ದಾವಣಗೆರೆ: ನಗರ ಸ್ವಚ್ಛತೆ ಕೊರತೆಗೆ ತೀವ್ರ ಅಸಮಾಧಾನ, ಅಧಿಕಾರಿಗಳು ಸಿಟಿ ರೌಂಡ್ಸ್ ಗೆ ಜಿಲ್ಲಾ ಉಸ್ತುವಾರಿ ಸಚಿವರ ತಾಕೀತು

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
4 Min Read

ದಾವಣಗೆರೆ :  ನಗರದಾದ್ಯಂತ ಎಲ್ಲೆಂದರಲ್ಲಿ ಕಸದ ರಾಶಿ ಕಂಡುಬರುತ್ತಿದ್ದು, ಸ್ವಚ್ಛತೆ ಕೊರತೆ ಎದ್ದುಕಾಣುತ್ತಿದೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಲಾಗಿದ್ದ ದಾವಣಗೆರೆ ಮಹಾನಗರ ಪಾಲಿಕೆ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಾನಗರಪಾಲಿಕೆ ಆಯುಕ್ತರಿಂದ ಹಿಡಿದು, ಸಂಬಂಧಿಸಿದ ಎಲ್ಲ ಅಧಿಕಾರಿಗಳು ವಾರಕ್ಕೆ ಕನಿಷ್ಟ 04 ದಿನ ಸಿಟಿ ರೌಂಡ್ಸ್‍ಗಾಗಿಯೇ 2 ಗಂಟೆ ಮೀಸಲಿಟ್ಟು, ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ನಗರದಲ್ಲಿ ಸೋಮವಾರದಂದು ಬೆಳ್ಳಂ ಬೆಳಿಗ್ಗೆಯೇ ನಗರಸಂಚಾರ ಕೈಗೊಂಡ ಸಚಿವರು, ನಗರದ ವಿವಿಧೆಡೆ ಸಂಚರಿಸಿದ ಸಂದರ್ಭದಲ್ಲಿ ಎಲ್ಲೆಂದರಲ್ಲಿ ಕಸದ ರಾಶಿ, ಸ್ವಚ್ಛತೆಯ ಕೊರತೆಯನ್ನು ಕಣ್ಣಾರೆ ಕಂಡು, ಈ ರೀತಿ ಅಸಮಾಧಾನ ವ್ಯಕ್ತಪಡಿಸಿದರು. ಸಭೆಯ ಆರಂಭದಲ್ಲೇ ಮಹಾನಗರಪಾಲಿಕೆ ಆಯುಕ್ತರು ಹಾಗೂ ಆರೋಗ್ಯ ನಿರೀಕ್ಷಕರ ಮೇಲೆ ಹರಿಹಾಯ್ದ ಸಚಿವರು, ನೀವು ಕೆಲಸ ಮಾಡುವ ವೈಖರಿ ಈ ರೀತಿಯೇ ಎಂದು ಪ್ರಶ್ನಿಸಿದರು. ನಗರ ಸಂಚಾರ ಕೈಗೊಂಡ ಸಂದರ್ಭದಲ್ಲಿ ಸಾರ್ವಜನಿಕರು ನಮ್ಮನ್ನು ದೂಷಿಸುತ್ತಿದ್ದಾರೆ. ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗುತ್ತಿಲ್ಲ. ನಗರದಲ್ಲಿ 45 ವಾರ್ಡ್‍ಗಳಿದ್ದು, 505 ಪೌರಕಾರ್ಮಿಕರು ನಿತ್ಯ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರ ಸಕಲ ಸವಲತ್ತು ನೀಡುತ್ತಿದೆ. ಜನರು ನಿಮಗೆ ತೆರಿಗೆ ಕಟ್ಟುತ್ತಿದ್ದಾರೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನಗರದಲ್ಲಿ ಸ್ವಚ್ಛತೆ ಕಾಣುತ್ತಿಲ್ಲ. ಮೊದಲು ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ಸೂಚನೆ ನೀಡಿದರು. ಮಹಾಪೌರ ಅಜಯಕುಮಾರ್ ಅವರು ಪ್ರತಿಕ್ರಿಯಿಸಿ, ಸದ್ಯ 268 ಖಾಯಂ ಹಾಗೂ 237 ಗುತ್ತಿಗೆ ಸೇರಿದಂತೆ ಒಟ್ಟು 505 ಪೌರಕಾರ್ಮಿಕರಿದ್ದಾರೆ. ಇನ್ನೂ 243 ಪೌರಕಾರ್ಮಿಕರ ಕೊರತೆ ಇದೆ. ಆದರೆ ಸದ್ಯ ಇರುವ ಪೌರಕಾರ್ಮಿಕರ ಪೈಕಿ ಬಹಳಷ್ಟು ಜನ ಹಾಜರಾತಿ ಹಾಕಿ, ತಮ್ಮ ಕೆಲಸ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಅಧಿಕಾರಿಗಳು ಮೇಲುಸ್ತುವಾರಿ ಸರಿಯಾಗಿ ಮಾಡುತ್ತಿಲ್ಲ. ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ, ಇದರಿಂದಾಗಿ ಪೌರಕಾರ್ಮಿಕರಿಂದ ಕೆಲಸ ತೆಗೆದುಕೊಳ್ಳುವುದು ಕಷ್ಟವಾಗುತ್ತಿದೆ. ಜನಪ್ರತಿನಿಧಿಗಳಾದ ನಾವು ಜನರಿಗೆ ಉತ್ತರ ನೀಡಲಾರದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

city visit2

ಆಯುಕ್ತ ವಿಶ್ವನಾಥ ಮುದಜ್ಜಿ ಅವರು ಮಾತನಾಡಿ, 45 ವಾರ್ಡ್‍ಗಳಿಗೆ 21 ಆರೋಗ್ಯ ನಿರೀಕ್ಷಕರಿದ್ದಾರೆ. ಸ್ವಚ್ಛತಾ ಕಾರ್ಯದಲ್ಲಿ ಲೋಪವಾಗಿದ್ದರೆ ಸರಿಪಡಿಸಲಾಗುವುದು ಎಂದು ಸಮಜಾಯಿಷಿ ನೀಡಿದರು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಇರುವ ಪೌರಕಾರ್ಮಿಕರನ್ನು ಸಮರ್ಪಕವಾಗಿ ಬಳಸಿಕೊಳ್ಳಿ, ವಾರ್ಡ್ ಮಟ್ಟದಲ್ಲಿ ಸ್ವಚ್ಛತೆ ಕಾರ್ಯದ ಬಗ್ಗೆ ತಮ್ಮ ಅಧೀನ ಸಿಬ್ಬಂದಿಗಳಿಗೆ ಮೇಲುಸ್ತುವಾರಿ ಜವಾಬ್ದಾರಿ ನೀಡಬೇಕು, ಮಹಾನಗರಪಾಲಿಕೆ ಆಯುಕ್ತರಿಂದ ಹಿಡಿದು, ಸಂಬಂಧಿಸಿದ ಎಲ್ಲ ಅಧಿಕಾರಿಗಳು ವಾರಕ್ಕೆ ಕನಿಷ್ಟ 04 ದಿನ ಸಿಟಿ ರೌಂಡ್ಸ್‍ಗಾಗಿಯೇ 2 ಗಂಟೆ ಮೀಸಲಿಟ್ಟು, ಸ್ವಚ್ಛತೆಗೆ ಕ್ರಮ ಕೈಗೊಳ್ಳಬೇಕು. ಬರುವ ಜ. 18 ರಂದು ಮತ್ತೊಮ್ಮೆ ನಗರಸಂಚಾರ ಕೈಗೊಳ್ಳಲಾಗುವುದು. ಅಂದಿನ ದಿನವೂ ಇದೇ ಸ್ಥಿತಿ ಕಂಡುಬಂದರೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು, ಸಿಬ್ಬಂದಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಎಚ್ಚರಿಕೆ ನೀಡಿದರು.

ಆಯುಕ್ತ ವಿಶ್ವನಾಥ ಮುದಜ್ಜಿ ಅವರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಡಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು. ಪೌರಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿ 34.66 ಕೋಟಿ ರೂ. ವೆಚ್ಚದಡಿ ನಿರ್ಮಿಸಲಾಗುತ್ತಿರುವ 381 ಮನೆಗಳ ಪೈಕಿ 280 ಪೂರ್ಣಗೊಂಡಿವೆ. 101 ಕಾಮಗಾರಿಗಳು ವಿವಿಧ ಹಂತಗಳಲ್ಲಿವೆ. ಪ್ರತಿ ಮನೆಗೆ 8.12 ಲಕ್ಷ ರೂ. ವೆಚ್ಚದಡಿ ಈ ಮನೆಗಳನ್ನು ನಿರ್ಮಿಸಲಾಗುತ್ತಿದೆ. ಇನ್ನೂ 17.14 ಕೋಟಿ ರೂ. ಅನುದಾನದ ಅಗತ್ಯವಿದೆ. ಈ ವರ್ಷ 28.03 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ನೀರಿನ ಶುಲ್ಕ ಕೇವಲ 4.24 ಕೋಟಿ ರೂ. ಸಂಗ್ರಹವಾಗಿದ್ದು ಇನ್ನೂ 25.46 ಕೋಟಿ ರೂ. ಬಾಕಿ ಇದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು. ಜನರಿಗೆ ನಗರಪಾಲಿಕೆಯಿಂದ ನೀರು ಕೊಡುತ್ತಿದ್ದೇವೆ. ಇದಕ್ಕೆ ಶುಲ್ಕವನ್ನು ಪಾವತಿಸುವ ಮೂಲಕ ಸಾರ್ವಜನಿಕರೂ ಕೂಡ ಸಹಕರಿಸಬೇಕು. ನೀರಿನ ಶುಲ್ಕ ವಸೂಲಾತಿ ಹೆಚ್ಚಿಸಲು ಕಠಿಣ ಕ್ರಮ ಜರುಗಿಸಿ ಎಂದು ಸೂಚನೆ ನೀಡಿದರು.

city visit

ನಗರಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 504 ಮಳಿಗೆಗಳಿದ್ದು, 53.78 ಲಕ್ಷ ರೂ. ಮಾತ್ರ ಮಳಿಗೆ ಬಾಡಿಗೆ ವಸೂಲಿ ಮಾಡಲಾಗಿದೆ. ಇನ್ನೂ 2.10 ಕೋಟಿ ರೂ. ಬಾಡಿಗೆ ವಸೂಲಿಯಾಗಬೇಕಿದೆ ಎಂದು ಆಯುಕ್ತ ವಿಶ್ವನಾಥ್ ಹೇಳಿದರು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಮಳಿಗೆ ಮಂಜೂರಾತಿಯಾಗಿರುವ ಕೆಲವರು, ಬೇರೆಯವರಿಗೆ ಅಕ್ರಮವಾಗಿ ಬಾಡಿಗೆಗೆ ನೀಡಿದ್ದಾರೆ. ಅಂತಹವುಗಳನ್ನು ಪತ್ತೆಹಚ್ಚಿ, ಮಳಿಗೆ ಮಂಜೂರಾತಿಯನ್ನು ರದ್ದುಪಡಿಸಿ ತೆರವುಗೊಳಿಸಬೇಕು, ಅಲ್ಲದೆ ಈ ಮಳಿಗೆಗಳನ್ನು ನಿಯಮಾನುಸಾರ ಮರು ಹಂಚಿಕೆಯಾದರೆ, ಇನ್ನೂ ಹೆಚ್ಚಿನ ದರಕ್ಕೆ ನೀಡಬಹುದು. ಇದರಿಂದ ನಗರಪಾಲಿಕೆಗೂ ಹೆಚ್ಚಿನ ಆದಾಯ ಬರಲಿದೆ ಎಂದರು. ಪ್ರತಿಕ್ರಿಯಿಸಿದ ಸಚಿವರು, ಕೂಡಲೆ ಈ ಕಾರ್ಯ ಪ್ರಾರಂಭವಾಗಬೇಕು. ಇದಕ್ಕೆ ಅಧಿಕಾರಿಗಳು ಯಾವುದೇ ಪ್ರಭಾವ ಅಥವಾ ಒತ್ತಡಗಳಿಗೆ ಮಣಿಯುವ ಅಗತ್ಯವಿಲ್ಲ ಎಂದು ನಿರ್ದೇಶನ ನೀಡಿದರು.

ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕ ಎಸ್.ಎ. ರವೀಂದ್ರನಾಥ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ವಿ. ಶಾಂತಕುಮಾರಿ, ಮಹಾನಗರಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಪ್ರಸನ್ನಕುಮಾರ್, ವೀರೇಶ್, ದೂಡಾ ಅಧ್ಯಕ್ಷ ಎನ್.ಹೆಚ್. ಶಿವಕುಮಾರ್, ಸ್ಮಾರ್ಟ್ ಸಿಟಿ ಯೋಜನೆ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ ಸೇರಿದಂತೆ ಮಹಾನಗರಪಾಲಿಕೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

 

 

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *