ದಾವಣಗೆರೆ: ಆಕಸ್ಮಿಕ ಬೆಂಕಿ ಅವಘಡಕ್ಕೆ ನಾಲ್ವರು ರೈತರ 9 ಎಕರೆ ಅಡಿಕೆ ಮರ, ಡ್ರಿಪ್ , ಸ್ಪ್ರಿಂಕ್ಲರ್ ಫೈಪ್ ಗಳು ಸುಟ್ಟು ಕರಕಲಾಗಿವೆ.
ಈ ಘಟನೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಮುಸ್ಸೇನಾಳು ಗ್ರಾಮದಲ್ಲಿ ನಡೆದಿದೆ. ಒಟ್ಟು 15.50 ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ಅವಘಡ ಸಂಭವಿಸಿದ ಶಂಕೆ ವ್ಯಕ್ತವಾಗಿದೆ.
ಗ್ರಾಮದ ರೈತ ಧರ್ಮಿಬಾಯಿ ರಾಮನಾಯ್ಕ ಅವರ 2 ಎಕರೆ ಜಮೀನಿನಲ್ಲಿ ಅಡಿಕೆ ಮರಕ್ಕೆ ಬಿದ್ದಿದ್ದು,ಡ್ರಿಪ್ ಪೈಪುಗಳು, ಪಿವಿಸಿ ಪೈಪ್‌ಗಳು, ಸ್ಪ್ರಿಂಕ್ಲರ್ ಸೇರಿದಂತೆ ಅಂದಾಜು 5 ಲಕ್ಷ ಮೌಲ್ಯದ ಸಾಮಗ್ರಿ ಹಾಗೂ 8 ಸಾಗುವಾನಿ ಮರಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ. ಇನ್ನೂ ಇದೇ ಜಮೀನಿನ ಪಕ್ಕದಲ್ಲಿದ್ದ ರಾಮನಾಯ್ಕ ಪೀರ‍್ಯಾನಾಯ್ಕ ಸೇರಿದ 1 ಎಕರೆ 25 ಗುಂಟೆಯಲ್ಲಿನ ಅಡಿಕೆ ಮರಗಳು ಹಾಗೂ ಸಾಮಗ್ರಿ ಸುಟ್ಟಿದ್ದು, ಸುಮಾರು 3 ಲಕ್ಷದಷ್ಟು ನಷ್ಟ ಸಂಭವಿಸಿದೆ.
ಹಾಗೆಯೇ ಹಾಲಿಬಾಯಿ ರಾಜೇಶನಾಯ್ಕ ಅವರ ಎರಡೂವರೆ ಎಕರೆಯಲ್ಲಿ ಬೆಳೆದಿದ್ದ ಅಡಿಕೆ ಮರಗಳು ಹಾಗೂ ಸಾಮಗ್ರಿ ಸುಟ್ಟಿದ್ದು, 4.50 ಲಕ್ಷ ನಷ್ಟ ಸಂಭವಿಸಿದೆ. ಗೋಪಾಲನಾಯ್ಕ ಶೇಖರನಾಯ್ಕ ಎಂಬುವರ 3 ಎಕರೆಯಲ್ಲಿನ ಅಡಿಕೆ ಮರಗಳು ಸುಟ್ಟಿದ್ದು 3 ಲಕ್ಷ ನಷ್ಟವಾಗಿದೆ.
ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಭೇಟಿ ನೀಡಿದ್ದರು. ಸ್ಥಳಕ್ಕೆ ಹೊನ್ನಾಳಿ ಅಗ್ನಿಶಾಮಕ ಭೇಟಿ ನೀಡಿ ದೊಡ್ಡ ಆಪತ್ತು ತಪ್ಪಿಸಿದ್ದಾರೆ.



