ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಚುನಾವಣೆ ನಾಳೆ (ಫೆ.24) ನಡೆಯಲಿದ್ದು, ಅಧಿಕಾರ ಹಿಡಿಯಲು ಕಾಂಗ್ರೆಸ್- ಬಿಜೆಪಿ ನಡುವೆ ಬಿಗ್ ಫೈಟ್ ಏರ್ಪಟ್ಟಿದೆ. ಕಾಂಗ್ರೆಸ್-ಬಿಜೆಪಿ ನಡುವೆ ನೇರ-ನೇರಾ ಸ್ಫರ್ಧೆ ಏರ್ಪಟ್ಟಿದ್ದು, ನಾಳೆಯ ಜಿದ್ದಾಜಿದ್ದಿನ ಕಣಕ್ಕೆ ದಾವಣಗೆರೆ ಮಹಾನಗರ ಪಾಲಿಕೆ ಅಖಾಡ ಸಿದ್ಧವಾಗಿದೆ.
ಕಳೆದ ಬಾರಿ ಕೂದಲೆಳೆ ಅಂತರದಲ್ಲಿ ಅಧಿಕಾರ ಕಳೆದು ಕೊಂಡಿದ್ದ ಕಾಂಗ್ರೆಸ್, ಈ ಬಾರಿ ಗದ್ದುಗೆ ಹಿಡಿಯಲೇಬೇಕು ಎಂಬ ತಂತ್ರ ರೂಪಿಸಿದೆ. ಆಡಳಿತರೂಢ ಬಿಜೆಪಿ ಕೂಡ ಅಧಿಕಾರ ಉಳಿಸಿಕೊಳ್ಳಲು ಬೇಕಾದ ರಣತಂತ್ರವನ್ನು ಈಗಾಗಲೇ ರೂಪಿಸಿಕೊಂಡಿದೆ.
ಪಾಲಿಕೆಯ ಒಟ್ಟು 45 ವಾರ್ಡ್ ಗಳಲ್ಲಿ ಕಾಂಗ್ರೆಸ್ 22 ಸ್ಥಾನ ಗೆದ್ದಿತ್ತು. ಇದರಲ್ಲಿ ಒಬ್ಬರು ರಾಜೀನಾಮೆ ನೀಡಿದ್ದಾರೆ. ಬಿಜೆಪಿ 17, ಜೆಡಿಎಸ್ 01, ಪಕ್ಷೇತರ 05 ಜನರಿದ್ದಾರೆ. ಪಕ್ಷೇತರಲ್ಲಿ ಕಳೆದ ಬಾರಿ ಚುನಾವಣೆ ಬಳಿಕೆ ನಾಲ್ಕು ಜನ ಬಿಜೆಪಿಗೆ ಸೇರಿದ್ದರು. ಒಬ್ಬ ಸದಸ್ಯ ಕಾಂಗ್ರೆಸ್ ಸೇರಿದ್ದರು.
ಬಿಜೆಪಿಯ ಲೆಕ್ಕಾಚಾರದದಲ್ಲಿ ಪಾಲಿಕೆಯ ನಾಲ್ವರು ಪಕ್ಷೇತರರೂ ಸೇರಿ 21 ಸದಸ್ಯರು, ತಲಾ ಒಬ್ಬ ಶಾಸಕ, ಸಂಸದರು ಹಾಗೂ ವಿಧಾನ ಪರಿಷತ್ ನ ಏಳು ಸದಸ್ಯರು ಸೇರಿ ಒಟ್ಟು 30 ಮತಗಳಿವೆ.ಕಾಂಗ್ರೆಸ್‌ನ ಲೆಕ್ಕಾಚಾರದಂತೆ ಒಬ್ಬ ಪಕ್ಷೇತರ ಸೇರಿ 22 ಸದಸ್ಯರು, ಒಬ್ಬ ಶಾಸಕ, ವಿಧಾನ ಪರಿಷತ್ತಿನ ನಾಲ್ವರು ಹಾಗೂ ಜೆಡಿಎಸ್‌ನ ಒಬ್ಬ ಸದಸ್ಯೆ ಸೇರಿ ಒಟ್ಟು 28 ಮತಗಳಿವೆ. ಮೇಲ್ನೋಟಕ್ಕೆ ಬಿಜೆಪಿ ಅಧಿಕ ಸದಸ್ಯರ ಬಲ ಹೊಂದಿದ್ದು, ಒಂದು ಮತ ಕೊರತೆಯಾದರೂ ಅಪಾಯ ತಪ್ಪಿದಲ್ಲ. ಸಚಿವ ಆರ್. ಶಂಕರ್ ಹಾಗೂ ಎಂಎಲ್ಸಿ ಚಿದಾನಂದಗೌಡ ಮತದಾರ ಪಟ್ಟಿಗೆ ಸೇರಿಸಿದ್ದನ್ನು ಕಾಂಗ್ರೆಸ್ ಹೈಕೋರ್ಟ್ ನಲ್ಲಿ ರೀಟ್ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಜಾಗೊಂಡಿದೆ. ಇದರಿಂದ ಬಿಜೆಪಿ ಇನ್ನಷ್ಟು ಆತ್ಮ ವಿಶ್ವಾಸ ಹೆಚ್ಚಿದೆ.
ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 3 ಸದಸ್ಯರ ಗೈರು ಹಾಜರಾಗಿದ್ದರಿಂದ ಸೋಲು ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ಪಕ್ಷದ ಸದಸ್ಯರನ್ನು ಹಿಡಿದಿಟ್ಟುಕೊಳ್ಳಲು ಕಾಂಗ್ರೆಸ್ ವಿಪ್ ಜಾರಿ ಮಾಡಲಿದೆ. ಬಿಜೆಪಿ ಕೂಡ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡಲು ನಿರ್ಧರಿಸಿದೆ.
ಮೇಯರ್ ಸ್ಥಾನಕ್ಕೆ ಎರಡೂ ಪಕ್ಷದಿಂದ ಆಕಾಂಕ್ಷಿಗಳಿದ್ದು, ಬಿಜೆಪಿಯಿಂದ ಶಾಸಕ ಎಸ್.ಎ. ರವೀಂದ್ರನಾಥ್ ಅವರ ಪುತ್ರಿ ವೀಣಾ ನಂಜಪ್ಪ, ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಅವರ ಪುತ್ರ ರಾಕೇಶ್ ಜಾಧವ್, ಎಸ್.ಟಿ. ವೀರೇಶ್ ಹಾಗೂ ಕೆ.ಟಿ.ವೀರೇಶ್ ಅವರ ಹೆಸರುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್‌ನಲ್ಲಿ ದೇವರಮನಿ ಶಿವಕುಮಾರ್, ಗಡಿಗುಡಾಳ್ ಮಂಜುನಾಥ್, ಜೆ.ಎನ್.ಶ್ರೀನಿವಾಸ್ ಅವರ ಹೆಸರಿವೆ.
ಶಾಸಕ ಎಸ್.ಎ. ರವೀಂದ್ರನಾಥ್ ಅವರ ನಿವಾಸದಲ್ಲಿ ಇಂದು ಬಿಜೆಪಿಯ ಕೋರ್ ಕಮಿಟಿ ಸಭೆ ನಡೆಯಲಿದ್ದು, ಬಿಜೆಪಿ ಮೇಯರ್ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ನಿರ್ಧರವಾಗಲಿದೆ. ವಿಧಾನ ಪರಿಷತ್ ಸದಸ್ಯರ ಮತದಾನ ಸಂಬಂಧ ಕಾಂಗ್ರೆಸ್ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿ ವಜಾವಾಗಿದ್ದು, ಬಿಜೆಪಿಗೆ ಇನ್ನಷ್ಟು ಬಲ ಬಂದಿದೆ.
ಈ ಬಾರಿಯ ಚುನಾವಣೆಯಲ್ಲಿ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಶಾಸಕ ಶಾಮನೂರು ಶಿವಶಂಕರಪ್ಪ ಅವರು ಅಖಾಡಕ್ಕೆ ಇಳಿದಿದ್ದು, ಕಾಂಗ್ರೆಸ್ ಗೆ ಆನೆ ಬಲ ಬಂದಂತಾಗಿದೆ. ಮೇಯರ್ ಸ್ಥಾನದ ಅಭ್ಯರ್ಥಿ ಹೆಸರು ಇಂದು ನಿರ್ಧಾರವಾಗಲಿದೆ.ಈ ಬಾರಿ ಚುನಾವಣೆಯಲ್ಲಿ ಪಕ್ಷೇತರರೇ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಹೀಗಾಗಿ ಎರಡೂ ಪಕ್ಷಗಳ ಮುಖಂಡರು ಪಕ್ಷೇತರರನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಒಬ್ಬ ಪಕ್ಷೇತರ ಸದಸ್ಯರು ಪ್ರವಾಸ ಹೋಗಿದ್ದಾರೆ ಎಂಬ ಮಾತು ಸಹ ಕೇಳಿ ಬರುತ್ತಿವೆ. ಒಟ್ನಲ್ಲಿ ನಾಳೆಯ ಪಾಲಿಕೆ ಮೇಯರ್ ಚುನಾವಣೆಯಲ್ಲಿ ಅಧಿಕಾರ ಗದ್ದುಗೆ ಯಾರು ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
-ಮುನಿಕೊಂಡಜ್ಜಿ