ದಾವಣಗೆರೆ: ಕಾಂಗ್ರೆಸ್ ಕಾರ್ಯಕರ್ತರಾಗಿ ದುಡಿದವರಿಗೆ ಈ ಬಾರಿಯ ಲೋಕಸಭೆ ಟಿಕೆಟ್ ಸಿಗಲಿದೆ. ಯಾರು ಮಲ್ಲಪ್ಪ, ಬೋಳಪ್ಪ, ಕಾಳಪ್ಪ, ಸಿದ್ದಪ್ಪ ಎಂದು ಗೊತ್ತಾಗಬೇಕಲ್ವಾ…! ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೇಳಿದರು.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ, ಬಾವುಟ ಹಿಡಿದುಕೊಂಡು, ಪೋಸ್ಟರ್ ಹಚ್ಚಿ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಯಾರು ಕೆಲಸ ಮಾಡಿರುತ್ತಾರೋ ಅವರಿಗೆ ಮೊದಲ ಆದ್ಯತೆ. ಎಲ್ಲೋ ಇದ್ದು ಟಿಕೆಟ್ ನನಗೆ ಸಿಗುತ್ತೆ ಎಂದು ಹೇಳಕಾಗಲ್ಲ. ಯಾರು ಕಾಂಗ್ರೆಸ್ ಕಾರ್ಯಕರ್ತರಾಗಿ ದುಡಿದಿರುತ್ತಾರೋ ಅವರಿಗೆ ಈ ಬಾರಿಯ ಲೋಕಸಭೆ ಚುನಾವಣೆಗೆ ಟಿಕೆಟ್ ಸಿಗುತ್ತದೆ ಎಂದರು.
ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಹೇಳಿಕೆ ಗಮನಿಸಿದ್ದೇನೆ. ಎಲ್ಲರೂ ಕಾರ್ಯಕರ್ತರೇ. ಮೊದಲು ಅವರನ್ನು ಗುರುತಿಸುವ ಕೆಲಸ ಆಗಬೇಕಿದೆ. ಮಲ್ಲಪ್ಪ, ಬೋಳಪ್ಪ, ಕಾಳಪ್ಪ, ಸಿದ್ದಪ್ಪ ಯಾರು ಎಂಬುದು ಗೊತ್ತಾಗಬೇಕಲ್ವಾ….! ಎಲ್ಲಿಂದಲೋ ಬಂದು ಮಾತನಾಡುವುದು ಸರಿಯಲ್ಲ. ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು, ಮುಖಂಡರನ್ನು ಭೇಟಿಯಾಗಿ ಅಭಿಪ್ರಾಯ ಸಂಗ್ರಹಿಸಬೇಕು. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆಯೋ ಅವರು ಸ್ಪರ್ಧೆ ಮಾಡಲಿ ಎಂದು ತಿಳಿಸಿದರು.
ನ್ಯಾಯಕ್ಕೆ ಸಂದ ಜಯ: ವನ್ಯಜೀವಿ ಮೃಗಗಳ ಪತ್ತೆ ಪ್ರಕರಣ ಸಂಬಂಧ ಹೈಕೋರ್ಟ್ ಎಫ್ ಐ ಆರ್ ರದ್ದುಪಡಿಸಿರುವ ಕುರಿತು ಮಾತನಾಡಿ,ಹೈಕೋರ್ಟ್ ಆದೇಶ ಪ್ರತಿ ಕೈ ಸೇರಿಲ್ಲ. ಅದು ಕೈ ಸೇರಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ. ಯಾರು ಏನು ಮಾಡಿದ್ದಾರೆ ಎಂಬುದನ್ನು ಹೇಳ್ತೀನಿ ಕಾದು ನೋಡಿ. ಲಿಂಗಾಯತ ಅಧಿಕಾರಿಗಳ ಕಡೆಗಣನೆ ಮುಗಿದ ಅಧ್ಯಾಯ. ಈವೆ (ಮಾಧ್ಯಮ) ಈ ವಿಚಾರವನ್ನು ಹೆಚ್ಚಾಗಿ ಪ್ರಚಾರ ನೀಡಿ ವಿವಾದ ಮಾಡಿದ್ದೀರಿ ಎಂದರು.



