Connect with us

Dvgsuddi Kannada | online news portal | Kannada news online

ದಾವಣಗೆರೆ: 120 ಕೊಟಿ ವೆಚ್ಚದಲ್ಲಿ ಹೈಟೆಕ್ ksrtc ಬಸ್ ನಿಲ್ದಾಣ; ಜಿಲ್ಲಾಸ್ಪತ್ರೆ ನವೀಕರಣಕ್ಕೆ ಕ್ರಮ

ದಾವಣಗೆರೆ

ದಾವಣಗೆರೆ: 120 ಕೊಟಿ ವೆಚ್ಚದಲ್ಲಿ ಹೈಟೆಕ್ ksrtc ಬಸ್ ನಿಲ್ದಾಣ; ಜಿಲ್ಲಾಸ್ಪತ್ರೆ ನವೀಕರಣಕ್ಕೆ ಕ್ರಮ

ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಬಸವರಾಜ ಅವರು ನಗರದಲ್ಲಿ ವಿವಿಧ ಇಲಾಖೆಗಳ ವತಿಯಿಂದ ಕೈಗೊಳ್ಳಲಾಗಿರುವ ಕಾಮಗಾರಿಗಳನ್ನು ವೀಕ್ಷಿಸಿದರು.

ನಗರದ ಬನಶಂಕರಿ ಬಡಾವಣೆ, ವಿದ್ಯಾನಗರ, ಬಾಪೂಜಿ ಪಾಲಿಟೆಕ್ನಿಕ್ ರಸ್ತೆ, ಶಾರದಾಂಬ ಸರ್ಕಲ್, ಎಸ್‍ಎಸ್ ಲೇಔಟ್, ಡಬಲ್ ರೋಡ್, ಹೊಂಡದ ಸರ್ಕಲ್ ಬಳಿಯ ಕಲ್ಯಾಣಿ ಸೇರಿದಂತೆ ವಿವಿಧ ಸ್ಥಳಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿದ ಅವರು, ತ್ವರಿತ ಗತಿಯಲ್ಲಿ ಹಾಗೂ ಗುಣಮಟ್ಟದೊಂದಿಗೆ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮಹಾನಗರಪಾಲಿಕೆ, ಸ್ಮಾರ್ಟ್‍ಸಿಟಿ ಹಾಗೂ ದೂಢಾ ವತಿಯಿಂದ ಹಲವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ದಾವಣಗೆರೆ ನಗರ ಸ್ಮಾರ್ಟ್ ಸಿಟಿ ಹೆಸರಿಗೆ ತಕ್ಕಂತೆ ಸುಂದರ ಹಾಗೂ ಸುಸಜ್ಜಿತವಾಗಿ ರೂಪುಗೊಳ್ಳಲು ಎಲ್ಲರ ಸಹಕಾರ ಅಗತ್ಯವಿದ್ದು, ನಗರದಲ್ಲಿ ಉತ್ತಮ ಕಾಮಗಾರಿಗಳು ನಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ನಗರ ವೀಕ್ಷಣೆ ವೇಳೆಯಲ್ಲಿ ಕೆಲವೆಡೆ ಸಾರ್ವಜನಿಕರು ಕಾಮಗಾರಿಗಳ ಬಗೆಗೆ ದೂರಿದಾಗ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ಆದಷ್ಟು ಕೆಲಸಗಳನ್ನು ಕಡಿಮೆ ಮಾಡಿದರೂ ಪರವಾಗಿಲ್ಲ. ಆದರೆ ಗುಣಮಟ್ಟ ಹಾಗೂ ಯೋಜನಾಬದ್ದವಾಗಿ ಮಾಡಬೇಕೆಂದರು.

ನಂತರ ಜಿಲ್ಲಾ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣ ತುಂಬಾ ಹಳೆಯದಾಗಿದ್ದು, ಹಳೆಯ ಕಟ್ಟಡವನ್ನು ಕೆಡವಿ 120 ಕೋಟಿ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿಗೆ ಜ.18 ರಂದು ಶಂಕುಸ್ಥಾಪನೆ ನಡೆಸಲಾಗುವುದು. ಈ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷ್ಮಣ ಸವದಿ ಮತ್ತು ಜನಪ್ರತಿನಿಧಿಗಳು ಆಗಮಿಸುವರು.
ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯನ್ನು ನವೀಕರಣಗೊಳಿಸುವ ಅಥವಾ ನೂತನ ಕಟ್ಟಡ ನಿರ್ಮಾಣ ಮಾಡುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ಅವರು ಕೂಡ ಸಮ್ಮತಿಸಿದ್ದಾರೆ. ಹಾಗಾಗಿ ಉತ್ತಮ ಗುಣಮಟ್ಟದ ಸಾರ್ವಜನಿಕ ಆಸ್ಪತ್ರೆಯನ್ನು ಶೀಘ್ರದಲ್ಲೇ ಜಿಲ್ಲೆಗೆ ನೀಡಲು ಶ್ರಮಿಸಲಾಗುವುದು ಎಂದ ಅವರು ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ನಗರದ ಕುಂದುವಾಡ ಕೆರೆ ಅಭಿವೃದ್ದಿಗೆ ರೂ.15 ಕೋಟಿ ಮೀಸಲಿರಿಸಿದ್ದು, ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕೆರೆ ಪಕ್ಕದ ಬ್ರಿಡ್ಜ್ ಕಾಮಗಾರಿ ಮುಗಿದಿದ್ದು, ಕೆರೆಯ ನೀರು ಖಾಲಿ ಆದ ತಕ್ಷಣ ಕಾಮಗಾರಿಯನ್ನು ಕೈಗೊಳ್ಳಲಾಗುವುದು. ಸಾರ್ವಜನಿಕರಿಗೆ ಆಹ್ಲಾದಕರ ವಾತಾವರಣ ಸೃಷ್ಟಿಯಾಗುವಂತೆ ಹಸುರೀಕರಣ, ಉತ್ತಮ ವಾಕಿಂಗ್ ಪಾಥ್, ಜಿಮ್ ಸಲಕರಣೆಗಳು, ಮಕ್ಕಳಿಗೆ ಆಟೋಟ ಉಪಕರಣಗಳನ್ನು ಅಳವಡಿಸಲಾಗುವುದು ಎಂದರು.

ಸ್ಮಾರ್ಟ್‍ಸಿಟಿ ಯೋಜನೆಯ ಅನುದಾನದಲ್ಲಿ ರೂ.300 ಕೋಟಿ ಖರ್ಚಾಗಿದ್ದು, ಇನ್ನೂ ರೂ.600 ಕೋಟಿಗಳ ವೆಚ್ಚದಲ್ಲಿ ಕಾಮಗಾರಿಗಳು ನಡೆಯಲಿವೆ. ರೂ.5 ಕೋಟಿ ವೆಚ್ಚದಲ್ಲಿ 15 ಪಾರ್ಕ್‍ಗಳನ್ನು ಅಭಿವೃದ್ದಿಪಡಿಸಲಾಗುವುದು. ರಸ್ತೆಗಳ ಅಭಿವೃದ್ದಿ, ಎಲ್‍ಇಡಿ ದೀಪಗಳು, ಅಲಂಕಾರಿಕ ಗಿಡಗಳು ಸೇರಿದಂತೆ ನಗರ ಸೌಂದರ್ಯಕ್ಕೆ ಒತ್ತು ನೀಡಲಾಗುವುದು ಎಂದರು.
ಜಿಲ್ಲೆಯಲ್ಲಿ ಅಕಾಲಿಕ ಮಳೆಯಿಂದಾಗಿ 18 ಮನೆಗಳು ಕುಸಿದಿವೆ. ಎನ್‍ಡಿಆರ್‍ಎಫ್ ಮಾರ್ಗಸೂಚಿಯಂತೆ ಪರಿಹಾರಕ್ಕೆ ಜಿಲ್ಲಾಡಳಿತದಿಂದ ಪತ್ರ ಬರೆಯಲಾಗಿದೆ.
ಜಿಲ್ಲೆಯಲ್ಲಿ ಕೋವಿಡ್ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಲಾಗುತ್ತಿದ್ದು, ಪ್ರಸ್ತುತ 96 ಪಾಸಿಟಿವ್ ಪ್ರಕರಣಗಳು ಮಾತ್ರ ಇವೆ. ನಿನ್ನೆ ಲಂಡನ್ ನಗರದಿಂದ ಬಂದಿರುವ ವ್ಯಕ್ತಿಯೊಬ್ಬರನ್ನು ಪರೀಕ್ಷಿಸಿದಾದ ಅವರ ವರದಿ ನೆಗೆಟಿವ್ ಎಂದು ಬಂದಿರುತ್ತದೆ. ಅತಿ ಹೆಚ್ಚು ಸಂಖ್ಯೆಯಲ್ಲಿ ಟೆಸ್ಟ್‍ಗಳನ್ನು ಮಾಡಲಾಗುತ್ತಿದ್ದು, ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಈ ಬಗ್ಗೆ ತೀವ್ರ ನಿಗಾ ವಹಿಸುತ್ತಿದೆ ಎಂದರು.

ರೆವೆನ್ಯೂ ನಿವೇಶನಗಳ ಅಕ್ರಮ-ಸಕ್ರಮ: ರಾಜ್ಯದಲ್ಲಿ ರೆವೆನ್ಯೂ ನಿವೇಶನಗಳಲ್ಲಿ ಮನೆ ಕಟ್ಟಿಕೊಂಡಿರುವವರನ್ನು ಸಕ್ರಮಗೊಳಿಸಲು ಶಾಸಕರು, ಜನಪ್ರತಿನಿಧಿಗಳಿಂದ ಸರ್ಕಾರಕ್ಕೆ ಮನವಿ ಬರುತ್ತಿದ್ದು, ಈ ಕುರಿತು ಸಂಪುಟ ಉಪ ಸಮಿತಿ ರಚಿಸಲಾಗಿದ್ದು, ಈಗಾಗಲೇ ಎರಡು ಬಾರಿ ಸಭೆ ನಡೆದಿದೆ. ಅದರಂತೆ ದಾವಣಗೆರೆ ನಗರದಲ್ಲಿಯೂ ಸುಮಾರು 65 ಸಾವಿರದಷ್ಟು ನಿವೇಶನ ಹಾಗೂ ಮನೆಗಳನ್ನು ರೆವೆನ್ಯೂ ನಿವೇಶನದಲ್ಲಿ ಕಟ್ಟಲಾಗಿದ್ದು, ಇವುಗಳನ್ನು ಸಕ್ರಮಗೊಳಿಸಲು ಪ್ರಯತ್ನಿಸಲಾಗುವುದು ಎಂದರು.

ಪತ್ರಿಕಾಗೋಷ್ಟಿಯಲ್ಲಿ ಶಾಸಕರಾದ ಎಸ್.ಎ.ರವೀಂದ್ರನಾಥ, ಜಿ.ಪಂ.ಅಧ್ಯಕ್ಷೆ ಶಾಂತಕುಮಾರಿ, ಪಾಲಿಕೆ ಮೇಯರ್ ಬಿ.ಜಿ.ಅಜಯಕುಮಾರ್, ಸ್ಮಾರ್ಟ್ ಸಿಟಿ ಎಂ.ಡಿ ರವೀಂದ್ರ ಮಲ್ಲಾಪುರ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಇತರರು ಹಾಜರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top