ದಾವಣಗೆರೆ: ಕರ್ನಾಟಕ ವಿಧಾನಸಭಾ ಚುನಾವಣೆ-2023ರ ವೇಳಾಪಟ್ಟಿಯನ್ನು ಚುನಾವಣೆ ಆಯೋಗ ಪ್ರಕಟಿಸಿದೆ. ಮಾರ್ಚ್ 29ರ ಬುಧವಾರದಿಂದಲೇ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಪಾರದರ್ಶಕ ಹಾಗೂ ಸುವ್ಯವಸ್ಥಿತ ಚುನಾವಣೆಗೆ ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಜಿಲ್ಲೆಯಾದ್ಯಂತ 24 ಗಂಟೆಯೊಳಗಾಗಿ ಫೆಕ್ಸ್, ಬ್ಯಾನರ್, ಹೊರ್ಡೀಂಗ್ಸ್ ತೆರವುಗೊಳಿಸಲಾಗುವುದು. ಈಗಾಗಲೇ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಮಾಹಿತಿ ನೀಡಿದರು.
ದಿನಾಂಕ 13-4-2023ರ ಗುರುವಾರ ಅಧಿಸೂಚನೆ ಪ್ರಕಟಣೆ ಹೊರಡಿಸಲಾಗುವುದು, ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದೆ. ದಿನಾಂಕ 20-4-2023ಗುರುವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ದಿ.21-4-2023 ಶುಕ್ರವಾರ ನಾಮಪತ್ರ ಪರಿಶೀಲನೆ ನಡೆಯಲಿದೆ. ದಿ.24-4-2023ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನ. ದಿ.10-5-2023 ಬುಧವಾರ ಮತದಾನದ ಜರುಗಲಿದೆ. ದಿ.13-5-2023ಶನಿವಾರ ಮತ ಎಣಿಕೆ ನಡೆಯಲಿದೆ ಹಾಗೂ 15-5-2023 ಸೋಮವಾರ ಚುನಾವಣೆ ಪ್ರಕ್ರಿಯೆಗಳು ಮುಕ್ತಾಯವಾಗಲಿದೆ ಎಂದು ಮಾಹಿತಿ ನೀಡಿದರು..
ಜಿಲ್ಲೆಯ ಏಳು ವಿಧಾನ ಸಭಾ ಕ್ಷೇತ್ರಗಳಲ್ಲಿ 7,15,168 ಪುರುಷರು, 7,12,510 ಮಹಿಳೆಯರು, 118 ಇತರರು, 466ಸೇವಾ ಮತದಾರರು ಒಳಗೊಂಡಂತೆ 14,28,262 ಮತದಾರರಿದ್ದಾರೆ. ಸಾರ್ವತ್ರಿಕ ಚುನಾವಣೆಗಾಗಿ ಎಂ-3 ಮಾದರಿಯ 3241 ಬ್ಯಾಲೆಟ್, 2274 ಕಂಟ್ರೋಲ್ ಯೂನಿಟ್, 2462 ವಿವಿ ಪ್ಯಾಟ್ ಬಳಕೆ ಮಾಡಲಾಗುತ್ತಿದೆ. ಇನ್ನು ಎರಡು ಮೂರು ದಿನಗಳಲ್ಲಿ ವಿಧಾನ ಸಭಾ ಕ್ಷೇತ್ರವಾರು ಚುನಾವಣಾಧಿಕಾರಿಗಳಿಗೆ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 1683ಮತಗಟ್ಟೆಗಳಿವೆ. ದಾವಣಗೆರೆ ದಕ್ಷಿಣದಲ್ಲಿ ಈವರೆಗೆ ಎರಡು ಹೆಚ್ಚುವರಿ ಮತಗಟ್ಟೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಬೇಡಿಕೆ ಅನುಗುಣವಾಗಿ ಹೆಚ್ಚುವರಿ ಮತಗಟ್ಟೆಗಳ ಪ್ರಸ್ತಾವನೆಯನ್ನು ಆಯೋಗಕ್ಕೆ ಸಲ್ಲಿಸಲಾಗುವುದು. ಅಭ್ಯರ್ಥಿ, ಹಿಂದಿನ ಚುನಾವಣೆಯಲ್ಲಿ ನಡೆದ ಘಟನೆಗಳ ಆಧಾರದಲ್ಲಿ ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆಗಳ ಗುರುತಿಸಲಾಗುವುದು.
ವಿವಿಧ ಮತಗಟ್ಟೆ : ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳೆಯರೇ ನಿರ್ವಹಿಸುವ ಎರಡು ಸಖಿ ಮತಗಟ್ಟೆ, ವಿಶೇಷ ಚೇತನರು ನಿರ್ವಹಿಸುವ ವಿಶೇಷ ಚೇತನರ ಮತಗಟ್ಟೆ, ಯುವಕರ ಮತಗಟ್ಟೆ ಹಾಗೂ ಮಾದರಿ ಮತಗಟ್ಟೆ ಸೇರಿ ಐದು ಯುನಿಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದರು.
ಚುನಾವಣಾ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಮೇಯರ್, ಉಪ ಮೇಯರ್, ದೂಡಾ, ಡಿಸಿಸಿ ಬ್ಯಾಂಕ್ ಗೆ ನೀಡಲಾಗಿದ್ದ ವಾಹನಗಳನ್ನು ವಾಪಾಸ್ ಪಡೆಯಲಾಗಿದೆ. ತಾಲೂಕು ಮಟ್ಟದಲ್ಲೂ ಈ ಪ್ರಕ್ರಿಯೆ ನಡೆದಿದೆ. ಅನೇಕರು ಸಂಬಂಧಿತ ಪೊಲೀಸ್ ಠಾಣೆಗಳಲ್ಲಿ ಶಸ್ತ್ರಾಸ್ತ್ರ ನೀಡಿದ್ದಾರೆ. ಚುನಾವಣಾ ಕಾರ್ಯಕ್ಕಾಗಿ ಫ್ಲೈಯಿಂಗ್, ಮೊಬಲ್ ಸ್ಕ್ವಾಡ್, 164 ಸೆಕ್ಟರ್ ಅಧಿಕಾರಿಗಳು, ಚುನಾವಣಾ ವೆಚ್ಚ, ಮಾಧ್ಯಮ ಉಸ್ತುವಾರಿ ಒಳಗೊಂಡಂತೆ ಅನೇಕ ಅಧಿಕಾರಿಗಳ ತಂಡಗಳ ರಚಿಸಲಾಗಿದೆ. ಈ ಬಾರಿ ಪ್ರತಿ ಅಭ್ಯರ್ಥಿಗೆ 40 ಲಕ್ಷದ ವೆಚ್ಚದ ಮಿತಿ ನಿಗದಿ ಪಡಿಸಲಾಗಿದೆ. ಪ್ರತಿಯೊಂದನ್ನು ನಿಗಾವಹಿಸಲಾಗುವುದು ಎಂದು ತಿಳಿಸಿದರು.
ದಾವಣಗೆರೆ ಜಿಲ್ಲೆಯಲ್ಲಿರುವ 1683 ಮತಗಟ್ಟೆಗಳಲ್ಲಿ ಶೇ. 50 ರಷ್ಟು ಅಂದರೆ 853 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಮಾಡಲಾಗುವುದು. ಆನ್ಲೈನ್ ಮೂಲಕ ಮತಗಟ್ಟೆಯಲ್ಲಿ ನಡೆಯುವ ಪ್ರತಿ ಚಲನವಲನ ವೀಕ್ಷಣೆ ಮಾಡಬಹುದು. ವೆಬ್ ಕ್ಯಾಸ್ಟಿಂಗ್ ಮೂಲಕ ಚಿತ್ರೀಕರಣದ ವ್ಯವಸ್ಥೆ ಮಾಡಲಾಗುವುದು. ಇಡೀ 7 ಕ್ಷೇತ್ರದಲ್ಲಿನ ಚುನಾವಣಾ ಕಾರ್ಯಕ್ಕಾಗಿ 9866 ಮತದಾನ ಸಿಬ್ಬಂದಿ ನಿಯೋಜನೆ ಮಾಡಲಾಗುದೆ. ಸಿಸಿ ಟೀವಿ, ವಿಡಿಯೋಗ್ರಫಿ, ಮೈಕ್ರೋ ವೀಕ್ಷಕರು ಇರಲಿದ್ದಾರೆ. ಒಟ್ಟಾರೆಯಾಗಿ ಸುಗಮ, ಸುವ್ಯವಸ್ಥಿತ ಚುನಾವಣೆಗಾಗಿ ಜಿಲ್ಲಾಡಳಿತ ಸರ್ವ ರೀತಿಯಲ್ಲಿ ಸನ್ನದ್ಧವಾಗಿದೆ ಎಂದು ತಿಳಿಸಿದರು.
ಇದೇ ಮೊದಲ ಬಾರಿಗೆ 80 ವರ್ಷ ಮೇಲ್ಪಟ್ಟವರು, ವಿಕಲ ಚೇತನರು, ಕೊರೊನಾ ಪೀಡಿತರು ಇಚ್ಚೆ ಪಟ್ಟಲ್ಲಿ ಮನೆಯಿಂದಲೇ ಮತದಾನಕ್ಕೆ ಅವಕಾಶ ಇದೆ. ಚುನಾವಣೆಗೆ ಮೂರು ದಿನಗಳ ಮುಂಚೆ ಸಂಬಂತ ಬೂತ್ ಏಜೆಂಟರು, ಅಕಾರಿಗಳೊಂದಿಗೆ ಮನೆಗೆ ತೆರಳಿ ಗುಪ್ತವಾಗಿ ಮತದಾನ ಪ್ರಕ್ರಿಯೆ ನಡೆಸಲಾಗುವುದು. ಅಂಚೆ ಮತಗಳೊಂದಿಗೆ ಅಂತಹ ಮತಗಳ ಎಣಿಕೆ ಮಾಡಲಾಗುವುದು ಎಂದು ತಿಳಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ 19427 ವಿಕಲಚೇತನರು, ೮೦ಕ್ಕಿಂತಲೂ ಹೆಚ್ಚು ವಯೋಮಾನದ 27566 ಸೇರಿ 46,993 ಮತದಾರರನ್ನು ಗುರುತಿಸಲಾಗಿದೆ. ಮನೆಯಲ್ಲೇ ಮತದಾನ ಮಾಡುವುದು ಐಚ್ಛಿಕ ಹೊರತು ಕಡ್ಡಾಯ ಅಲ್ಲ. ಮನೆಯಲ್ಲೇ ಮತದಾನ ಮಾಡುವಂತಹವರು ಮುಂಚಿತವಾಗಿ ಫಾರಂ ನಂ-12 ಭರ್ತಿ ಮಾಡಿ ಕೊಡ ಬೇಕಾ ಗುತ್ತದೆ ಎಂದು ತಿಳಿಸಿದರು.
ಮತದಾರರ ಹೆಸರು ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ಇರಬೇಕು. ಅಂತಹವರು ಚುನಾವಣಾ ಆಯೋಗ ನಿಗದಿಪಡಿಸಿದ ಗುರುತಿನ ಚೀಟಿಗಳ ಹಾಜರುಪಡಿಸಿ ಮತದಾನ ಮಾಡಬಹುದು. ಈ ಬಾರಿ ಆಯೋಗ ಇತರೆ 11ಪರ್ಯಾಯ ಗುರುತಿನ ಚೀಟಿಗೂ ಅವಕಾಶ ಮಾಡಿಕೊಟ್ಟಿದೆ. ಪರ್ಯಾಯ ಗುರುತಿನ ಚೀಟಿ ಇದ್ದ ಮಾತ್ರಕ್ಕೆ ಮತದಾನಕ್ಕೆ ಅವಕಾಶ ಇಲ್ಲ. ಪಟ್ಟಿಯಲ್ಲಿ ಹೆಸರು ಇರಬೇಕು. ಮತದಾರರು ವೆಬ್ಸೈಟ್ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವುದನ್ನ ಖಾತರಿ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಯಾವುದೇ ಧರ್ಮ, ಭಾಷೆ, ಜಾತಿ ಆಧರಿಸಿ ಮತ ಯಾಚನೆ ಮಾಡುವಂತಿಲ್ಲ. ಯಾರದ್ದೇ ಖಾಸಗಿ ಜೀವನ ಗುರಿಯಾಗಿಟ್ಟುಕೊಂಡು ಪ್ರಚಾರ ಮಾಡುವಂತಿಲ್ಲ. ದೇವಸ್ಥಾನ, ಚರ್ಚ್, ಪ್ರಾರ್ಥನಾ ಮಂದಿರದಲ್ಲೂ ಪ್ರಚಾರ ಕಾರ್ಯಕ್ಕೆ ಅವಕಾಶ ಇಲ್ಲ. ಮತಗಟ್ಟೆಗಳಿಗೆ ಅಭ್ಯರ್ಥಿಗೆ ಮಾತ್ರವೇ ಅವಕಾಶ ಇರುತ್ತದೆ. ಇತರರಿಗೆ ಇರುವುದಿಲ್ಲ ಎಂದು ತಿಳಿಸಿದರು.
ಅಭ್ಯರ್ಥಿಗಳು ಸುವಿಧ ಆಪ್ ಮೂಲಕ ಸಾರ್ವಜನಿಕ ಸಭೆ, ಸಮಾರಂಭ, ಹೆಲಿಕಾಪ್ಟರ್ ಬಳಕೆಗೆ ಪೂರ್ವಾನು ಮತಿ ಪಡೆಯಬೇಕು. ಮೊದಲು ಬಂದವರಿಗೆ ಮೊದಲ ಆದ್ಯತೆ ಎನ್ನುವಂತೆ ಯಾವ ಪಕ್ಷಗಳು ಮೊದಲು ಅರ್ಜಿ ಸಲ್ಲಿಕೆ ಮಾಡುತ್ತವೋ ಅಂತಹ ಪಕ್ಷಗಳಿಗೆ ಅವಕಾಶ ನೀಡಲಾಗುವುದು. ಖಾಸಗಿ ಜಾಗದಲ್ಲೂ ಫ್ಲೆಕ್ಸ್, ಬಂಟಿಂಗ್, ಬಾವುಟ ಕಟ್ಟಲು ಸಂಬಂಧಿತರಿಂದ ಅನುಮತಿ ಪಡೆದಿರಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸಿ.ಇ.ಒ ಎ. ಚನ್ನಪ್ಪ, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಉಪಸ್ಥಿತರಿದ್ದರು.