Connect with us

Dvgsuddi Kannada | online news portal | Kannada news online

ದಾವಣಗೆರೆ: ಪ್ರತಿ ಪ್ರಜೆ ನನ್ನ ಮತ ಮಾರಾಟಕ್ಕಿಲ್ಲ ಎಂದು ಜನಾಂದೋಲನ ನಡೆಸಬೇಕು : ವಿಶ್ವೇಶ್ವರ ಹೆಗಡೆ ಕಾಗೇರಿ

ದಾವಣಗೆರೆ

ದಾವಣಗೆರೆ: ಪ್ರತಿ ಪ್ರಜೆ ನನ್ನ ಮತ ಮಾರಾಟಕ್ಕಿಲ್ಲ ಎಂದು ಜನಾಂದೋಲನ ನಡೆಸಬೇಕು : ವಿಶ್ವೇಶ್ವರ ಹೆಗಡೆ ಕಾಗೇರಿ

ದಾವಣಗೆರೆ: ಚುನಾವಣೆಗಳಲ್ಲಿ ದೇಶದ ಪ್ರತಿ ಪ್ರಜೆಯೂ ನನ್ನ ಮತ ಮಾರಾಟಕ್ಕಿಲ್ಲ ಎಂದು ಮುಕ್ತ, ನಿರ್ಭೀತ, ನ್ಯಾಯಸಮ್ಮತ ಚುನಾವಣೆಗೆ ಆಗ್ರಹಿಸುವ ಜನಾಂದೋಲನ ರೂಪಿಸುವ ದಿಕ್ಕಿನಲ್ಲಿ ಆಲೋಚಿಸಬೇಕಾಗಿದೆ ಎಂದು ಕರ್ನಾಟಕ ವಿಧಾನ ಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೇಳಿದರು.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಚುನಾವಣಾ ಸುಧಾರಣಾ ಕ್ರಮಗಳ ಕುರಿತು ಸಂವಾದ ಕಾರ್ಯಕ್ರಮ’ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಪ್ರಜಾಪ್ರಭುತ್ವದ ಆಶಯಗಳಂತೆ ಚುನಾವಣೆಗಳು ನಡೆಯುತ್ತಿಲ್ಲ, ದೇಶದಲ್ಲಿ ಹಣಬಲ, ಜಾತಿಬಲ, ತೋಳುಬಲಗಳು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ ಚುನಾವಣಾ ವ್ಯವಸ್ಥೆಯನ್ನು ಆಳುತ್ತಿವೆ. ಸಮಾಜದಲ್ಲಿ ಸಂಸದೀಯ ವ್ಯವಸ್ಥೆ ಉಳಿವಿಗಾಗಿ ಎಲ್ಲರೂ ಜವಾಬ್ದಾರಿ ವಹಿಸಬೇಕಾಗಿದೆ ಎಂದರು.

ಮುಖ್ಯವಾಗಿ ಯುವಜನತೆ ವ್ಯವಸ್ಥೆಯ ಸುಧಾರಣೆಯ ಜವಾಬ್ದಾರರಾಗುವ ಜೊತೆಗೆ ತಮ್ಮ ಮನೆಗಳಲ್ಲಿ, ಊರುಗಳಲ್ಲಿ ಚುನಾವಣಾ ಸುಧಾರಣಾ ಕ್ರಮಗಳ ಕುರಿತು ಜಾಗೃತಿ ಮೂಡಿಸಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಆಗಿವೆ, ದೇಶದಾದ್ಯಂತ ಅಮೃತ ಮಹೋತ್ಸವವನ್ನು ಹೆಮ್ಮೆಯಿಂದ ಆಚರಿಸಲು ಸಿದ್ಧತೆ ನಡೆಸಿದ್ದೇವೆ, ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ವೇಳೆಗೆ ಭಾರತ ಜಗತ್ತಿಗೆ ಮಾರ್ಗದರ್ಶಕ ದೇಶವಾಗಿ ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು, ಹಾಗಾಗಿ ಚುನಾವಣೆ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಪ್ರಜೆಗಳ ಜವಾಬ್ದಾರಿ ದೊಡ್ಡದಿದೆ. ನ್ಯಾಯಸಮ್ಮತ ಮತ್ತು ಪರಿಶುದ್ಧ ಚುನಾವಣಾ ವ್ಯವಸ್ಥೆ ರೂಪಿಸುವುದು ಸಂವಿಧಾನದ ಆಶಯವಾಗಿದೆ. 18 ವರ್ಷ ಪೂರ್ಣಗೊಂಡ ದೇಶದ ಎಲ್ಲ ನಾಗರಿಕರಿಗೂ ಮತದಾನದ ಹಕ್ಕನ್ನ ನೀಡಲಾಗಿದೆ. ಎಷ್ಟೋ ದೇಶಗಳಲ್ಲಿ ಸಂವಿಧಾನ ಅಸ್ತಿತ್ವಕ್ಕೆ ಬಂದು ವರ್ಷಗಳೇ ಕಳೆದರೂ ಮಹಿಳೆಯರಿಗೆ ಮತದಾನದ ಹಕ್ಕು ಇರಲಿಲ್ಲ, ಆದರೆ ನಮ್ಮ ದೇಶದಲ್ಲಿ ಸಂವಿಧಾನ ಜಾರಿಗೆ ಬಂದಾಗಲೇ ಮಹಿಳೆಯರಿಗೆ ಮತದಾನದ ಹಕ್ಕು ನೀಡಲಾಯಿತು.

ನಮ್ಮ ದೇಶದ ಸಂವಿಧಾನದ ವೈಶಿಷ್ಟ್ಯವೆಂದರೆ ಸಾಮಾನ್ಯರಲ್ಲಿ ಸಾಮಾನ್ಯರು ಈ ದೇಶದ ರಾಷ್ಟ್ರಪತಿ, ಪ್ರಧಾನಮಂತ್ರಿ ಆಗಬಹುದಾಗಿದೆ. ಆದ್ದರಿಂದ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ಸಂವಿಧಾನ ಭಾರತದ ಸಂವಿಧಾನವಾಗಿದೆ. ಇಂದು ಪ್ರಜಾಪ್ರಭುತ್ವದ ಎಲ್ಲಾ ಅಂಗಗಳು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತಿಲ್ಲ, ಅಲ್ಲಿಯೂ ಮೌಲ್ಯಾದರ್ಶಗಳ ಕೊರತೆ ಎದ್ದು ಕಾಣುತ್ತಿದೆ, ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ತನ್ನ ಕಾರ್ಯಗಳನ್ನ ಚನ್ನಾಗಿ ಮಾಡುತ್ತಿದೆಯಾದರೂ ಮತ್ತಷ್ಟು ಗಟ್ಟಿಗೊಳ್ಳಬೇಕಾಗಿದೆ. ಶೇಷನ್ ಅಂತಹವರು ಇರುವ ಕಾಯ್ದೆಗಳನ್ನೇ ಬಳಸಿ ಚುನಾವಣಾ ಆಯೋಗವನ್ನು ಗಟ್ಟಿಗೊಳಿಸಿದ್ದರು ಎಂದರು. ಈ ಎಲ್ಲಾ ಕೊರತೆಗಳ ಮಧ್ಯೆಯೂ ನಮ್ಮ ದೇಶ ಬಲಿಷ್ಟವಾಗಿದೆ ಎಂದರೆ ವಿವಿಧ ವಲಯದ ಮುಖ್ಯಸ್ಥರು, ನಮ್ಮ ಹಿರಿಯರು ಸಾಕಷ್ಟು ಶ್ರಮಿಸಿದ್ದಾರೆ, ದೋಷ ದೌರ್ಬಲ್ಯಗಳು ಏನೇ ಇದ್ದರೂ ಅವುಗಳನ್ನ ಪಕ್ಕಕ್ಕಿಟ್ಟು ಪ್ರಜಾಪ್ರಭುತ್ವದ ಏಳಿಗೆಗಾಗಿ ದುಡಿಯಬೇಕಾಗಿದೆ.
ಭಾರತದ ಸ್ವಾತಂತ್ರ್ಯಕ್ಕಾಗಿ ಅನೇಕ ಜನರು ತಮ್ಮ ಜೀವ ಮುಡಿಪಿಟ್ಟು ಹೋರಾಡಿದ್ದಾರೆ. ಭಾರತ ಸ್ವಾತಂತ್ರ್ಯವಾದ ಸಂದರ್ಭದಲ್ಲಿ ಆಹಾರದ ಕೊರತೆ ಇತ್ತು, ಪ್ರಸ್ತುತ ದಿನಮಾನಗಳಲ್ಲಿ ಆಹಾರದ ಉತ್ಪಾದನೆಯಲ್ಲಿ ಉನ್ನತ ಸಾಧನೆ ಮಾಡಿದ್ದೇವೆ ಇದಕ್ಕೆ ಮುಖ್ಯ ಕಾರಣ ರೈತರ ಪರಿಶ್ರಮವಾಗಿದೆ. ಕೋವಿಡ್ ಸಮಯದಲ್ಲಿ ಜಗತ್ತಿನ ಹಲವು ಚಿತ್ರಣಗಳನ್ನು ನಾವು ನೋಡಿದ್ದೇವೆ. ಕೊರೋನಾ ಕಾಲಘಟ್ಟದಲ್ಲಿ ಅಭಿವೃದ್ಧಿ ಹೊಂದಿದ ದೇಶದ ಸಾಲಿಗೆ, ಅಭಿವೃದ್ಧಿ ಹೊಂದುತ್ತಿರುವ ದೇಶ ಭಾರತ ಸಮನಾಗಿ ನಿಂತು ಹೋರಾಡಿದ್ದನ್ನು ನಾವು ಕಾಣಬಹುದು. ದೇಶದ ವಿಜ್ಞಾನಿಗಳು ಕೋವೀಡ್-19ಕ್ಕೆ ವ್ಯಾಕ್ಸಿನ್ ಕಂಡು ಹಿಡಿದು ಅದನ್ನು ಜಗತ್ತಿನ ವಿವಿಧ ದೇಶಗಳಿಗೆ ರಫ್ತು ಮಾಡಿದ್ದು ಹೆಮ್ಮೆಯ ವಿಷಯವಾಗಿದೆ. ಬಾಹ್ಯಕಾಶ, ಶಿಕ್ಷಣ, ಆರೋಗ್ಯ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ಸಾಧನೆ ಮಾಡಿ ಜಗತ್ತಿಗೆ ಜ್ಞಾನದ ಬೆಳಕನ್ನು ತೋರುತ್ತಿದ್ದೇವೆ ಎಂದರು.

ಇತಿಹಾಸದಲ್ಲಿಯೇ ಮೊಟ್ಟ ಮೊದಲು ಆಯುರ್ವೇದಕ್ಕೆ ಚರಕ, ಯೋಗಕ್ಕೆ ಪತಂಜಲಿ, ರಸಾಯನಶಾಸ್ತ್ರಕ್ಕೆ ನಾಗಾರ್ಜುನರು ನೀಡಿದ ಕೊಡುಗೆ ಅನನ್ಯವಾದ್ದು, ಹೀಗೆ ರಕ್ತಗತವಾಗಿ ಬಂದಿರುವ ಸಂಸ್ಕøತಿಯ ಜ್ಞಾನ ಇದಾಗಿದೆ ನಮ್ಮದಾಗಿದೆ. ದೇಶಕ್ಕೆ ಛತ್ರಪತಿ ಶಿವಾಜಿ, ಸ್ವಾಮಿ ವಿವೇಕಾನಂದರ ಉತ್ತಮವಾದ ಆದರ್ಶಗಳು ವಿದ್ಯಾರ್ಥಿಗಳನ್ನು ಜಾಗರೂಕರನ್ನಾಗಿ ಮಾಡುತ್ತಿದೆ. ನಳಂದ, ತಕ್ಷಶಿಲಾದಂತಹ ವಿಶ್ವವಿದ್ಯಾನಿಲಯಗಳನ್ನು ನಾಶ ಮಾಡಿದ್ದ ಇತಿಹಾಸದ ಪುರಾವೆಗಳಿವೆ. ಖಡ್ಗದ ತುದಿಯಿಂದ ಬಂದೂಕನ್ನು ನೆಲಸಮಾನಗೊಳಿಸಿ ಹೋರಾಡಿದ ನಮ್ಮ ಪೂರ್ವಿಕರ ತ್ಯಾಗ ಬಲಿದಾನದ ಪರಿಣಾಮದ ಫಲವಾಗಿ ನಮಗೆ ಸ್ವಾತಂತ್ರ್ಯ ಬಂದಿದೆ ಎಂದು ಹೇಳಿದರು.

ವೇದಿಕೆಯಲ್ಲಿ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಎ ರವೀಂದ್ರನಾಥ್, ಮಹಾನಗರ ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ್, ಜಿಲ್ಲಾಧಿಕಾರಿ ಶಿವಾನಂದ ಕಪಾಶಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಡಾ.ಎ ಚನ್ನಪ್ಪ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್, ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಬಸವಂತಪ್ಪ ಮಲ್ಲಪ್ಪನವರ್ ಕುಂಬಾರ, ಉಪವಿಭಾಗಾಧಿಕಾರಿ ದುರ್ಗಾಶಿ್ಭೂ ಸೇರಿದಂತೆ ಚುನಾಯಿತ ಜನಪ್ರತಿನಿಧಿಗಳು, ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿಧಾನ ಸಭೆಯ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಚುನಾಯಿತ ಜನಪ್ರತಿನಿಧಿಗಳ ಹಾಗೂ ವಿದ್ಯಾರ್ಥಿ-ಯುವಜನರೊಂದಿಗೆ ಚುನಾವಣಾ ಸುಧಾರಣಾ ಕ್ರಮಗಳ ಕುರಿತು ಸಂವಾದ ನಡೆಸಿದರು.
ಸಂವಾದ ಕಾರ್ಯಕ್ರಮ

ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿಗಳಿಗಿಂತ ನೋಟಾಕ್ಕೆ ಶೇ.50ಕ್ಕಿಂತ ಹೆಚ್ಚಿನ ಮತದಾನವಾದರೆ, ಆ ಚುನಾವಣೆಯಲ್ಲಿ ಸ್ಪರ್ಧಿಸಿದ ಎಲ್ಲರನ್ನು ಮುಂದಿನ ಚುನಾವಣೆಗೆ ಸ್ಪರ್ಧಿಸದಂತೆ ತಡೆಹಿಡಿಯಬೇಕು.
-ತೋರಣನಾಯ್ಕ್ ರಾಜ್ಯಶಾಸ್ತ್ರ ಉಪನ್ಯಾಸಕ

ಚುನಾವಣೆಯಲ್ಲಿ ಮತ ಮಾರಾಟ ಮಾಡಿಕೊಳ್ಳುವವರಿಗಿಂತ ಮೊದಲು, ಸ್ಪರ್ಧಿಸುವ ಅಭ್ಯರ್ಥಿಗಳು ಖರೀದಿ ಮಾಡಿಕೊಳ್ಳಲ್ಲ ಎಂದು ನಿರ್ಧಾರ ಮಾಡಬೇಕು. ಹಾಗೂ ಪಕ್ಷಾಂತರ ಮಾಡುವವರಿಗೆ 5 ವರ್ಷ ನಿಷೇಧ ಹೇರಬೇಕು.
-ತೇಜಸ್ವಿ ಪಟೇಲ್ ರೈತ ಮುಖಂಡ.

ಅಪರಾಧ ಹಿನ್ನಲೆ ಹೊಂದಿರುವವರು ಜಾಮೀನು ಪಡೆದು, ನಂತರ ಚುನಾವಣೆಗೆ ಸ್ಪರ್ಧಿಸಿ ಗೆದ್ದು ಬರುತ್ತಾರೆ. ಈ ವಿಷಯದ ಕುರಿತು ಗಂಭೀರವಾಗಿ ಚರ್ಚೆ ನಡೆಸಬೇಕಾಗಿದೆ.
-ಬಸವರಾಜ್ ಕಾನೂನು ವಿದ್ಯಾರ್ಥಿ

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top