ದಾವಣಗೆರೆ: ಸರ್ಕಾರದ ಅನುದಾನದಿಂದ ಬಂದಿರುವ ಕೋಟ್ಯಂತರ ರೂಪಾಯಿ ವೆಚ್ಚದ ವಾಹನಗಳು ಹಾಗೂ ಪರಿಕರಗಳು ತುಕ್ಕು ಹಿಡಿಯುತ್ತಿದ್ದು, ಮಹಾನಗರ ಪಾಲಿಕೆ ಆಡಳಿತ ವರ್ಗದ ನಿರ್ಲಕ್ಷ್ಯಕ್ಕೆ ವಿಪಕ್ಷ ಸದಸ್ಯರು ಕಿಡಿಕಾರಿದ್ದಾರೆ.
ಎಲೆಕ್ಟ್ರಿಕಲ್ ಆಟೋಗಳು, ಮುಕ್ತಿವಾಹಿನಿ, ಮಿನಿ ಹಿಟಾಚಿ ಕೊಂಡೊಯ್ಯುವ ಲಾರಿ, ಜಟ್ಟಿಂಗ್ ಸ್ಪ್ರೇ, ಕಸ ತುಂಬುವ ಕಾಂಪ್ಯಾಕ್ಟರ್, ತಳ್ಳು ಗಾಡಿಗಳು, ಕಾರ್ಡನ್ ಡಸ್ಟ್ ಸೇರಿದಂತೆ ಪರಿಕರಗಳು ಮಹಾನಗರ ಪಾಲಿಕೆಗೆ ಬಂದಿವೆ. ಆದರೆ ಬಳಕೆ ಮಾಡುವುದನ್ನು ಬಿಟ್ಟು ಪಾಲಿಕೆಯಲ್ಲಿ ಇಟ್ಟಿರುವುದು ಆಡಳಿತ ನಡೆಸುತ್ತಿರುವ ಬಿಜೆಪಿ ಬೇಜಾವಾಬ್ದಾರಿತನಕ್ಕೆ ಸಾಕ್ಷಿ ಎಂದು ಆರೋಪಿಸಿದ್ದಾರೆ.
ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಜಿ. ಎಸ್. ಗಡಿಗುಡಾಳ್ ಮಂಜುನಾಥ್, ಪಾಲಿಕೆ ಸದಸ್ಯ ಎ. ನಾಗರಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ಉದಯಕುಮಾರ್, ಕಾಂಗ್ರೆಸ್ ಮುಖಂಡರಾದ ಜಗದೀಶ್, ಕೊಟ್ರಯ್ಯ, ಇಟುಗುಡಿ ಮಂಜುನಾಥ್, ಜಾಕಿರ್ ಆಲಿ, ಪಂಡಿತ್ ನೇತೃತ್ವದ ತಂಡ ಈ ಬಗ್ಗೆ ಪರಿಶೀಲಿಸಿದಾಗ ಬೆಳಕಿಗೆ ಬಂದಿದೆ.
ಮುಕ್ತಿ ವಾಹಿನಿ ಬಂದು ಆರು ತಿಂಗಳಾಗಿದೆ. ಒಂದು ವಾಹನ ಒಳಗಡೆ ನಿಲ್ಲಿಸಿದ್ದು ಧೂಳು ಹಿಡಿದು ತುಕ್ಕು ಹಿಡಿಯುವ ಪರಿಸ್ಥಿತಿ ಬಂದಿದೆ. ಮಿನಿ ಹಿಟಾಚಿ ತೆಗೆದುಕೊಂಡು ಹೋಗುವ ಲಾರಿ ಹಾಳಾಗಿದೆ. ಇದನ್ನು ಸರಿಪಡಿಸಲು ಆಗುತ್ತಿಲ್ಲ. ಕೇವಲ ಎರಡು ಸಾವಿರ ರೂಪಾಯಿ ಖರ್ಚು ಮಾಡಿ ದುರಸ್ತಿ ಮಾಡಿಸಲು ಆಗಿಲ್ಲ. ಈ ಹಿನ್ನೆಲೆಯಲ್ಲಿ ಎರಡು ಹಿಟಾಚಿಗಳು ಸಮರ್ಪಕವಾಗಿ ಬಳಕೆ ಆಗುತ್ತಿಲ್ಲ. ಇವು ಹಾಳಾಗುವ ಹಂತ ತಲುಪಿವೆ. ಇನ್ನು ನಾಲ್ಕು ಜಟ್ಟಿಂಗ್ ಸ್ಪ್ರೇ ಇದ್ದು, ಕೊರೊನಾ ಬಂದಾಗ ಸ್ಪ್ರೇ ಮಾಡಿಸಿದ್ದು ಬಿಟ್ಟರೆ ಈಗ ಬಳಸುತ್ತಿಲ್ಲ. ಸ್ಲಂ ಪ್ರದೇಶಗಳು ಹಾಗೂ ಚರಂಡಿಗಳಲ್ಲಿ ಸೊಳ್ಳೆ ನಿಯಂತ್ರಣ ಮಾಡುವ ಇವುಗಳನ್ನು ಹಾಗೆಯೇ ಇಡಲಾಗಿದೆ. ಕೇಳಿದರೆ ಕೆಮಿಕಲ್ ಇಲ್ಲ ಎಂಬ ಉಡಾಫೆ ಉತ್ತರ ಸಿಗುತ್ತಿದೆ. ಟೆಂಡರ್ ಆಗಿಲ್ಲ, ಎರಡು ಮಾತ್ರ ಬಳಕೆ ಮಾಡಲಾಗುತ್ತಿದೆ, ಇನ್ನೆರಡನ್ನು ಉಪಯೋಗಿಸುತ್ತಿಲ್ಲ ಎಂದು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಜಿ. ಎಸ್. ಮಂಜುನಾಥ್ ಗಡಿಗುಡಾಳ್ ತಿಳಿಸಿದ್ದಾರೆ.
13 ಎಲೆಕ್ಟ್ರಿಕಲ್ ಟಿಪ್ಪರ್ ಆಟೋ ಗಳು ವಾರ್ಡ್ ಗಳಿಗೆ ಬರುತ್ತಿಲ್ಲ. ಚಾಲನೆಯಲ್ಲಿಯೂ ಇಲ್ಲ. ಕಾರ್ಪೊರೇಷನ್ ನಲ್ಲಿಯೇ ತುಕ್ಕು ಹಿಡಿಯುತ್ತಿವೆ. 11 ಕಸ ತುಂಬುವ ಕಾಂಪ್ಯಾಕ್ಟರ್ ಗಳ ಪೈಕಿ 4 ರಿಪೇರಿಯಲ್ಲಿದ್ದರೆ, ಎರಡು ಗ್ಯಾರೇಜ್ ನಲ್ಲಿವೆ. ಎರಡು ವರ್ಷವಾದರೂ ಸರಿಪಡಿಸುವ ಕೆಲಸ ಮಾಡದಿರುವುದು ವಿಪರ್ಯಾಸದ ಸಂಗತಿ. 160 ತಳ್ಳು ಗಾಡಿಗಳು ವರ್ಷ ಕಳೆಯುತ್ತಾ ಬಂದರೂ ಉಪಯೋಗ ಮಾಡಿಕೊಂಡಿಲ್ಲ. ತುಕ್ಕು ಹಿಡಿಯುವ ಹಂತದಲ್ಲಿವೆ. ಇಲ್ಲಿ ಉಪಯೋಗಕ್ಕೆ ಬಾರದಿದ್ದರೆ ಮಾರಾಟ ಮಾಡಲಿ. ಇಲ್ಲದಿದ್ದರೆ ಜನರಿಗೆ ಉಚಿತವಾಗಿ ನೀಡಲಿ. ಹಾಳಾಗುವ ಬದಲು ಜನರ ಅನುಕೂಲಕ್ಕಾದರೂ ಆಗುತ್ತದೆ ಎಂದು ಹೇಳಿದರು.
ಕಸ ತುಂಬುವ ಪಾಟ್ ಗಳದ್ದು ಸಹ ಇದಕ್ಕಿಂತ ಭಿನ್ನವೇನಿಲ್ಲ. ಕೆಲವೊಂದು ವಾರ್ಡ್ ಗಳಿಗೆ ನೀಡಿದ್ದರೂ ಸಮರ್ಪಕ ನಿರ್ವಹಣೆ ಮಾಡದೇ ಅಲ್ಲೇ ಬಿಟ್ಟಿದ್ದಾರೆ. ಜೆಸಿಬಿಗೆ ಡೀಸೆಲ್ ಹಾಕಲು ಹಣವಿಲ್ಲ. ಹಾಗಾಗಿ ನೋಡಿಕೊಂಡು ಜೆಸಿಬಿ ಬಳಸಿ ಎಂದು ಹೇಳುತ್ತಾರೆ ಎಂದರೆ ಎಷ್ಟರ ಮಟ್ಟಿಗೆ ಆಡಳಿತ ಯಂತ್ರ ಕುಸಿದಿದೆ ಎಂಬುದು ಗೊತ್ತಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ. ಜೊತೆಗೆ ಸರ್ಕಾರದಿಂದ ಬಂದಿರುವ ವಾಹನಗಳು, ಸಲಕರಣೆಗಳನ್ನು ಬಳಸಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸದ ಈ ಆಡಳಿತ ವರ್ಗಕ್ಕೆ ಜನರು ಪಾಠ ಕಲಿಸುವ ದಿನಗಳ ದೂರ ಇಲ್ಲ ಎಂದು ಮಂಜುನಾಥ್ ಹೇಳಿದ್ದಾರೆ.