ಚಿಕ್ಕಬಳ್ಳಾಪುರ: ಶಿವಮೊಗ್ಗ ಜಿಲೆಟಿನ್ ಕಡ್ಡಿ ಸ್ಫೋಟದ ನಂತರ ರಾಜ್ಯದಲ್ಲಿ ಮತ್ತೊಂದು ಘೋರ ದುರಂತ ನಡೆದು ಹೋಗಿದೆ. ಅಕ್ರಮವಾಗಿ ಸಾಗಿಸುತ್ತಿದ್ದ ಜಿಲೆಟಿನ್ ಸೋಟಗೊಂಡು ಆರು ಮಂದಿಯ ದೇಹಗಳು ಛಿದ್ರಗೊಂಡಿರುವ ದಾರುಣ ಘಟನೆ ತಾಲ್ಲೂಕಿನ ಹಿರೇನಾಗವಲ್ಲಿಯಲ್ಲಿ ಸಂಭವಿಸಿದೆ.
ಗುಡಿಬಂಡೆ ತಾಲ್ಲೂಕಿನ ಹಿರೇನಾಗವಲ್ಲಿಯಲ್ಲಿ ಜಿಲೆಟಿನ್ ಕಡ್ಡಿ ಸ್ಫೋಟಿಸಿ ಆರು ಮಂದಿಯ ದೇಹಗಳು ಛಿದ್ರವಾಗಿ ಹೋಗಿವೆ. ಘಟನೆಯಲ್ಲಿ ಮೃತಪಟ್ಟವರನ್ನು ಶ್ರೀ ಭ್ರಮರ ವರ್ಷಿಣಿ ಕ್ರಷರ್‍ನ ಎಂಜಿನಿಯರ್ ಉಮಾಕಾಂತ್, ಭದ್ರತಾ ಸಿಬ್ಬಂದಿ ಮಹೇಶ್, ಬಿಲ್ಲಿಂಗ್ ನೌಕರ ಮುರಳಿ, ಸ್ಥಳೀಯ ನಿವಾಸಿ ರಾಮು, ಅಭಿ ಹಾಗೂ ಕಂಪ್ಯೂಟರ್ ಆಪರೇಟರ್ ಗಂಗಾಧರ್ ಎಂದು ಗುರುತಿಸಲಾಗಿದೆ.
ಸೋಟದ ತೀವ್ರತೆಗೆ ಸುಮಾರು 150 ಕಿಲೋ ಮೀಟರ್ ಸುತ್ತಮುತ್ತಲ ಪ್ರದೇಶ ಕಂಪಿಸಿತ್ತು. ಸ್ಫೋಟಗೊಂಡ ಲಾರಿಯ ಒಂದು ಚಕ್ರ ಕಿಲೋಮೀಟರ್‍ಗಟ್ಟಲೆ ದೂರ ಹಾರಿಹೋಗಿತ್ತು. ಈ ಪ್ರಕರಣದ ನಂತರ ಕ್ವಾರಿಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಡುವ ಜಿಲೆಟಿನ್ ಪತ್ತೆಕಾರ್ಯವನ್ನು ಪೊಲೀಸರು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಸತತವಾಗಿ ಕ್ವಾರಿಗಳ ಮೇಲೆ ದಾಳಿ ನಡೆಸಿ ಪರಿಶೀಲನೆಯನ್ನು ತೀವ್ರಗೊಳಿಸಿದ್ದರು.
ಗುಡಿಬಂಡೆ ತಾಲ್ಲೂಕಿನ ಹಿರೇನಾಗವಲ್ಲಿಯಲ್ಲಿರುವ ಬಿಜೆಪಿ ಮುಖಂಡ ನಾಗರಾಜು ಎಂಬುವವರಿಗೆ ಸೇರಿದ ಭ್ರಮರ ವರ್ಷಿಣಿ ಕ್ರಷರ್‍ನಲ್ಲೂ ಅಕ್ರಮ ಜಿಲೆಟಿನ್ ಸಂಗ್ರಹ ಮಾಡಲಾಗಿತ್ತು. ಪೊಲೀಸರು ದಾಳಿ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ನಿನ್ನೆ ಮಧ್ಯರಾತ್ರಿ ಅಕ್ರಮ ಜಿಲೆಟಿನ್‍ಗಳನ್ನು ದಟ್ಟ ಅರಣ್ಯ ಪ್ರದೇಶದಲ್ಲಿ ನಾಶಗೊಳಿಸಲು ಟಾಟಾಏಸ್ ವಾಹನದಲ್ಲಿ ಕೊಂಡೊಯ್ಯುತ್ತಿದ್ದಾಗ ದಾರಿ ಮಧ್ಯೆ ಜಿಲೆಟಿನ್ ಸೋಟಿಸಿ ಈ ದುರಂತ ಸಂಭವಿಸಿದೆ.
ವಾಹನ ಚಾಲಕ ರಿಯಾಜ್ ಪ್ರಾಣಾಪಾಯದಿಂದ ಪಾರಾಗಿದ್ದು, ಆತನನ್ನು ಹಾಗೂ ಗಂಗೋಜಿರಾವ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಸ್ಫೋಟದ ವಿಷಯ ತಿಳಿಯುತ್ತಿದ್ದಂತೆ ಆರೋಗ್ಯ ಸಚಿವ ಡಾ.ಸುಧಾಕರ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೇಂದ್ರ ವಲಯದ ಐಜಿಪಿ ಪ್ರತಾಪ್‍ರೆಡ್ಡಿ, ಜಿಲ್ಲಾಕಾಧಿರಿ ಆರ್.ಲತಾ, ಎಸ್‍ಪಿ ಮಿಥುನ್‍ಕುಮಾರ್ ಸೇರಿದಂತೆ ಹಿರಿಯ ಅಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು.
ಹಿರೇನಾಗವಲ್ಲಿ ಗ್ರಾಮದ ಬಳಿ ಜಿಲೆಟಿನ್ ಸ್ಫೋಟ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಟ್ವೀಟ್‍ನಲ್ಲಿ ಮೃತರ ಆತ್ಮಕ್ಕೆ ಶಾಂತಿಯನ್ನು ಕೋರಿರುವ ಬಿಎಸ್‍ವೈ, ಮೃತರ ಕುಟುಂಬದವರಿಗೆ ದುಃಖಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಈ ದುರ್ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ದುರಂತ ಸಂಭವಿಸಿದ ಕ್ವಾರಿ ಮಾಲೀಕರು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಸಚಿವ ಸುಧಾಕರ್ ಸ್ಪಷ್ಟಪಡಿಸಿದರು. ಸೋಟದಲ್ಲಿ ಮೃತಪಟ್ಟ ಕಾರ್ಮಿಕರಿಗೆ ಪರಿಹಾರ ಘೋಷಣೆ ಮಾಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸುಧಾಕರ್ ಭರವಸೆ ನೀಡಿದರು.