Connect with us

Dvgsuddi Kannada | online news portal | Kannada news online

ದಾವಣಗೆರೆ: ಶಿಕ್ಷಕ ವೃತ್ತಿ ಶ್ರೇಷ್ಠವಾದದ್ದು; ಬೆಲೆ ಕಟ್ಟಲು ಸಾಧ್ಯವಿಲ್ಲ; ಜಿ.ಎಂ. ಸಿದ್ದೇಶ್ವರ

ದಾವಣಗೆರೆ

ದಾವಣಗೆರೆ: ಶಿಕ್ಷಕ ವೃತ್ತಿ ಶ್ರೇಷ್ಠವಾದದ್ದು; ಬೆಲೆ ಕಟ್ಟಲು ಸಾಧ್ಯವಿಲ್ಲ; ಜಿ.ಎಂ. ಸಿದ್ದೇಶ್ವರ

ದಾವಣಗೆರೆ: ಶಿಕ್ಷಕ ವೃತ್ತಿ ಶೇಷ್ಠವಾದದ್ದು, ಜಗತ್ತಿನಲ್ಲಿ ಯಾವುದಕ್ಕೆ ಬೇಕಾದರೂ ಬೆಲೆ ಕಟ್ಟಬಹುದು. ಆದರೆ, ಶಿಕ್ಷಣ ಮತ್ತು ಶಿಕ್ಷಕರಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಶಿಕ್ಷಕರು ದೇಶದ ಆಸ್ತಿ ಇದ್ದಂತೆ, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಹಾಗಾಗಿ ಶಿಕ್ಷಕ ವೃತ್ತಿ ಎಲ್ಲ ವೃತ್ತಿಗಳಿಗಿಂತಲೂ ಶ್ರೇಷ್ಠ ವೃತ್ತಿಯಾಗಿದೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ದಾವಣಗೆರೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಇವರ ವತಿಯಿಂದ ಸೋಮವಾರ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ ಅಂಗವಾಗಿ ಏರ್ಪಡಿಸಿದ ಶಿಕ್ಷಕರ ದಿನಾಚರಣೆ ಹಾಗೂ ಜಿಲ್ಲಾ ಅತ್ಯುತ್ತಮ ಶಿಕ್ಷಕರ ಪ್ರಶಸ್ತಿ ಪುರಸ್ಕೃತ ರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ದೇಶ ಮುನ್ನಡೆಯಲು ಶಿಕ್ಷಕರ ಪಾತ್ರ ಬಹುಮುಖ್ಯವಾದದು. ಪ್ರಸ್ತುತ ದಿನಮಾನಗಳಲ್ಲಿ ಸರ್ಕಾರಿ ಹಾಗೂ ಕನ್ನಡ ಮಾಧ್ಯಮ ಶಾಲೆ ಬಿಟ್ಟು ಕಾನ್ವೆಂಟ್ ಶಾಲೆಯ ಕಡೆಗೆ ಜನರು ಒಲವು ತೋರುತ್ತಿದ್ದಾರೆ. ಅನೇಕ ಮಹಾನೀಯರು ಅದೇ ಸರ್ಕಾರಿ ಶಾಲೆಗಳಲ್ಲಿಯೇ ಓದಿ ಉನ್ನತ ಸಾಧನೆಗಳನ್ನು ಮಾಡಿದ್ದಾರೆ ಎಂಬುದನ್ನು ಮರೆಯಬಾರದು. ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳು ಹೆಚ್ಚು ಅಂಕಗಳನ್ನು ಪಡೆಯುವಂತೆ ಪ್ರಯತ್ನಶೀಲರಂತೆ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ಹಳ್ಳಿಗಾಡಿನ ಶಿಕ್ಷಕರು ರಾಷ್ಟ್ರ ಪ್ರಶಸ್ತಿಗಳನ್ನು ಪಡೆಯುತ್ತಿದ್ದಾರೆ. ಮುಂದಿನ ದಿನಮಾನಗಳಲ್ಲಿ ದಾವಣಗೆರೆ ಜಿಲ್ಲೆಯಿಂದಲೂ ಶಿಕ್ಷಕರು ರಾಷ್ಟ್ರಪ್ರಶಸ್ತಿಗೆ ಆಯ್ಕೆಯಾಗಲಿ ಎಂಬ ಆಶಯ ವ್ಯಕ್ತಪಡಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರ ಶೈಕ್ಷಣಿಕ ಕ್ಷೇತ್ರಕ್ಕೆ ಹಲವಾರು ಸೌಲಭ್ಯಗಳನ್ನು ಒದಗಿಸುತ್ತಿದೆ. ಪ್ರತಿ ಹಳ್ಳಿಗಳಲ್ಲಿ ಶಾಲೆ ಮತ್ತು ಬೋಧಕರನ್ನು ಒದಗಿಸಲು ಅನೇಕ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಇತ್ತೀಚಿಗೆ ಸುರಿದ ಮಳೆಯಿಂದ ಅನೇಕ ಶಾಲಾ ಕೊಠಡಿಗಳು ಹಾನಿಗೊಳಗಾಗಿದ್ದು, ಹಾನಿಗೊಳಗಾದ ಶಾಲೆಗಳ ಕೊಠಡಿಗಳ ದುರಸ್ತಿ ಹಾಗೂ ಪುನರ್ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ತಿಳಿಸಿದರು.

ದಾವಣಗೆರೆ ಉತ್ತರ ವಿಧಾನಸಭಾ ಶಾಸಕರಾದ ಎಸ್.ಎ ರವೀಂದ್ರನಾಥ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ಶಿಕ್ಷಕರು ರಾಧಾಕೃಷ್ಣನ್ ಅವರಂತೆ ಉನ್ನತ ಸ್ಥಾನಕ್ಕೆ ತಲುಪಲು ಶ್ರಮಿಸಬೇಕು. ವಿದ್ಯಾರ್ಥಿಗಳಲ್ಲಿ ಹೊಸ ಕನಸು ಹಾಗೂ ಚಿಂತನೆಗಳನ್ನು ಬಿತ್ತುವ ಮೂಲಕ ಕನಸುಗಳನ್ನು ನನಸಾಗಿಸಲು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದರು.

ಜಿ.ಪಂ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಡಾ.ಎ.ಚನ್ನಪ್ಪ ಮಾತನಾಡಿ, ಮಕ್ಕಳ ಕಲಿಕೆಯಲ್ಲಿ ಶಿಕ್ಷಕರ ಪಾತ್ರ ಮಹತ್ವವಾದದ್ದು, ಜಿಲ್ಲೆಯಲ್ಲಿ 6,800 ಶಿಕ್ಷಕರು, ಎರಡು ಲಕ್ಷದ ಆರು ಸಾವಿರ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು ಒಂದೊಂದು ಶಾಲೆಯಲ್ಲೂ ಒಬ್ಬೊಬ್ಬ ರಾಧಾಕೃಷ್ಣನ್, ಅಬ್ದುಲ್ ಕಲಾಂ, ಸರ್.ಎಂ ವಿಶ್ವೇಶ್ವರಯ್ಯ ನವರಂತಹ ಮಹಾಚೇತನಗಳನ್ನು ತಯಾರು ಮಾಡುವ ಶಕ್ತಿ ಶಿಕ್ಷಕರಲ್ಲಿದೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾದ ಬಸವರಾಜ ನಾಯ್ಕ್ ಮಾತನಾಡಿ, ದೇಶದ ಭವಿಷ್ಯವನ್ನು ಬರೆಯುವ ಪ್ರಜೆಗಳ ತಯಾರಿಕೆಯ ಮಾಲೀಕರು ಅಧ್ಯಾಪಕರು. ಶಿಕ್ಷಕ ವೃತ್ತಿಯು ಪವಿತ್ರವಾದ ವೃತ್ತಿಯಾಗಿದ್ದು, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ದುಡಿಯುವ ಶಿಕ್ಷಕರಿಗೆ ಶುಭವಾಗಲಿ ಎಂದು ಅಭಿನಂದಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಅಧ್ಯಾಪಕರಾದ ಡಾ.ದಾದಾಪೀರ್ ನವಿಲೇಹಾಳ್ ಉಪನ್ಯಾಸ ನೀಡಿ, ಭಾರತೀಯ ಪರಂಪರೆಯಲ್ಲಿ ಅಧ್ಯಾಪಕರ ವೃತ್ತಿ ಶ್ರೇಷ್ಠವಾದದ್ದು, ಶಿಕ್ಷಕರ ಘನತೆ ಜಗತ್ತಿಗೆ ಸಾರುವ ದಿನ ಇದಾಗಿದೆ. ಒಬ್ಬ ಆಡಳಿತಾಧಿಕಾರಿ, ತತ್ವಜ್ಞಾನಿ, ಅಧ್ಯಾಪಕ, ಲೇಖಕರಾಗಿ, ಭಾರತದ ಪ್ರಪ್ರಥಮ ಉಪರಾಷ್ಟ್ರಪತಿ ಹಾಗೂ ಎರಡನೇ ರಾಷ್ಟ್ರಪತಿಯಾಗಿ ಕಡುಕಷ್ಟದ ಹಾದಿಯಲ್ಲಿ ಸಾಗಿ ಬಂದವರು ರಾಧಾಕೃಷ್ಣನ್‍ರವರು. ಅವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯಾಗಿ ಆಚರಣೆ ಮಾಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.

ಶಿಕ್ಷಕರು ಜ್ಞಾನದ ಆಳಕ್ಕೆ ಹೋಗಬೇಕು. ಸಕಲ ವಿಷಯಗಳ ಬಗ್ಗೆ ಜ್ಞಾನ ಪಡೆಯಬೇಕು. ಅಂತಹ ಜ್ಞಾನವನ್ನು ದಾಸೋಹ ಮಾಡಬೇಕು. ತರಗತಿಗೆ ಮಾತ್ರ ಸೀಮಿತವಾಗಿರಬಾರದು, ಶಿಕ್ಷಕರು ಕೇವಲ ಗುರುವಾಗಬಾರದು ನಂತರದ ಆಚಾರ್ಯ ಹಂತ ಪಡೆಯಬೇಕಾದರೆ ಜ್ಞಾನದ ಮಟ್ಟ ಹೆಚ್ಚಾಗಿಸಿಕೊಳ್ಳಬೇಕು. ಜ್ಞಾನ ಪಿತ್ರಾರ್ಜಿತ ಆಸ್ತಿ ಅಲ್ಲ, ಅದನ್ನು ಶ್ರಮವಹಿಸಿ ಕಲಿಯಬೇಕು. ಮಕ್ಕಳಿಗೆ ಕಷ್ಟದ ಬಗ್ಗೆ ತಿಳಿಸಬೇಕು, ಆದರೆ ಪ್ರಸ್ತುತ ದಿನಮಾನಗಳಲ್ಲಿ ಆ ಮನೋಭಾವ ಇಲ್ಲದಿರುವುದು ವಿಷಾದನೀಯವಾಗಿದೆ. ಸಮಾಜದ ಪರಿಸ್ಥಿತಿ ಬಗ್ಗೆ ಅರಿವು ಮೂಡಿಸಬೇಕಿದೆ, ಸಂಕೀರ್ಣವಾದ ಸಮಸ್ಯೆಗಳಿಗೆ ದನಿಯಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಸವಾಲುಗಳನ್ನು ಎದುರಿಸಬೇಕಿದೆ. ಸತ್ಯಶೋಧನೆ ಮತ್ತು ಸತ್ಯ ಪ್ರತಿಪಾದನೆ ಮಾಡುವ ಮೌಲ್ಯ ಹಾಗೂ ನೈತಿಕತೆ ಶಿಕ್ಷಕರಿಗಿರಬೇಕು ಎಂದರು.
ಇದೆ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮೇಯರ್ ಜಯಮ್ಮ ಗೋಪಿನಾಯ್ಕ್, ಸದಸ್ಯರಾದ ಗೀತಾ ದಿಳ್ಯಪ್ಪ ಮಾತನಾಡಿದರು.

ಈ ವೇಳೆ 23 ಜನ ಜಿಲ್ಲಾ ಅತ್ಯುತ್ತಮ ಶಿಕ್ಷಕರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು. ಸುದೀರ್ಘ ಸೇವೆ ಸಲ್ಲಿಸಿ ಪ್ರಸಕ್ತ ಸಾಲಿನಲ್ಲಿ ನಿವೃತ್ತಿ ಹೊಂದಿದ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಜಿ.ಆರ್ ತಿಪ್ಪೇಶಪ್ಪ, ಡಯಟ್ ಉಪನಿರ್ದೇಶಕ ಕಂಪ್ಲಿ ರಾಮನಗೌಡ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಟಿ.ಅಂಬಣ್ಣ, ಎಂ.ನಿರಂಜನಮೂರ್ತಿ ಸೇರಿದಂತೆ ವಿವಿಧ ಶಾಲೆಗಳಿಂದ ಆಗಮಿಸಿದ್ದ ಶಿಕ್ಷಕರುಗಳು ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top