಕೆಲಸಗಳನ್ನು ನಿಯೋಜನೆ ಮಾಡಲಾಗಿತ್ತು ಅವರು ಎಲ್ಲಾ ರೀತಿಯ ತಾಂತ್ರಿಕ & ಭೌತಿಕ ಸಾಕ್ಷಾö್ಯದಾರಗಳನ್ನು ಪರಿಶೀಲಿಸುವುದರ ಜೊತೆಗೆ ಸುಮಾರು ೬ ರಿಂದ ೮ ಕಿಲೋ ಮೀ ವರೆಗೆ ಬ್ಯಾಂಕ್‌ನ ಸುತ್ತಲು ಕೂಲಂಕುಷವಾಗಿ ಪರಿಶೀಲಿಸಲಾಗಿತ್ತು. ಆದರೆ ಯಾವುದೇ ಉಪಯುಕ್ತ ಮಾಹಿತಿಗಳು ಲಭ್ಯವಾಗಿರುವುದಿಲ್ಲ.
ಈಪ್ರಕರಣ ಸಂಬಂಧ ವಿವಿಧ ಕಡೆ ವಿಚಾರಣೆ ವಿವರ : ಈ ಹಿಂದೆ ದಾಖಲಾಗಿರುವ ಬ್ಯಾಂಕ್ ದರೋಡೆ ಎಟಿಎಂ ಕಳ್ಳತನ ಪ್ರಕರಣಗಳ ವಿವರ, ಹಳೆಯ ಆರೋಪಿಗಳ ವಿವರ, ಅಂತರ್ ರಾಜ್ಯ ಗ್ಯಾಂಗ್‌ಗಳ ವಿವರಗಳನ್ನು ಪಡೆದು ಅವುಗಳನ್ನು ಅನಾಲಿಸಿಸ್ ಮಾಡಿ ಪೊಲೀಸ್ ಅಧಿಕಾರಿಗಳ ತಂಡ ವಿವಿಧ ರಾಜ್ಯಗಳಿಗೆ ಭೇಟಿ ನೀಡಿ ಮಾಹಿತಿ 5 ತಿಂಗಳು ಕಾಲ ಸಮಗ್ರ ಕೂಲಂಕುಷವಾಗಿ ಮಾಹಿತಿಯನ್ನು ಸಂಗ್ರಹಿಸಲಾಗಿರುತ್ತದೆ.
ತಾಂತ್ರಿಕ ಮೂಲಗಳಿಂದ ದೊರೆತ ಸುಳಿವಿನಿಂದ ಹಾಗೂ ಹಿಂದೆ ನಡೆದ ಬ್ಯಾಂಕ್ ದರೋಡೆ ಪ್ರಕರಣಗಳ ಅನಾಲಿಸಿಸ್ ನಿಂದ ನಮ್ಮ ಎಸ್.ಬಿ.ಐ ಬ್ಯಾಂಕ್ ಪ್ರಕರಣದಲ್ಲಿ ಉತ್ತರ ಪ್ರದೇಶ ರಾಜ್ಯದ ಬದಾಯ ಜಿಲ್ಲೆಯ ಕಕ್ರಾಳ ಗ್ಯಾಂಗ್ ನವರು ಇರಬಹುದು ಎಂಬ ಸಂಶಯದಿಂದ ನಮ್ಮ ತಂಡಗಳು ಉತ್ತರ ಪ್ರದೇಶದ ಕಕ್ರಾಳಗೆ ನವಂಬರ್ ಎರಡನೇ ವಾರದಲ್ಲಿ ತೆರಳಿದ್ದು ಅಲ್ಲಿ ಸ್ಥಳೀಯ ಪೊಲೀಸ್ ಎಸ್‌ಓಜಿ ರವರ ಸಹಯೋಗದೊಂದಿಗೆ ಸುಮಾರು 15ಕ್ಕು ಹೆಚ್ಚು ಅಂತರ್ ರಾಜ್ಯ ಸಂಶಯಾತ್ಮಕ ವ್ಯಕ್ತಿಗಳನ್ನು ವಶಕ್ಕೆ ಪಡೆದು ಸಂಪೂರ್ಣ ವಿವರಗಳನ್ನು ಪಡೆದಿರುತ್ತಾರೆ.
ಎಸ್ ಬಿ ಐ ಬ್ಯಾಂಕ್ ನ್ಯಾಮತಿ ಪ್ರಕರಣಕ್ಕಿಂತ ಹಿಂದೆ ದಾಖಲಾದಂತಹ ಕರ್ನಾಟಕ ಹಾಗೂ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್ ಕಳ್ಳತನ, ದರೋಡೆ ಮತ್ತು ದರೋಡೆ ಪ್ರಯತ್ನ ಪಟ್ಟಂತಹ ಪ್ರಕರಣಗಳನ್ನು ಪರಿಶೀಲಿಸಲಾಯಿತು. ಆಗಸ್ಟ್ 2024 ರಂದು ಭದ್ರಾವತಿ ತಾ ಹೊಳೆಹೊನ್ನೂರು ಠಾಣಾ ವ್ಯಾಪ್ತಿಯ ಎಸ್ ಬಿ ಐ ಬ್ಯಾಂಕ್ ಕಳ್ಳತನದ ಪ್ರಯತ್ನ ನಡೆದ ಪ್ರಕರಣವನ್ನು ಪರಿಶೀಲಿಸಿದಾಗ ನ್ಯಾಮತಿಗೆ 30 ಕಿಲೋಮಿ ಹತ್ತಿರವಿರುವುದು ಮತ್ತು ನಮ್ಮ ಬ್ಯಾಂಕ್‌ನ ಪ್ರಕರಣಕ್ಕೆ ಸಾಮ್ಯತೆ ಇರುವುದರಿಂದ ಆ ಪ್ರಕರಣದ ತಾಂತ್ರಿಕ ವಿವರಗಳನ್ನು ಆಳವಾಗಿ ವಿಶ್ಲೇಷಣೆ ಮಾಡಿದ ನಂತರ ನಮ್ಮ ತನಿಖೆಯ ದಿಕ್ಕು ಮತ್ತೆ ಉತ್ತರಪ್ರದೇಶದ ಬದಾಯು ಜಿಲ್ಲೆಯ ಕಕ್ರಾಳ ಗ್ಯಾಂಗ್ ಕಡೆಗೆ ಹೋಯಿತು.
ಮತ್ತೊಮ್ಮೆ ನಮ್ಮ ಅಧಿಕಾರಿ & ಸಿಬ್ಬಂದಿಗಳ ತಂಡವು ಜನವರಿ ಮೊದಲನೇ ವಾರ ಕಕ್ರಾಳ ಬದಾಯುಗೆ ಹೋಗಿ ಅಲ್ಲಿನ ವಿಪರೀತ ಚಳಿಯ & ವೈಪರಿತ್ಯ ಹವಾಮಾನಗಳ ನಡುವೆಯು ಅಲ್ಲಿನ ಸ್ಥಳೀಯ ಪೊಲೀಸ್ ನ ಸಹಯೋಗವಿಲ್ಲದೆ ಸಂಶಯಾಸ್ಪದ ವ್ಯಕ್ತಿಗಳ ಮನೆಯ ಮೇಲೆ ದಾಳಿ ಮಾಡಿ ಹೆಚ್ಚಿನ ಮಾಹಿತಿ ಕಲೆಹಾಕಿ ನಮ್ಮ ಅಧಿಕಾರಿ & ಸಿಬ್ಬಂದಿಗಳ ತಂಡವು ೩ ವಾರಗಳ ಕಾಲ ಬೀಡು ಬಿಟ್ಟು ಹಿಂದಿರುಗಿರುತ್ತದೆ ಹಾಗೂ ಕೆಲವು ಸಿಬ್ಬಂದಿಗಳನ್ನು ಹೆಚ್ಚಿನ ಮಾಹಿತಿ ಸಂಗ್ರಹಿಸಲು ಬಿಟ್ಟು ಬಂದಿರುತ್ತೇವೆ.
ಮತ್ತೊಂದು ತಂಡವು ಫೆಬ್ರವರಿ ಮೊದಲನೇಯ ವಾರದಲ್ಲಿ ಹರಿಯಾಣ, ಹಿಮಾಚಲ ಪ್ರದೇಶ, ಕಾಕಿನಾಡ, ವಾರಂಗಲ್, ಕೋಲಾರ, ತಮಿಳುನಾಡು & ಕೇರಳಾ ರಾಜ್ಯಗಳಿಗೆ ತಂಡವು ಭೇಟಿ ನೀಡಿ ಆರೋಪಿಗಳಿಗಾಗಿ ಶೋಧನೆ ಮಾಡಿರುತ್ತಾರೆ.
ಮತ್ತೊಂದು ದರೋಡೆ ತಂಡದ ಬಂಧನ ಮತ್ತು ಕುಖ್ಯಾತ ಆರೋಪಿಗಳ ಬಂಧನ.ಈ ಪ್ರಯತ್ನಗಳ ಫಲವಾಗಿ ಪೊಲೀಸ್ ಅಧಿಕಾರಿಗಳಿಗೆ ಬಂದಂತಹ ಮಾಹಿತಿ ಮೇರೆಗೆ ಮಾರ್ಚ್ -16 ರಂದು ಎಸ್‌ಬಿಐ ಸವಳಂಗ ಬ್ರಾಂಚ್‌ಗೆ ಡಕಾಯಿತಿ ಮಾಡಲು ಬಂದಿದ್ದಂತಹ ತಂಡದಲ್ಲಿನ ನಾಲ್ವರನ್ನು ಸೆರೆ ಹಿಡಿಯುವಲ್ಲಿ ತಂಡವು ಯಶಸ್ವಿಯಾಗಿದೆ ಹಾಗೂ ಮತ್ತೆ ಆಗಬಹುದಾದ ಬ್ಯಾಂಕ್ ದರೋಡೆ ಕಳ್ಳತನ ದೊಡ್ಡ ಪ್ರಕರಣವನ್ನು ತಡೆಗಟ್ಟಿದಂತಾಗಿದೆ.
1) ಗುಡ್ಡು @ ಗುಡ್ಡು ಕಾಲಿಯಾ ತಂದೆ ಇಸ್ತಾಕ್ ಅಲಿ,45 ವರ್ಷ, ಕಕ್ರಾಳ, ಬಾದಯು ಜಿಲ್ಲೆ ಉತ್ತರ ಪ್ರದೇಶ
2) ಅಸ್ಲಾಂ @ ಟನ್ ಟನ್ ತಂದೆ ಮಿತ್ವಾರಿ, 55 ವರ್ಷ, ಕಕ್ರಾಳ, ಬಾದಯು ಜಿಲ್ಲೆ ಉತ್ತರ ಪ್ರದೇಶ
3) ಹಜರತ್ ಅಲಿ ತಂದೆ ಸಾದಿಕ್ ಅಲಿ, 50 ವರ್ಷ, ಕಕ್ರಾಳ, ಬಾದಯು ಜಿಲ್ಲೆ ಉತ್ತರ ಪ್ರದೇಶ
4)ಕಮರುದ್ದೀನ್ @ ಬಾಬು ಸೆರೆಲಿ ಬಾದಯ್ ಜಿಲ್ಲೆ ಉತ್ತರ ಪ್ರದೇಶ ರಾಜ್ಯದವರು ಬಂಧಿತರಾಗಿದ್ದು ಕುಖ್ಯಾತ ಅಂತರ್ ರಾಜ್ಯ ಬ್ಯಾಂಕ್ ದರೋಡೆಕೋರರಾಗಿದ್ದು ಒಬ್ಬರನ್ನು ಬಿಟ್ಟು ಉಳಿದವರು ಈ ಹಿಂದೆ ಎಲ್ಲಿಯೂ ಬಂಧಿತರಾಗಿರುವುದಿಲ್ಲ. ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ಕರ್ನಾಟಕ ಬ್ಯಾಂಕ್ ಹೊಸಳ್ಳಿ ಪ್ರಕರಣದಲ್ಲಿ 15 ಕೆಜಿ ಬಂಗಾರ ಆಭರಣ, ಕೊಪ್ಪಳ ಬೆವೂರು ಕರ್ನಾಟಕ ಬ್ಯಾಂಕ್ ಕಳ್ಳತನ ಪ್ರಕರಣಗಳಲ್ಲಿ 4 ಕೆಜಿ ಬಂಗಾರ ಆಭರಣಗಳನ್ನು ಕಳ್ಳತನ ಭಾಗಿಯಾಗಿ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿಗಳಾಗಿದ್ದು 2004ರಿಂದ 2024ರವರಿಗೆ ಸರಣಿ ಬ್ಯಾಂಕ್ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಕಂಡು ಬಂದಿರುತ್ತದೆ.
ಅಲ್ಲದೆ ಭದ್ರಾವತಿ ಎಸ್‌ಬಿಐ ಬ್ಯಾಂಕ್ ಪ್ರಯತ್ನ, ತೆಲಾಂಗಾಣ ರಾಜ್ಯದ ವಾರಂಗಲ್ ಎಸ್‌ಬಿಐ ಕಳ್ಳತನ , ಹಾವೇರಿ ತಡಸ್ ಬಂಗಾರ ಅಂಗಡಿ ಕಳ್ಳತನ, ಜಾರ್ಖಂಡ್ ರಾಜ್ಯ ಬ್ಯಾಂಕ್ ಕಳ್ಳತನ ಪ್ರಯತ್ನ ಹಾಗೂ ವಿವಿಧ ನ್ಯಾಯಾಲಯಗಳಲ್ಲಿ ವಾರೆಂಟ್ ಇರುವುದು ಕಂಡುಬಂದಿರುತ್ತದೆ. ಇದೆ ಪ್ರಕರಣಕ್ಕೆ ಸಂಬಂದಿಸಿದಂತೆ ಕೋಲಾರ್ ಮಾಲೂನಿಂದ ಬಾಬುಸಹಾ ತಂದೆ ಬನ್ನೆಸಹಾ, ನೌಲಿ ಗ್ರಾ, ಬಾದಯು ಜಿಲ್ಲೆ, ಉತ್ತರ ಪ್ರದೇಶ ರಾಜ್ಯ & ಹಫೀಜ್ ತಂದೆ ಸಯೈದ್. ಕೋಲಾರ ಜಿಲ್ಲೆ ರನ್ನು ಬಂಧಿಸಿದ್ದು ಇದರಿಂದ ಖ್ಯಾತ ಆರು ಅಂತರ್ ರಾಜ್ಯ ಬ್ಯಾಂಕ್ ದರೋಡೆಕೋರರನ್ನು ಬಂಧಿಸಿದಂತಾಗಿರುತ್ತದೆ.
ಗೃಹ ಮಂತ್ರಿಗಳಿಂದ ತಂಡಕ್ಕೆ ಬಹುಮಾನ ಮತ್ತು 10 ಜನರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ. ಗೃಹ ಮಂತ್ರಿಗಳು ಈ ಕಾರ್ಯವನ್ನು ಶ್ಲಾಘಿಸಿ ಈ ತಂಡದಲ್ಲಿ ಕೆಲಸ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಗಳಲ್ಲಿ ಹತ್ತು ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮಾನ್ಯ ಮುಖ್ಯಮಂತ್ರಿಗಳ ಪದಕಗಳನ್ನು ಘೋಷಿಸಿರುತ್ತಾರೆ.ಡಿಜಿ ಮತ್ತು ಐಜಿಪಿ ರವರಿಂದ ಬಹುಮಾನ ಮತ್ತು ಪ್ರಶಂಸೆ. ಡಿಜಿ ಮತ್ತು ಐಜಿಪಿ , ಎಡಿಜಿಪಿ ಕಾ & ಸು ಹಾಗೂ ಅಪರಾಧ ಮತ್ತು ತಾಂತ್ರಿಕ ಸೇವೆಗಳ ಕಾರ್ಯವನ್ನು ಶ್ಲಾಘಿಸಿ ತಂಡಕ್ಕೆ ನಗದು ಬಹುಮಾನ ಘೋಷಿಸಿದ್ದು ಹಾಗೂ ಪ್ರಶಂಸನಾ ಪತ್ರ ನೀಡಿರುತ್ತಾರೆ.
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
