ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆಯ (davangere municipal corporation) 2025-26ನೇ ಸಾಲಿನ ಬಜೆಟ್ ( budget) ಮಂಡನೆ ಮಾಡಲಾಯಿತು. 516.35 ಲಕ್ಷ ರೂಪಾಯಿ ಉಳಿತಾಯ ಬಜೆಟ್ ಅನ್ನು ಮೇಯರ್ ಕೆ. ಚಮನ್ ಸಾಬ್ ಇಂದು (ಫೆ.06) ಪಾಲಿಕೆ ಸಭಾಂಗಣದಲ್ಲಿ ಮಂಡಿಸಿದರು.
ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿಅಧ್ಯಕ್ಷೆ ಉರ್ ಬಾನು ಪರವಾಗಿ ಮೇಯರ್ ಬಜೆಟ್ ಮಂಡನೆ ಮಾಡಿದರು. ಮಹಾನಗರ ಪಾಲಿಕೆ ಆದಾಯದಲ್ಲಿ ಖರ್ಚು ತೆಗೆದು 516.35 ಲಕ್ಷ ರೂಪಾಯಿ ಉಳಿತಾಯ ಬಜೆಟ್ ಮಂಡಿಸಲಾಗಿದೆ ಎಂದು ತಿಳಿಸಿದರು.
ಮಹಾನಗರ ಪಾಲಿಕೆಯಲ್ಲಿ 3433.11 ಲಕ್ಷ ರೂಪಾಯಿ ಆರಂಭಿಕ ಶಿಲ್ಕು ಇದ್ದು, ವಾಣಿಜ್ಯ ಮಳಿಗೆಗಳ ಬಾಡಿಗೆ, ಕಟ್ಟಡ ಪರವಾನಗಿ, ಅಭಿವೃದ್ಧಿ, ಉದ್ದಿಮೆ ಪರವಾನಗಿ ಸೇರಿ ಇತರೆ ಮೂಲಗಳಿಂದ 21056, 45 ಲಕ್ಷ ಒಟ್ಟು ರಾಜಸ್ವ ಆದಾಯ ನಿರೀಕ್ಷಿಸಲಾಗಿದೆ. ಇದಲ್ಲದೆ, ಮಾನವ ಸಂಪನ್ಮೂಲ, ಹೊರ ಗುತ್ತಿಗೆ, ಇಂಧನ ಮತ್ತು ವಿದ್ಯುತ್ ವೆಚ್ಚ, ಜಮೀನು ಖರೀದಿ, ಕಚೇರಿ ಕಟ್ಟಡಗಳು ಸೇರಿದಂತೆ ಒಟ್ಟು 20291.59 ಲಕ್ಷ ಬಂಡವಾಳ ಪಾವತಿ ಮಾಡಬೇಕಿದೆ.
ದಾವಣಗೆರೆ: ಭದ್ರಾ ನಾಲೆಗೆ ಅಕ್ರಮ ಪಂಪ್ ಸೆಟ್ ಹಾವಳಿ; ನೀರಾವರಿ ಇಲಾಖೆಯಿಂದ ತೆರವು ಕಾರ್ಯಾಚರಣೆ
ರಾಜ್ಯ ಸರ್ಕಾರ ಅನಧಿಕೃತ ಆಸ್ತಿಗಳಿಗೆ ಬಿ ಖಾತೆ ನೀಡುವ ಯೋಜನೆಗೆ ತರುತ್ತಿರುವಂತೆ 14 ಸಾವಿರ ಆಸ್ತಿಗಳನ್ನು ಆಸ್ತಿ ತೆರಿಗೆ ಜಾಲಕ್ಕೆ ಒಳಪಡಿಸಲಾಗುವುದು. ಇದರಿಂದ 6,000 ಲಕ್ಷ ತೆರಿಗೆ ಸಂಗ್ರಹಣ ನಿರೀಕ್ಷೆ ಮಾಡಲಾಗಿದೆ. ನೀರಿನ ಕಂದಾಯದಿಂದ 600 ಲಕ್ಷ, ವಾಣಿಜ್ಯ ಮಳಿಗೆಗಳಿಂದ 150 ಲಕ್ಷ, ವ್ಯಾಪಾರ ಪರವಾನಗಿಯಿಂದ 165 ಲಕ್ಷ ರಾಜಸ್ವ ನಿರೀಕ್ಷೆ ಮಾಡಲಾಗಿದೆ ಎಂದು ತಿಳಿಸಿದರು.
ವಿಶ್ವ ಕನ್ನಡ ಸಮ್ಮೇಳನಕ್ಕೆ 50 ಲಕ್ಷ ಅನುದಾನ;
ಮುಂದಿನ ದಿನಗಳಲ್ಲಿ ದಾವಣಗೆರೆಯಲ್ಲಿ ರಾಜ್ಯ ಸರ್ಕಾರ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸುವ ಸಾಧ್ಯತೆಯ ಹಿನ್ನೆಲೆ ಮಹಾನಗರ ಪಾಲಿಕೆ 50 ಲಕ್ಷ ವಂತಿಗೆ ನೀಡಲು ಅನುದಾನ ಕಾಯ್ದಿರಿಸಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಉಪ ಮೇಯರ್ ಸೋಗಿ ಶಾಂತಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಮನೆ ಗಣೇಶ್, ಉರುಬಾನ್, ಸುಧಾ ಇಟ್ಟಿಗುಡಿ ಮಂಜುನಾಥ್, ಆಶಾ ಉಮೇಶ್, ವಿಪಕ್ಷ ನಾಯಕ ಆರ್.ಎಲ್. ಶಿವಪ್ರಕಾಶ್, ಪಾಲಕೆ ಸದಸ್ಯರು ಇದ್ದರು.



