Connect with us

Dvgsuddi Kannada | online news portal | Kannada news online

ದಾವಣಗೆರೆ: ಯುವಕರು ಮತೀಯ ಸಾಮರಸ್ಯಕ್ಕೆ ಮುಂದಾಗಬೇಕೆ ವಿನಃ ಸಂಘರ್ಷಕ್ಕೆ ಅಲ್ಲ: ಹಿಂದೂ ಮಹಾಸಭಾ ಗಣೇಶೋತ್ಸವದಲ್ಲಿ ತರಳಬಾಳು‌ ಶ್ರೀ ಕರೆ

ದಾವಣಗೆರೆ

ದಾವಣಗೆರೆ: ಯುವಕರು ಮತೀಯ ಸಾಮರಸ್ಯಕ್ಕೆ ಮುಂದಾಗಬೇಕೆ ವಿನಃ ಸಂಘರ್ಷಕ್ಕೆ ಅಲ್ಲ: ಹಿಂದೂ ಮಹಾಸಭಾ ಗಣೇಶೋತ್ಸವದಲ್ಲಿ ತರಳಬಾಳು‌ ಶ್ರೀ ಕರೆ

ದಾವಣಗೆರೆ: ಯುವಕರು ಮತೀಯ ಸಾಮರಸ್ಯಕ್ಕೆ ಮುಂದಾಗಬೇಕೆ ವಿನಃ ಸಂಘರ್ಷಕ್ಕೆ ಅಲ್ಲ‌ ಎಂದು ತರಳಬಾಳು ಬೃಹನ್ಮಠದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

ದಾವಣಗೆರೆ ನಗರದ ಹಿಂದೂ ಮಹಾಸಭಾದ 5ನೇ ವರ್ಷದ ಗಣೇಶೋತ್ಸವ ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.ದಾವಣಗೆರೆ ನಗರದಲ್ಲಿ 1992ರಲ್ಲಿ ನಡೆದ ಹಿಂದೂ ಮುಸ್ಲಿಂ ಗಲಭೆಯಲ್ಲಿ ಮಕ್ಕಳನ್ನು ಕಳೆದುಕೊಂಡ ತಾಯಂದಿರ ದುಃಖಕ್ಕೆ ಜಾತಿಭೇದವಿಲ್ಲ. ಹೀಗಾಗಿ ಯುವಕರು ಮತೀಯ ಸಾಮರಸ್ಯಕ್ಕೆ ಮುಂದಾಗಬೇಕೆ ವಿನಃ ಸಂಘರ್ಷಕ್ಕೆ ಕಾರಣವಾಗಬಾರದು ಎಂದರು.

ಭಾರತೀಯರದು ವಿಶ್ವಕುಟುಂಬದ ಪರಿಕಲ್ಪನೆ, ಜಗತ್ತಿನ ಜನರೆಲ್ಲರೂ ಒಂದೇ ಮನೆಯ ಸದಸ್ಯರು ಎಂಬ ವಿಶಾಲ ಮನಸ್ಸು ನಮ್ಮದು. ಆದರೆ ಇಂದು ಜಾತಿ, ಧರ್ಮದ ಹೆಸರಿನಲ್ಲಿ ವಿಶ್ವದೆಲ್ಲಡೆ ಅಶಾಂತಿ ಆವರಿಸಿದೆ. ಶಾಂತಿಯನ್ನು ಕದಡುವಂತಹ ವಿಷಮ ಸಂದರ್ಭಗಳು ಎದುರಾಗದಂತೆ ನೋಡಿಕೊಳ್ಳುವುದು ಯುವಕರ ಕರ್ತವ್ಯವಾಗಬೇಕು. ಶಿವನ ಕೈಲಾಸದಲ್ಲಿ ಇಲಿ, ಹಾವು, ನವಿಲು, ಸಿಂಹ, ನಂದಿಯಂತಹ ವಿವಿಧ ಮನೋಧರ್ಮದ ಪ್ರಾಣಿಗಳಿದ್ದರೂ ಅಲ್ಲಿ ಸಂಘರ್ಷಕ್ಕೆಢೆಯಿಲ್ಲ, ಹಾಗೆಯೇ ನಮ್ಮ ನಿತ್ಯ ಜೀವನದಲ್ಲೂ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಸಂಘರ್ಷಕ್ಕೆ ಒಳಗಾಗಬಾರದು ಎಂದು ಅಭಿಪ್ರಾಯಪಟ್ಟರು.

ಚುನಾವಣೆ ಸಂದರ್ಭಗಳಿಗೆ ಮಾತ್ರ ರಾಜಕಾರಣಿಗಳಲ್ಲಿ ಸ್ಪರ್ಧಾ ಭಾವನೆ ಸೀಮಿತವಾಗಿರಬೇಕು. ಚುನಾವಣೆ ನಂತರ ಸ್ಪರ್ಧೆ, ದ್ವೇಷ ಭಾವನೆಗಳನ್ನು ತೊರೆದು ಜೀವಿಸಬೇಕು. ಈ ದಿನ ಈ ವೇದಿಕೆಯಲ್ಲಿ ಎಲ್ಲಾ ಪಕ್ಷದವರು ಸಮಾನವಾಗಿ ಕುಳಿತಂತೆ ಸದಾ ಹೀಗೆಯೇ ಇದ್ದಾಗ ಮಾತ್ರ ಸಮಾಜದಲ್ಲಿಯೂ ಸಾಮರಸ್ಯ ಭಾವನೆ ಮೂಡುತ್ತದೆ ಎಂದು ಶ್ರೀಗಳು ರಾಜಕಾರಣಿಗಳಿಗೆ ಕಿವಿಮಾತು ಹೇಳಿದರು.

ಪ್ರತಿಯೊಬ್ಬರಲ್ಲೂ ಆದರ್ಶಗಳಿವೆ. ಆದರೆ ವ್ಯವಹಾರಿಕ ಕಾರಣಗಳಿಗಾಗಿ ಆದರ್ಶಗಳನ್ನು ತೊರೆದು ಸ್ವಾರ್ಥಿಯಾಗುತ್ತಾನೆ. ಸ್ವಾರ್ಥಕ್ಕಿಂತ ತ್ಯಾಗದಲ್ಲಿ ಹೆಚ್ಚು ಸಂತೋಷವಿದೆ. ತ್ಯಾಗಜೀವಿಗಳಿಂದ ಮಾತ್ರ ಈ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ಆ ಹಿರಿಯ ಜೀವಿಗಳು ತಮ್ಮ ಸ್ವಾರ್ಥವನ್ನು ಬದಿಗಿಟ್ಟು ದೇಶಕ್ಕಾಗಿ ಹೋರಾಡಿದ್ದರಿಂದ ಇಂದು ನಾವು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ. ತನಗೆ ತೊಂದರೆಯಾದರೂ ಪರವಾಗಿಲ್ಲ, ಇನ್ನೊಬ್ಬರ ಸಂಕಷ್ಟವನ್ನು ನಿವಾರಿಸಲು ಮುಂದಾಗಬೇಕು. ಅದುವೇ ಶ್ರೇಷ್ಠ ಜೀವನ ಎಂದರು.

ದೇವರಲ್ಲಿ ನಾವು ಏನನ್ನೂ ಬೇಡಿಕೊಳ್ಳಬಾರದು; ಹಾಗೆ ಬೇಡಿಕೊಂಡರೆ ಲೌಕಿಕ ಸುಖವಾಗುತ್ತದೆ. ಮಾರ್ಕಂಡೇಯ ಶಿವನು ಪ್ರತ್ಯಕ್ಷನಾದಾಗ ವರವನ್ನು ಬೇಡದೆ ದರ್ಶನದಿಂದಲೇ ಪುನೀತನಾಗಿದ್ದೇನೆ ಎಂದನು. ಹಾಗೆಯೇ ದೇವರಲ್ಲಿ ಬೇಡುವುದಕ್ಕಿಂತ ದರ್ಶನ ಭಾಗ್ಯವೇ ಶ್ರೇಷ್ಠ ಎಂದು ಭಾವಿಸಬೇಕೆಂದು ಮಹೋತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ತಿಳಿಹೇಳಿದರು.

ಮುಂದುವರಿದು ಮಾತನಾಡಿದ ಶ್ರೀಗಳು ಮಹಾಮಳೆಯಿಂದ ರಾಜ್ಯ ತಲ್ಲಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ಯುವಕರು ಸಂತ್ರಸ್ತರಿಗೆ ನೆರವಾಗಲು ಮುಂದಾಗಬೇಕು. ನೊಂದವರ ಕಣ್ಣೀರು ಒರೆಸಿದರೆ, ತೊಂದರೆಗೊಳಗಾದವರಿಗೆ ನೆರವಿನ ಹಸ್ತ ಚಾಚಿದರೆ ಹಬ್ಬ, ಉತ್ಸವ ಆಚರಿಸುವುದಕ್ಕಿಂತ ಹೆಚ್ಚು ಸಂತೋಷವಾಗುತ್ತದೆ ಎಂದು ಯುವಕರನ್ನು ಉದ್ದೇಶಿಸಿ ಮಾತನಾಡಿದರು.

ಈ ಸಲದ ಗಣಪತಿ ಉತ್ಸವಕ್ಕೆ ತರಳಬಾಳು ಹುಣ್ಣಿಮೆ ಮಹೋತ್ಸವ ಮಂಟಪದ ಪ್ರತಿರೂಪವನ್ನು ನಿರ್ಮಿಸಿರುವುದಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಮಹಾಮಂಟಪದಲ್ಲಿ ಭಕ್ತ ಮಾರ್ಕಂಡೇಯ ಮತ್ತು ಯಮಧರ್ಮನ ಸಂಭಾಷಣೆಯ ಪೌರಾಣಿಕ ರೂಪಕವನ್ನು ಶ್ರೀಗಳು ವೀಕ್ಷಿಸಿದರು. ಈ‌ ಬಾರಿ ಮಂಟಪವನ್ನು ತರಳಬಾಳು ಹುಣ್ಣಿಮೆ ಮಾದರಿಯಲ್ಲಿ ನಿರ್ಮಿಸಿರುವುದು ವಿಶೇಷ.

ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎಸ್.ಎ.ರವೀಂದ್ರನಾಥ ವಹಿಸಿದ್ದರು. ಶಾಸಕ ಶಾಮನೂರು ಶಿವಶಂಕರಪ್ಪ, ಭಾಜಪ ಜಿಲ್ಲಾಧ್ಯಕ್ಷ ಹನಗವಾಡಿ ವಿರೇಶ್, ದುಡೊ ಅಧ್ಯಕ್ಷ ಕೆ.ಎಂ.ಸುರೇಶ್, ಹಿಂದು ಮಹಾಸಭಾದ ಜೊಳ್ಳಿ ಗುರು, ಮಹಾನಗರ ಪಾಲಿಕೆಯ ಸದಸ್ಯರಾದ ಶ್ರೀ ವಿರೇಶ್ ರವರು, ಸಿಂಡಿಕೇಟ್ ಸದಸ್ಯರಾದ ಮಾಡಾಳ್ ಮಲ್ಲಿಕಾರ್ಜುನ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top