ದಾವಣಗೆರೆ: ಗ್ರಾಮ ಪಂಚಾಯಿತಿ ಚುನಾವಣೆಯನ್ನು ಜಿಲ್ಲೆಯಲ್ಲಿ ವ್ಯವಸ್ಥಿತ ಹಾಗೂ ಶಾಂತಿಯುತವಾಗಿ ನಡೆಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.
- 191 ಗ್ರಾಮ ಪಂಚಾಯ್ತಿಗೆ ಚುನಾವಣೆ
- 2628 ಸ್ಥಾನಗಳಿಗೆ ಸದಸ್ಯರ ಆಯ್ಕೆಗೆ ಮತದಾನ
- ಜಿಲ್ಲೆಯ ಮತಗಟ್ಟೆಗಳಲ್ಲಿ 191 ಸೂಕ್ಷ್ಮ ಹಾಗೂ 136 ಅತಿಸೂಕ್ಷ್ಮ ಮತಗಟ್ಟೆ
- ಮಾಸ್ಕ್ ಧರಿಸುವುದು ಕಡ್ಡಾಯ, ಪ್ರಚಾರಕ್ಕೆ ಎಲೆಕ್ಟ್ರಾನಿಕ್ ಮೀಡಿಯಾ ಬಳಕೆಗೆ ಆದ್ಯತೆ
ಜಿಲ್ಲಾಡಳಿತ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಒಟ್ಟು 191 ಗ್ರಾ.ಪಂ.ಗಳ 2628 ಕ್ಷೇತ್ರಗಳಿಗೆ 2 ಹಂತದಲ್ಲಿ ಚುನಾವಣೆ ನಡೆಯಲಿದ್ದು ಡಿಸೆಂಬರ್ 30ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಡಿಸೆಂಬರ್ 22 ರಂದು ಹಾಗೂ ಡಿಸೆಂಬರ್ 27 ರಂದು ಕ್ರಮವಾಗಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. 07.12.2020 ಮತ್ತು 11.12.2020 ಕ್ರಮವಾಗಿ ಮೊದಲನೇ ಮತ್ತು ಎರಡನೇ ಹಂತದ ಚುನಾವಣಾ ಅಧಿಸೂಚನೆಯನ್ನು ಹೊರಡಿಸುವ ದಿನಾಂಕಗಳಾಗಿವೆ ಎಂದರು.
ಡಿ.11 ಮತ್ತು ಡಿ.16 ಕ್ರಮವಾಗಿ ಮೊದಲನೇ ಮತ್ತು ಎರಡನೇ ಹಂತದ ನಾಮಪತ್ರಗಳನ್ನು ಸಲ್ಲಿಸಲು ಕಡೆಯ ದಿನಗಳಾಗಿವೆ. ಡಿ.12 ಮತ್ತು ಡಿ.17 ನಾಮಪತ್ರ ಪರಿಶೀಲಿಸುವ ದಿನವಾಗಿದ್ದು, ಡಿ.14 ಮತ್ತು 19 ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಕಡೆಯ ದಿನವಾಗಿದೆ. ಡಿ.22 ಮತ್ತು 27 ಮತದಾನ ಮತದಾನ ಅವಶ್ಯವಿದ್ದರೆ ಮತದಾನ ನಡೆಸಬೇಕಾದ ದಿನಾಂಕ(ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ). ಡಿ.24 ಮತ್ತು 29 ಮರು ಮತದಾನ ಇದ್ದಲ್ಲಿ ಮತದಾನದ ದಿನ(ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆವರೆಗೆ). ಡಿ.30 ಮತ ಎಣಿಕೆ ದಿನ(ಬೆಳಿಗ್ಗೆ 8 ರಿಂದ ತಾಲ್ಲೂಕು ಕೇಂದ್ರಗಳಲ್ಲಿ). ಡಿ.31 ಚುನಾವಣೆಯನ್ನು ಯಾವ ದಿನಾಂಕಕ್ಕೆ ಮುಂಚೆ ಮುಕ್ತಾಯಗೊಳಿಸಬೇಕೋ ಆ ದಿನಾಂಕ ಮತ್ತು ದಿನವಾಗಿದೆ.
ನ್ಯಾಮತಿ ತಾಲ್ಲೂಕಿನ ನ್ಯಾಮತಿ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಿ ಅಧಿಸೂಚನೆ ಹೊರಡಿಸಿರುವುದರಿಂದ ಈ ಗ್ರಾಮ ಪಂಚಾಯಿತಿನ್ನು ಚುನಾವಣೆಯಿಂದ ಕೈಬಿಡಲಾಗಿದೆ.
ಮೊದಲನೇ ಹಂತ:- ದಾವಣಗೆರೆ ತಾಲ್ಲೂಕು ಗ್ರಾ.ಪಂಗಳ ಸಂಖ್ಯೆ 38, ಮತಗಟ್ಟೆಗಳ ಸಂಖ್ಯೆ 276, ಕ್ಷೇತ್ರಗಳ ಸಂಖ್ಯೆ 213, ಸದಸ್ಯ ಸ್ಥಾನಗಳ ಸಂಖ್ಯೆ 581. ಹೊನ್ನಾಳಿ ತಾಲ್ಲೂಕಿನ ಗ್ರಾ.ಪಂಗಳ ಸಂಖ್ಯೆ 29, ಮತಗಟ್ಟೆಗಳ ಸಂಖ್ಯೆ 162, ಕ್ಷೇತ್ರಗಳ ಸಂಖ್ಯೆ 121, ಸದಸ್ಯ ಸ್ಥಾನಗಳ ಸಂಖ್ಯೆ 341. ಜಗಳೂರು ತಾಲ್ಲೂಕಿನ ಗ್ರಾ.ಪಂಗಳ ಸಂಖ್ಯೆ 22, ಮತಗಟ್ಟೆಗಳ ಸಂಖ್ಯೆ 219, ಕ್ಷೇತ್ರಗಳ ಸಂಖ್ಯೆ 176, ಸದಸ್ಯ ಸ್ಥಾನಗಳ ಸಂಖ್ಯೆ 397.
ಎರಡನೇ ಹಂತ:- ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಗ್ರಾ.ಪಂಗಳ ಸಂಖ್ಯೆ 24, ಮತಗಟ್ಟೆಗಳ ಸಂಖ್ಯೆ 179, ಕ್ಷೇತ್ರಗಳ ಸಂಖ್ಯೆ 133, ಸದಸ್ಯ ಸ್ಥಾನಗಳ ಸಂಖ್ಯೆ 378. ಚನ್ನಗಿರಿ ತಾಲ್ಲೂಕಿನ ಗ್ರಾ.ಪಂಗಳ ಸಂಖ್ಯೆ 61, ಮತಗಟ್ಟೆಗಳ ಸಂಖ್ಯೆ 368, ಕ್ಷೇತ್ರಗಳ ಸಂಖ್ಯೆ 295, ಸದಸ್ಯ ಸ್ಥಾನಗಳ ಸಂಖ್ಯೆ 735. ನ್ಯಾಮತಿ ತಾಲ್ಲೂಕಿನ ಗ್ರಾ.ಪಂಗಳ ಸಂಖ್ಯೆ 17, ಮತಗಟ್ಟೆಗಳ ಸಂಖ್ಯೆ 96, ಕ್ಷೇತ್ರಗಳ ಸಂಖ್ಯೆ 72, ಸದಸ್ಯ ಸ್ಥಾನಗಳ ಸಂಖ್ಯೆ 196 ಇರುತ್ತದೆ.
ಚುನಾವಣೆ ಸುಗಮವಾಗಿ ನಡೆಯಲು ಪ್ರತಿ ತಾಲೂಕಿಗೆ ಹಿರಿಯ ಕೆಎಎಸ್ ಅಧಿಕಾರಿಗಳನ್ನು ನೇಮಿಸಲಾಗಿದೆ ಹಾಗೂ ಕೋವಿಡ್ ಮುಂಜಾಗ್ರತಾ ಕ್ರಮಗಳೊಂದಿಗೆ ಕೋವಿಡ್ ಶಂಕಿತರು ಮತ್ತು ಸೋಂಕಿತರಿಗೆ ಮತದಾನದ ಕೊನೆಯ 1 ಗಂಟೆ ಮತದಾನಕ್ಕೆ ಅವಕಾಶ ಒದಗಿಸಲಾಗಿದ್ದು ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ ಎಂದರು.
ನವೆಂಬರ್ 30 ರಿಂದ ಮಾದರಿ ನೀತಿ ಸಂಹಿತೆ ಜಾರಿಯಾಗಿದ್ದು ಕಟ್ಟುನಿಟ್ಟಾಗಿ ನೀತಿ ಸಂಹಿತೆ ಜಾರಿ ಮಾಡಲು ಆರ್‍ಒ ಮತ್ತು ಎಆರ್‍ಒಗಳಿಗೆ ತರಬೇತಿ ನೀಡಲಾಗುತ್ತಿದೆ. ಇದರೊಂದಿಗೆ ಮತದಾರರ ಪಟ್ಟಿಯ ಪರಿಷ್ಕರಣೆ ಕಾರ್ಯ ನಡೆಸಲಾಗುತ್ತಿದ್ದು ಈವರಗೆ 8,37,727 ಮತದಾರರು ನೋಂದಾಯಿಸಿಕೊಂಡಿರುತ್ತಾರೆ.
ಒಟ್ಟು ಗ್ರಾ.ಪಂ. ಸದಸ್ಯ ಸ್ಥಾನಗಳ ಪೈಕಿ ಅನುಸೂಚಿತ ಜಾತಿ 629 ಸ್ಥಾನಗಳು, ಅನುಸೂಚಿತ ಪಂಗಡ 397, ಹಿಂದುಳಿದ ವರ್ಗ(ಅ)268, ಹಿಂದುಳಿದ ವರ್ಗ(ಬ)49 ಹಾಗೂ ಸಾಮಾನ್ಯ 1285 ಸ್ಥಾನಗಳು ಸೇರಿದಂತೆ ಒಟ್ಟು 2628 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಚುನಾವಣಾ ಕಾರ್ಯದಲ್ಲಿ ಭಾಗವಹಿಸುವವರು ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿಗಳು ಮತ್ತು ಅವರ ಬೆಂಬಲಿಗರು ಕಡ್ಡಾಯವಾಗಿ ಫೇಸ್ ಮಾಸ್ಕ್ ಧರಿಸುವುದು, ಆದಷ್ಟು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಚುನಾವಣಾ ಪ್ರಚಾರ ಮಾಡುವುದು ಒಳಿತು. ಕೋವಿಡ್ ಪಾಸಿಟಿವ್ ಇರುವ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಪ್ರಚಾರ ಮಾಡಬಹುದಾಗಿದ್ದು, ಖುದ್ದಾಗಿ ಸಾಮಾನ್ಯ ಜನರೊಂದಿಗೆ /ಸಮುದಾಯದಲ್ಲಿ ಪ್ರಚಾರ ಮಾಡಲು ಅವಕಾಶವಿಲ್ಲ. ಹಾಗೂ ಕೋವಿಡ್-19 ಹಿನ್ನೆಲೆಯಲ್ಲಿ ಗುಂಪು ಗುಂಪಾಗಿ ಪ್ರಚಾರ ಮಾಡುವಂತಿಲ್ಲ ಎಂದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ, ಜಿಲ್ಲೆಯ ಮತಗಟ್ಟೆಗಳಲ್ಲಿ 191 ಸೂಕ್ಷ್ಮ ಹಾಗೂ 136 ಅತಿಸೂಕ್ಷ್ಮ ಮತಗಟ್ಟೆಗಳಿದ್ದು ಸೂಕ್ತ ಬಂದೋಬಸ್ತ್ ಮಾಡಲಾಗುತ್ತದೆ. ಹೋಮ್‍ಗಾರ್ಡ್‍ಗಳನ್ನು ಬಳಸಿಕೊಳ್ಳಲಾಗುತ್ತಿದ್ದು ಪ್ಯಾಟ್ರೋಲಿಂಗ್ ಟೀಮ್ ಇರುತ್ತದೆ. 2ನೇ ಹಂತದ ಸೂಪರ್ವೈಸಿಂಗ್ ಇದ್ದು ಅವಶ್ಯವಿರುವೆಡೆ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲಾಗುತ್ತದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲಾಗುವುದು. ಡಿಎಆರ್ ಮತ್ತು ಕೆಎಸ್‍ಆರ್‍ಪಿ ತುಕಡಿಗಳನ್ನು ಬಳಸಿಕೊಳ್ಳಲಾಗುವುದೆಂದು ಮಾಹಿತಿ ನೀಡಿದರು.